• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಳಿವಿನ ಅಂಚಿನಲ್ಲಿ ಮೈಸೂರಿನ ಆಳರಸರ ಮಧುವನ

By ಬನ್ನೂರು ಕೆ. ರಾಜು, ಮೈಸೂರು
|

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಚರಣೆಗೆ ಕಾರಣೀಭೂತರಾದ ಮೈಸೂರು ಅರಸರ ಸಮಾಧಿಗಳಿರುವ ಚಾರಿತ್ರಿಕ ಮಹತ್ವದ 'ಮಧುವನ' (ಮನುವನ ಅಂತಲೂ ಕರೆಯುತ್ತಾರೆ) ಯಾವುದೇ ಪ್ರೇಕ್ಷಣೀಯ ಸ್ಥಳಕ್ಕೆ ಕಮ್ಮಿ ಇಲ್ಲದಂತಹ ಸೌಂದರ್ಯ ತಾಣ. ಅದ್ಭುತ ವಾಸ್ತುಶಿಲ್ಪ ಕಲಾವಂತಿಕೆಯನ್ನು ಮೆರೆಯುತ್ತಿರುವ ಮಧುವನ ಮಾತ್ರ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿ ಅನಾಥವಾಗಿ ಬಿದ್ದಿದೆ. ಈಗ ಇದೇ ಮಧುವನದಲ್ಲಿ ಮಂಗಳವಾರ ವಿಧಿವಶರಾಗಿರುವ ಶ್ರೀಕಂಠದತ್ತ ಒಡೆಯರ್ ಅವರ ಅಂತ್ಯ ಸಂಸ್ಕಾರ ಡಿ.11ರಂದು ಸಕಲ ಗೌರವಗಳೊಂದಿಗೆ ನೆರವೇರಲಿದೆ. ಮಹದದ್ಭುತ ಪ್ರವಾಸಿ ತಾಣವಾಗಬಹುದಾಗಿರುವ ಮಧುವನದ ಮೇಲೆ ಬೆಳಕು ಚೆಲ್ಲುವ ಲೇಖನವಿದು. ಇನ್ನು ಮೇಲಾದರೂ ಸರಕಾರ ಇತ್ತ ಗಮನ ಹರಿಸಿ ಈ ಸ್ಥಳವನ್ನು ಅಭಿವೃದ್ಧಿಪಡಿಸಲಿ.

***

ಮೈಸೂರೆಂದರೆ ಆಕರ್ಷಿಸುವುದು ಅಂಬಾವಿಲಾಸ ಅರಮನೆ, ಚಾಮುಂಡಿಬೆಟ್ಟ, ಕೃಷ್ಣರಾಜಸಾಗರ, ಜಗನ್ಮೋಹನ ಅರಮನೆ, ಮೃಗಾಲಯ, ಲಲಿತಮಹಲ್, ಕಾರಂಜಿಕೆರೆ, ವಿಶ್ವವಿಖ್ಯಾತ ದಸರಾ ಮತ್ತು ದಸರಾ ವಸ್ತುಪ್ರದರ್ಶನ ಕೇಂದ್ರ ಎಂದಷ್ಟೇ ಬಹಳಷ್ಟು ಮಂದಿ ತಿಳಿದುಕೊಂಡಿದ್ದಾರೆ. ಆದರೆ ಇವುಗಳಂತೆಯೇ ಆಕರ್ಷಣೀಯವಾಗಿರುವ ಅದ್ಭುತ ಕಲೆಗಾರಿಕೆಯ ಅಪೂರ್ವ ತಾಣವೊಂದು ಮೈಸೂರಿನಲ್ಲೇ ಇರುವುದು ಹೆಚ್ಚಿನವರಿಗೆ ತಿಳಿದೇ ಇಲ್ಲ. ಹೊರಗಿನವರಿಗಿರಲಿ ಮೈಸೂರಿಗರಿಗೇ ಎಷ್ಟೋ ಮಂದಿಗೆ ಇದರ ಅರಿವಿಲ್ಲ. ಸ್ಮೃತಿಪಟಲಕ್ಕೆ ಬಿದ್ದೊಡನೆಯೇ ಎಂತಹವರನ್ನೂ ತನ್ನದೇ ಆದ ಸುಂದರಲೋಕದಲ್ಲಿ ಮುಳುಗಿಸಿಕೊಂಡು ಅವರ್ಣನೀಯ ಆನಂದ ನೀಡುವ ಮಧುವನವೊಂದು ಮೈಸೂರಿನ ಚಾಮುಂಡಿಬೆಟ್ಟದ ಪದತಲದಲ್ಲೇ ಹಾದುಹೋಗುವ ನಂಜನಗೂಡು ರಸ್ತೆಯಲ್ಲಿದ್ದು, ವಾಸ್ತುಶಿಲ್ಪದ ವೈಭವವನ್ನು, ಶಿಲ್ಪಕಲೆಯ ಕಾವ್ಯಮಯ ಕಲಾವಂತಿಕೆಯನ್ನು ಹುಡುಕುವವರನ್ನು, ತಡಕುವವರನ್ನು ಕೈಬೀಸಿ ಕರೆಯುತ್ತಿದೆ. [ಮಧುವನದ ಚಿತ್ರಗಳು]

