ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ; ಮೈಸೂರಿನಲ್ಲಿ ಗೆಲುವಿಗೆ ತ್ರಿಕೋನ ಕಸರತ್ತು!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 07; ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರವು ಹಲವು ಕಾರಣಗಳಿಗೆ ಪ್ರತಿಷ್ಠಿತ ಕ್ಷೇತ್ರದಂತೆ ಬಿಂಬಿತವಾಗುತ್ತಿದೆ. ಮೇಲ್ನೋಟಕ್ಕೆ ಇಲ್ಲಿ ಬೆಂಬಲಿತ ಮತದಾರರ ಲೆಕ್ಕಾಚಾರದಲ್ಲಿ ಮೊದಲ ಸ್ಥಾನದಲ್ಲಿ ಕಾಂಗ್ರೆಸ್, ಎರಡನೇ ಸ್ಥಾನದಲ್ಲಿ ಜೆಡಿಎಸ್ ಇದ್ದರೂ ಬಿಜೆಪಿಯ ಕಾರ್ಯತಂತ್ರ, ಅಭ್ಯರ್ಥಿಯ ವರ್ಚಸ್ಸು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವಂತೆ ಮಾಡಿದೆ.

ಮೂರು ಪಕ್ಷಗಳಿಗೆ ಹೋಲಿಸಿದರೆ ಬೆಂಬಲಿತ ಮತದಾರರ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಂದಿದೆ. ಹೀಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಸಿದ್ದರಾಮಯ್ಯ ಅವರಲ್ಲಿದೆ. ಆದರೆ ಅವರಿಗೆ ಸೆಡ್ಡು ಹೊಡೆದು ಗೆಲುವಿಗಾಗಿ ಕಾರ್ಯತಂತ್ರ ರೂಪಿಸಿರುವ ಎಚ್. ಡಿ. ಕುಮಾರಸ್ವಾಮಿ ಎಲ್ಲ ಕ್ಷೇತ್ರಗಳ ಮತದಾರರನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡದೆ ನೇರವಾಗಿ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡುವ ಮೂಲಕ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕಸರತ್ತು ಮಾಡುತ್ತಿದ್ದಾರೆ.

ಪರಿಷತ್ ಫೈಟ್; ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಜೆಡಿಎಸ್!ಪರಿಷತ್ ಫೈಟ್; ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ ಜೆಡಿಎಸ್!

ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ನ ತಟಸ್ಥ ನಾಯಕ ಜಿ. ಟಿ. ದೇವೇಗೌಡರು ತಮ್ಮ ಪರವಾಗಿ ಇದ್ದಾರೆ. ಅವರ ಬೆಂಬಲಿಗ ಮತದಾರರು ಕಾಂಗ್ರೆಸ್‍ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಆದರೆ ತಳಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗುವುದು ಕಷ್ಟವೇ. ಕಳೆದ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಮೇಲ್ಮಟ್ಟದಲ್ಲಿ ಸರ್ಕಾರ ನಡೆಸುತ್ತಿದ್ದರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದಾದಂತೆ ಕಂಡು ಬರಲೇ ಇಲ್ಲ. ಹೀಗಿರುವಾಗ ಪಕ್ಷ ನಿಷ್ಠೆ ಹೊಂದಿರುವ ಮತದಾರರು ತಮ್ಮ ಪಕ್ಷವನ್ನು ಬಿಟ್ಟು ಮತ್ತೊಂದು ಪಕ್ಷದ ಅಭ್ಯರ್ಥಿ ಕೈ ಹಿಡಿಯುತ್ತಾರೆ ಎಂಬುದನ್ನು ಅಷ್ಟು ಸುಲಭವಾಗಿ ಒಪ್ಪಲಾಗದು.

ಪರಿಷತ್ ಫೈಟ್; ವೋಟಿಗಾಗಿ ಆಣೆ-ಪ್ರಮಾಣ, ಬಾಡೂಟ!ಪರಿಷತ್ ಫೈಟ್; ವೋಟಿಗಾಗಿ ಆಣೆ-ಪ್ರಮಾಣ, ಬಾಡೂಟ!

