ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಜಂಬೂಸವಾರಿಗೆ ಗಜಪಡೆಯ ತಾಲೀಮು ಹೇಗಿದೆ?

|
Google Oneindia Kannada News

ಮೈಸೂರು, ಸೆಪ್ಟೆಂಬರ್ 20: ಐತಿಹಾಸಿಕ ಮೈಸೂರು ದಸರಾದ ರೂವಾರಿಗಳಾದ ಗಜಪಡೆಯನ್ನು ಜಂಬೂಸವಾರಿಗಾಗಿ ತಯಾರಿ ಮಾಡಲಾಗುತ್ತಿದ್ದು, ಭಾನುವಾರದಿಂದ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆ ಆವರಣದಲ್ಲಿ ತಾಲೀಮು ಆರಂಭಿಸಿವೆ.

ಈ ಬಾರಿಯೂ ಜಂಬೂಸವಾರಿ ಸರಳವಾಗಿ ಅರಮನೆ ಆವರಣದಲ್ಲಿಯೇ ನಡೆಯುವುದರಿಂದಾಗಿ ತಾಲೀಮು ಕೂಡ ಅರಮನೆ ಆವರಣಕ್ಕಷ್ಟೆ ಸೀಮಿತವಾಗಿದೆ. ಇದೀಗ ಭಾನುವಾರದಿಂದ ಜಂಬೂಸವಾರಿಯ ತಾಲೀಮು ಶುರುವಾಗಿದ್ದು, ಸೋಮವಾರ ಭಾರದ ತಾಲೀಮು ಆರಂಭವಾಗಿದ್ದು, ಪ್ರತಿದಿನವೂ ತಾಲೀಮು ಬದಲಾವಣೆ ಆಗುವುದರೊಂದಿಗೆ ಕಠಿಣವಾಗುತ್ತಾ ಹೋಗಲಿದೆ.

ಜಂಬೂಸವಾರಿಗೆ ಗಜಪಡೆಯನ್ನು ತಯಾರಿಗೊಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ತಿಂಗಳಾನುಗಟ್ಟಲೆ ತಾಲೀಮು ನಡೆಸಿ ಸರ್ವ ರೀತಿಯಲ್ಲಿಯೂ ಸಜ್ಜುಗೊಳಿಸುವ ಕಾರ್ಯ ಮಾಡಲಾಗುತ್ತದೆ. ಜತೆಗೆ ಅವುಗಳ ಲಾಲನೆ, ಪಾಲನೆ ಕೆಲಸವೂ ಅಚ್ಚುಕಟ್ಟಾಗಿ ನಡೆಸಲಾಗುತ್ತದೆ. ಗಜಪಡೆಯಲ್ಲಿರುವ ಆನೆಗಳ ಪೈಕಿ ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಆತನನ್ನು ಸಾವಿರ ಕೆಜಿ ಭಾರದ ಅಂಬಾರಿ ಹೊರಲು ಸಿದ್ಧಗೊಳಿಸುವುದು ಸುಲಭದ ಮಾತಲ್ಲ. ಆದರೆ ತಾಲೀಮು ಮೂಲಕವೇ ಅದನ್ನು ಮಾಡಲಾಗುತ್ತಿದೆ. ಜಂಬೂಸವಾರಿಯ ತಾಲೀಮು ಸುಲಭದಲ್ಲ. ಅದೊಂದು ರೀತಿಯ ಚಾಲೆಂಜ್ ಎಂದರೂ ತಪ್ಪಾಗಲಾರದು. ಹೀಗಾಗಿ ನಾವು ಜಂಬೂಸವಾರಿವರೆಗಿನ ಗಜಪಡೆಯ ತಾಲೀಮಿನ ಬಗ್ಗೆ ತಿಳಿಯುತ್ತಾ ಹೋದರೆ ನಮಗೆ ಅರಿಯದ ಒಂದಷ್ಟು ವಿಚಾರಗಳು ತಿಳಿಯುತ್ತದೆ.