ಮಧುವನ ನಾನಿಲ್ಲಿ ಹೇಳಹೊರಟಿರುವುದು ಇದರ ಬಗೆಯಾಗಿಯೇ. ಮಧುವನ ಎಂದಾಕ್ಷಣ ಮಧುತುಂಬಿದ ಪುಷ್ಪಗಳುಳ್ಳ ತಾಣವಿದೆಂದು ಸಾಮಾನ್ಯವಾಗಿ ಯಾರಾದರೂ ಊಹಿಸಿಕೊಂಡರೆ ಅವರ ಊಹೆ ಖಂಡಿತ ತಪ್ಪಾಗುತ್ತದೆ. ಆದರೆ ಮಧುತುಂಬಿದ ಸುಂದರ ಪುಷ್ಪಗಳನ್ನೂ ಮೀರಿಸುವಂತಹ ಅಂದ ಚೆಂದದ ಬೃಂದಾವನಗಳು ಇಲ್ಲಿವೆ. ಇವೆಲ್ಲಾ ಮೈಸೂರು ಸಂಸ್ಥಾನವನ್ನು ಆಳಿ ಅಳಿದ ಅರಸರ ಸಮಾಧಿಗಳು. ಅಪಾರ ಕೀರ್ತಿಗಳಿಸಿ ಮೆರೆದಂತಹ ಯದುವಂಶದ ರಾಜಾಧಿರಾಜರು, ರಣಧೀರ ಕಂಠೀರವರು, ವೀರಾಧಿವೀರರು, ಶೂರರುಗಳೆಲ್ಲಾ ಮಣ್ಣಾಗಿ ಇಲ್ಲಿ ಸಮಾಧಿಗಳಾಗಿದ್ದಾರೆ.

ಆದರೆ ಯಾರಿಗೂ ಕೂಡ ಇವುಗಳನ್ನು ಅಷ್ಟು ಸುಲಭವಾಗಿ ಸಮಾಧಿಗಳೆಂದು ತಿಳಿಯಲಾರದಷ್ಟು ಬೃಂದಾವನದ ರೂಪದಲ್ಲಿ ಪ್ರತಿಯೊಂದು ಸಮಾಧಿಗಳೂ ಅದ್ಭುತ ವಾಸ್ತುಶಿಲ್ಪದ ನಂಟಿನೊಡನೆ ಚೆಲುವಿನ ಕಲಾಕೃತಿಗಳಾಗಿ ಅರಳಿ ನಿಂತಿವೆ. ಅಷ್ಟೇ ಅಲ್ಲ, ಒಂದೊಂದು ಸಮಾಧಿಗಳೂ ವಿವಿಧ ಚಿತ್ತಾರಗಳಿಂದ ಗೋಪುರಾಕೃತಿಯಲ್ಲಿ ಬೃಹತ್ತಾಗಿ ಮೈತಳೆದಿರುವುದರಿಂದ ಇವುಗಳ ಸುಂದರ ರೂಪಗಳು ನಯನಾನಂದವಾಗಿ ಬೆರಗುಗೊಳಿಸುತ್ತವೆ. ವಾಸ್ತುಶಿಲ್ಪದ ಬಗ್ಗೆ ಮೈಸೂರು ಅರಸರು ನೀಡಿರುವ ಕೊಡುಗೆಗಳನ್ನು ಹುಡುಕಲು ಎಲ್ಲೂ ಹೋಗಬೇಕಾಗಿಲ್ಲ. ಎಲ್ಲವನ್ನೂ ಇಲ್ಲಿಯೇ ಕಾಣಬಹುದು. ಅಂತಹ ಕಣ್ಮನ ಸೆಳೆಯುವ ಹೃನ್ಮನೋಹರ ಸ್ಥಳವಿದು. ಯಾವ ಬಾಯಲ್ಲಿ ತಾನೇ ಇಂತಹ ಸುಂದರ ಸ್ಥಳವನ್ನು ಮಸಣ ಎನ್ನಲಾದೀತು? ಅದಕ್ಕೇ ಇರಬಹುದು ಇದಕ್ಕೆ ಮಧುವನ ಎಂದು ಹೆಸರಿಟ್ಟಿರುವುದು. [ಶ್ರೀಕಂಠದತ್ತ ಒಡೆಯರ್ ವಿಧಿವಶ]

