• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ಮೊದಲು ಸ್ತಬ್ಧಚಿತ್ರಗಳ ಮಾರ್ಗಸೂಚಿ ಓದಿಕೊಳ್ಳಲಿ; ಪ್ರತಾಪ್ ಸಿಂಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 19: ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ಶುರುವಾಗಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕ್ಯಾಂಟೀನ್‌ಗೆ ಹೆಸರಿಡುವಾಗ ಈ ಮಹಾಪುರುಷರ ಹೆಸರು ನೆನಪಾಗಲಿಲ್ಲ. ಆಗ ನೆನಪಾಗಿದ್ದು ಇಂದಿರಾ ಗಾಂಧಿ ಮಾತ್ರ. ಅಧಿಕಾರ ಇದ್ದಾಗ ಸಿದ್ದರಾಮಯ್ಯನವರಿಗೆ ನಾರಾಯಣ ಗುರು, ಒನಕೆ ಓಬವ್ವ, ಮೈಸೂರು ಮಹಾರಾಜರು ನೆನಪಾಗಲಿಲ್ಲ. ಈಗ ನೆನಪಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಹನೀಯರಿಗೆ ಗೌರವ ಕೊಡುವುದನ್ನು ನಮಗೆ ಹೇಳುತ್ತಿದ್ದಾರೆ. ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಟ್ಟಿದ್ದಾರೆ. ಆ ವಿಷಯಕ್ಕೆ ಅನುಗುಣವಾಗಿ ಯಾರು ಸ್ತಬ್ಧಚಿತ್ರ ಮಾಡಿರುತ್ತಾರೋ, ಗುಣಮಟ್ಟದ ಆಧಾರದ ಮೇಲೆ ಅದರ ಆಯ್ಕೆ ಆಗುತ್ತದೆ. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಇಲ್ಲಿ ಯಾರನ್ನೂ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮೊದಲು ಗಣರಾಜ್ಯೋತ್ಸವದ ಸ್ತಬ್ಧಚಿತ್ರಗಳ ಮಾರ್ಗಸೂಚಿ ಓದಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.

ಇದೇ ವೇಳೆ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ವಾರಾಂತ್ಯ ಕರ್ಫ್ಯೂಗೆ ಹಲವು ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ವೀಕೆಂಡ್ ಕರ್ಫ್ಯೂ ವಿಧಿಸುವುದಾದರೇ ಲಸಿಕೆ ಏಕೆ ಬೇಕಿತ್ತು? ಎಂದು ಪ್ರಶ್ನಿಸಿರುವ ಸಂಸದ ಪ್ರತಾಪ್ ಸಿಂಹ, ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ ಸಭೆಗಳನ್ನು ನಡೆಸಲಾಗುತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಕರ್ಫ್ಯೂ ಯಾಕೆ? ಎಂದು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ ಜನರಿಗೆ ಭಯ ಬೀಳಿಸುವುದನ್ನು ಬಿಟ್ಟು ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆಗೆಯಿರಿ ಎಂದು ಆಗ್ರಹಿಸಿದ ಪ್ರತಾಪ್ ಸಿಂಹ, ಕರ್ಫ್ಯೂನಿಂದಾಗಿ ರಾಜ್ಯದ ಜನರಿಗೆ ತೊಂದರೆಯಾಗುತ್ತಿದೆ. ಜೀವ ಉಳಿಸಿಕೊಳ್ಳಲು ವ್ಯಾಕ್ಸಿನ್ ನೀಡಲಾಗಿದೆ. ಜನರ ಜೀವನ ಉಳಿಸಬೇಕಾದರೇ ಕರ್ಫ್ಯೂ ತೆಗೆಯಿರಿ. ಜನರ ಜೀವ, ಜೀವನ ಎರಡೂ ಮುಖ್ಯ. ಸಾರ್ವಜನಿಕರ ಅಭಿಪ್ರಾಯಕ್ಕೆ ನನ್ನ ಬೆಂಬಲವಿದೆ. ಜನರಿಗೆ ಆಗುತ್ತಿರುವ ಕಷ್ಟಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತಡೆಯಬೇಕು ಎಂದು ಹೇಳಿದರು.

Mysuru: MP Pratap Simha Slashed Against Siddaramaiah On Republic Day Tableau Issue

ಕೋವಿಡ್ ಲಾಕ್‌ಡೌನ್, ಕರ್ಫ್ಯೂನಿಂದಾಗಿ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಜನರು ತುಂಬಾ ನೊಂದಿದ್ದಾರೆ. ಹೆಚ್ಚಿನ ಜನ ಲಸಿಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಲಾಕ್‌ಡೌನ್, ಕರ್ಫ್ಯೂ ಬೇಡ. ಸಿಎಂ ಬಸವರಾಜ ಬೊಮ್ಮಾಯಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.

English summary
Mysuru MP Pratap Simha expressed outrage against Siddaramaiah On Republic Day Tableau Issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X