• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಅರಮನೆಯಲ್ಲಿ ದಸರಾ ಗಜಪಡೆಗಳಿಗೆ ಅದ್ದೂರಿ ಸ್ವಾಗತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 16; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಕಳೆಕಟ್ಟುತ್ತಿದೆ. ಅರಮನೆ ನಗರಿಯಲ್ಲಿ ಈಗಾಗಲೇ ದಸರಾ ಮೆರಗು ಜೋರಾಗುತ್ತಿದ್ದು, ಇದರ ನಡುವೆಯೇ ದಸರಾದಲ್ಲಿ ಪಾಲ್ಗೊಳ್ಳುವ ಸಲುವಾಗಿ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಯ ಎಲ್ಲಾ ಆನೆಗಳು ಗುರುವಾರ ಅರಮನೆ ಪ್ರವೇಶಿಸಿದವು.

ಮೈಸೂರು ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದ ಗಜಪಡೆ ಅರಮನೆ ಪ್ರವೇಶಿಸುವ ಹಿನ್ನೆಲೆಯಲ್ಲಿ ಎಲ್ಲಾ ಆನೆಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿ, ಅಭಿಮನ್ಯು ಸಾರಥ್ಯದ ಗಜಪಡೆಯನ್ನು ಅರಮನೆಯತ್ತ ಬೀಳ್ಕೊಟ್ಟರು.

ಬಳಿಕ ಕ್ಯಾಪ್ಟನ್ 'ಅಭಿಮನ್ಯು' ಮುಂದಾಳತ್ವದಲ್ಲಿ ಎಲ್ಲಾ ಆನೆಗಳು ಮೈಸೂರಿನ ಅರಣ್ಯಭವನದಿಂದ ಅರಮನೆಯತ್ತ ಹೆಜ್ಜೆ ಹಾಕಿದವು. ನಗರದ ಅಶೋಕಪುರಂ ಅರಣ್ಯ ಭವನದಿಂದ ಹೊರಟ ಎಲ್ಲಾ ಆನೆಗಳು ನಗರದ ಪ್ರಮುಖ ರಸ್ತೆಯಲ್ಲಿ ಗಜಗಾಂಭೀರ್ಯದಿಂದ ಸಾಗಿದವು. ಈ ವೇಳೆ ನೂರಾರು ಮಂದಿ ಸಾರ್ವಜನಿಕರು ರಸ್ತೆಯ‌ ಇಕ್ಕೆಲಗಳಲ್ಲಿ ನಿಂತು ಅರಮನೆಯತ್ತ ಸಾಗುತ್ತಿದ್ದ ಆನೆಗಳನ್ನು ಕಣ್ತುಂಬಿಕೊಂಡರು, ಕೆಲವರು ಆನೆಗಳಿಗೆ ಶ್ರದ್ಧೆಯಿಂದ ನಮಸ್ಕರಿಸಿ, ಭಕ್ತಿಭಾವ ಮೆರೆದರು.

ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು

ಕ್ಯಾಪ್ಟನ್ ಅಭಿಮನ್ಯು ಮುಂದಾಳತ್ವದಲ್ಲಿ ಅರಣ್ಯ ಭವನದಿಂದ ಹೊರಟ ಗಜಪಡೆಯ ಆನೆಗಳಾದ ಚೈತ್ರ, ಲಕ್ಷ್ಮೀ, ಕಾವೇರಿ, ಗೋಪಾಲಸ್ವಾಮಿ, ಅಶ್ವತ್ಥಾಮ, ಧನಂಜಯ ಹಾಗೂ ವಿಕ್ರಮ ಆನೆಗಳು ಬಲ್ಲಾಳ್ ವೃತ್ತ, ಆರ್.ಟಿ.ಒ‌ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ ಹೌಸ್ ವೃತ್ತದ ಮಾರ್ಗವಾಗಿ ಸಾಗಿ ಅರಮನೆಯ ಜಯಮಾರ್ತಾಂಡ ದ್ವಾರ ತಲುಪಿದವು.

ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ

ಅದ್ದೂರಿ ಸ್ವಾಗತ; ನಗರದ ಪ್ರಮುಖ ಬೀದಿಗಳಲ್ಲಿ ಹೆಜ್ಜೆಹಾಕುತ್ತಾ ಅರಮನೆ ತಲುಪಿದ ಗಜಪಡೆಗೆ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರಾದಾಯಿಕವಾಗಿ ಸ್ವಾಗತ ಕೋರಲಾಯಿತು. ಅಭಿಮನ್ಯು ನೇತೃತ್ವದ ಗಜಪಡೆ ಅರಮನೆ ತಲುಪುತ್ತಿದ್ದಂತೆ ಮಂಗಳವಾದ್ಯದ ಹಿಮ್ಮೆಳದ ಜೊತೆಗೆ ಮೈಸೂರು ಪೊಲೀಸರಿಂದ ಗಾರ್ಡ್ ಆಫ್ ಆನಾರ್ ಮೂಲಕ ಗೌರಮ ಸಮರ್ಪಣೆ ಸಲ್ಲಿಸಲಾಯಿತು. ಇದಾದ ಬಳಿಕ ಅರಮನೆ ರಾಜ ಪುರೋಹಿತರು ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿದರು.

ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ? ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?

ಈ ವೇಳೆ ದಸರಾ ಆನೆಗಳ ಕಾಲು ತೊಳೆದು ಪಾದ ಪೂಜೆ ಸಲ್ಲಿಸಲಾಯಿತು. ದಸರಾ ಆನೆಗಳ ಸ್ವಾಗತದ ವೇಳೆ ಗಜಪಡೆಗೆ ಪ್ರಿಯವಾದ ಬೆಲ್ಲ, ಅಕ್ಕಿ, ಬಾಳೆಹಣ್ಣು, ಜೋಳ, ಕಬ್ಬು ಇತ್ಯಾದಿ ಹಣ್ಣುಗಳನ್ನು ನೀಡುವ ಮೂಲಕ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.‌ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್, ಜಿಲ್ಲಾಧಿಕಾರಿ ಬಗಾದಿ ಗೌತಮ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಜರಿದ್ದರು.

ಬೆದರಿದ ಅಶ್ವತ್ಥಾಮ; ದಸರಾ ಆನೆಗಳು ಅರಣ್ಯ ಭವನದಿಂದ ಅರಮನೆಗೆ ಆಗಮಿಸುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಗಾರ್ಡ್ ಆಫ್ ಹಾನರ್ ನೀಡಲು ಮುಂದಾದರು. ಈ ವೇಳೆ ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗಿಯಾಗಿರುವ ಅಶ್ವತ್ಥಾಮ ಆನೆ ಪೊಲೀಸ್ ಬ್ಯಾಂಡ್ ಸದ್ದಿಗೆ ಬೆದರಿದ. ಈ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಮಾವುತ ಹಾಗೂ ಕಾವಾಡಿ‌ ಗಾಬರಿ ಆಗಿದ್ದ ಅಶ್ವತ್ಥಾಮನಿಗೆ ಕಬ್ಬು, ಬೆಲ್ಲ ಕೊಟ್ಟು ಸಮಾಧಾನ ಮಾಡಿದರು. ನಂತರ ಪೊಲೀಸ್ ಬ್ಯಾಂಡ್ ಸದ್ದಿಗೆ ಗುಂಪಿನಿಂದ ಬೇರ್ಪಟ್ಟಿದ್ದ ಅಶ್ವತ್ಥಾಮ ಆನೆ, ನಿಧಾನವಾಗಿ ಅರಮನೆಯತ್ತ ಹೆಜ್ಜೆಹಾಕಿದ.

ತಾತ್ಕಾಲಿಕ ಶೆಡ್ ಗಳ ನಿರ್ಮಾಣ; ಅರಮನೆ ಆವರಣದಲ್ಲಿ ದಸರಾ ಆನೆಗಳು ವಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಜೊತೆಗೆ ಮಾವುತರು, ಕಾವಾಡಿಗಳು ಹಾಗೂ ಆನೆಗಳಿಗ ವಾಸ್ತವ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ. ಇನ್ನೂ ಗುರುವಾರ ಬೆಳಗ್ಗೆ ಅರಮನೆ ಪ್ರವೇಶಿಸಿರುವ ಆನೆಗಳಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಅರಮನೆಯ ಒಳ‌ ಆವರಣದಲ್ಲೇ ವಿವಿಧ ಹಂತದಲ್ಲಿ ತಾಲೀಮು ನಡೆಸಲಾಗುತ್ತದೆ.

