• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ತಾಕತ್ತಿದ್ದರೆ ಹೊಸ ಪಕ್ಷ ಕಟ್ಟಲಿ ನೋಡೋಣ: ಶ್ರೀನಿವಾಸ್‌ ಪ್ರಸಾದ್‌

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 25: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌, ತಾಕತ್ತಿದ್ದರೆ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಿದ್ದರಾಮಯ್ಯ ಬಾದಾಮಿಯಲ್ಲಿ 1600 ಮತಗಳಿಂದ ಗೆಲ್ಲದೇ ಹೋದರು. ಮೈಸೂರಿನಲ್ಲಿರುವ ಅವರ ಕಾಟೂರ್ ಫಾರಂ ಅಥವಾ ಸಿದ್ದರಾಮನ ಹುಂಡಿಗೆ ಹೋಗಿ ಹೊಲ ಉಳಬೇಕಾಗಿತ್ತು. ಇಲ್ಲವಾದರೆ ವಿಜಯನಗರ ಮನೆಯಲ್ಲಿ ಕಾಲ ಕಳೆಯಬೇಕಾಯಿತು. ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರಿಗೆ ಭಾಷೆ ಮೇಲೆ ಹಿಡಿತವೇ ಇಲ್ಲ," ಎಂದು ವಾಗ್ದಾಳಿ ನಡೆಸಿದರು.

ಅಲ್ಲದೇ, "ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡುವುದು ಮತ್ತು ಅವರ ಆಡಳಿತವನ್ನು ತಾಲಿಬಾನ್ ಆಡಳಿತಕ್ಕೆ ಹೋಲಿಕೆ ಮಾಡುವುದು ಇದೆಲ್ಲಾ ಎಂಥಾ ಮಾತು. ದೇಶದ ಪ್ರಧಾನಿ ಹುದ್ದೆ ಅಂದರೆ ಏನು ಅನ್ನುವುದೇ ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಟೀಕಿಸಿದ ಶ್ರೀನಿವಾಸ್ ಪ್ರಸಾದ್, ನೀವು ಎಂದಾದರೂ ಪಕ್ಷೇತರವಾಗಿ ನಿಂತು ಗೆದ್ದಿದ್ದೀರಾ?," ಎಂದು ಪ್ರಶ್ನಿಸಿದರು.

"1984ರ ನಂತರ ಕೇಂದ್ರದಲ್ಲಿ ಸುಭದ್ರ ಸರಕಾರವೇ ಇರಲಿಲ್ಲ. ಮೋದಿ ಅವರಿಂದ ಕೇಂದ್ರದಲ್ಲಿ ಸುಭದ್ರ ಸರ್ಕಾರ ಬಂದಿದೆ. ಮೋದಿಯವರು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಇರಲೇ ಇಲ್ಲ. ಅವರನ್ನು ಬಿಜೆಪಿ ಪ್ರಮೋಟ್ ಮಾಡಿ ಪ್ರಧಾನಿ ಮಾಡಿದೆ. ಅದಕ್ಕೆ ತಕ್ಕಂತೆ ಮೋದಿಯವರು ವಿಶ್ವ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇಂತಹವರ ಬಗ್ಗೆ ಲಘು ಮಾತು ನಿಜಕ್ಕೂ ನನಗೆ ಬೇಸರ ಮೂಡಿಸಿದೆ," ಎಂದರು.

ಇದೇ ಸಂದರ್ಭದಲ್ಲಿ ಸಿಂದಗಿ, ಹಾನಗಲ್ ಚುನಾವಣೆ ಪ್ರಚಾರದಲ್ಲಿ ಬಿಜೆಪಿಯಿಂದ ಹಣ ಹಂಚಿಕೆ ಮಾಡಲಾಗಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಂಸದ ಶ್ರೀನಿವಾಸ್‌ ಪ್ರಸಾದ್, "ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಡೆದ ನಂಜನಗೂಡು ಉಪ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡರು. ಕಾಂಗ್ರೆಸ್‌ಗೆ ಅಭ್ಯರ್ಥಿಯೇ ಇಲ್ಲದಿದ್ದರೂ ಬೇರೆ ಪಕ್ಷದವರನ್ನು ಸೆಳೆದು ನಿಲ್ಲಿಸಿದಿರಿ. ಜೆಡಿಎಸ್ ಅಭ್ಯರ್ಥಿ ಹಾಕದೇ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟರು," ಎಂದು ತಿಳಿಸಿದರು.

