• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಷ ದಸರಾ ಬಗ್ಗೆ ಚಿಂತಕ ಭಗವಾನ್ ಏನಂತಾರೆ?

|
Google Oneindia Kannada News

ಮೈಸೂರು, ಸೆಪ್ಟೆಂಬರ್ 28: "ಮೈಸೂರು ಎಂಬ ಹೆಸರು ಬಂದಿರುವುದೇ ಮಹಿಷನಿಂದ. ಅವನು ಅಸುರ ಆಗಿರುವುದಕ್ಕೆ ಸಾಧ್ಯವಾ? ಕೆಟ್ಟ ವ್ಯಕ್ತಿ ಹೆಸರನ್ನು ಯಾರಾದರೂ ಒಂದು ರಾಜ್ಯಕ್ಕೆ, ಊರಿಗೆ ಇಡುತ್ತಾರಾ? ಆತ ಬೌದ್ಧ. ಅತ್ಯುತ್ತಮವಾದ ಕೆಲಸ ಮಾಡಿದವನು. ಆ ಕಾರಣಕ್ಕೆ ಮಹಿಷ ದಸರಾ ಆಚರಿಸುತ್ತೇವೆ" ಎಂದು ಚಿಂತಕರಾದ ಪ್ರೊ ಕೆ. ಎಸ್. ಭಗವಾನ್ ಹೇಳಿದರು.

ಮಹಿಷ ದಸರಾ ಆಯೋಜನೆಗೆ ಕೆಲ ವರ್ಗದಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ಆಚರಣೆ ಮಾಡಲು ಕಾರಣ ಏನು ಎಂದು ಅವರನ್ನು 'ಒನ್ ಇಂಡಿಯಾ ಕನ್ನಡ'ದಿಂದ ಮಾತನಾಡಿಸಲಾಯಿತು. ಅದಕ್ಕೆ ಅವರು ನೀಡಿದ ಉತ್ತರಗಳು ಇಲ್ಲಿವೆ.

"ಮೈಸೂರಿಗೆ ಮಹಿಷನ ಕೊಡುಗೆ ಇದೆ. ಚಾಮುಂಡಿ ದೇವಿಯ ಕೊಡುಗೆ ಏನಿದೆ? ಅಶೋಕ ಮಹಾರಾಜ ಬೌದ್ಧ ಬಿಕ್ಕು ಮಹದೇವ ತೇರ ಎಂಬುವರನ್ನು ಮಹಿಷ ಮಂಡಲಕ್ಕೆ ಕಳುಹಿಸಿದ್ದ ಎಂಬ ಉಲ್ಲೇಖ ಬರುತ್ತದೆ. ಮಹಿಷನ ಅವಧಿಯಲ್ಲಿ ಮೈಸೂರಿನಲ್ಲಿ ಬೌದ್ಧ ಧರ್ಮ ಬೆಳೆಯಿತು. ಇಲ್ಲಿನ ಪ್ರಜೆಗಳು ಸುಖವಾಗಿದ್ದರು" ಎಂದರು ಭಗವಾನ್.

ಮಹಿಷ ದಸರಾ: ಸಂಸದ ಪ್ರತಾಪ್‌ ಸಿಂಹಗೆ ಯಾಕೆ ಬೇಡ?ಮಹಿಷ ದಸರಾ: ಸಂಸದ ಪ್ರತಾಪ್‌ ಸಿಂಹಗೆ ಯಾಕೆ ಬೇಡ?

ಹಾಗಿದ್ದರೆ ಚಾಮುಂಡಿ ದೇವಿಯು 'ಮಹಿಷಾಸುರನನ್ನು' ಕೊಂದದ್ದು ಏಕೆ ಎಂದು ಪ್ರಶ್ನಿಸಿದಾಗ, ವಿವರಣೆ ಮುಂದುವರಿಸಿದರು.

ಅಷ್ಟು ದಾಳಿ ಮಾಡುವಾಗ ಚಾಮುಂಡಿ ದೇವಿ ಎಲ್ಲಿ?

ಅಷ್ಟು ದಾಳಿ ಮಾಡುವಾಗ ಚಾಮುಂಡಿ ದೇವಿ ಎಲ್ಲಿ?