ಕಾಂಗ್ರೆಸ್-ಜೆಡಿಎಸ್ ನಡುವೆ ಪ್ರಬಲ ಪೈಪೋಟಿ

ಕಾಂಗ್ರೆಸ್-ಜೆಡಿಎಸ್ ನಡುವೆ ಪ್ರಬಲ ಪೈಪೋಟಿ

ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿಯಿದೆ. ಕೊನೆಗಳಿಗೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಕಾಂಗ್ರೆಸ್‍ ಅನ್ನು ಅರ್ಥಾತ್ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡಲು ವ್ಯೂಹ ರಚಿಸಿದರೂ ಅಚ್ಚರಿಪಡಬೇಕಾಗಿಲ್ಲ. ಕಾಂಗ್ರೆಸ್‌ನಲ್ಲಿದ್ದ ಪ್ರಮುಖ ನಾಯಕನೇ ಕೊನೆ ಗಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವುದರಿಂದ ಜೆಡಿಎಸ್‌ಗೆ ಹೆಚ್ಚಿನ ಲಾಭವಾಗಿದ್ದು, ಕಾಂಗ್ರೆಸ್‍ಗೆ ಒಂದಷ್ಟು ಹಿನ್ನಡೆಯಾಗಿದೆ. ಅದಕ್ಕಿಂತ ಹೆಚ್ಚಾಗಿ ಹಿಂದೆ ಮೊದಲ ಪ್ರಾಶಸ್ತ್ಯದಿಂದ ಗೆಲುವು ಪಡೆದಿದ್ದ ಆರ್. ಧರ್ಮಸೇನಾಗೆ ಕಾಂಗ್ರೆಸ್ ಟಿಕೆಟ್ ನೀಡದೆ ಕೈ ಬಿಟ್ಟಿರುವುದು ಎಲ್ಲೋ ಒಂದು ಕಡೆ ಕಾಂಗ್ರೆಸ್‍ಗೆ ಹೊಡೆತ ನೀಡಿದರೂ ಅಚ್ಚರಿಪಡಬೇಕಾಗಿಲ್ಲ.

ಬಿಜೆಪಿ ಅಭ್ಯರ್ಥಿಗೆ ಗೆದ್ದೇ ಗೆಲ್ಲಬೇಕೆನ್ನುವ ಹಠ

ಬಿಜೆಪಿ ಅಭ್ಯರ್ಥಿಗೆ ಗೆದ್ದೇ ಗೆಲ್ಲಬೇಕೆನ್ನುವ ಹಠ

ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಈ ಬಾರಿ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಕಳೆದ ಕೆಲವು ಸಮಯಗಳ ಹಿಂದಿನಿಂದಲೇ ಗ್ರಾಮೀಣ ಮಟ್ಟದ ನಾಯಕರೊಂದಿಗೆ ಒಡನಾಟವನ್ನಿಟ್ಟುಕೊಂಡು ಬಂದಿರುವ ಅವರು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಗ್ರಾಪಂ ಮಟ್ಟದಿಂದ ನಗರದವರೆಗೆ ಒಂದೊಳ್ಳೆಯ ಸಂಪರ್ಕವನ್ನು ಸಾಧಿಸಿದ್ದಾರೆ. ಜತೆಗೆ ತಮ್ಮ ಬೆನ್ನಿಗೆ ಸರ್ಕಾರ, ಘಟಾನುಘಟಿ ನಾಯಕರು ಇರುವುದು ಹುಮ್ಮಸ್ಸು ತಂದಿದೆ.