ನೂರಾರು ವರ್ಷಗಳ ಇತಿಹಾಸವನ್ನು ತನ್ನ ಗರ್ಭದಲ್ಲಿರಿಸಿಕೊಂಡು ನೂರಾರು ಬಗೆಯ ಚಿತ್ತಾರಗಳ ಬೃಂದಾವನಗಳನ್ನು ಧರಿಸಿಕೊಂಡಿರುವ ಈ ಮಧುವನ ಯದುಕುಲತಿಲಕರಾದ ಮೈಸೂರು ಅರಸರ ಮತ್ತವರ ರಕ್ತಸಂಬಂಧಿಗಳಿಗೆ ಮಾತ್ರವೇ ಮೀಸಲಾದ ರುದ್ರಭೂಮಿಯಾದರೂ ಅರಸರ ಬಗ್ಗೆ ಭಕ್ತಿ ಗೌರವ ಉಳ್ಳವರಿಗೆ ಇದು ಅಂದಿನಿಂದಲೂ ಇಂದಿನ ತನಕವೂ ಕೂಡ ಪುಣ್ಯ ಭೂಮಿಯಾಗಿದೆ. ಹಾಗಾಗಿ ಈಗಲೂ ಕೂಡ ಮಧುವನದ ಬೃಂದಾವನಗಳಿಗೆ ಪೂಜೆ ಮಾಡುವ ರಾಜಭಕ್ತರನ್ನು ಕಾಣಬಹುದು.

ಎಂಟು ಎಕರೆಯಷ್ಟು ವಿಶಾಲ ವಿಸ್ತೀರ್ಣ ಹೊಂದಿರುವ ಮಧುವನವನ್ನು ಪ್ರವೇಶಿಸುತ್ತಿದ್ದಂತೆಯೇ ಕಲ್ಪನೆಯ ಗಂಧರ್ವಲೋಕವನ್ನು ಹೊಕ್ಕಂತಹ ಅನುಭವವಾಗುತ್ತದೆ. ಮುಗಿಲನ್ನು ಮುತ್ತಿಕ್ಕುತ್ತಿರುವಂತೆ ಬಾನೆತ್ತರ ನಿಂತಿರುವ ಮಧುವನದ ಹೆಬ್ಬಾಗಿಲು ಆಶ್ಚರ್ಯ ತರಿಸಿದರೆ ಅದರ ಬಲ ಪಕ್ಕದಲ್ಲೇ ಇರುವ ವೀರಭದ್ರೇಶ್ವರ ದೇವಾಲಯ ಎಂಥಾ ನಾಸ್ತಿಕನಲ್ಲೂ ಭಕ್ತಿಯನ್ನು ಮೂಡಿಸುತ್ತದೆ. ಇಲ್ಲಿರುವಂತಹ ವೀರಭದ್ರೇಶ್ವರನ ಕಪ್ಪುಶಿಲೆಯ ಇಷ್ಟೊಂದು ಚೆಂದದ ಪುತ್ಥಳಿ ಬಹುಶಃ ಬೇರೆಲ್ಲೂ ಇರಲಾರದೇನೋ. ಇದನ್ನು ಸ್ವತಃ ಮುಮ್ಮಡಿ ಶ್ರೀಕೃಷ್ಣರಾಜೇಂದ್ರ ಒಡೆಯರ್‌ರವರೇ ಸ್ಥಾಪಿಸಿರುವುದರಿಂದ ಇಲ್ಲಿ ರಾಜಸಿರಿಯನ್ನು ಕಾಣಬಹುದು. [1953 ಒಡೆಯರ್ ಲವ್ ಸ್ಟೋರಿ]

