ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸಂಕಷ್ಟದಲ್ಲಿ ಜನರಿಗೆ ಸಹಾಯಹಸ್ತ ಚಾಚಿದ ಟಿಬೆಟಿಯನ್ನರು

By ಕೋವರ್‌ ಕೊಲ್ಲಿ ಇಂದ್ರೇಶ್
|
Google Oneindia Kannada News

ಮೈಸೂರು, ಏಪ್ರಿಲ್ 27: ಅವರು 1960 ರ ದಶಕದಲ್ಲಿ ಸಾವಿರಾರು ಮೈಲುಗಳಿಂದ ನಿರಾಶ್ರಿತರಾಗಿ ಭಾರತವನ್ನು ತಲುಪಿದರು. ಭಾರತ ಸರ್ಕಾರವು ಅವರಿಗೆ ಗೌರವ ಪೂರ್ವಕವಾಗಿಯೇ ನೆಲೆಸಲು ಸೂಕ್ತ ಭೂಮಿಯನ್ನು ಒದಗಿಸಿಕೊಟ್ಟಿತು.

ಚೀನೀಯರ ದೌರ್ಜನ್ಯದಿಂದ ಬಂದ ಇವರು ಹೊಸ ಮನೆಯಷ್ಟೇ ಅಲ್ಲ, ಬದುಕನ್ನೂ ಕಟ್ಟಿಕೊಂಡರು. ನಮ್ಮ ದೇಶದ ಸಾವಿರಾರು ಜನರಿಗೂ ಕೆಲಸ ನೀಡಿ ದೇಶದ ಆರ್ಥಿಕ ವೃದ್ಧಿಗೆ ಸಹಾಯ ಮಾಡಿದರು. ಅವರೇ ಟಿಬೆಟ್‌ ನಿಂದ ಬಂದಿರುವ ಟಿಬೆಟಿಯನ್ನರು.

ಇಂದಿಗೆ 60 ವರ್ಷಗಳಾದವು ಟಿಬೆಟಿಯನ್ನರು ಇಲ್ಲಿನವರೇ ಆಗಿ ಹೋಗಿದ್ದಾರೆ. ಸಾಕಷ್ಟು ಜನರು ಕನ್ನಡವನ್ನೂ ಕಲಿತಿದ್ದಾರೆ. ಆಶ್ರಯ ನೀಡಿದ ದೇಶದ ಋಣ ತೀರಿಸಲು ಇಂದು ಟಿಬೆಟಿಯನ್ನರು ಮುಂದಾಗಿದ್ದಾರೆ.

ಇಡೀ ದೇಶವೇ ಕೊರೊನಾ ವೈರಸ್ ಸೋಂಕಿನ ಭೀತಿಯಲ್ಲಿ ಲಾಕ್‌ ಡೌನ್‌ ಘೋಷಿಸಿದೆ. ದೇಶದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಇದ್ದಾರೆ. ಆದರೆ ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆಯಲ್ಲಿರುವ ಟಿಬೆಟ್ ಕ್ಯಾಂಪ್‌ ಗಳಲ್ಲಿ 70 ಸಾವಿರ ನಿರಾಶ್ರಿತರು ವಾಸಿಸುತಿದ್ದು, ಇಲ್ಲಿ ಒಂದೂ ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ.