"ನನ್ನಲ್ಲಿ ಹಣ ಇಲ್ಲ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಪೊಲೀಸರ‌ ಮೂಲಕ ಹಣ ಹಂಚಿಕೆ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಸಮ್ಮುಖದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದರು. ಆ ಉಪ ಚುನಾವಣೆ ನನಗೆ ಅತಿ ಹೆಚ್ಚು ನೋವು ನೀಡಿದೆ. ಆ ನೋವನ್ನು ಜೀವನ ಪರ್ಯಂತ ಮರೆಯಲಾಗುವುದಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಸಿದ್ದರಾಮಯ್ಯ ಸರ್ಕಾರದ ಆಡಳಿತದ ಬಗ್ಗೆಯೂ ವಾಗ್ದಾಳಿ ನಡೆಸಿದ ಸಂಸದ ಶ್ರೀನಿವಾಸ್‌ ಪ್ರಸಾದ್‌, "ಸರ್ಕಾರದ ಆಡಳಿತ ಯಂತ್ರವನ್ನು ಸಿದ್ದರಾಮಯ್ಯ ಅತೀ ಹೆಚ್ಚು ದುರ್ಬಳಕೆ ಮಾಡಿಕೊಂಡರು. ವಿವಿಧ ನಿಗಮಗಳಿಂದ ಕ್ಷೇತ್ರದ ಮತದಾರರಿಗೆ ಕೋಟಿಗಟ್ಟಲೆ ಸಾಲದ ಆಮಿಷ ಒಡ್ಡಿದರು. ನೂರಾರು ಕೋಟಿ ರೂ. ತುಂಡು ಗುತ್ತಿಗೆ ನೀಡಿ ಕಾಮಗಾರಿ ಮಾಡಿದರು. ಸೋತು ಸುಣ್ಣವಾಗಿರುವ ಕಾಂಗ್ರೆಸ್ಸಿಗರು ಆಡಳಿತದಲ್ಲಿದ್ದಾಗ ಏನೆಲ್ಲಾ ಮಾತನಾಡಿದ್ದರು. ಈಗ ಬಿಜೆಪಿ ವಿರುದ್ದ ಮಾತನಾಡುತ್ತಾರೆ," ಎಂದು ಆರೋಪಿಸಿದರು.

"ಅಲ್ಲದೇ ಸಿದ್ದರಾಮಯ್ಯ ತುಂಬಾ ಹತಾಶರಾಗಿದ್ದು, ಹತಾಶೆ ಮತ್ತು ಉದ್ವೇಗದಿಂದ ಏನೇನೊ ಮಾತನಾಡುತ್ತಿದ್ದಾರೆ. ಇತ್ತೀಚಿನವರೆಗೂ ನಾನೇ ಮುಂದಿನ ಸಿಎಂ ಎನ್ನುತ್ತಿದ್ದ ಸಿದ್ದರಾಮಯ್ಯ. ಆದರೆ ಕಳೆದೊಂದು ವಾರದಿಂದ ವರಸೆ ಬದಲಿಸಿದ್ದು, ಮುಂದಿನ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತಿದೆ," ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.

ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್‌ ಪ್ರಸಾದ್‌, "ರಾಷ್ಟ್ರ ರಾಜಕಾರಣಕ್ಕೆ ಹೋಗಿ ಸಿದ್ದರಾಮಯ್ಯ ಮಾಡೋದೇನು? ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಅಂತ ಯಾರೂ ಹೇಳಿಲ್ಲ‌. ಇದೆಲ್ಲಾ ಊಹಾಪೋಹ. ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಿದೆ. ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಏನು ಮಾಡ್ತಾರೆ," ಎಂದು ಲೇವಡಿ ಮಾಡಿದರು.

ಇದೇ ವೇಳೆ ಜೆಡಿಎಸ್ ಪಕ್ಷದ ಬಗ್ಗೆಯೂ ಮಾತನಾಡಿದ ಅವರು, "ಜೆಡಿಎಸ್ ಪಾರ್ಟಿಯಲ್ಲ, ಅದೊಂದು ಕಂಪನಿ! ಪ್ರಜ್ವಲ್, ನಿಖಿಲ್, ಭವಾನಿ, ಅನಿತಾ ನೀವೇ ಇದ್ದರೆ ಅದನ್ನು ಪಕ್ಷ ಅನ್ನಲ್ಲ, ಕಂಪನಿ ಅಂತಾರೆ. ಕುಮಾರಸ್ವಾಮಿ ತಮ್ಮ ಇತಿಮಿತಿ ಅರಿತು ಮಾತನಾಡಲಿ. ಯಾವಾಗಲೂ ಎರಡನೇ ಸ್ಥಾನ ಬಂದಾದರೂ ಸಿಎಂ ಆಗಿದ್ದಾರಾ. ಮೂರನೇ ಸ್ಥಾನ ತೆಗೊಂಡು ಎರಡು ಬಾರಿ ಸಿಎಂ ಆದವರು ನೀವು. ಇನ್ನು ದೇವೇಗೌಡರು ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುವುದಕ್ಕೆ ಕಾರ್ಯತಂತ್ರ ರೂಪಿಸುತ್ತಲೇ ಇರುತ್ತಾರೆ," ಎಂದು ಜೆಡಿಎಸ್ ಬಗ್ಗೆ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದರು.

English summary
BJP MP V. Srinivas Prasad expressed outrage against opposition leader Siddaramaiah in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X