ಹಾಗೆಯೇ ಇಲ್ಲಿಂದ ಬಲಕ್ಕೆ ಕೆಲವು ಹೆಜ್ಜೆಗಳು ಸರಿದಿತೆಂದರೆ ಅಲ್ಲೊಂದು ಕೊಳ ಉಂಟು. ದೇವಲೋಕದ ದೇವೇಂದ್ರನೇ ಜಲಕ್ರೀಡೆಯಾಡುತ್ತಿದ್ದ ಕೊಳವಿದಂತೆ. ಆದರೀಗ ಇದು ಕಸಕಡ್ಡಿಗಳು ತುಂಬಿದ ಹೊಂಡವಾಗಿದೆ. ಇಲ್ಲಿಂದ ತುಸುದೂರ ಕ್ರಮಿಸಿ ಮಧುವನದ ಒಳಾಂಗಣಕ್ಕೆ ಬಂದರೆ ಪವಿತ್ರ ಕಾಶಿಯನ್ನು ನೆನಪಿಸುವ ಕಾಶಿವಿಶ್ವನಾಥ ದೇವಾಲಯ ಮಂತ್ರಮುಗ್ಧರನ್ನಾಗಿಸಿಬಿಡುತ್ತದೆ. ಕಾಶಿವಿಶ್ವನಾಥ ದೇವಾಲಯದ ಬಲಭಾಗದಲ್ಲಿರುವ ಗಣೇಶನ ಪುಟ್ಟಗುಡಿ ಮತ್ತು ಎಡಭಾಗದಲ್ಲಿರುವ ಕಾಳಮ್ಮದೇವಿಯ ಪುಟ್ಟಗುಡಿಗಳು ತಮ್ಮದೇ ಆದ ಅಂದದಿಂದ ಒಂದು ಕ್ಷಣ ತಡೆದು ನಿಲ್ಲಿಸುತ್ತವೆ. ಅಲ್ಲಿಂದ ಮುಂದೆ ಸಾಗಿ ಮಧುವನದ ಹೃದಯಭಾಗ ತಲುಪಿತೆಂದರೆ ನೋಡಲಿಕ್ಕೆ ಎರಡು ಕಣ್ಣುಗಳೂ ಸಾಲದಾಗುತ್ತವೆ. ಎರಡು ಕಣ್ಣುಗಳೇ ಏನು ಎರಡು ನೂರು ಕಣ್ಣುಗಳಿದ್ದರೂ ಮಹದಾಶ್ಚರ್ಯದಿಂದ ಯಾವುದನ್ನು ನೋಡುವುದು ಯಾವುದನ್ನು ಬಿಡುವುದೆಂಬ ಸಂದಿಗ್ಧಕ್ಕೆ ಸಿಲುಕಿಸುತ್ತವೆ.

ಸ್ವರ್ಗದಲ್ಲಿರಬಹುದಾದ ಯಾವುದೋ ಭವ್ಯ ದೇಗುಲದಂತೆ ಭುವಿಯಿಂದ ಬಾನಿನತ್ತ ಬೆಳೆದು ಹಲವು ಗೋಪುರ ಕಳಸಗಳೊಡನೆ ನಿರ್ಮಾಣಗೊಂಡಿರುವ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್‌ರವರ ಬೃಂದಾವನವನ್ನು ನೋಡಬೇಕಾದರೆ ಕೊರಳೆತ್ತಿ ಹಿಂದಕ್ಕೆ ಬೆನ್ನನ್ನು ಬಾಗಿಸಬೇಕಾಗುತ್ತದೆ. ಹೀಗೆ ಬಾಗಿಸಿದ್ದಕ್ಕೂ ಸಾರ್ಥಕವೆನಿಸುವಂತಹ ಅಮೋಘ ದೃಶ್ಯ ಈ ಬೃಂದಾವನದ್ದು. ಇದರ ಎಡಭಾಗದಲ್ಲೇ ಚಾಮರಾಜೇಂದ್ರ ಒಡೆಯರ್‌ರವರ ಬೃಂದಾವನವು ತನ್ನದೇ ಆದ ಚೆಂದದಿಂದ ಸೌಂದರ್ಯವನ್ನು ಅರಸುವ ಕಂಗಳನ್ನು ಮುದ್ದಿಸುತ್ತದೆ. [ಅಲಮೇಲಮ್ಮನ ಶಾಪ]