 ಕೋಡಿಸೋಮೇಶ್ವರ ದೇಗುಲದ ಬಳಿ ಆರಂಭ

ಕೋಡಿಸೋಮೇಶ್ವರ ದೇಗುಲದ ಬಳಿ ಆರಂಭ

ಬೇರೆ ಬೇರೆ ಆನೆ ಶಿಬಿರಗಳಿಂದ ಅರಮನೆಗೆ ಪ್ರವೇಶ ಪಡೆದಿರುವ ಅಭಿಮನ್ಯು, ವಿಕ್ರಮ, ಕಾವೇರಿ, ಚೈತ್ರ, ಅಶ್ವತ್ಥಾಮ, ಧನಂಜಯ, ಲಕ್ಷ್ಮೀ, ಗೋಪಾಲಸ್ವಾಮಿಯನ್ನೊಳಗೊಂಡ ಗಜಪಡೆಗೆ ಶುಭಮುಹೂರ್ತದಲ್ಲಿ ಅರಮನೆ ಆವರಣದಲ್ಲಿರುವ ಕೋಡಿಸೋಮೇಶ್ವರ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ತಾಲೀಮು ಆರಂಭಿಸಲಾಗುತ್ತದೆ. ಆ ನಂತರ ಕೋಡಿ ಸೋಮೇಶ್ವರ ದೇವಸ್ಥಾನದಿಂದ ಹೊರಟ ಗಜಪಡೆಗೆ ಅರಮನೆ ಆವರಣದಲ್ಲಿ ತಾಲೀಮು ಮಾಡಿಸಲಾಗುತ್ತದೆ. ಈ ಬಾರಿ ಅರಮನೆ ಆವರಣದಲ್ಲಿಯೇ ತಾಲೀಮು ನಡೆಯುತ್ತಿರುವುದರಿಂದ ಕರಿಕಲ್ಲು ತೊಟ್ಟಿ ಪ್ರವೇಶ ದ್ವಾರ, ಮ್ಯೂಸಿಯಂ ಮಾರ್ಗದ ಮೂಲಕ ಅರಮನೆ ಮುಂಭಾಗ ಹೀಗೆ ತಾಲೀಮು ನಡೆಸಲಾಗುತ್ತದೆ. ಹಿಂದೆ ಹೀಗಿರಲಿಲ್ಲ. ಅರಮನೆ ಆವರಣದಿಂದ ಹೊರಡುವ ಗಜಪಡೆಗಳು ಬನ್ನಿಮಂಟಪದವರೆಗೆ ಅಂದರೆ ಸುಮಾರು ಐದು ಕಿ.ಮೀ. ತೆರಳಿ ಹಿಂತಿರುಗುತ್ತಿದ್ದವು. ಆದರೆ ಕಳೆದ ವರ್ಷದಿಂದ ಕೊರೊನಾ ಕಾರಣದಿಂದ ಸರಳ ದಸರಾ ನಡೆಯುತ್ತಿರುವುದರಿಂದಾಗಿ ಅರಮನೆ ಆವರಣದಲ್ಲಿಯೇ ನಡೆಯುತ್ತಿದೆ.

