ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೇಕೆ ತಡ, ನಾಳೆಯೇ ಬನ್ನಿ ಮೈಸೂರಿನ ಮಾಗಿ ಉತ್ಸವಕ್ಕೆ...

|
Google Oneindia Kannada News

ಮೈಸೂರು, ಡಿಸೆಂಬರ್ 21: ಮಾಗಿ ಚಳಿಗೆ ಬೆಚ್ಚನೆಯ ಕಾಫಿ, ಬಜ್ಜಿಯಂಥ ಬಿಸಿ ಬಿಸಿ ತಿಂಡಿಗಳನ್ನು ಸೇವಿಸುತ್ತಾ ಹೆಜ್ಜೆ ಹಾಕಿದರೆ ಅದರ ಮಜವೇ ಬೇರೆ. ಸಂಜೆ ಹೊತ್ತು ವಿದ್ಯುತ್ ಬೆಳಕಲ್ಲಿ ಸುಂದರ ಹೂವು, ಕಲಾಕೃತಿಗಳನ್ನು ನೋಡುತ್ತಾ ಕಣ್ಮನ ಸೆಳೆಯುವ ಹೂಗಳೊಂದಿಗೆ ಒಂದಷ್ಟು ಸಮಯ ಕಳೆದರೆ ಆ ಕ್ಷಣಗಳು ಅವಿಸ್ಮರಣೀಯ.

ಇಂತಹ ಸುಂದರ ಕ್ಷಣಗಳನ್ನು ಸೃಷ್ಟಿ ಮಾಡಿ ಜನರು ತಮ್ಮ ನಿತ್ಯದ ಬವಣೆಯಿಂದ ಹೊರಬಂದು ಖುಷಿಯಾಗಿ ಕಾಲ ಕಳೆಯಲೆಂದೇ ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವವನ್ನು ಆಚರಿಸಲಾಗುತ್ತಿದೆ.

 ಡಿಸೆಂಬರ್ 22ರಿಂದ ಅರಮನೆ ಆವರಣದಲ್ಲಿ ಮಾಗಿ ಉತ್ಸವ

ಡಿಸೆಂಬರ್ 22ರಿಂದ ಅರಮನೆ ಆವರಣದಲ್ಲಿ ಮಾಗಿ ಉತ್ಸವ

ಈ ಬಾರಿ ಡಿಸೆಂಬರ್ 22 ರಿಂದ ಡಿ.31ರವರೆಗೆ ಮಾಗಿ ಉತ್ಸವ ನಡೆಯಲಿದೆ. ಇದು ಐದನೇ ಬಾರಿ ನಡೆಯುತ್ತಿರುವ ಉತ್ಸವವಾಗಿರುವುದರಿಂದ ವಿಭಿನ್ನ ಮತ್ತು ವಿಶಿಷ್ಟವಾಗಿ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಮಾಗಿ ಉತ್ಸವಕ್ಕೆ ಏನೆಲ್ಲ ಮಾಡಬೇಕೆಂದು ಚಿಂತನೆ ನಡೆಸಲಾಗಿದೆಯೋ ಅದಕ್ಕೆಲ್ಲ ಜೀವ ತುಂಬುವ ಕೆಲಸ ಭರದಿಂದ ಸಾಗುತ್ತಿದೆ.

ಮಾಗಿಯ ಚಳಿಯಲ್ಲಿ ಅರಮನೆ ಆವರಣದಲ್ಲಿ ವಿಭಿನ್ನ ರೀತಿಯ ಫಲಪುಷ್ಪಗಳು ಅರಳುತ್ತಿವೆ. ಲಕ್ಷಾಂತರ ಗುಲಾಬಿ ಪುಷ್ಪಗಳಲ್ಲಿ ಮೈಸೂರು ಅರಮನೆ ಮುಂದೆಯೇ ಬೆಂಗಳೂರು ಅರಮನೆ ಮೇಲೆದ್ದು ನಿಲ್ಲಲಿದೆ. ಬಗೆಬಗೆಯ, ಆಕರ್ಷಕ, ವೈವಿಧ್ಯಮಯ ಕೇಕ್ ಗಳು ಬಾಯಿ ಚಪ್ಪರಿಸುವಂತೆ ಮಾಡಲಿವೆ.

 ಈ ಬಾರಿ ಮಾಗಿ ಉತ್ಸವದ ವಿಶೇಷತೆ

ಈ ಬಾರಿ ಮಾಗಿ ಉತ್ಸವದ ವಿಶೇಷತೆ

ಮೈಸೂರು ಅರಮನೆ ಆವರಣದಲ್ಲಿ ನಿರ್ಮಾಣವಾಗಲಿರುವ ಫಲಪುಷ್ಪ ಪ್ರದರ್ಶನ ಮಾಗಿ ಉತ್ಸವಕ್ಕೆ ಜೀವ ಕಳೆ ನೀಡಲಿದ್ದು ಪ್ರಮುಖ ಆಕರ್ಷಣೆಯಾಗಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಲಕ್ಷಕ್ಕೂ ಅಧಿಕ ಗುಲಾಬಿ ಹೂಗಳಿಂದ 45x10x20 ಅಡಿ ಅಳತೆಯಲ್ಲಿ ಬೆಂಗಳೂರು ಅರಮನೆ ನಿರ್ಮಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಸೊಂಡಿಲೆತ್ತಿ ನಮಸ್ಕರಿಸುತ್ತಿರುವ ಎರಡು ಆನೆಗಳನ್ನು ಕೂಡ ಪುಷ್ಪಗಳಿಂದಲೇ ನಿರ್ಮಿಸಲಾಗುತ್ತಿದೆ.

