• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ, ಜೆಡಿಎಸ್ ಮೀಸಲಾತಿ ವಿರೋಧಿಗಳು; ಸಿದ್ದರಾಮಯ್ಯ ಟೀಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 8: "ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೀಸಲಾತಿ ವಿರೋಧಿಗಳಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ," ಎಂದು ವಿರೋಧ ಪಕ್ಷದ‌ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕಾಗಿ ಇರುವ ಪಕ್ಷವಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಆದರೆ ಬೇರೆ ಯಾವ ಪಕ್ಷವು ಸಾಮಾಜಿಕ ನ್ಯಾಯಕ್ಕಾಗಿ ಸ್ಪರ್ಧೆ ಮಾಡುತ್ತಿಲ್ಲ. ನಮ್ಮ ಪಕ್ಷದಲ್ಲಿ ವಯಸ್ಸಾದವರಿಗೆ, ಯುವಕರಿಗೆ ಸೇರಿದಂತೆ ಎಲ್ಲರಿಗೂ ಸ್ಪರ್ಧೆಗೆ ಅವಕಾಶ ನೀಡಿದ್ದೇವೆ. ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳು ಮೀಸಲಾತಿ ವಿರೋಧಿ ಪಕ್ಷಗಳಾಗಿದ್ದು, ಸ್ಥಳೀಯ ಸಂಸ್ಥೆಗಳಿಗೆ ಏನು ಕೊಡುಗೆ ನೀಡಿಲ್ಲ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು," ಎಂದರು.

"ರಾಜೀವ್ ಗಾಂಧಿ ಪ್ರಧಾನಮಂತ್ರಿ ಆಗುವವರಗೆ ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಮೀಸಲಾತಿ ಇರಲಿಲ್ಲ. ಮೊದಲ ಬಾರಿಗೆ ಶೇ.33ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ನೀಡಲಾಯಿತು."

ಮೀಸಲಾತಿ ವಿರೋಧಿಸಿದ್ದ ಬಿಜೆಪಿಯ ರಾಮಾಜೋಯಿಸ್

ಮೀಸಲಾತಿ ವಿರೋಧಿಸಿದ್ದ ಬಿಜೆಪಿಯ ರಾಮಾಜೋಯಿಸ್

"ಸ್ಥಳೀಯ ಸಂಸ್ಥೆ ಸೇರಿದಂತೆ ಎಲ್ಲ ಮೀಸಲಾತಿ ಜಾರಿಗೆ ತಂದವರು ಕಾಂಗ್ರೆಸ್ ಪಕ್ಷದವರು. ಬಿಜೆಪಿಯವರು ಮೀಸಲಾತಿ ಕೊಟ್ಟವರಲ್ಲ. ಈ ಮೀಸಲಾತಿಗಳನ್ನು ರಮಾಜೋಯಿಸ್ ಅವರು ವಿರೋಧಿಸಿದ್ದರು. ರಾಮಾಜೋಯಿಸ್ ಆಗ ರಾಜ್ಯಸಭಾ ಸದಸ್ಯರಾಗಿದ್ದರು. ಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಂದು ಮೀಸಲಾತಿ ವಿರೋಧಿಸಿದ ಬಿಜೆಪಿಯವರಿಗೆ ಮತ ಕೇಳಲು ಯಾವ ನೈತಿಕತೆ ಇದೆ?," ಎಂದು ಪ್ರಶ್ನಿಸಿದರು.

"ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯ ಕಾಪಾಡಿಕೊಂಡಿದೆ. ಪರಿಶಿಷ್ಟ ಜಾತಿಗೆ 1, ಪರಿಶಿಷ್ಟ ಪಂಗಡಕ್ಕೆ 1, ಒಬಿಸಿ 5, ಬಂಟ 1, ಮುಸ್ಲಿಂ ಹಾಗೂ ಮಹಿಳೆಯನ್ನು ಅಭ್ಯರ್ಥಿ ಮಾಡಿದ್ದೇವೆ. ಬೇರೆ ಯಾವುದೇ ಪಕ್ಷ ಸಾಮಾಜಿಕ ನ್ಯಾಯ ಕಾಪಾಡಿಲ್ಲ. ಡಿ.10ರಂದು ಚುನಾವಣೆ ನಡೆಯಲಿದ್ದು, ಡಾ.ಡಿ. ತಿಮ್ಮಯ್ಯಗೆ ಮೈಸೂರು- ಚಾಮರಾಜನಗರದ ಮತದಾರರು ಮತ ಹಾಕಬೇಕೆಂದು ಮನವಿ ಮಾಡುತ್ತೇನೆ," ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಸೋಲಿನ ಭಯದಿಂದ ಜಿ.ಪಂ ಚುನಾವಣೆ ಮುಂದೂಡಿಕೆ

