ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗುವ ಆತಂಕ!
ಮೈಸೂರು, ಮೇ 18: ಮತ್ತೆ ಮಳೆಗಾಲ ಶುರುವಾಗಿದೆ. ಆದರೆ, ಕಳೆದ ಎಂಟು ತಿಂಗಳ ಹಿಂದೆ ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿದ್ದ ರಸ್ತೆ ದುರಸ್ತಿ ಮಾತ್ರ ದುರಸ್ತಿ ಆಗಿಲ್ಲ. ಇದರಿಂದ ಈ ಬಾರಿ ಮಳೆಗಾಲದಲ್ಲಿ ಮತ್ತಷ್ಟು ಭೂ ಕುಸಿತ ಉಂಟಾಗುವ ಆತಂಕ ಎದುರಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ತಜ್ಞರು ನೀಡಿರುವ ವರದಿಯಂತೆ ವೈಜ್ಞಾನಿಕ ಹಾಗೂ ನವೀನ ತಂತ್ರಜ್ಞಾನದ ಮೂಲಕ ಕಾಮಗಾರಿ ನಡೆಸಲು ಲೋಕೋಪಯೋಗಿ ಇಲಾಖೆ,75 ಕೋಟಿ ರುಪಾಯಿ ಅಂದಾಜು ವೆಚ್ಚ ತಯಾರಿಸಿದೆ. ತಮಿಳುನಾಡಿನ ಹೊಸೂರು ಹಾಗೂ ಮಡಿಕೇರಿ ಮೂಲದ ಕಂಪನಿಗಳು ಟೆಂಡರ್ಗೆ ಪೈಪೋಟಿ ನಡೆಸಿದ್ದವು. ಸದ್ಯ ಮಡಿಕೇರಿ ಮೂಲದ ಕಂಪನಿಗೆ ಟೆಂಡರ್ ಆಗಿದ್ದರೂ ಸರಕಾರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ವರ್ಕ್ ಆರ್ಡರ್ ಇಲ್ಲದೆ ಟೆಂಡರ್ ಪಡೆದಿರುವ ಕಂಪನಿ ಕೆಲಸ ಆರಂಭಿಸಿ ಏಪ್ರಿಲ್ನಲ್ಲಿ ಕಾಮಗಾರಿ ಶುರು ಮಾಡುತ್ತೇವೆ ಎಂದಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಳೆ ಬಂದರೂ ಕೆಲಸ ಶುರು ಮಾಡಿಲ್ಲ.
ಮೈಸೂರು; ಇದುವರೆಗೆ ಕುಸಿದ ಪಾರಂಪರಿಕ ಕಟ್ಟಡಗಳು
ಮಳೆಗಾಲದ ಆತಂಕ:
ಭೂಮಿ ಕುಸಿತ ಉಂಟಾಗಿದ್ದ ಜಾಗದಲ್ಲಿ ಹೆಚ್ಚು ಮಳೆಸುರಿದರೆ ಭೂಮಿ ತೇವಾಂಶ ಮತ್ತೆ ಹೆಚ್ಚಾಗುತ್ತದೆ. ಈ ವೇಳೆ ಜೆಸಿಬಿ ಹಾಗೂ ಇತರ ಉಪಕರಣಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಮಳೆ ಸಂಪೂರ್ಣವಾಗಿ ನಿಂತು ಭೂಮಿ ಗಟ್ಟಿಯಾದ ನಂತರವಷ್ಟೆ ಕಾಮಗಾರಿ ಆರಂಭಿಸಬೇಕಾಗುತ್ತದೆ. ಆದರೆ, ಈ ಬಾರಿ ಒಂದು ತಿಂಗಳು ಮುಂಚಿತಾಗಿ ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ಮಳೆಗಾಲವೂ ಬೇಗ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾದರೆ ಕಾಮಗಾರಿ ನಡೆಸುವುದಾದರೂ ಹೇಗೆ? ಮತ್ತೊಮ್ಮೆ ಭೂ ಕುಸಿತ ಉಂಟಾದರೆ ಏನು ಮಾಡುವುದು? ಎಂದು ಪರಿಸರ ಪ್ರೇಮಿಗಳ ಆತಂಕ ವ್ಯಕ್ತಪಡಿಸಿದ್ದಾರೆ,
ಶಾಶ್ವತ ಪರಿಹಾರಕ್ಕೆ ಒತ್ತಾಯ:
