ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ವಿಶೇಷ; ಕ್ಯಾಪ್ಟನ್ 'ಅಭಿಮನ್ಯು' ದಿನಚರಿ ಬಲ್ಲಿರಾ?

|
Google Oneindia Kannada News

ಮೈಸೂರು, ಸೆಪ್ಟೆಂಬರ್ 25; ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಉದ್ದೇಶದಿಂದ 'ಅಭಿಮನ್ಯು' ನೇತೃತ್ವದ ಗಜಪಡೆ ಸದ್ಯ ಮೈಸೂರು ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದೆ. ದಸರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ತಾವು ನೆಲೆ ನಿಲ್ಲುವ ಕಾಡಿನಲ್ಲಿ ಎಲ್ಲೆಂದರಲ್ಲಿ ಸುತ್ತುತ್ತ ಸಿಕ್ಕ ಮೇವನ್ನು ತಿನ್ನುತ್ತಾ ಸಂಗಾತಿ ಆನೆಗಳೊಂದಿಗೆ ಅಂಡೆಲೆಯುವ ಆನೆಗಳ ಪಾಲಿಗೆ ದಸರಾ ಅಂದ್ರೆ ನಿಜಕ್ಕೂ ಐಭೋಗವೇ.

ಕಾಡಿನ ಶಿಬಿರದಿಂದ ತಿಂಗಳ ಮಟ್ಟಿಗೆ ಅರಮನೆ ಸೇರುವ ಆನೆಗಳಿಗೆ ರಾಜಾತಿಥ್ಯ ಇರುತ್ತದೆ. ಅರಮನೆಯಲ್ಲಿ ದಸರಾ ಆನೆಗಳ ದಿನಚರಿ ಹೇಳಿದರೆ ಅಚ್ಚರಿಯಾಗದೆ ಇರದು. ಬೆಳಗ್ಗೆ ಎಳೆ ಬಿಸಿಲಿನಲ್ಲಿ ಸ್ನಾನ, ಅದರೊಂದಿಗೆ ಸೊಪ್ಪಿನ ಊಟ, ಮುದ್ದೆ, ಬೆಲ್ಲ, ಕಬ್ಬುಗಳ ರಸಗವಳ, ನಿತ್ಯ ಆರೋಗ್ಯ ತಪಾಸಣೆ, 6 ಕಿ. ಮೀ. ತಾಲೀಮು. ಮತ್ತೆ ವಿಶ್ರಾಂತಿ. ನಡುವೆ ಹೆಣ್ಣಾನೆಗಳೊಂದಿಗೆ ಪ್ರೇಮ ಸಲ್ಲಾಪ.

ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ! ಮೈಸೂರು ದಸರಾ ಆನೆಗಳ ಮೇಲೆ ಕಣ್ಗಾವಲು ಇಡಲಿವೆ 8 ಸಿಸಿಟಿವಿ!

ಇದು ಮೈಸೂರು ಅರಮನೆಯ ಆವರಣದಲ್ಲಿ ರಾಜಾತಿಥ್ಯ ಪಡೆಯುತ್ತಿರುವ ಅಭಿಮನ್ಯು ಟೀಂನ ದಿನಚರಿ. ಅದರಲ್ಲೂ 750 ಕೆ.ಜಿ. ತೂಕದ ಅಂಬಾರಿ ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗುವ ಅಭಿಮನ್ಯುನನ್ನು ಇದಕ್ಕಾಗಿ ಅಣಿಗೊಳಿಸುವ ಪರಿಯೇ ಒಂದು ಕಥಾನಕ. ಕಾಡಿನಲ್ಲಿನ ಆತನ ದಿನಚರಿಗೆ ಹೋಲಿಸಿದರೆ ಮೈಸೂರಿನ ಅರಮನೆಯಲ್ಲಿ ಅಭಿಮನ್ಯು ಟೀಂ ದಿನಚರಿಯೇ ಒಂದು ರೋಚಕ.

ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ? ಮೊದಲ ದಸರಾಗೆ ಬಂದ 'ಅಶ್ವತ್ಥಾಮ' ಅಭಿಮನ್ಯು ಉತ್ತರಾಧಿಕಾರಿ?