ಜೆಡಿಎಸ್‌ನ ಮಂಜೇಗೌಡರು ಮತ್ತು ಬಿಜೆಪಿಯ ರಘು ಕೌಟಿಲ್ಯ ಮೊದಲಿನಿಂದಲೂ ಜನರ ಒಡನಾಟದಲ್ಲಿದ್ದವರು ಅವರಿಗೆ ರಾಜಕೀಯ ಹೊಸತಲ್ಲ. ಆದರೆ ಕಾಂಗ್ರೆಸ್‍ ಅಭ್ಯರ್ಥಿಯಾಗಿರುವ ಡಾ. ತಿಮ್ಮಯ್ಯ ಅವರು ಆರೋಗ್ಯಾಧಿಕಾರಿಯಾಗಿ ಮೈಸೂರು-ಚಾಮರಾಜನಗರದಲ್ಲಿ ಕಾರ್ಯನಿರ್ವಹಿಸಿದವರು. ಅವರಿಗೆ ರಾಜಕೀಯ ಹೊಸತು. ಸಿದ್ದರಾಮಯ್ಯ ಅವರ ಕೃಪಾಕಟಾಕ್ಷದಿಂದಲೇ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿ ಮತ್ತು ಜೆಡಿಎಸ್‍ಗೆ ಸ್ಪರ್ಧೆ ನೀಡುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಕೈ ಬೆಂಬಲಿತರು

ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಕೈ ಬೆಂಬಲಿತರು

ಮೈಸೂರು, ಚಾಮರಾಜನಗರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಹೆಚ್ಚಿರುವುದರಿಂದ ಗೆಲುವಿಗೆ ಹೆಚ್ಚು ಶ್ರಮಪಡಬೇಕಿಲ್ಲ ಎಂಬುದು ಕಾಂಗ್ರೆಸ್‍ ನಾಯಕರ ಆಲೋಚನೆಯಾಗಿದೆ. ಎರಡನೇ ಸ್ಥಾನದಲ್ಲಿ ಜೆಡಿಎಸ್ ಮೂರನೇ ಸ್ಥಾನದಲ್ಲಿ ಬಿಜೆಪಿ ಇದೆ.

ಮೈಸೂರು ಜಿಲ್ಲೆಯಲ್ಲಿ ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಆದರೆ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 5 ಶಾಸಕರನ್ನು ಹೊಂದಿದ್ದರೆ, ತಲಾ 3 ಶಾಸಕರನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಿದೆ. ಇಬ್ಬರು ಸಂಸದರು ಬಿಜೆಪಿಯವರಾಗಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಇಬ್ಬರು ಕಾಂಗ್ರೆಸ್- ಬಿಜೆಪಿ ಶಾಸಕರು ಇದ್ದಾರೆ. ಆದರೆ ಜೆಡಿಎಸ್ ಶಾಸಕರಿಲ್ಲ. ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಬೆಂಬಲಿತ ಸದಸ್ಯರೂ ಕಡಿಮೆ.

ಕೊನೆಗಳಿಗೆಯ ಪ್ರಯತ್ನಗಳು ಫಲಕೊಡುತ್ತಾ?

ಕೊನೆಗಳಿಗೆಯ ಪ್ರಯತ್ನಗಳು ಫಲಕೊಡುತ್ತಾ?

ಇದೆಲ್ಲವನ್ನು ಗಮನಿಸಿದರೆ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಹೋಗುವ ಪ್ರಯತ್ನವನ್ನು ಗೌಪ್ಯವಾಗಿ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ. ಇದೆಲ್ಲದರ ನಡುವೆ ಸದಾ ಸೋಲುಗಳನ್ನೇ ಕಾಣುತ್ತಿರುವ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಸ್ಪರ್ಧೆ ಮಾಡಿರುವುದರಿಂದ ಒಂದಷ್ಟು ಮತವನ್ನು ಬಗಲಿಗೆ ಹಾಕಿಕೊಳ್ಳುವ ಸಾಧ್ಯತೆಯೂ ಇದೆ.

ಒಟ್ಟಾರೆ ಮೂರು ಪಕ್ಷಗಳು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಮತ್ತು ಮತದಾರರನ್ನು ಓಲೈಸಲು ಏನೆಲ್ಲ ಬೇಕೋ ಅದೆಲ್ಲವನ್ನು ಮಾಡಿರುವುದರಿಂದ ಗೆಲುವು ನಮ್ಮದೇ ಎಂದು ಬೀಗುತ್ತಿದ್ದರೂ ಅಂತಿಮವಾಗಿ ಮತದಾರರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಎಲ್ಲರೂ ಕಾದು ನೋಡಲೇ ಬೇಕಾಗಿದೆ.

English summary
Triangular fight in Mysuru-Chamarajanagar seat legislative council seat. Election prestige for leader of opposition Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X