ಚಾಮುಂಡಿ ದೇವಿ ಮಹಿಷಾಸುರನನ್ನು ಕೊಂದಿದ್ದು ಹೌದಾದರೆ, ಭಾರತದ ಮೇಲೆ ದಾಳಿ ನಡೆಸಿದ ಯವನರು, ಮೊಘಲರು, ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಇವರನ್ನೆಲ್ಲ ಸುಮ್ಮನೆ ಬಿಟ್ಟಿದ್ದು ಏಕೆ? ಇಲ್ಲಿ ಗೊತ್ತಾಗಬೇಕಾದ ಸಂಗತಿ ಏನೆಂದರೆ, ಇತಿಹಾಸ ಹಾಗೂ ಪುರಾಣ ಅಂತ ತಂದು, ಬೌದ್ಧ ಧರ್ಮವನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. ಮಹಿಷನನ್ನು ಚಾಮುಂಡಿ ಎಂಬ ದೇವತೆ ಕೊಂದಳು ಎಂದು ಬ್ರಾಹ್ಮಣರು ಬರೆದುಕೊಂಡಿದ್ದಾರೆ. ಅದನ್ನೇ ನಂಬಿಸುವ, ಹಬ್ಬಿಸುವ ಕೆಲಸ ಆಗಿದೆ. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ಮನಸ್ಥಿತಿಯಿಂದಾಗಿ ಮಹಿಷ ನಮಗೆ 'ಅಸುರ'ನಾಗಿದ್ದಾನೆ ಅಷ್ಟೇ. ರಾಮಾಯಣದಲ್ಲಿ ಬುದ್ಧನನ್ನು ಬೈಸುತ್ತಾರೆ. ವಾಲ್ಮೀಕಿಗಿಂತ ಬುದ್ಧ ಹಳಬ. ವಾಲ್ಮೀಕಿಗೆ ಶಿಕ್ಷಣ ಸಿಕ್ಕಿದ್ದು ಸಹ ಬುದ್ಧನ ಆಲೋಚನೆಯಿಂದ. ಕ್ರಿಸ್ತ ಪೂರ್ವ 185ರಲ್ಲಿ ಮನುಸ್ಮೃತಿ ಬರೆಸಿದ ಪುಷ್ಯಮಿತ್ರ ಶೃಂಗ ಎಂಬಾತ ಚಾತುರ್ವರ್ಣ ವ್ಯವಸ್ಥೆಯನ್ನು ತಂದ.

ಬೌದ್ಧರೆಲ್ಲ ರಾಕ್ಷಸರು ಎಂಬ ಚಿತ್ರಣ

ಬೌದ್ಧರೆಲ್ಲ ರಾಕ್ಷಸರು ಎಂಬ ಚಿತ್ರಣ

ಜನಿವಾರ ಹಾಕದ ಎಲ್ಲರನ್ನೂ ಶೂದ್ರ ಎಂದು ಕರೆದರು. ಶೂದ್ರ ಅಂದರೆ ಗುಲಾಮ. ಶೂದ್ರ ಅಂದರೆ ಸೂಳೆ ಮಗ (ಬಾಸ್ಟರ್ಡ್) ಎಂಬ ಅರ್ಥ ಕೊಟ್ಟರು. ಇದು ಬ್ರಾಹ್ಮಣಶಾಹಿ ಮನಸ್ತತ್ವವನ್ನು ಸೂಚಿಸುತ್ತದೆ. ಇನ್ನು ಪ್ರವರ್ಧಮಾನಕ್ಕೆ ಬರುತ್ತಿದ್ದ ಬೌದ್ಧ ಧರ್ಮವನ್ನು ಕಂಡು ಕರುಬಿ, ಬೌದ್ಧರನ್ನು ರಾಕ್ಷಸರು ಅಂತ ಕರೆದರು. ಪುರಾಣ- ಕಾವ್ಯಗಳಲ್ಲಿ ಯಾರನ್ನೆಲ್ಲ ರಾಕ್ಷಸರು ಎಂದು ಚಿತ್ರಿಸುತ್ತಿದ್ದಾರಲ್ಲ ಅವರೆಲ್ಲ ಬೌದ್ಧರೇ. ಸ್ವಾಮಿ ವಿವೇಕಾನಂದರೇ ತಾವೊಬ್ಬ ಬೌದ್ಧ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನ ದೇಶದಲ್ಲಿ ಮೂರನೇ ಎರಡರಷ್ಟು ಬೌದ್ಧರು ಇದ್ದರು ಎಂದು ಹೇಳಿದ್ದಾರೆ. ರಾಮಕೃಷ್ಣ ಆಶ್ರಮದಲ್ಲಿ ಈ ಬಗ್ಗೆ ಇರುವ ಪುಸ್ತಕ ಕೂಡ ಸಿಗುತ್ತದೆ.