ನಿಂಬೆಹಣ್ಣು ಮತ್ತು ಬಿಲ್ವ ಪತ್ರೆಗಳಿಂದ ಅಲಂಕರಿಸಿದ ಶಿವಲಿಂಗ ಮಾದರಿ ಚಿತ್ರ, ಅರಮನೆ ಆವರಣದಲ್ಲಿರುವ ವರಾಹಸ್ವಾಮಿ ದೇವಾಲಯಕ್ಕೆ ಹೊಂದಿಕೊಂಡಂತೆ 23 x 13 ಅಡಿ ಅಳತೆಯಲ್ಲಿ ಪಿಟೋನಿಯ ಹೂವಿನ ಗಿಡಗಳು ಹಾಗೂ ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಕಾಕ್ಸಕೂಂಬ್, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಲೋಷಿಯ, ನಸ್ಟರ್ ಸಿಯಂ, ಆಂಟಿರೈನಂ, ಬೋನ್ಸಾಯ್ ಸೇರಿದಂತೆ ಸುಮಾರು 32 ಬಗೆಯ ಹೂವಿನ ಗಿಡಗಳಿಂದ ವರ್ಟಿಕಲ್ ಗಾರ್ಡನ್ ನಿರ್ಮಾಣವಾಗಲಿದೆ. ಇದಕ್ಕೆ 4 ಲಕ್ಷ ಗುಲಾಬಿ, ಕ್ರೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವು, ಊಟಿ ಕಟ್ ಫ್ಲವರ್ ‌ಗಳು ಸಾಥ್ ನೀಡಲಿದ್ದು, ಪುಷ್ಪ ಪ್ರೇಮಿಗಳನ್ನು ಆಕರ್ಷಿಸಲಿವೆ.

 ಹೂವಿನಿಂದ ಮೂಡಲಿವೆ ಚಿತ್ತಾಕರ್ಷಕ ಪ್ರತಿಕೃತಿಗಳು

ಹೂವಿನಿಂದ ಮೂಡಲಿವೆ ಚಿತ್ತಾಕರ್ಷಕ ಪ್ರತಿಕೃತಿಗಳು

ವಾಯುಸೇನೆ, ಭೂ ಸೇನೆ ಹಾಗೂ ನೌಕಾಸೇನೆಗೆ ಗೌರವ ಸಲ್ಲಿಸುವ ಮಾದರಿ ಚಿತ್ರಗಳನ್ನು ಪಿಂಗ್‌ಪಾಂಗ್ ಹೂವುಗಳಿಂದ ನಿರ್ಮಿಸುವ ಮೂಲಕ ದೇಶ ರಕ್ಷಣೆಯಲ್ಲಿ ಈ ಮೂರು ಸೇನೆಗಳ ಪಾತ್ರಗಳನ್ನು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ದೇಶದ ಹೆಮ್ಮೆ ಆಗಿರುವ ಇಸ್ರೋ ಉಪಗ್ರಹ ಉಡಾವಣೆಯ ಮಾದರಿ, ಕಾಳಿಂಗ ಸರ್ಪದ ಪ್ರತಿಕೃತಿ, ಧ್ಯಾನಿಸುತ್ತಿರುವ ಸ್ವಾಮಿ ವಿವೇಕಾನಂದರನ್ನು ಹೂವು ಮತ್ತು ತರಕಾರಿಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಸಿಂಹಾಸನರೂಢರಾಗಿರುವ ಜಯಚಾಮರಾಜ ಒಡೆಯರ್, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜತೆ ಜಯಚಾಮರಾಜ ಒಡೆಯರ್ ಇರುವ ಅಪರೂಪದ ಆಕೃತಿಯನ್ನು ಹೂವಿನಿಂದ ನಿರ್ಮಿಸುತ್ತಿರುವುದು ಈ ಬಾರಿಯ ವಿಶೇಷ.