ವರ್ಷದಲ್ಲಿ 1 ತಿಂಗಳು ಅರಮನೆ ಅಂಗಳದಲ್ಲಿ ಬಿಡಾರ ಹೂಡುವ ದಸರಾ ಆನೆಗಳಿಗೆ ವಿಶೇಷ ಉಪಚಾರವಿರುತ್ತದೆ. ಪ್ರೋಟೀನ್, ವಿಟಮಿನ್‌ಯುಕ್ತ ವಿಶೇಷ ಆಹಾರ, ದಿನಕ್ಕೆರಡು ಬಾರಿ ತಾಲೀಮು, ವಿಶ್ರಾಂತಿ ಕಡ್ಡಾಯ. ಈ ಅವಧಿಯಲ್ಲಿ ಅಭಿಮನ್ಯು ಬಳಿ ಮಾವುತ, ಕಾಡಿಗರನ್ನು ಬಿಟ್ಟರೆ ಯಾರೂ ಸುಳಿಯುವಂತಿಲ್ಲ.

ಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯಮೈಸೂರು ದಸರಾ 2021; ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಪರಿಚಯ

ಅರಮನೆಯಲ್ಲಿ ದಿನಚರಿ

ಅರಮನೆಯಲ್ಲಿ ದಿನಚರಿ

ಬೆಳಗ್ಗೆ ಅರಮನೆ ಆವರಣದಲ್ಲಿಯೇ ಇರುವ ತೊಟ್ಟಿ ಬಳಿಯಲ್ಲಿ ಎಲ್ಲಾ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಮಾವುತರು, ಕಾವಾಡಿ ಹಾಗೂ ಸಿಬ್ಬಂದಿ ಅವುಗಳ ಮೈ ಉಜ್ಜಿ ತೊಳೆದು ಆಯಾಸ ಕಳೆಯುತ್ತಾರೆ. ಸ್ನಾನದ ಬಳಿಕ ಕಾಡಿನ ಶಿಬಿರಕ್ಕಿಂತ ಭಿನ್ನವಾದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಆಲದ ಸೊಪ್ಪು, ಬಳಿಕ ಬೆಲ್ಲ, ಭತ್ತ, ಕಬ್ಬು, ತೆಂಗಿನ ಕಾಯಿ, ಬೆಣ್ಣೆ, ವಿವಿಧ ಕಾಳುಗಳನ್ನು ಸೇರಿಸಿದ ಆಹಾರ ತಯಾರಿಸಿ ನೀಡಲಾಗುತ್ತದೆ.

ಕಾಡಿನಲ್ಲಿ ಆನೆಗಳ ದಿನಚರಿ ಹೇಗೆ?

ಕಾಡಿನಲ್ಲಿ ಆನೆಗಳ ದಿನಚರಿ ಹೇಗೆ?

ಸಾಮಾನ್ಯವಾಗಿ ವಿವಿಧ ಕ್ಯಾಂಪ್‌ನಲ್ಲಿ ಆನೆಗಳು ಇರುತ್ತವೆ. ಬೆಳಗ್ಗೆ ಮಾವುತರು ಭತ್ತ, ಹುಲ್ಲು, ತೆಂಗಿನಕಾಯಿ, ಬೆಲ್ಲ ನೀಡಿ ಸ್ನಾನ ಮಾಡಿಸಿ ಸರಪಳಿ ಜೊತೆ ಕಾಡಿಗೆ ಬಿಡುತ್ತಾರೆ. ಕಾಡಿನಲ್ಲಿ ತನಗಿಷ್ಟ ಬಂದ ಸೊಪ್ಪನ್ನು ಆನೆಗಳು ಸೇವಿಸುತ್ತವೆ. ಸಂಜೆ 4 ಗಂಟೆಗೆ ಸರಪಳಿ ಹೋದ ದಾರಿ ಹಿಡಿದು ಮಾವುತ ಅಥವಾ ಕಾವಾಡಿಗ ಹೋಗಿ ಆನೆಗಳನ್ನು ಕರೆದುಕೊಂಡು ಬರುತ್ತಾರೆ.