ಮೋದಿಗೆ ತಾಕತ್ತಿದ್ದರೆ ಭಾರತಕ್ಕೆ ಬಂದು ಹೇಳಲಿ

ಮೋದಿಗೆ ತಾಕತ್ತಿದ್ದರೆ ಭಾರತಕ್ಕೆ ಬಂದು ಹೇಳಲಿ

ಈಗ ಅಮೆರಿಕದಲ್ಲಿ ಇರುವ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು, 'ಇಂಡಿಯಾ ಲ್ಯಾಂಡ್ ಆಫ್ ಬುದ್ಧ ನಾಟ್ ಯುದ್ಧ' ಎಂದಿದ್ದಾರೆ. ಅವರಿಗೆ ತಾಕತ್ತಿದ್ದರೆ ಇದೇ ಮಾತನ್ನು ಭಾರತದಲ್ಲಿ ಬಂದು ಹೇಳಲಿ. ಇನ್ನು ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ಕಟ್ಟುವ ಬದಲಿಗೆ ಬುದ್ಧನಿಗೆ ದೇವಸ್ಥಾನ ಕಟ್ಟಲಿ. ಹಿಂದೂ ಧರ್ಮದ ಹುಳುಕುಗಳ ಬಗ್ಗೆ ನಾನೇ ಪುಸ್ತಕಗಳನ್ನು ಬರೆದಿದ್ದೇನೆ. ರಾಮಮಂದಿರ ಏಕೆ ಕಟ್ಟಬೇಕು ಎಂಬುದನ್ನು ಪ್ರಶ್ನೆ ಮಾಡಿ ಪುಸ್ತಕ ಬರೆದಿದ್ದೇನೆ. ನಾನು ಮಾತನಾಡುವ ಯಾವುದೇ ವಿಚಾರಕ್ಕೆ ಮೂಲ ಸಂಸ್ಕೃತ ಗ್ರಂಥಗಳ ಆಧಾರವನ್ನೇ ನೀಡಿದ್ದೇನೆ. ಸಾಕ್ಷಿಗಳು ಇಲ್ಲದೆ ನಾನು ಏನೂ ಮಾತನಾಡುವುದಿಲ್ಲ.

ಸಂಸದರ ಸರಿಯಾಗಿ ಓದಿಕೊಂಡಿಲ್ಲ

ಸಂಸದರ ಸರಿಯಾಗಿ ಓದಿಕೊಂಡಿಲ್ಲ

ಮಹಿಷ ದಸರಾ ಆಯೋಜನೆಗೆ ಮೈಸೂರು- ಕೊಡಗು ಸಂಸದರು ಅಡ್ಡಿ ಮಾಡಿ, ರದ್ದು ಪಡಿಸಿದ್ದಾರೆ. ಆದರೆ ಬೇರೆ ಸ್ಥಳದಲ್ಲಿ ನಾವು ಮಹಿಷ ದಸರಾ ಆಚರಿಸಿದ್ದೇವೆ. ಇದು ಏಳನೇ ವರ್ಷ ನಾವು ಕಾರ್ಯಕ್ರಮ ನಡೆಸಿದ್ದೇವೆ. ಮಹೇಶ್ ಚಂದ್ರ ಗುರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಷನಿಂದ ಮೈಸೂರಿಗೆ ಸಿಕ್ಕ ಕೊಡುಗೆ, ಬೌದ್ಧ ಧರ್ಮ, ಬ್ರಾಹ್ಮಣಶಾಹಿ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಏನು ಮಾಡುತ್ತೀರಿ, ನಮ್ಮ ಸಂಸದರು ಸರಿಯಾಗಿ ಓದಿಕೊಂಡಿಲ್ಲ. ಮಹಿಷ ಎಂಥ ಒಳ್ಳೆ ಕೆಲಸ ಮಾಡಿದ್ದಾನೆ ಎಂಬುದು ಅವರಿಗೆ ಗೊತ್ತಿಲ್ಲ. ಆ ಕಾರಣಕ್ಕೆ ರೇಗಾಡುತ್ತಾರೆ, ಆಚರಣೆಗೆ ಅಡ್ಡಿ ಮಾಡುತ್ತಾರೆ. ಸಿದ್ದು ಸ್ವಾಮಿ ಅವರು ಬರೆದಿರುವ 'ಪ್ರಾಚೀನ ಅಸುರ ರಾಷ್ಟ್ರ' ಎಂಬ ಪುಸ್ತಕದ ಎರಡನೇ ಮುದ್ರಣ ಮುಂದಿನ ವಾರ ಬಿಡುಗಡೆ ಆಗುತ್ತಿದೆ. ಅದರಲ್ಲಿ ಮಹಿಷನ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ನಮ್ಮ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು ಪ್ರಗತಿಪರ ಚಿಂತಕರಾದ ಕೆ. ಎಸ್. ಭಗವಾನ್.

English summary
Mahisha dasara celebrated in Mysuru by progressive thinkers. Why Mahisha dasara celebration revealed by progressive thinker professor K. S. Bhagawan in an interview with Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X