ಬೆಟ್ಟದಲ್ಲಿ ಪದೇ ಪದೆ ಭೂ ಕುಸಿತ ಉಂಟಾಗಬಾರದು ಎಂಬ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರು ಮೂರು ಬಾರಿ ಸ್ಥಳ ಪರಿಶೀಲನೆ ನಡೆಸಿ ದ್ದರು. ನಂದಿಗೆ ಹೋಗುವ ರಸ್ತೆಯಲ್ಲಿ ಕುಸಿದಿದ್ದ ಸ್ಥಳ ಪರಿಶೀ ಲಿಸಿ ಮಣ್ಣಿನ ಸ್ಯಾಂಪಲ್ ತೆಗೆದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದ್ದರು. ನಂತರ ತಂತ್ರಜ್ಞಾನದ ಮೂಲಕ ರಸ್ತೆ ಯಥಾಸ್ಥಿತಿಗೆ ತರಲು ತಗಲುವ ವೆಚ್ಚದೊಂದಿಗೆ ಸಮಗ್ರ ವರದಿ ಸಲ್ಲಿಸಿದ್ದರು. ಭೂಮಿ ಕುಸಿದಿದ್ದ ಸ್ಥಳದ ಮಣ್ಣನ್ನು ತೆಗೆದು, ತಳಮಟ್ಟದಲ್ಲಿ ಕಾಂಕ್ರಿಟ್ ಬೇಸ್ ಮೆಂಟ್ ಹಾಕಿ ಅದರ ಮೇಲೆ ಸುಭದ್ರವಾಗಿ ತಡೆಗೋಡೆ ನಿರ್ಮಿಸುವುದು, ಕುಸಿದ ಪ್ರದೇಶ ದಲ್ಲಿ ಭೂಕುಸಿತ ತಡೆಗೋಡೆ (Reinforced Earth Steepend Slope Structure wall) ಮುಂದೆ ದುರಂತ ಸಂಭವಿಸದಂತೆ ನೋಡಿ ಕೊಳ್ಳಬಹುದು ಎಂಬುದು ವರದಿಯ ಸಾರಾಂಶವಾಗಿದೆ.
ಮೈವಿವಿ, ಅರಣ್ಯ ಇಲಾಖೆ ರಣಹದ್ದುಗಳ ಸಂರಕ್ಷಣೆ, ಏನಿದು ಯೋಜನೆ?
ಏನಾಗಿತ್ತು?
2021ರ ಆ.21ರಂದು ಭಾರಿ ಮಳೆಯ ಪರಿಣಾಮ ಚಾಮುಂಡಿ ಬಿಟ್ಟದ ನಂದಿ ವಿಗ್ರಹಬಳಿ ಭೂ ಕುಸಿತ ಉಂಟಾಗಿತ್ತು. ನಂತರ ನ.5ರಂದು 50 ಮೀಟರ್ ನಷ್ಟು ರಸ್ತೆ ಬಿರುಕು ಬಿಟ್ಟು ರಸ್ತೆಯ ಅರ್ಧ ಭಾಗ ಕುಸಿದಿತ್ತು. ನ.5ರಂದು ಮತ್ತೆಭೂ ಕುಸಿತ ಉಂಟಾಗಿತ್ತು, ಆ ಮೂಲಕ ತಿಂಗಳೊಳಗೆ 4 ಬಾರಿ ಬೆಟ್ಟದಲ್ಲಿ ಭೂಕುಸಿತವಾಗಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿತ್ತು. ಸದ್ಯ ಮುಂಜಾಗ್ರತಾ ಕ್ರಮವಾಗಿ ಆ ಮಾರ್ಗಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಲಾಗಿದೆ. 2019ರಿಂದಲೂ ಬೆಟ್ಟದ ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ.

ಭೂ ಕುಸಿತ ಉಂಟಾದ ಜಾಗದಲ್ಲಿ ಮತ್ತೆ ಮಳೆಯಾದರೆ ಮಣ್ಣು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಕಾಮಗಾರಿ ವಿಳಂಬ ಮಾಡಿದರೆ ಮಳೆಗಾಲದಲ್ಲಿ ದುರಂತ ಸಂಭವಿಸುವ ಸಾಧ್ಯತೆ ಇದೆ. ಸದ್ಯ ರಸ್ತೆಯ ಎರಡು ಕಡೆ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಬೇಕು. ರಸ್ತೆಗೆ ಟಾರು ಹಾಕಿದರೆ ಮತ್ತೆ ಬಿರುಕು ಬಿಡುವ ಸಾಧ್ಯತೆ ಇದೆ. ಹಾಗಾಗಿ ಕಾಂಕ್ರಿಟ್ ರಸ್ತೆಯನ್ನು ನಿರ್ಮಾಣ ಮಾಡಬೇಕು ಎನ್ನುತ್ತಾರೆ , ಭೂ ವಿಜ್ಞಾನ ಪ್ರಾಧ್ಯಾಪಕರಾದ ಪ್ರೊ.ಬಸವರಾಜಪ್ಪ.
(ಒನ್ಇಂಡಿಯಾ ಸುದ್ದಿ)