ಪ್ರಧಾನಿ, ಸಿಎಂ ಪರಿಹಾರ ನಿಧಿಗೆ ದೇಣಿಗೆ

ಪ್ರಧಾನಿ, ಸಿಎಂ ಪರಿಹಾರ ನಿಧಿಗೆ ದೇಣಿಗೆ

ತಾವು ನಿರಾಶ್ರಿತರಾಗಿ ಬಂದಾಗ ಭಾರತೀಯರು ತೋರಿದ ಸ್ನೇಹ ಪ್ರೀತಿಯನ್ನು ಅವರು ಎಂದಿಗೂ ಮರೆಯುವುದಿಲ್ಲ. ಕೋವಿಡ್-19 ರ ಕಾರಣದಿಂದಾಗಿ ತೊಂದರೆಯಲ್ಲಿರುವ ಸ್ಥಳೀಯರಿಗೆ ಸಹಾಯ ನೀಡುವಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ. ಬೈಲುಕುಪ್ಪೆ ಟಿಬೆಟಿಯನ್ ಶಿಬಿರದಲ್ಲಿ ನೆಲೆಸಿರುವ ಸೆರಾ ಜೆ ಸೆಕೆಂಡರಿ ಶಾಲೆಯು ಪಿಎಂ ಕೇರ್ಸ್ ಫಂಡ್ ಗೆ 1.5 ಲಕ್ಷ ರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರುಪಾಯಿ ಹಣವನ್ನು ದೇಣಿಗೆ ನೀಡಿದ್ದಾರೆ.

ಅಷ್ಟೇ ಅಲ್ಲದೇ ಸೆರಾ ಜೆ ಮಾಧ್ಯಮಿಕ ಶಾಲಾ ಆಡಳಿತ ಮಂಡಳಿಯು ಸೋಮವಾರ ಹಳೇಯೂರು, ದೊಡ್ಡಸ್ತೂರು, ಕೊಪ್ಪ , ಬೈಲ ಕೊಪ್ಪ , ರಾಣಿ ಗೇಟ್ ಸೇರಿದಂತೆ 23 ಗ್ರಾಮಗಳ ಬಡ ಗ್ರಾಮಸ್ಥರಿಗೆ ಸಾವಿರಕ್ಕೂ ಹೆಚ್ಚು ಪಡಿತರ ಕಿಟ್‌ಗಳನ್ನು ವಿತರಿಸಿದೆ. ಪಿರಿಯಾಪಟ್ಟಣದ ಶಾಸಕ ಕೆ. ಮಹಾದೇವ್ ಅವರು ಪಡಿತರ ವಿತರಣೆ ಮಾಡುವಾಗ ಹಾಜರಿದ್ದರು.

ಇಲ್ಲಿರುವವರು ಮಧ್ಯಮ ವರ್ಗದವರು

ಇಲ್ಲಿರುವವರು ಮಧ್ಯಮ ವರ್ಗದವರು

ಶಾಲೆಯು ಬೋಧನಾ ಸಿಬ್ಬಂದಿಯ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಹಾಯ ನೀಡುವಲ್ಲಿ ಶಾಲೆ ಯಾವಾಗಲೂ ಮುಂಚೂಣಿಯಲ್ಲಿದೆ. 2004 ರಲ್ಲಿ ಸುನಾಮಿ ದುರಂತದ ಸಮಯದಲ್ಲಿಯೂ ಕೂಡ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ನೀಡಿ ಔದಾರ್ಯತೆ ಪ್ರದರ್ಶಿಸಿದ್ದಾರೆ. ದೇಶದಲ್ಲಿ ನೈಸರ್ಗಿಕ ವಿಕೋಪ ಎದುರಾದಾಗಲೆಲ್ಲ ಸಂತ್ರಸ್ಥರ ನೋವಿಗೆ ಈ ಶಾಲೆ ಸ್ಪಂದಿಸುತ್ತಿದೆ.

ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 600 ವಿದ್ಯಾರ್ಥಿಗಳು ಮತ್ತು ಶೇ.70 ರಷ್ಟು ಶಿಕ್ಷಕ ಮತ್ತು ಭೋಧಕೇತರ ಸಿಬ್ಬಂದಿಗಳು ಎಲ್ಲರೂ ಮಧ್ಯಮ ವರ್ಗದವರೇ. ಬಹಳಷ್ಟು ವಿದ್ಯಾರ್ಥಿಗಳು ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ ರಾಜ್ಯಗಳಿಂದಲೂ ಬಂದಿದ್ದಾರೆ.