ಸೋಲಿನ ಭಯದಿಂದ ಜಿ.ಪಂ ಚುನಾವಣೆ ಮುಂದೂಡಿಕೆ

ವಿಧಾನ ಪರಿಷತ್‌ನಲ್ಲಿ75 ಸ್ಥಾನಗಳಿದ್ದು, 25 ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಇಲ್ಲಿ 5 ಕ್ಷೇತ್ರಗಳು ಮಾತ್ರ ದ್ವಿಸದಸ್ಯ ಕ್ಷೇತ್ರಗಳಿವೆ. ಐದು ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಭ್ಯರ್ಥಿ ಹಾಕಿದ್ದೇವೆ. ಒಟ್ಟು 20 ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯವನ್ನು ಕಾರ್ಯಗತ ಮಾಡುವ ಕೆಲಸ ಮಾಡುತ್ತಿದ್ದು, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ‌ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸೋಲಿನ ಭಯದಿಂದ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿದೆ ಎಂದು ಆರೋಪಿಸಿದರು.

ಜಿ.ಪಂ ಸದಸ್ಯರಿಲ್ಲದೆ ಎಂಎಲ್‌ಸಿ ಚುನಾವಣೆ

ಜಿ.ಪಂ ಸದಸ್ಯರಿಲ್ಲದೆ ಎಂಎಲ್‌ಸಿ ಚುನಾವಣೆ

ರಾಜೀವ್ ಗಾಂಧಿ ಕಾಲದಲ್ಲಿ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತಂದರು. ಅದರನ್ವಯ, ಐದು ವರ್ಷಕ್ಕೆ ಒಮ್ಮೆ ಕಡ್ಡಾಯವಾಗಿ ಚುನಾವಣೆ ನಡೆಯಲೇಬೇಕು. ಆದರೆ ಬಿಜೆಪಿ ಅವರು ಕ್ಷೇತ್ರ ವಿಂಗಡಣೆ, ಮೀಸಲಾತಿ ನೆಪ ಮಾಡಿ ಚುನಾವಣೆ ಮುಂದೂಡಿದ್ದಾರೆ. ಕೋರ್ಟ್‌ ಕೇಸ್ ನೆಪ ಮಾಡಿಕೊಂಡು ಚುನಾವಣೆ ಮಾಡಿಲ್ಲ. ಪರಿಣಾಮ ತಾ.ಪಂ, ಜಿ.ಪಂ ಸದಸ್ಯರಿಲ್ಲದೆ ಎಂಎಲ್‌ಸಿ ಚುನಾವಣೆ ನಡೆಯುತ್ತಿದೆ. ಈ ರೀತಿ ಆಗಿರುವುದು ಇದೇ ಮೊದಲು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಅಲ್ಲದೇ ಬಿಜೆಪಿ ಕಾಲದಲ್ಲಿ ಅದಾನಿ ಏಷ್ಯಾದಲ್ಲೇ ನಂಬನ್ ಒನ್ ಶ್ರೀಮಂತ ಆಗಿದ್ದಾನೆ. ಬಡ ಬೋರೇಗೌಡ ಶ್ರೀಮಂತ ಆಗಿದ್ದಾನಾ? ಕಳೆದ ಮೂರೂವರೆ ವರ್ಷದಲ್ಲಿ ಬಡವರಿಗೆ ಒಂದೇ ಒಂದು ಮನೆ ವಿತರಣೆ ಮಾಡಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ವರ್ಷಕ್ಕೆ 3 ಲಕ್ಷ ಮನೆಗಳಂತೆ ಐದು ವರ್ಷದಲ್ಲಿ 15 ಲಕ್ಷ ಮನೆ ನೀಡಿದ್ದೇನೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೂ ಅಭಿವೃದ್ಧಿಗೆ ಓಟ್ ಕೊಡಿ ಎಂದು ಕೇಳುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ ಇದುವರೆಗೂ ಸರ್ವೇ ಮಾಡಿಸಿಲ್ಲ, ಸೂಕ್ತ ಪರಿಹಾರ ಕೊಟ್ಟಿಲ್ಲ‌. ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ವಿಚಾರ ಹೇಳಿದರೆ ಅದಕ್ಕೂ ರಾಜಕೀಯ ಬಣ್ಣ ಕಟ್ಟುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

40 ಪರ್ಸೆಂಟ್ ಕಮಿಷನ್ ಸರ್ಕಾರ

40 ಪರ್ಸೆಂಟ್ ಕಮಿಷನ್ ಸರ್ಕಾರ

ಅಲ್ಲದೇ, ಬಿಜೆಪಿ ಸರ್ಕಾರ ಕೊರೊನಾ ವೇಳೆ ಲಂಚ ತಿಂದಿದ್ದಾರೆ. ಕೊರೊನಾದಲ್ಲಿ ಸತ್ತವರ ಲೆಕ್ಕ ಸುಳ್ಳು ಹೇಳಿದ್ದಾರೆ. ಕೊರೊನಾದಲ್ಲಿ ರಾಜ್ಯದಲ್ಲಿ ನಾಲ್ಕು ಲಕ್ಷ, ದೇಶದಲ್ಲಿ 50 ಲಕ್ಷ ಜನ ಸತ್ತಿದ್ದಾರೆ. ಇವತ್ತು ಲಂಚ ಇಲ್ಲದೆ ಯಾವುದೇ ಟ್ರಾನ್ಸ್‌ಫರ್ ನಡಿತಾ ಇಲ್ಲ. ಶೇ.40 ಲಂಚ ಕೊಟ್ಟು ಯಾವ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ದೂರಿದರು.

