ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಕುರಿತ ಅತ್ಯಾಕರ್ಷಕ ಸಾಕ್ಷ್ಯಚಿತ್ರ

By Prasad
|
Google Oneindia Kannada News

ಮೈಸೂರು, ಅ. 12 : ಮೈಸೂರಿನಲ್ಲಿ ಕನ್ನಡ ಪರಿಮಳ, ಮೈಸೂರು ಮಲ್ಲಿಗೆಯ ಘಮಲು, ರುಚಿ ನೆತ್ತಿಗೇರಿಸುವ ಮೈಸೂರು ಪಾಕು, ತಿಂದಿದ್ದನ್ನೆಲ್ಲ ಕರಗಿಸುವ ಮೈಸೂರು ವೀಳ್ಯದೆಲೆ, ಹೆಂಗಳೆಯರ ನೆಚ್ಚಿನ ಮೈಸೂರು ಸಿಲ್ಕ್, ಮದುವೆ ಮತ್ತಿತರ ಸಮಾರಂಭಗಳಲ್ಲಿ ತಲೆಗೇರುವ ಪೇಟ, ಮೈಸೂರು ಸ್ಯಾಂಡಲ್ ಊದಿನಕಡ್ಡಿಯ ಘಮಲು...

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರೆಂದರೆ ಏನೆಲ್ಲ ನೆನಪಿಗೆ ಬರುತ್ತವೆ. ಆದರೆ, ವಿಜಯನಗರ ಅಧಿಪತ್ಯ ಅಳಿದ ನಂತರ 15ನೇ ಶತಮಾನದಲ್ಲಿ, ಅಂದರೆ 1610ರಲ್ಲಿ ಮೈಸೂರಿನ ಅರಸರಾಗಿದ್ದ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದ್ದ ಮೈಸೂರು ದಸರಾ ಸಂಭ್ರಮಕ್ಕೆ ಸರಿಸಮಾನವಾದದ್ದು ಯಾವುದಿದೆ?

ದೂಸರಾ ಇಲ್ಲದ ಮೈಸೂರು ದಸರಾ ಇಡೀ ನಾಡನ್ನು ಮಾತ್ರವಲ್ಲ, ಇಡೀ ಜಗತ್ತನ್ನು ತನ್ನತ್ತ ಸೆಳೆದಿದೆ. ದಸರಾ ಇಲ್ಲದ ಮೈಸೂರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮಲ್ಲಿಗೆ ಮುಡಿದ ಮದುವಣಗಿತ್ತಿಯಂತೆ ಸಿಂಗಾರಗೊಂಡ ಮೈಸೂರನ್ನು ನೋಡಲು ಜನಸಾಗರವೇ ಹರಿದುಬಂದಿದೆ. 750 ಕಿ.ಗ್ರಾಂ. ತೂಕದ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿಯನ್ನು ಹೊತ್ತ ಅರ್ಜುನ ಸೇರಿದಂತೆ ಇತರ ಆನೆಗಳ ಜಂಬೂ ಸವಾರಿಯ ವರ್ಣನೆ ಪದಗಳಲ್ಲಿ ಮಾಡುವುದು ಸಾಧ್ಯವಿಲ್ಲ.

Mysore Dasara - A Spectacular Documentary

ಐತಿಹಾಸಿಕ ಜಂಬೂ ಸವಾರಿಯ ಜೊತೆಗೆ ದಸರಾ ಕೆರೆ ಮೈದಾನದಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ರೀಡಾ ಸ್ಪರ್ಧೆ, ರಾತ್ರಿಯಲ್ಲಿ ಭವ್ಯವಾಗಿ ಕಂಗೊಳಿಸುವ ಮೈಸೂರು ಅರಮನೆ, ನಗರದಲ್ಲಿ ಹರಡಿಕೊಂಡಿರುವ ಪುರಾತನ ಕಟ್ಟಡಗಳು, ಮನಕ್ಕೆ ಮುದ ನೀಡುವ ಕೆರೆಗಳು, ಮಕ್ಕಳನ್ನು ಪುಳಕಿತಗೊಳಿಸುವ ಜಯಚಾಮರಾಜೇಂದ್ರ ಮೃಗಾಲಯ ನೋಡಿ ಆನಂದಿಸಲು ಎರಡು ಕಣ್ಣು ಮತ್ತು ಸಮಯ ಸಾಲದು.

ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಲಾಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಇಲ್ಲಿ ಕಲಾಪ್ರದರ್ಶನ ನೀಡುವುದು ಕಲಾವಿದರಿಗೂ ಒಂದು ಪ್ರತಿಷ್ಠೆ. ಜೊತೆಗೆ ಸುತ್ತಮುತ್ತ ನೋಡಲು ನೋಡಲು ಚಾಮುಂಡಿಬೆಟ್ಟ, ಬೃಂದಾವನ ಗಾರ್ಡನ್, ಬಲಮುರಿ ಫಾಲ್ಸ್, ಮಾನಸ ಗಂಗೋತ್ರಿ, ಶ್ರೀರಂಗಪಟ್ಟಣ, ನಂಜನಗೂಡು, ರಂಗನತಿಟ್ಟು ಪಕ್ಷಿಧಾನ, ಶಿವನಸಮುದ್ರ, ತಲಕಾಡು, ಬೈಲುಕುಪ್ಪೆ ಇತ್ಯಾದಿ ಇತ್ಯಾದಿ. ಇವನ್ನೆಲ್ಲ ಸವಿಯಲು ದಸರಾ ರಜಾದಿನಗಳು ಸಾಲುವುದಿಲ್ಲ.

ಸಮಯ ಮಾಡಿಕೊಂಡು ಮೈಸೂರಿಗೆ ಪ್ರಯಾಣ ಬೆಳೆಸುವವರು ಇವುಗಳಲ್ಲಿ ಕೆಲವನ್ನಾದರೂ ನೋಡಿ ಆನಂದಿಸಬಹುದು. ಆದರೆ, ಸಮಯಾಭಾವದಿಂದ ಇದ್ದಲ್ಲಿಯೇ ಉಳಿಯುವ ಜನರಿಗಾಗಿ, ಇಡೀ ಮೈಸೂರು ದಸರಾ ಸಂಭ್ರಮದ ಸಾರವನ್ನು ಹಿಡಿದಿಡುವ ಡಾಕ್ಯುಮೆಂಟರಿಯನ್ನು ಜುವಾರಿ ಗಾರ್ಡನ್ ಸಿಟಿ ರಿಯಲ್ ಎಸ್ಟೇಟ್ ಏಜೆನ್ಸಿ ನಿರ್ಮಿಸಿದೆ. ಸುಮಾರು 1 ಗಂಟೆ ಇರುವ ಈ ಡಾಕ್ಯುಮೆಂಟರಿ ಆಂಗ್ಲ ಭಾಷೆಯಲ್ಲಿದ್ದು, ಯೂಟ್ಯೂಬ್ ನಲ್ಲಿ ನೋಡಿ, ಕೇಳಿ ಸಂಭ್ರಮಿಸಿ.


ಎಲ್ಲ ಓದುಗರಿಗೆ ನಾಡಹಬ್ಬ, ನವರಾತ್ರಿ, ವಿಜಯದಶಮಿ ಮತ್ತು ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

English summary
This is a spectacular comprehensive documentary, neatly done, on Mysore Dasara festival. Watch it when you have an hour’s leisure time, to get yourself immersed in the beauty and fragrance of Mysore Dasara. It is done by Zuari Garden City, real estate owners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X