ಮುಕ್ತ ಕಂಠದಿಂದ ಶ್ಲಾಘಿಸಿದ ದಲೈ ಲಾಮ

ಮುಕ್ತ ಕಂಠದಿಂದ ಶ್ಲಾಘಿಸಿದ ದಲೈ ಲಾಮ

1970 ಕ್ಕೂ ಮೊದಲು ಸ್ಥಾಪನೆ ಆಗಿರುವ ಈ ಶಾಲೆ ಟಿಬೆಟಿಯನ್ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನೂ ನೀಡುತ್ತಿದೆ. ಈ ಕುರಿತು ಶಾಲೆಯ ಪ್ರಾಂಶುಪಾಲ ರಿಂಚನ್ ತ್ಸೆರಿಂಗ್ ಅವರನ್ನು ಮಾತಾಡಿಸಿದಾಗ, ""ಇಡೀ ದೇಶವೇ ಸಂಕಷ್ಟದಲ್ಲಿರುವಾಗ ದೇಶವನ್ನು ಬೆಂಬಲಿಸುವುದು ನಮ್ಮ ಆದ್ಯ ಕರ್ತವ್ಯ'' ಎಂದು ಹೇಳಿದರು.

ಕೋವಿಡ್ -19 ರೋಗವು ಜಗತ್ತಿನ ಎಲ್ಲ ಜನರಿಗೆ ಭಾರಿ ಸಂಕಷ್ಟವನ್ನು ನೀಡುತ್ತಿದೆ. ಕೋವಿಡ್-19 ರ ವಿರುದ್ಧದ ಹೋರಾಟದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಭಾರತ ಸರ್ಕಾರದ ಜತೆ ಕೈ ಜೋಡಿಸಿದ್ದು, ತಮ್ಮ ಶಾಲೆಯು ಸಂಕಷ್ಟದಲ್ಲಿರುವ ಬಡ ಜನರಿಗೆ ನೀಡುತ್ತಿರುವ ಕೊಡುಗೆಯನ್ನು ಕೂಡ ದಲೈ ಲಾಮಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದರು.

ಇವರೂ ಹೊಲದಲ್ಲಿ ಉಳುಮೆ ಮಾಡುತ್ತಾರೆ

ಇವರೂ ಹೊಲದಲ್ಲಿ ಉಳುಮೆ ಮಾಡುತ್ತಾರೆ

ಇಲ್ಲಿನವರೊಂದಿಗೆ ಕಳೆದ 6 ದಶಕಗಳಿಂದ ಬೆರೆತು ಇಲ್ಲಿನವರೇ ಅಗಿರುವ ಟಿಬೆಟಿಯನ್ನರ ಆಚಾರ, ವಿಚಾರ, ಸಂಸ್ಕೃತಿಯು ವಿಭಿನ್ನವಾಗಿದ್ದರೂ ಸ್ಥಳೀಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇವರಲ್ಲಿ ಬಹುತೇಕರು ಉತ್ತಮ ಬದುಕನ್ನು ಅರಸಿಕೊಂಡು ನಗರ ಪ್ರದೇಶಗಳಲ್ಲಿ ವ್ಯಾಪಾರ,ವ್ಯವಹಾರ ಮಾಡಿಕೊಂಡು ಇದ್ದರೆ ಸಾವಿರಾರು ಜನರು ಇಂದಿಗೂ ಹೊಲಗಳಲ್ಲಿ ಉಳುಮೆ ಮಾಡುತ್ತಾರೆ.

ಕೊಡಗಿನ ಗಡಿ ಭಾಗದಲ್ಲಿರುವ ಕುಶಾಲನಗರದ ಅಭಿವೃದ್ದಿಗೆ ಟಿಬೆಟಿಯನ್ನರ ಕೊಡುಗೆ ಕೂಡ ಸಾಕಷ್ಟಿದೆ. ತಾವೇ ನಿರಾಶ್ರಿತರಾಗಿದ್ದರೂ ಇಲ್ಲಿನ ಜನರ ನೋವಿಗೆ ಮಿಡಿಯುವ ಟಿಬೇಟಿಯನ್ನರಿಗೆ ದೊಡ್ಡದೊಂದು ಥ್ಯಾಂಕ್ಸ್ ಹೇಳಲೇಬೇಕು.

English summary
Sera J Secondary School, located in the Bylakuppe Tibetan camp, has raised Rs 1.5 lakh for the PM Cares Fund. And donated one lakh rupees to the CM Relief Fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X