ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಕನ್ನಡದ ಮೇಲಿನ ಪ್ರೀತಿಯಿಂದ ಸಯ್ಯದ್ ಇಸಾಕ್ ಸ್ಥಾಪಿಸಿದ್ದ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಹೃದಯಹೀನರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 10: ಅದು ಅದೆಷ್ಟೋ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳ ಓದಿನ ದಾಹ ನೀಗಿಸಿದ ತಾಣ. ಅದರ ಅಳತೆ ಚಿಕ್ಕದೇ ಆಗಿದ್ದರೂ, ಅಲ್ಲಿದ್ದ ಜ್ಞಾನದ ಭಂಡಾರ ನಿಜಕ್ಕೂ ಅಪರಿಮಿತವಾದದ್ದು. ಆದರೆ ಈ ಜ್ಞಾನ ಭಂಡಾರ ಇದೀಗ ಕಿಡಿಗೇಡಿಗಳು ಹೊತ್ತಿಸಿದ ಬೆಂಕಿಯ ಜ್ವಾಲೆಯಲ್ಲಿ ಬೆಂದು ಕರಕಲಾಗಿ ಹೋಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನ ಮುಸಲ್ಮಾನ ವ್ಯಕ್ತಿಯು ತಮ್ಮ ಕನ್ನಡ ಪ್ರೀತಿಯಿಂದಾಗಿ 11 ಸಾವಿರ ಗ್ರಂಥಗಳ ಗ್ರಂಥಾಲಯ ಸ್ಥಾಪಿಸಿ ಓದುಗರಿಗೆ ಆಸರೆಯಾಗಿದ್ದರು. ಧಾರ್ಮಿಕ ಸಾಮರಸ್ಯ ಸಂದೇಶವಿರುವ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿದ್ದರು. ಆದರೆ, ವಿಶಾಲ ಹೃದಯದ ವ್ಯಕ್ತಿಯ ನಡೆಯನ್ನು ಸಹಿಸಲಾಗದವರು ಜ್ಞಾನಭಂಡಾರಕ್ಕೆ ಬೆಂಕಿ ಹಚ್ಚಿ ಪುಸ್ತಕಗಳನ್ನು ನಾಶ ಮಾಡಿರುವ ಘಟನೆ ರಾಜೀವ್‌ನಗರ 2ನೇ ಹಂತದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.

11 ಸಾವಿರ ಪುಸ್ತಕಗಳು ನಾಶ

11 ಸಾವಿರ ಪುಸ್ತಕಗಳು ನಾಶ

ರಾಜೀವ್‌ನಗರದ 2ನೇ ಹಂತದಲ್ಲಿರುವ ಸಯ್ಯದ್ ಇಸಾಕ್ ಅವರಿಗೆ ಸೇರಿದ ಪುಸ್ತಕಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿರುವುದು. ಸಯ್ಯದ್ ಅವರು ಕನ್ನಡದ ಮೇಲಿನ ಪ್ರೀತಿಯಿಂದಾಗಿ ಕಳೆದ ಹಲವು ವರ್ಷಗಳಿಂದ ಮೈಸೂರಿನ ರಾಜೀವ್‌ನಗರದಲ್ಲಿ ʻಕನ್ನಡ ಸಾರ್ವಜನಿಕ ಗ್ರಂಥಾಲಯʼ ನಡೆಸಿಕೊಂಡು ಬರುತ್ತಿದ್ದರು. ಅದನ್ನು ಸಹಿಸದ ಕೆಲವರು ಅದೆಷ್ಟೋ ಸಂದರ್ಭದಲ್ಲಿ ತಕರಾರು ತೆಗೆಯುತ್ತಿದ್ದರು. ಈಗ ಏಕಾಏಕಿ ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಅಂದಾಜು 11 ಸಾವಿರ ಪುಸ್ತಕಗಳನ್ನು ನಾಶಪಡಿಸಿದ್ದಾರೆ.

ಶುಕ್ರವಾರ ಮುಂಜಾನೆ 3.40ರಲ್ಲಿ ದುಷ್ಕರ್ಮಿಗಳು ಗ್ರಂಥಾಲಯದ ಪ್ತುಕಗಳಿಗೆ ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಅಲ್ಲಿದ್ದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿ ನಂದಿಸಿದ್ದಾದರೂ, ಪುಸ್ತಕಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಿಡಿಗೇಡಿಗಳ ಹೀನ ಕೃತ್ಯದ ಬಗ್ಗೆ ಸೈಯದ್ ಪ್ರತಿಕ್ರಿಯೆ