ತ್ರಿವಳಿ ಬೃಂದಾವನಗಳ ಭವ್ಯತೆಯ ರೂಪ

ತ್ರಿವಳಿ ಬೃಂದಾವನಗಳ ಭವ್ಯತೆಯ ರೂಪ

ಹಾಗೆಯೇ ಮುಂದೆ ಹೋದಲ್ಲಿ ರಣಧೀರ ಕಂಠೀರವ ನರಸಿಂಹರಾಜ ಒಡೆಯರ್ ಮತ್ತು 9ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತ್ರಿವಳಿ ಬೃಂದಾವನಗಳು ಭವ್ಯತೆಯ ರೂಪ ತಳೆದಿದ್ದು ಅಮೃತಶಿಲೆಯ ಹೊಳಪಿನಿಂದ ತಾಜ್‌ಮಹಲಿನಂತೆ ಫಳಫಳನೆ ಹೊಳೆಯುತ್ತ ನಿರ್ಜೀವತನದಲ್ಲೂ ಜೀವತಳೆದು ನೋಡುಗರ ಕಣ್ಣಕಕ್ಷೆಯನ್ನು ಹಿಡಿಯುತ್ತವೆ.

ಮಹಾರಾಣಿ ವಾಣಿವಿಲಾಸರ ಬೃಂದಾವನ

ಮಹಾರಾಣಿ ವಾಣಿವಿಲಾಸರ ಬೃಂದಾವನ

ಇಲ್ಲಿಯೇ ಪಕ್ಕದಲ್ಲೇ ಪವಡಿಸಿರುವ ಚಾಮರಾಜ ಒಡೆಯರ್‌ರವರ ಧರ್ಮಪತ್ನಿ ಮಹಾರಾಣಿ ರೀಜಂಟ್‌ರವರಾದ ವಾಣಿವಿಲಾಸರ ಬೃಂದಾವನವಂತೂ ಭೃಂಗಗಳನ್ನು ಸೆಳೆಯುವ ಬಿಳಿಗುಲಾಬಿಯಂತೆ ಹಾಲ್ಗಲ್ಲಿನ ಬೆಳಕಿನಲ್ಲಿ ಮನೋಹರವಾಗಿ ಮನ ಸೆಳೆಯುತ್ತದೆ. ಇದರ ಪಕ್ಕದಲ್ಲೇ ಇವರ ತೃತೀಯ ಕುವರಿ ಚೆಲುವರಾಜಮ್ಮಣ್ಣಿಯವರ ಬೃಂದಾವನವೂ ಆಕರ್ಷಕವಾಗಿ ರೂಪುಗೊಂಡಿದೆ.

ಒಂದೊಂದು ಬೃಂದಾವನದಲ್ಲೂ ವಾಸ್ತುಶಿಲ್ಪದ ವೈಭವ

ಒಂದೊಂದು ಬೃಂದಾವನದಲ್ಲೂ ವಾಸ್ತುಶಿಲ್ಪದ ವೈಭವ

ಒಂದಕ್ಕಿಂತ ಒಂದು ಅಂದವಾಗಿ ಚೆಂದವಾಗಿ ಮಧುವನದ ತುಂಬ ತುಂಬಿಕೊಂಡಿರುವ ಒಂದೊಂದು ಬೃಂದಾವನವೂ ವಾಸ್ತುಶಿಲ್ಪದ ವೈವಿಧ್ಯತೆಯನ್ನು ಪರಿಚಯಿಸುತ್ತವೆ. ಯದುಕುಲದ ಅರಸರ ಮಾತಾಪಿತ ಪತ್ನಿಯರಾದಿಯಾಗಿ ಪುತ್ರ ಪುತ್ರಿಯರ ತನಕ ಎಲ್ಲರ ಸಮಾಧಿಗಳೂ ಇಲ್ಲಿ ಅಂದ ಚೆಂದದ ಬೃಂದಾವನಗಳ ರೂಪದಲ್ಲಿ ಆಳರಸರ ಕುರುಹುಗಳಾಗಿ ಚೆಲುವಿನ ಚಿತ್ತಾರಗಳನ್ನು ಹೊತ್ತು ನಿಂತಿವೆ.