ಈ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಂದರೆ ರಾಜಕಾರಣ ಅಂತಾರೆ. ಆದರೆ ಒಂದು ಲಕ್ಷ ಕಂಟ್ರಾಕ್ಟರ್ ಇರುವ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 40 ಪರ್ಸೆಂಟ್ ಕಮಿಷನ್ ಕೊಟ್ಟರೆ ಗುಣಮಟ್ಟದ ಕಾಮಗಾರಿ ಹೇಗೆ ಮಾಡಲು ಸಾಧ್ಯ? ಇವರಿಗೆ ನಾಚಿಕೆ ಆಗುವುದಿಲ್ಲವೆ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.

ಪಿಎಂ ಕೇರ್‌ನಲ್ಲಿ ಎಷ್ಟು ಹಣ ಬಂದಿದೆ?

ಪಿಎಂ ಕೇರ್‌ನಲ್ಲಿ ಎಷ್ಟು ಹಣ ಬಂದಿದೆ?

ಇನ್ನು ಪ್ರಧಾನಿ ನರೇಂದ್ರ ಮೋದಿ ಆಡಳಿತದ ಬಗ್ಗೆ ಟೀಕಿಸಿದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ "ನಾ ಕಾವೂಂಗ, ನಾ ಕಾನೆದುಂಗಾ" ಅಂತಾರೆ. ಆದರೆ ಈ ಭ್ರಷ್ಟಾಚಾರಕ್ಕೆ ಏನು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ 21 ಲಕ್ಷ ಕೋಟಿ ರೂಪಾಯಿ ಯೋಜನೆ ಘೋಷಣೆ ಮಾಡಿದರು. ಜಾಗಟೆ ಬಾರಿಸಿ, ದೀಪ ಬೆಳಗಿಸಿ ಅಂರಾರೆ ಅಂತ ಹೇಳುತ್ತಾರೆ. ಪಿಎಂ ಕೇರ್‌ನಲ್ಲಿ ಎಷ್ಟು ಹಣ ಬಂದಿದೆ? ಕರ್ನಾಟಕಕ್ಕೆ ಇದರಲ್ಲಿ ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಷ್ಟೆಲ್ಲಾ ವೈಫಲ್ಯವಿದ್ದರೂ ಇದನ್ನು ಮರೆಮಾಚಿ ಹಣ ಕೊಟ್ಟು ಚುನಾವಣೆಯಲ್ಲಿ ಓಟ್ ಪಡೆಯುತ್ತಿದ್ದಾರೆ. ಯಾರಿಗೇ ಮೀಸಲಾತಿ ನೀಡಬೇಕಾದರೂ ಪಬ್ಲಿಕ್ ಬ್ಯಾಕ್ ವರ್ಡ್ ಕ್ಲಾಸ್ ಕಮಿಷನ್ ನಿರ್ಧಾರ ಮಾಡುತ್ತೆ ಎಂದರು.

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಶ್ರೀನಿವಾಸ್ ಪ್ರಸಾದ್ ಕೋಮುವಾದಿ ಪಕ್ಷ ಸೇರಿ ನನ್ನ ವಿರುದ್ಧ ಹೇಳಿಕೆ ನೀಡಲು ನೈತಿಕತೆ ಇಲ್ಲ. ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಬಿಜೆಪಿ ಹೀಗೆ ಎಲ್ಲಾ ಪಕ್ಷ ಸುತ್ತಾಡಿದ್ದಾರೆ. ನನ್ನ ವಿರುದ್ಧ ಮಾತಾಡಲು ಅವರಿಗೆ ನೈತಿಕತೆ ಏನಿದೆ ಎಂದು ಪ್ರಶ್ನಿಸಿದ ಅವರು, ಶ್ರೀನಿವಾಸ್ ಪ್ರಸಾದ್‌ರಿಗೆ ಅನಾರೋಗ್ಯ ಇದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ. ಅವರು ಇನ್ನೂ ಹೆಚ್ಚು ವರ್ಷಗಳ ಕಾಲ ಬದುಕಿರಬೇಕು ಎಂದರು.

English summary
The BJP and JDS parties as anti-reservation and they did not contribute to local bodies, Leader of the Opposition Siddaramaiah criticized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X