 ಈ ಬಾರಿ ಅರಮನೆ ಆವರಣದಲ್ಲಿಯೇ ತಾಲೀಮು

ಈ ಬಾರಿ ಅರಮನೆ ಆವರಣದಲ್ಲಿಯೇ ತಾಲೀಮು

ಸೋಮವಾರದಿಂದ ಭಾರ ಹೊರುವ ತಾಲೀಮು ಆರಂಭವಾಗಿದ್ದು, ನಿಗದಿಪಡಿಸಿದ ಮುಹೂರ್ತದಲ್ಲಿ ಬೆಳಗ್ಗೆ ಆನೆಗಳ ಮೇಲೆ ಕಟ್ಟಲ್ಪಡುವ ಗಾದಿ ಮತ್ತು ನಮ್ದಾಗೆ ಅರಮನೆ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಪೂಜೆ ಸಲ್ಲಿಸಿ ಆ ನಂತರ ಆನೆಗಳನ್ನು ಕೋಡಿ ಸೋಮೇಶ್ವರ ದೇವಾಲಯದಿಂದ ಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದ ಅಲ್ಲಿ ಗಾದಿ ಮತ್ತು ನಮ್ದಾ ಕಟ್ಟಿ ಅದರ ಮೇಲೆ ಮರಳಿನ ಮೂಟೆಯಿಟ್ಟು ಭಾರದ ತಾಲೀಮು ಆರಂಭಿಸಲಾಯಿತು. ಮೊದಲ ದಿನವಾಗಿರುವುದರಿಂದ ಭಾರದ ಪ್ರಮಾಣ ಕಡಿಮೆಯಿದ್ದು, ದಿನಕಳೆದಂತೆ ಹೆಚ್ಚಿಸುತ್ತಾ ಹೋಗಲಾಗುತ್ತದೆ.

ಅಲ್ಲಿಂದ ಹೊರಟ ಗಜಪಡೆ ಬಳಿಕ ಅರಮನೆ ಮುಂಭಾಗಕ್ಕೆ ಸಾಲಾಗಿ ಬಂದಿದ್ದು. ಅಂಬಾರಿ ಹೊರುವ ಅಭಿಮನ್ಯು ಭಾರಹೊತ್ತು ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿಯೊಂದಿಗೆ ಜಂಬೂಸವಾರಿ ದಿನ ಪುಷ್ಪಾರ್ಚನೆ ಮಾಡುವ ಸ್ಥಳಕ್ಕೆ ಬಂದು ಅಲ್ಲಿ ಗೌರವ ವಂದನೆ ಸ್ವೀಕರಿಸಿ ನಂತರ ಅರಮನೆ ಆವರಣದಲ್ಲಿ ಮೂರು ಸುತ್ತು ಸಂಚರಿಸಿದವು.

 ಭಾರದ ತಾಲೀಮು ಆರಂಭವಾಗುವುದೇ ಹೀಗೆ

ಭಾರದ ತಾಲೀಮು ಆರಂಭವಾಗುವುದೇ ಹೀಗೆ

ಇನ್ನು ಭಾರ ಹೊರುವ ತಾಲೀಮಿನ ಬಗ್ಗೆ ಹೇಳಬೇಕೆಂದರೆ ಅಂಬಾರಿ ಹೊರುವ ಅಭಿಮನ್ಯುವಿನ ಬೆನ್ನಿನ ಮೇಲೆ ಸುಮಾರು ಮುನ್ನೂರು ಕೆಜಿ ತೂಕದ ಮೆತ್ತನೆಯ ಗಾದಿಯಿರಿಸಿ ಅದನ್ನು ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ಬಟ್ಟೆ ಅರ್ಥಾತ್ ಛಾಪನ್ನು ಹೊದಿಸಿ ಅದರ ಮೇಲೆ ತೊಟ್ಟಿಲ ರೀತಿಯ ಚಾರ್ಜಾಮಾವನ್ನು ಕಟ್ಟಿ ಅದರ ಮೇಲೆ 75 ರಿಂದ 80 ಕೆಜಿ ತೂಕವಿರುವ ಮರಳಿನ ಮೂಟೆಯನ್ನು ಹಾಕಲಾಗುತ್ತದೆ. ಇದರ ಒಟ್ಟಾರೆ ತೂಕ ಸುಮಾರು 600 ಕೆಜಿಯಷ್ಟಾಗುತ್ತದೆ. ಇದಿಷ್ಟು ಭಾರದ ತಾಲೀಮಾಗಿದೆ.