ಶಿಲೆಗಳು ಸಂಗೀತವ ಹಾಡಿವೆ

ಶಿಲೆಗಳು ಸಂಗೀತವ ಹಾಡಿವೆ

ಮಧುವನದ ಬಾನಲ್ಲಿ ಪ್ರತಿಯೊಂದು ಬೃಂದಾವನಗಳೂ ನಕ್ಷತ್ರಗಳಾಗಿ ಮಿನುಗುತ್ತಿವೆ. ಕಲ್ಲರಳಿ ಹೂವಾಗುತ್ತವೆಂಬ ಮಾತಿಗೆ ಮಧುವನ ಸಾಕ್ಷಿಯಾಗಬಲ್ಲದು. ಹಾಗೆಯೇ ಶಿಲೆಗಳು ಸಂಗೀತವ ಹಾಡಿವೆ... ಎಂಬ ಕವಿವಾಣಿಯನ್ನು ಮಧುವನದಲ್ಲಿ ಪ್ರತ್ಯಕ್ಷವಾಗಿ ಕಾಣಬಹುದಲ್ಲದೆ ಮಧುರವಾಗಿ ಕೇಳಬಹುದು.

ತಾಣ ಈಗ ಅವಸಾನದ ಅಂಚಿನಲ್ಲಿದೆ

ತಾಣ ಈಗ ಅವಸಾನದ ಅಂಚಿನಲ್ಲಿದೆ

ದುರಂತವೆಂದರೆ ಚಿತ್ತಾರದ ನಗರಿಯಂತಿರುವ, ಚಿತ್ತಾಕರ್ಷಕ ಮಂದಿರವೇ ಆಗಿರುವ ಇಂತಹ ಅಭೂತಪೂರ್ವ ತಾಣ ಈಗ ಅವಸಾನದ ಅಂಚಿನಲ್ಲಿದೆ. ವಾಸ್ತವವಾಗಿ ಇದೊಂದು ಸ್ಮಶಾನವಾಗಿದ್ದರೂ ಕೂಡ ತನ್ನದೇ ಆದ ಅಭೂತ ಸೌಂದರ್ಯವನ್ನು, ಅಪೂರ್ವ ಕಲೆಗಾರಿಕೆಯನ್ನು, ಅರಸರ ಹಿರಿಮೆಯನ್ನು, ಅನನ್ಯ ಸಿರಿಯನ್ನು ಹೊಂದಿರುವ ಮಧುವನ ಒಂದು ಸುಂದರ ಲೋಕವೇ ಹೊರತು ಎಂದೂ ಸ್ಮಶಾನದಂತಿರಲಿಲ್ಲ. ಆದರೀಗ ಆಳರಸರ ವಂಶಸ್ಥರಿಂದ ಹಿಡಿದು ಸರ್ಕಾರದ ತನಕ ನಿರ್ಲಕ್ಷ್ಯಕ್ಕೊಳಗಾಗಿರುವ ಮಧುವನ ತನ್ನೊಳಗಿನ ಸೌಂದರ್ಯವನ್ನೆಲ್ಲಾ ಕಳೆದುಕೊಳ್ಳುತ್ತಾ ಸ್ಮಶಾನವಾಗಿದೆ.