ಮಾಗಿ ಉತ್ಸವದಲ್ಲಿ ಪುಷ್ಪಪ್ರದರ್ಶನದೊಂದಿಗೆ ದಸರಾ ಅಂದು-ಇಂದು, ರಾಜವಂಶಸ್ಥರ ಆಡಳಿತಾವಧಿಯ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಇದೇ ವೇಳೆ ಹಳೆಯ ಮೈಸೂರು ದಸರಾದ ಸಾಕ್ಷ್ಯಚಿತ್ರ ಎಲ್‌ಇಡಿ ಸ್ಕ್ರೀನ್ ‌ನಲ್ಲಿ ಪ್ರದರ್ಶನಗೊಳ್ಳಲಿದೆ.
 ಎರಡನೇ ಬಾರಿಗೆ ಪಕ್ಷಿ ಉತ್ಸವ

ಎರಡನೇ ಬಾರಿಗೆ ಪಕ್ಷಿ ಉತ್ಸವ

ಶ್ರೀರಂಗಪಟ್ಟಣದ ಭಾನು ಪ್ರಕಾಶ್ ಶರ್ಮಾ ಅವರು ಸಾಂಪ್ರಾದಾಯಿಕ ಬೊಂಬೆ ಪ್ರದರ್ಶನ, ಜಯಶ್ರೀ ನಾಗಪ್ರಸಾದ್ ಅವರಿಂದ ವಿಷ್ಣು ದರ್ಶನ, ಗೀತಾ ಶ್ರೀಹರಿ ಅವರಿಂದ ಶಿವ ಲೀಲಾಮೃತ, ಶ್ರೀರಾಮದರ್ಶನಂ ಗೊಂಬೆ ಪ್ರದರ್ಶನ, ಅನ್ನಪೂರ್ಣ ಗೋಪಾಲಕೃಷ್ಣ ಅವರಿಂದ ಭಾರತೀಯ ಗುರು ಪರಂಪರೆ ಗೊಂಬೆಗಳ ಪ್ರದರ್ಶನ ಕಳೆಕಟ್ಟಲಿವೆ. ಮಾಗಿ ಉತ್ಸವದ ಅಂಗವಾಗಿ ಎರಡನೇ ಬಾರಿಗೆ ಪಕ್ಷಿ ಉತ್ಸವವೂ ನಡೆಯಲಿದೆ. ಆದರೆ ಇದು ಅರಮನೆ ಆವರಣದಲ್ಲಿ ನಡೆಯದೆ ಮೃಗಾಲಯದಲ್ಲಿ ನಡೆಯಲಿದೆ. ಪಕ್ಷಿ ಪ್ರೇಮಿಗಳಿಗೆ ಕಾರಂಜಿಕೆರೆ, ಕುಕ್ಕರಳ್ಳಿಕೆರೆ, ಲಿಂಗಾಂಬುದಿ ಕೆರೆ ಆವರಣದಲ್ಲಿ ಪಕ್ಷಿ ವೀಕ್ಷಣೆಗೆ ಅವಕಾಶ ಮಾಡಿಕೊಡುವುದಲ್ಲದೆ ಅವುಗಳ ಬಗ್ಗೆ ಪಕ್ಷಿ ತಜ್ಞರು ಮಾಹಿತಿ ನೀಡಲಿದ್ದಾರೆ. ಮಾಗಿ ಉತ್ಸವದಲ್ಲಿ ಮುದ ನೀಡಲೆಂದೇ ಡಿ.31ರಂದು ರಾತ್ರಿ 11 ರಿಂದ 12ರವರೆಗೆರ ಕರ್ನಾಟಕ ಮತ್ತು ಇಂಗ್ಲಿಷ್ ಪೊಲೀಸ್ ಬ್ಯಾಂಡ್ ಪ್ರದರ್ಶನವಿದೆ. ಅಂದು ಮಧ್ಯರಾತ್ರಿ 12ರಿಂದ 12.15ರವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ದ ರಹಿತ ಪಟಾಕಿ ಸಿಡಿಸುವ ಮೂಲಕ ಮೈಸೂರು ಅರಮನೆ ಮಂಡಳಿಯಿಂದ ಹೊಸ ವರ್ಷಾಚರಣೆ ಆಚರಿಸಲಾಗುತ್ತದೆ.

ಉತ್ಸವ ಅಂದ ಮೇಲೆ ಲಕ್ಷಾಂತರ ಜನರು ಆಗಮಿಸಲಿದ್ದು ಎಲ್ಲರಿಗೂ ಫೋಟೊ ತೆಗೆಯಲು ಅನುಕೂಲವಾಗುವಂತೆ ಅರಮನೆ ಖಾಸಗಿ ದರ್ಬಾರ್ ಆಕೃತಿಯ ಸೆಲ್ಪೀ ಜೊನ್, ರಾಷ್ಟ್ರಪಕ್ಷಿ ನವಿಲು, ಮನೆಯ ಅಂಗಳದ ಮಾದರಿಯ ಫೋಟೊ ಜೋನ್ ನಿರ್ಮಿಸಲಾಗುತ್ತಿದ್ದು, ಸೆಲ್ಫಿ ಪ್ರಿಯರಿಗೆ ಇನ್ನಷ್ಟು ಖುಷಿಕೊಡಲಿದೆ ಎಂದರೆ ತಪ್ಪಾಗಲಾರದು.

English summary
The Magi Festival is being celebrated in the palace premises of Mysuru from december 22 till dec 31,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X