ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಪರಿಷತ್ ಚುನಾವಣೆ ಫಲಿತಾಂಶ: ಜಿಟಿಡಿಗೆ ಟಾಂಗ್ ನೀಡಿದ ಸಾ.ರಾ. ಮಹೇಶ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 15: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮೈಸೂರಿನ ಜೆಡಿಎಸ್ ನಾಯಕರ ನಡುವಿನ ವಾಕ್ ಸಮರ ಶುರುವಾಗಿದ್ದು, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ವಿರುದ್ಧ ಶಾಸಕ ಸಾ.ರಾ. ಮಹೇಶ್ ಹಾಗೂ ನೂತನ ಎಂಎಲ್‌ಸಿ ಸಿ.ಎನ್. ಮಂಜೇಗೌಡ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸಾ.ರಾ. ಮಹೇಶ್, "ನನ್ನನ್ನು ಸೇರಿದಂತೆ ನಮಗೆ ಜೆಡಿಎಸ್ ಅನಿವಾರ್ಯ ಹೊರತು, ಜೆಡಿಎಸ್ ಪಕ್ಷಕ್ಕೆ ನಾವು ಅನಿವಾರ್ಯವಲ್ಲ ಎಂಬುದನ್ನು ಈ ಚುನಾವಣೆ ಫಲಿತಾಂಶ ತೋರಿಸಿದೆ. ಹೀಗಾಗಿ ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಕೆಲಸ ಮಾಡುತ್ತಿರುವವರು ಈ ಬಗ್ಗೆ ಚಿಂತನೆ ಮಾಡಿ, ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ನಾಯಕರುಗಳು ಎಷ್ಟೇ ನೋವು ಕೊಟ್ಟರೂ ಅದನ್ನು ಕಾರ್ಯಕರ್ತರು ಸಹಿಸಿಕೊಂಡಿದ್ದಾರೆ. ಆದ್ದರಿಂದ ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ನಾಯಕರು ಅರ್ಥ ಮಾಡಿಕೊಳ್ಳಿ," ಎಂದು ಶಾಸಕ ಜಿ.ಟಿ. ದೇವೇಗೌಡರ ಹೆಸರು ಹೇಳದೆ ಪರೋಕ್ಷ ಟಾಂಗ್ ನೀಡಿದರು.

"ನಾವು ನಿಮ್ಮನ್ನು ನಾಯಕರೆಂದು ಒಪ್ಪಿಕೊಂಡಿದ್ದೇವೆ. ನೀವು ಇತರರಿಗೆ ಮಾರ್ಗದರ್ಶನ ನೀಡಿ. ನೀವು ನಮ್ಮ ಪಕ್ಷದ ಚಿಹ್ನೆ ಹಾಗೂ ಪಕ್ಷದ ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೀರಾ. ಆದ್ದರಿಂದ ನೀವು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿ ಎಂದ ಸಾ.ರಾ. ಮಹೇಶ್, ಅವರ ಮನಸ್ಸು ಈಗಲಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇನೆ," ಎಂದು ವ್ಯಂಗ್ಯವಾಡಿದರು.

Mysuru MLC Election Result 2021: JDS MLA Sa Ra Mahesh Slams GT Devegowda

"ಅಲ್ಲದೇ ಪರಿಷತ್ ಚುನಾವಣೆಯಲ್ಲಿ ಕುಂಕುಮ ಕೊಟ್ಟರು, ದುಡ್ಡು ಕೊಟ್ಟರು ಅಂತಾ ನಮ್ಮ ಶಾಸಕರೆ ಹೇಳಿದ್ದಾರೆ. ಹಾಗಾದರೆ ನೀವೇನೂ ಕಡ್ಲೆಪುರಿ ಕೊಟ್ರಾ? ಎಂದು ಪ್ರಶ್ನಿಸಿದ ಅವರು, ನಮಗೆ ಈಗಲೂ ನಿಮ್ಮ ಮೇಲೆ ಗೌರವವಿದೆ. ಈಗಲೂ ನಮಗೆ ಅವರೇ ನಾಯಕರು, ಇಷ್ಟೆಲ್ಲಾ ನೋವು ಕೊಟ್ಟಿದ್ದಾರೆ. ಆದರೂ ನಾಯಕರು ಅಂತಾ ಒಪ್ಪಿಕೊಂಡಿದ್ದೇವೆ. ಪಕ್ಷದ ಕಾರ್ಯಕರ್ತರ ದುಡಿಮೆಯಿಂದ ನೀವು ಶಾಸಕರಾಗಿರುವುದು, ಆದ್ದರಿಂದ ನಿಮ್ಮ ಅವಧಿ ಮುಗಿಯುವವರೆಗೂ ನೀವು ಪಕ್ಷದ ಪರವಾಗಿ ಇರಿ," ಎಂದು ಹೇಳಿದರು.