ಕಿಡಿಗೇಡಿಗಳ ಹೀನ ಕೃತ್ಯದ ಬಗ್ಗೆ ಸೈಯದ್ ಪ್ರತಿಕ್ರಿಯೆ

2014ರಲ್ಲಿ ಒಮ್ಮೆ ನನಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಈ ವೇಳೆ ನಾನು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದೆ. ಈ ಸಂದರ್ಭದಲ್ಲಿ ನನ್ನ ಗುಡಿಸಲಿನ ಮೇಲೆ ದಾಳಿ ಮಾಡಿದ್ದರು. ಅದಾದ ಕೆಲ ದಿನಗಳಲ್ಲಿ ಮತ್ತೆ ಎರಡು ಬಾರಿ ಗುಡಿಸಲು ಮೇಲೆ ದಾಳಿ ಮಾಡಿ ಸಾಕಷ್ಟು ಗಿಡಗಳನ್ನು ಹಾನಿ ಮಾಡಿದ್ದರು. ಈಗ ಮತ್ತೊಮ್ಮೆ ದಾಳಿ ಮಾಡಿದ್ದು, ಗ್ರಂಥಾಲಯವನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಬೆಳಗಿನ ಜಾವ 3.40ರಲ್ಲಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಬೆಳಗಾಗುವಷ್ಟರಲ್ಲಿ ಪುಸ್ತಕಗಳು ಭಸ್ಮವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವ ಸೈಯದ್, ಸದ್ಯ ನನಗೆ ನೆರವಿನ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ಶಿಕ್ಷಣ ಸಚಿವರ ಬೇಸರ

ಶಿಕ್ಷಣ ಸಚಿವರ ಬೇಸರ

ಮೈಸೂರಿನ ಸೈಯದ್ ಇಸಾಕ್ ಅವರ ಗುಡಿಸಲಿನ ಗ್ರಂಥಾಲಯಕ್ಕೆ ಬೆಂಕಿ ಇಟ್ಟಿರುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸುರೇಶ್ ಕುಮಾರ್, ಇದೀಗ ತಾನೆ ಮೈಸೂರಿನ ಸೈಯದ್ ಇಸಾಕ್ ಅವರೊಂದಿಗೆ ಮಾತನಾಡಿ ಅವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದೆ. ಸೈಯದ್ ಇಸಾಕ್ ಅವರು ಕಳೆದ ಅನೇಕ ವರ್ಷಗಳಿಂದ ಪುಸ್ತಕಗಳ ಸಂಗ್ರಹ ಮಾಡಿ ವಿನೂತನ ಗ್ರಂಥಾಲಯದ ಮೂಲಕ ಬೇರೆಯವರಿಗೆ ಕನ್ನಡ ಓದಲು ಕನ್ನಡ ಕಲಿಸಲು ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

3000 ಸಾವಿರ ಭಗವದ್ಗೀತೆ ಪ್ರತಿಗಳು ಭಸ್ಮ

3000 ಸಾವಿರ ಭಗವದ್ಗೀತೆ ಪ್ರತಿಗಳು ಭಸ್ಮ

ಪ್ರತಿ ದಿನ ಅಂದಾಜು 150ಕ್ಕೂ ಜನ ಇದರಿಂದ ಲಾಭ ಪಡೆಯುತ್ತಿದ್ದರು. ಅವರ ಈ ವಿನೂತನ ಗ್ರಂಥಾಲಯಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಮಾರು 11 ಸಾವಿರ ಪುಸ್ತಕಗಳನ್ನು ಭಸ್ಮ ಮಾಡಿದ್ದಾರೆ. ಇದರಲ್ಲಿ ಸುಮಾರು 3000 ಸಾವಿರ ಭಗವದ್ಗೀತೆ ಪ್ರತಿಗಳು ಇದ್ದವಂತೆ. ಅವರ ಬಳಿ ಇದ್ದ ಪುಸ್ತಕಗಳ ಪೈಕಿ ಶೇ.85ರಷ್ಟು ಪುಸ್ತಕಗಳು ಕನ್ನಡ ಭಾಷೆಯಲ್ಲಿ ಇದ್ದವೆಂದು ತಿಳಿದುಬಂದಿದೆ. ಅವರ ಅನೇಕ ವರ್ಷಗಳ ಈ ಸಂಗ್ರಹಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರೆ. "ನಾನಂತೂ ಓದಿಲ್ಲ ಬೇರೆಯವರನ್ನು ಓದಿಸಬೇಕು ಎಂಬ ಉದ್ದೇಶ ನನ್ನದು. ಆದರೆ ನನ್ನ ಎಲ್ಲಾ ಕಾರ್ಯಕ್ಕೆ ಇಂದು ಬೆಂಕಿ ಇಡಲಾಗಿದೆ' ಎಂದು ಬಿಕ್ಕಳಿಸುತ್ತಾ ಸೈಯದ್ ಇಸಾಕ್ ನೋವು ತೋಡಿಕೊಂಡರು.

ಅವರಿಗೆ ಅಗತ್ಯ ನೆರವು, ಸಾಂತ್ವನ ನೀಡುವುದು ನಮ್ಮೆಲ್ಲರ ಕರ್ತವ್ಯ. ನಾನು ಅವರಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹಾಗೂ ಶೀಘ್ರದಲ್ಲಿಯೇ ಮೈಸೂರಿನಲ್ಲಿ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದೇನೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

English summary
In a tragic incident, miscreants have set ablaze a public library run by Syed Issaq, a daily wage labourer that had a collection of 11k books including 3k copies of Bhagavad Gita, in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X