ಈಗ ಪುಂಡು ಪೋಕರಿಗಳದೇ ಕಾರುಬಾರು

ಈಗ ಪುಂಡು ಪೋಕರಿಗಳದೇ ಕಾರುಬಾರು

ಮಹತ್ವಪೂರ್ಣವಾದ ಇಂತಹ ಒಂದು ಹಿರಿದಾದ ಸ್ಥಳವಾಗಿದ್ದರೂ ಕೂಡ ಬೇಲಿ ಇಲ್ಲದ ಹೊಲದಂತೆ ಬಟಾ ಬಯಲಿನಲ್ಲಿ ಅನಾಥವಾಗಿ ನಿಂತಿರುವ ಮಧುವನದ ತುಂಬಾ ಈಗ ಪುಂಡು ಪೋಕರಿಗಳದೇ ಕಾರುಬಾರು. ಕಳ್ಳಕಾಕರು, ಜೂಜುಕೋರರು, ಅನೈತಿಕ ವ್ಯವಹಾರ ಮಾಡುವವರು ಇವರುಗಳಿಗೆಲ್ಲಾ ಮಧುವನವೇ ತವರು ಮನೆಯಾಗಿದೆ. ವಿವೇಕ ಶೂನ್ಯರಾದ ಇವರುಗಳ ದರ್ಬಾರಿಗೆ ಸಿಕ್ಕಿ ಹಲವಾರು ಬೃಂದಾವನಗಳು ಈಗಾಗಲೇ ಮುಕ್ಕಾಗಿವೆ. ಕಾಶಿ ವಿಶ್ವನಾಥನ ವಿಗ್ರಹವೂ ಸೇರಿದಂತೆ ಬಹಳಷ್ಟು ಬೃಂದಾವನಗಳ ಕಳಶಗಳು ಕಳ್ಳರ ಪಾಲಾಗಿವೆ.

ಸಿನಿಮಾ ಮಂದಿ ಲಗ್ಗೆ ಹಾಕುವುದುಂಟು

ಸಿನಿಮಾ ಮಂದಿ ಲಗ್ಗೆ ಹಾಕುವುದುಂಟು

ಆಗಾಗ್ಗೆ ಮಧುವನಕ್ಕೆ ಸಿನಿಮಾ ಮಂದಿ ಕೂಡ ಲಗ್ಗೆ ಹಾಕುವುದುಂಟು. ತಮ್ಮ ಚಿತ್ರದ ಚಿತ್ರೀಕರಣಕ್ಕೆಂದು ಬರುವ ಇವರು, ಹೇಳುವವರು ಕೇಳುವವರು ಯಾರೂ ಇಲ್ಲದ ಮಧುವನವನ್ನು ತಮಗಿಷ್ಟ ಬಂದಂತೆ ಉಪಯೋಗಿಸಿಕೊಂಡು ಮೊದಲೇ ನಲುಗುತ್ತಿರುವ ಮಧುವನವನ್ನು ಮತ್ತಷ್ಟು ನಲುಗಿಸುತ್ತಾರೆ. ತಾವು ನಡೆಸಿದ ಬಣ್ಣದ ಲೋಕದ ಬೆಡಗಿನಡಿಯಲ್ಲಿ ಚೆಲ್ಲಿದ ಅವಶೇಷಗಳೆಲ್ಲವೂ ಇಲ್ಲಿ ಕೊಳೆತು ನಾರಿದರೂ ಸರಿಯೇ ಅದನ್ನು ಶುಚಿಗೊಳಿಸುವ ಕನಿಷ್ಠ ಸೌಜನ್ಯವೂ ಇವರಿಗಿರುವುದಿಲ್ಲ.

ತಿಂದು ತೇಗಿ, ಕುಡಿದು ಕುಣಿದು, ಕೇಕೆ ಹಾಕಿ

ತಿಂದು ತೇಗಿ, ಕುಡಿದು ಕುಣಿದು, ಕೇಕೆ ಹಾಕಿ

ಇನ್ನು ಪಾರ್ಟಿ ನೆಪದಲ್ಲಿ ಮೋಜಿಗಾಗಿ ಬಹಳ ಜನ ಇಲ್ಲಿಗೆ ಬಂದು ತಿಂದು ತೇಗಿ, ಕುಡಿದು ಕುಣಿದು, ಕೇಕೆ ಹಾಕಿ ತಾವು ಮಾಡಿದ ಮಹಾಕಾರ್ಯದ ಗುರುತುಗಳೆಲ್ಲವನ್ನೂ ಮಧುವನದ ಮೈಮೇಲೆ ಹರಡಿ ಹೋಗುತ್ತಾರೆ. ಇದನ್ನೆಲ್ಲಾ ತಡೆಯುವವರು ಯಾರೆಂಬ ಪ್ರಶ್ನೆ ಸಹಜವಾಗಿ ಬಂದರೂ ಇದಕ್ಕೆ ಉತ್ತರವನ್ನು ಮಧುವನದ ಸ್ಮಶಾನ ಮೌನದಲ್ಲಿ ಹುಡುಕಬೇಕಷ್ಟೆ.