ಇದೇ ವೇಳೆ ಹಾಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "12 ವರ್ಷ ಎಂಎಲ್‌ಸಿಯಾಗಿ, ಅವರ ಕುಟುಂಬದವರು ಮೇಯರ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷಕ್ಕಾಗಿ ಅವರೂ ಕೆಲಸ ಮಾಡಿದ್ದರು. ಪಕ್ಷ ಅವರ ದುಡಿಮೆಗಿಂತ ಹೆಚ್ಚು ಅವಕಾಶ ನೀಡಿದೆ. ಹೀಗಿದ್ದೂ ನಮ್ಮ ವಿರುದ್ಧ ಏಕೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದ ಸಾ.ರಾ. ಮಹೇಶ್, ಪರಿಷತ್ ಚುನಾವಣೆ ವೇಳೆ ಅವರು ಪಕ್ಷ ತೊರೆಯುವ ಮಾತುಗಳನ್ನಾಡಿದ್ದರು, ಹೀಗಾಗಿ ಅವರಿಗೆ ಟಿಕೆಟ್ ನೀಡದೆ ಮಂಜೇಗೌಡರಿಗೆ ಟಿಕೆಟ್ ನೀಡಲಾಯಿತು," ಎಂದು ಸಂದೇಶ್ ನಾಗರಾಜ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

Mysuru MLC Election Result 2021: JDS MLA Sa Ra Mahesh Slams GT Devegowda

ಇನ್ನು ವಿಧಾನ ಪರಿಷತ್ತು ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾ.ರಾ. ಮಹೇಶ್, "ನಾಮ ನಿರ್ದೇಶಿತ ಸದಸ್ಯರಿಗೆ ಮತ ಹಾಕುವ ಹಕ್ಕು ನೀಡಿದ್ದು ನಮ್ಮ ಪ್ರಯಾಸಕ್ಕೆ ಕಾರಣವಾಯ್ತು. ಕಳೆದ ಬಾರಿ ತಾಲೂಕು ಪಂಚಾಯಿತಿಯ 150 ಹಾಗೂ ಜಿಲ್ಲಾ ಪಂಚಾಯಿತಿಯ 21 ಸದಸ್ಯರಿದ್ದರು. ಈಗ ತಾ.ಪಂ, ಜಿ.ಪಂ ಸದಸ್ಯರಿಲ್ಲ. ಬಿಜೆಪಿ ಸರ್ಕಾರ ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿತ್ತು. ಹೀಗಿದ್ದರೂ ನಮಗೂ, ಬಿಜೆಪಿಗೂ 139 ಮತಗಳ ಅಂತರ ಇತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಗಳಿಸಿದ್ದೇವೆ," ಎಂದರು.

ಜಿಟಿಡಿ ವಿರುದ್ಧ ಶಿಸ್ತುಕ್ರಮ?
ಪರಿಷತ್ ಚುನಾವಣೆ ವೇಳೆ ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಸಾ.ರಾ. ಮಹೇಶ್ ಸುಳಿವು ನೀಡಿದರು. ಹಿಂದೆ ನಡೆದ ಚುನಾವಣೆಗಳು, ಈಗ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಇದ್ದುಕೊಂಡು ನಮ್ಮ ವಿರುದ್ಧವೇ ಕೆಲಸ ಮಾಡಿದ್ದಾರೆ. ಇದನ್ನು ಪಕ್ಷ ಪರಿಗಣಿಸಿದೆ. ವಿಜೇತ ಅಭ್ಯರ್ಥಿ ಸಿ.ಎನ್. ಮಂಜೇಗೌಡ ವರಿಷ್ಠರನ್ನು ಭೇಟಿಯಾಗಲಿದ್ದು, ಚುನಾವಣೆಯ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಆ ತೀರ್ಮಾನ ಏನು ಅನ್ನುವುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಇದುವರೆಗೂ ಅವರನ್ನು ನಮ್ಮ ನಾಯಕರು ಅನ್ನುತ್ತಿದ್ದೆ. ಈಗ ಶಾಸಕರು ಅನ್ನುತ್ತೇನೆ ಎಂದು ಜಿಟಿಡಿ ವಿರುದ್ಧ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು.