ನಾಳೆ ಆನೆಗಳ ತೂಕ ಪರೀಕ್ಷೆ; ದಸರಾ ಹಿನ್ನಲೆಯಲ್ಲಿ ನಗರಕ್ಕಾಗಮಿಸಿರುವ ದಸರಾ ಆನೆಗಳು ನಗರದ ಪರಿಸರಕ್ಕೆ ಹೊಂದುಕೊಂಡಿವೆ. ಈ ನಡುವೆ ಅರಮನೆ ಪ್ರವೇಶಿಸಿರುವ ಗಜಪಡೆಗೆ ಶುಕ್ರವಾರ ತೂಕದ ಪರೀಕ್ಷೆ‌ ನಡೆಸುವ ಸಾಧ್ಯತೆ ಇದೆ. ದಸರೆಯ ಸಂದರ್ಭದಲ್ಲಿ ಆನೆಗಳಿಗೆ ವಿಶೇಷ ಆಹಾರ ನೀಡಲಿದ್ದು, ಆನೆಗಳ ದೈಹಿಕ ಸಾಮರ್ಥ್ಯದ‌ ಜೊತೆಗೆ ದೇಹದ ತೂಕದ ಮೇಲೆ ನಿಗಾವಹಿಸುವ ಸಲುವಾಗಿ ಆನೆಗಳ ತೂಕ ಮಾಡಲಾಗುತ್ತದೆ.

ದಸರಾ ಉದ್ಘಾಟಕರು ಯಾರು?; ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, "ದಸರಾ ಉದ್ಘಾಟಕರು ಯಾರು? ಎಂಬುದು ಇನ್ನು ತೀರ್ಮಾನ ಆಗಿಲ್ಲ. ಅಧಿವೇಶನ ಮುಗಿದ ಮೇಲೆ ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಯಾವ ಪಟ್ಟಿ ಅಥವ ಶಾರ್ಟ್‌ ಲಿಸ್ಟ್‌ ಮಾಡಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.

"ಮೈಸೂರಿನಲ್ಲಿ ಅನಧಿಕೃತ ದೇವಾಲಯ ತೆರವು ಕಾರ್ಯಚರಣೆ ಸದ್ಯಕ್ಕೆ ನಿಲ್ಲಿಸಿದ್ದೇವೆ. ಎರಡು ದಿನದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೆರವು ಕಾರ್ಯಚರಣೆ ಬಗ್ಗೆ ಚರ್ಚೆ ಮಾಡಿ ಅಂತಿಮ ಆದೇಶ ಮಾಡುತ್ತೇವೆ. ಸದ್ಯಕ್ಕೆ ಯಾವ ದೇವಾಲಯವೂ ತೆರವು ಕಾರ್ಯಚರಣೆ ಇಲ್ಲ" ಎಂದರು.

"ಮಹದೇವಮ್ಮ ದೇವಸ್ಥಾನ ತೆರವು ಕಾರ್ಯಚರಣೆ ಹೇಗಾಯ್ತು?. ಎಲ್ಲಿ ಲೋಪ ಇದೆ ಎನ್ನುವುದನ್ನು ಅಧಿಕಾರಿಗಳ ವಿವರಣೆ ಕೇಳಿದ್ದೇವೆ. ಅಧಿಕಾರಿಗಳ ವಿವರಣೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು. ದೇವಾಲಯ ತೆರವು ಮಾಡಿದ್ದ ಕಾರಣ ಅವರಿಗೆ ನೋವಾಗಿದೆ. ಅವರ ಪ್ರತಿಭಟನೆ ತಪ್ಪಲ್ಲ, ಇದರಿಂದ ಸರ್ಕಾರಕ್ಕೆ ಯಾವ ಮುಜುಗರವೂ ಇಲ್ಲ" ಎಂದು ಹೇಳಿದರು.

English summary
Traditional welcome for the team of elephants taking part in Mysuru dasara 2021. Elephant led by Abhimanyu entered the Mysuru palace on September 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X