 ಮರದ ಅಂಬಾರಿ ಕೊನೆಯ ತಾಲೀಮು

ಮರದ ಅಂಬಾರಿ ಕೊನೆಯ ತಾಲೀಮು

ಇನ್ನು ಜಂಬೂಸವಾರಿಯ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಕಟ್ಟಕಡೆಯ ತಾಲೀಮು ನಡೆಯುತ್ತದೆ, ಅದುವೇ ಮರದ ಅಂಬಾರಿ ತಾಲೀಮು. ಈ ತಾಲೀಮು ನಡೆಯಿತೆಂದರೆ ಗಜಪಡೆಯ ಕ್ಯಾಪ್ಟನ್ ಆಗಿರುವ ಅಂಬಾರಿ ಹೊರಲು ನೇಮಿಸಿರುವ ಆನೆ ಜಂಬೂಸವಾರಿ ದಿನದಂದು ಅಂಬಾರಿ ಹೊರಲು ಸಿದ್ಧವಾಯಿತು ಎಂದೇ ಅರ್ಥ. ಏಕೆಂದರೆ ಥೇಟ್ ಚಿನ್ನದ ಅಂಬಾರಿಯಷ್ಟೇ ತೂಕವಿರುವ ಮರದ ಅಂಬಾರಿಯನ್ನು ಕಟ್ಟಿ ಅಭ್ಯಾಸ ಮಾಡಲಾಗುತ್ತದೆ. ಅದರ ಭಾರಕ್ಕೆ ಅಭ್ಯಾಸವಾಗುವ ಆನೆ ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಕಟ್ಟಿದಾಗ ಲೀಲಾಜಾಲವಾಗಿ ಹೊತ್ತು ಸಾಗುತ್ತದೆ. ಮುಂದಿನ ಹಂತವಾಗಿ ಭಾರ ಹೊರುವ ತಾಲೀಮಿನ ಜತೆಗೆ 'ಸಿಡಿಮದ್ದಿನ' ತಾಲೀಮು ಆರಂಭವಾಗಲಿದೆ. ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲ ಆನೆಗಳನ್ನು ಸಿಡಿಮದ್ದಿನ ಸದ್ದಿಗೆ ಬೆದರದಂತೆಯೂ ಅಭ್ಯಾಸ ಮಾಡಿಸಲಾಗುತ್ತಿದೆ. ಇದೆಲ್ಲವೂ ಪಳಗಿದ ಮಾವುತರು, ಅರಣ್ಯ ಸಿಬ್ಬಂದಿ, ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆಯುತ್ತದೆ.

 ವಿಭಿನ್ನ, ವಿಶಿಷ್ಟತೆಯ ಗಜಪಡೆ ತಾಲೀಮು

ವಿಭಿನ್ನ, ವಿಶಿಷ್ಟತೆಯ ಗಜಪಡೆ ತಾಲೀಮು

ಗಜಪಡೆಗಳ ಎದುರು ಫಿರಂಗಿ ಸಿಡಿಸಿ, ಬೆಂಕಿ ಮತ್ತು ಸದ್ದಿಗೆ ಹೆದರದೆ ಧೈರ್ಯವಾಗಿ ನಿಲ್ಲುವ ತನಕ ತಾಲೀಮು ನಡೆಯುತ್ತದೆ. ಕೆಲವು ಆನೆಗಳು ಮೊದಲಿಗೆ ಹೆದರಿದರೂ ಆ ನಂತರ ಹೊಂದಿಕೊಳ್ಳುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ದಸರಾ ಜಂಬೂಸವಾರಿಗೆ ನಡೆಯುವ ಗಜಪಡೆಗಳ ತಾಲೀಮು ವಿಭಿನ್ನ ಮತ್ತು ವಿಶಿಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
Mysuru Dasara 2021: Eight elephants led by Abhimanyu have been begins weight training preparing for the Mysuru Dasara Jamboosavari from Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X