ವಿಶೇಷ ಆರೈಕೆ ಅಗತ್ಯವಾಗಿದೆ

ವಿಶೇಷ ಆರೈಕೆ ಅಗತ್ಯವಾಗಿದೆ

''ಒಬ್ಬ ಕುಸ್ತಿಪಟುವನ್ನು ಅಖಾಡಕ್ಕೆ ಇಳಿಸುವ ಮುನ್ನ ಅವನಿಗೆ ವಿಶೇಷ ಆರೈಕೆ, ತರಬೇತಿ ಬೇಕು. ಈ ಮಾತು ಆನೆಗಳಿಗೂ ಅನ್ವಯವಾಗುತ್ತದೆ. ಕಾಡಿನಲ್ಲಿ ಇದ್ದಾಗ ಆನೆಗಳ ದಿನಚರಿ ಬೇರೆ ಇರುತ್ತದೆ. ಅದೇ ಅರಮನೆಗೆ ಬಂದಾಗ ಊಟ, ತರಬೇತಿ ಎಲ್ಲವೂ ಬದಲಾಗುತ್ತದೆ. ಕಾಡಿನಲ್ಲಿ ಇದ್ದು ಜಡ್ಡುಗಟ್ಟಿದ ಅವುಗಳ ದೇಹವನ್ನು ಸದೃಢಗೊಳಿಸಲಾಗುತ್ತದೆ" ಎನ್ನುತ್ತಾರೆ ಆನೆ ಆರೈಕೆ ಉಸ್ತುವಾರಿ ವಹಿಸಿಕೊಂಡಿರುವ ಡಾ. ರಮೇಶ್.

ಕೋವಿಡ್ ಕಾರಣದಿಂದ ಎಚ್ಚರಿಕೆ

ಕೋವಿಡ್ ಕಾರಣದಿಂದ ಎಚ್ಚರಿಕೆ

ಕೋವಿಡ್ ಹಿನ್ನೆಲೆಯಲ್ಲಿ ಆನೆಗಳ ಆಹಾರ ವಿಷಯದಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸೊಪ್ಪು, ಕಬ್ಬು ಸೇರಿದಂತೆ ಪ್ರತಿಯೊಂದು ವಸ್ತುವನ್ನು ವೈದ್ಯರು ಹಾಗೂ ತಜ್ಞರು ಪರೀಕ್ಷಿಸುತ್ತಿದ್ದಾರೆ. ಅಪರಿಚಿತರಿಂದ ಆಹಾರಕ್ಕೆ ಬೇಕಾಗುವ ವಸ್ತುಗಳನ್ನು ಪಡೆಯದೆ ನಿತ್ಯ ಸಿಬ್ಬಂದಿಯೇ ಈ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೈಗೆ ಗ್ಲೌಸ್ ಬಳಕೆ ಸೇರಿದಂತೆ ಸೋಂಕು ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಗೆ ತೆಗೆದುಕೊಳ್ಳಲಾಗಿದೆ.

8 ಆನೆಗಳು ಈ ಬಾರಿ ದಸರಾಕ್ಕೆ ಆಗಮಿಸಿವೆ

8 ಆನೆಗಳು ಈ ಬಾರಿ ದಸರಾಕ್ಕೆ ಆಗಮಿಸಿವೆ

ಬೇರೆ ಬೇರೆ ಆನೆಶಿಬಿರಗಳಿಂದ 8 ಆನೆಗಳು ಈ ಬಾರಿಯ ದಸರಾಕ್ಕೆ ಆಗಮಿಸಿವೆ. ಅಭಿಮನ್ಯು, ವಿಕ್ರಮ, ಕಾವೇರಿ, ಚೈತ್ರ, ಅಶ್ವತ್ಥಾಮ, ಧನಂಜಯ, ಲಕ್ಷ್ಮೀ, ಗೋಪಾಲಸ್ವಾಮಿ ಆನೆಗಳು ಈಗಾಗಲೇ ಅರಮನೆ ಆವರಣದಲ್ಲಿ ತಾಲೀಮು ನಡೆಸುತ್ತಿವೆ. ಕೋವಿಡ್ ಕಾರಣದಿಂದಾಗಿ ಈ ಬಾರಿ ಸಹ ಅರಮನೆ ಆವರಣಕ್ಕೆ ಮಾತ್ರ ಜಂಬೂ ಸವಾರಿ ಸೀಮಿತವಾಗಿದೆ.

English summary
Mysuru Dasara 2021; Abhimanyu lead dasara elephants daily routine food and walking. Special article on elephants daily routine at Mysuru palace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X