ಕಡೆಗಣಿಸಿದ ಕೂಸಾಗಿರುವುದು ದೊಡ್ಡ ದುರಂತ

ಕಡೆಗಣಿಸಿದ ಕೂಸಾಗಿರುವುದು ದೊಡ್ಡ ದುರಂತ

ಕೃಷ್ಣರಾಜಸಾಗರ, ಕೃಷ್ಣರಾಜೇಂದ್ರ ಆಸ್ಪತ್ರೆ, ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಅರಮನೆ, ಗುರುಮನೆ, ಸೆರೆಮನೆ... ಹೀಗೆ ಹೇಳುತ್ತಾ ಹೋದರೆ ಇಡೀ ಮೈಸೂರನ್ನೇ ಕೊಡುಗೆಯಾಗಿ ನೀಡಿರುವ ಮೈಸೂರು ಅರಸರ ಸಮಾಧಿಗಳ ನೆಲೆ ಬೀಡಾಗಿರುವ ಮಧುವನ ಎಲ್ಲರೂ ಕಡೆಗಣಿಸಿದ ಕೂಸಾಗಿರುವುದು ನಿಜಕ್ಕೂ ದೊಡ್ಡ ದುರಂತ.

ದಿಕ್ಕಿಲ್ಲದ ಪರದೇಶಿಗಳಂತೆ ಪ್ರೇತಕಳೆ ತಳೆದಿವೆ

ದಿಕ್ಕಿಲ್ಲದ ಪರದೇಶಿಗಳಂತೆ ಪ್ರೇತಕಳೆ ತಳೆದಿವೆ

ಒಂದು ಕಡೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮತ್ತು ಹೈದರ್‌ ಆಲಿಯವರ ಸಮಾಧಿಗಳು ಪಕ್ಕದ ಶ್ರೀರಂಗಪಟ್ಟಣದಲ್ಲಿ ಸ್ಮಾರಕ ಕೇಂದ್ರಗಳಾಗಿ ಪ್ರೇಕ್ಷಣೀಯ ಸ್ಥಳಗಳಾಗಿದ್ದರೆ ಮತ್ತೊಂದು ಕಡೆ ಮೈಸೂರು ಮಹಾರಾಜರುಗಳ ಸಮಾಧಿಗಳು ದಿಕ್ಕಿಲ್ಲದ ಪರದೇಶಿಗಳಂತೆ ಪ್ರೇತಕಳೆ ತಳೆದು ಹದ್ದು, ಕಾಗೆ, ನಾಯಿ, ನರಿ, ಗೂಬೆಗಳ ಗೂಡಾಗಿ ಹಾವು, ಹಲ್ಲಿ, ಪುಂಡ ಪೋಕರಿಗಳ ವಾಸಸ್ಥಳವಾಗಿರುವುದು ಎಂಥಾ ಶೋಚನೀಯ!

ಮಧುವನ ಇತ್ತೆಂದು ಕೇಳಬಹುದಷ್ಟೆ

ಮಧುವನ ಇತ್ತೆಂದು ಕೇಳಬಹುದಷ್ಟೆ

ಟಿಪ್ಪು, ಹೈದರ್‌ಆಲಿಯವರ ಸಮಾಧಿಗಳಿಗೆ ದೊರೆತ ಸಂರಕ್ಷಣೆ ಮಧುವನಕ್ಕೂ ದೊರೆತಲ್ಲಿ ಇದು ಒಂದು ವೈಭವದ ಪ್ರೇಕ್ಷಣೀಯ ಸ್ಥಳವಾಗಿ ಇಡೀ ವಿಶ್ವವನ್ನು ಆಕರ್ಷಿಸಬಲ್ಲದು. ಇಲ್ಲದಿದ್ದರೆ ಈಗಿರುವ ಅನಾಥ ಸ್ಥಿತಿಯಲ್ಲೇ ಮಧುವನವಿದ್ದಲ್ಲಿ ಇಂದೋ ನಾಳೆಯೋ ಮಧುವನ ಎಂಬುದೊಂದು ಮೈಸೂರಿನಲ್ಲಿ ಇತ್ತೆಂಬುದನ್ನು ಮಾತ್ರ ಕೇಳಬಹುದಷ್ಟೆ, ಆದರೆ ಮಧುವನವನ್ನು ನೋಡಲಾಗುವುದಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madhuvana, the burial site of Mysore Maharajas is a picture of utter negligence. Though it is one of the most attractive places in Mysore it has been neglected and no development work is undertaken to rejuvenate it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more