Mysuru MLC Election Result 2021: JDS MLA Sa Ra Mahesh Slams GT Devegowda

ಅಪ್ಪನಿಗಿಂತ ಮಗನೇ ಪರ್ವಾಗಿಲ್ಲ!
ನೂತನ ಎಂಲ್‌ಸಿ ಸಿ.ಎನ್. ಮಂಜೇಗೌಡ ಮಾತನಾಡಿ, ಪರೋಕ್ಷವಾಗಿ ಜಿ.ಟಿ. ದೇವೇಗೌಡರನ್ನು ಕತ್ತೆಗೆ ಹೋಲಿಸಿದರು. ಜೆಡಿಎಸ್ ಪಕ್ಷವನ್ನು ರಾಮನಿಗೆ ಹೋಲಿಸಿ ಕಥೆ ಹೇಳಿದ ಅವರು, ಊರಿನಲ್ಲಿ ರಾಮನ ಫೋಟೋ ಕತ್ತೆ ಮೇಲೆ ಮೆರವಣಿಗೆ ಮಾಡುತ್ತಾರೆ. ಆಗ ಜನ ನಮಸ್ಕಾರ ಮಾಡುತ್ತಾರೆ. ಕತ್ತೆ ಆ ನಮಸ್ಕಾರ ನನಗೆ ಅಂದುಕೊಳ್ಳುತ್ತದೆ. ರಾಮನ ಫೋಟೋ ಇಳಿಸಿದ ಮೇಲೆ ಕತ್ತೆಯನ್ನು ಓಡಿಸುತ್ತಾರೆ. ಆಗ ಕತ್ತೆಗೆ ತನ್ನ ಬೆಲೆ ಗೊತ್ತಾಗುತ್ತದೆ. ಅದೇ ಪರಿಸ್ಥಿತಿ ಸದ್ಯದಲ್ಲೇ ಪಕ್ಷದಲ್ಲಿದ್ದು, ಪಕ್ಷ ವಿರೋಧಿ ಕೆಲಸ ಮಾಡುವವರಿಗೂ ಕಾಲ ಬರುತ್ತದೆ ಎಂದು ಟೀಕಿಸಿದ ಅವರು, ಅಪ್ಪನಿಗಿಂತ ಮಗನೇ ಪರ್ವಾಗಿಲ್ಲ ಎಂದು ಹೆಸರು ಹೇಳದೆ ಜಿಟಿಡಿ ಪುತ್ರ ಹರೀಶ್ ಗೌಡರನ್ನು ಹೊಗಳಿದರು.

ಇನ್ನು ಸಚಿವ ಎಸ್.ಟಿ. ಸೋಮಶೇಖರ್‌ಗೆ ಎಚ್ಚರಿಕೆ ನೀಡಿದ ಮಂಜೇಗೌಡ, ನನಗೂ ವೈಯುಕ್ತಿಕವಾಗಿ ಮಾತನಾಡೋಕೆ ಬರುತ್ತದೆ. ಪಕ್ಷದ ವರಿಷ್ಠರು ಅನುಮತಿ ನೀಡಿದರೆ ಸಚಿವರ ಬಗ್ಗೆ ನಾನೂ ಮಾತನಾಡುತ್ತೇನೆ. ಮಾತನಾಡೋಕೆ ಬರುತ್ತೆ ಅಂತ ಏನೇನೋ ಮಾತನಾಡುವುದಲ್ಲ. ನಮ್ಮ ತಾಳ್ಮೆಗೂ ಮಿತಿ ಇದೆ. ಅವರಿಗೆ ನಾನು ತಕ್ಕ ಉತ್ತರ ನೀಡೇ ನೀಡುತ್ತೇನೆ ಎಂದು ಕಿಡ್ನಿ ಮಾರಾಟಗಾರ ಎಂಬ ಸಚಿವ ಎಸ್.ಟಿ. ಸೋಮಶೇಖರ್ ಆರೋಪಕ್ಕೆ ತಿರುಗೇಟು ನೀಡಿದರು.

English summary
Mysuru MLC Election Result 2021: JDS MLA Sa Ra Mahesh expressed outrage against GT Devegowda for Anti-party works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X