• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಾಪ್ ಸಿಂಹಗೆ ಧ್ರುವನಾರಾಯಣ್ ತಿರುಗೇಟು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 18: ಹಿಂದೂ ದೇವಾಲಯಗಳ ತೆರವಿನ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ನಾಯಕರ ಜಟಾಪಟಿಗೆ ಕಾರಣವಾಗಿದ್ದು, ಧಾರ್ಮಿಕ ಸ್ಥಳಗಳ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಧ್ರುವನಾರಾಯಣ್, "ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಹೇಳಿಕೆ ಬಾಲಿಷವಾದ್ದದ್ದು. ಹಿಂದೂ ಧರ್ಮವನ್ನು ನಾವು ಗುತ್ತಿಗೆ ಪಡೆದಿದ್ದೇವೆ ಅನ್ನುವ ರೀತಿಯಲ್ಲಿ ಲಘುವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ. ಹಿಂದೂ ಧರ್ಮ ನಿಮ್ಮ ಸ್ವತ್ತಲ್ಲ," ಎಂದು ಕಿಡಿಕಾರಿದರು.

 ಮೈಸೂರಿನಲ್ಲಿ ವಿಷ್ಣುವರ್ಧನ್‌ ಪ್ರತಿಮೆ ತೆರವುಗೊಳಿಸಿದ ಪೊಲೀಸರು: ಅಭಿಮಾನಿಗಳ ಆಕ್ರೋಶ ಮೈಸೂರಿನಲ್ಲಿ ವಿಷ್ಣುವರ್ಧನ್‌ ಪ್ರತಿಮೆ ತೆರವುಗೊಳಿಸಿದ ಪೊಲೀಸರು: ಅಭಿಮಾನಿಗಳ ಆಕ್ರೋಶ

"ದೇವಾಲಯದ ಆದೇಶ ಕೊಟ್ಟಿರುವುದು ಸರ್ಕಾರದ ಮುಖ್ಯ ಕಾರ್ಯದರ್ಶಿ. ಸಿಎಸ್ ಏನೇ ಆದೇಶ ಹೊರಡಿಸಿದರೂ ಅದು ರಾಜ್ಯ ಸರ್ಕಾರದ ನಿಲುವಾಗಿರುತ್ತದೆ. ಇದರಲ್ಲಿ ಧರ್ಮವನ್ನು ರಾಜಕಾರಣಕ್ಕೆ ತರಬಾರದು. ಅದು ನಮ್ಮ ಮನೆಯಲ್ಲಿ ಆಚರಣೆ ಆಗಬೇಕು. ಆದರೆ ಬಿಜೆಪಿ ಸದಾ ಇದನ್ನು ರಾಜಕೀಯವಾಗಿ ಬಳಸುತ್ತಾರೆ. ದೇಗುಲ ತೆರವು ಮಾಡಿರುವುದು ಸರಿಯಲ್ಲ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬಹುದಾಗಿತ್ತು. ಆ ರೀತಿ ಪ್ರಯತ್ನ ಇಲ್ಲಿ ನಡೆದಿಲ್ಲ. ಧರ್ಮಾತೀತವಾಗಿ ರಾಜಕಾರಣ ಮಾಡುವುದನ್ನು ಬಿಡಿ," ಎಂದು ಆರ್. ಧ್ರುವನಾರಾಯಣ್ ಗುಡುಗಿದರು.


"ಆಡಳಿತ ಮಾಡುವುದರಲ್ಲಿ ಬಿಜೆಪಿ ವಿಫಲವಾಗಿದೆ. ಸಿದ್ದರಾಮಯ್ಯ ಇದ್ದಾಗ ಈ ರೀತಿ ಆದೇಶ ಮಾಡಿಲ್ಲ. ಸಿದ್ದರಾಮಯ್ಯ ಯಾವುದೇ ದೇಗುಲ ಒಡೆಸಿಲ್ಲ. ಧರ್ಮವನ್ನೇ ನಮ್ಮದು ಅನ್ನುವವರು ದೇವಸ್ಥಾನ ಒಡೆಸಿದ್ದಾರೆ. ಬಿಜೆಪಿಯವರಿಗೆ ಅನುಭವದ ಕೊರತೆಯಿದೆ. ಸರ್ಕಾರದ್ದೆ ಲೋಪ ಇದ್ದು, ಸರ್ಕಾರ ಆದೇಶ ಕೊಟ್ಟಿದೆ. ಆದರೆ ತಹಶೀಲ್ದಾರ ಮೇಲೆ ಕ್ರಮ ಸರಿಯಲ್ಲ," ಎಂದು ಆರ್. ಧ್ರುವನಾರಾಯಣ್ ಆಕ್ಷೇಪಿಸಿದರು.

ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರದ ಕುರಿತು ಮಾತನಾಡಿದ ಅವರು, "ರಾಷ್ಟ್ರೀಯ ಶಿಕ್ಷಣ ನೀತಿ‌ ಜಾರಿಗೆ ಸೂಚಿಸಿದ ತಜ್ಞರ ತಂಡ ಸಹ ಸಮರ್ಪಕವಾಗಿರಲಿಲ್ಲ. ತಂಡ ಪಕ್ಷಾತೀತಾವಾಗಿ ಇರಲಿಲ್ಲ, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿದ್ದವರು ಸಮಿತಿಯಲ್ಲಿದ್ದಾರೆ. ಭ್ರಷ್ಟಾಚಾರದ ಆರೋಪದಲ್ಲಿದ್ದವರು ಇದ್ದಾರೆ. ಕಸ್ತೂರಿ ರಂಗನ್‌ರನ್ನು ಬಿಟ್ಟರೆ ಬೇರೆ ಯಾರೂ ಸರಿಯಿಲ್ಲ. ಕಸ್ತೂರಿ ರಂಗನ್ ಬಗ್ಗೆ ಅಪಾರ ಗೌರವವಿದೆ. ಅವರಿಗೂ ಮುಕ್ತವಾಗಿ ಕೆಲಸ ಮಾಡಲು ಬಿಟ್ಟಿಲ್ಲ. ಸಂವಿಧಾನದ ಆಶಯದಂತೆಯೂ ಇದು ಆಗಿಲ್ಲ. ಹಳೆ ಪದ್ಧತಿ ನಿಜಕ್ಕೂ ಉತ್ತಮವಾಗಿದೆ," ಎಂದರು.

Temple Demolition Case: KPCC Working President R Dhruvanarayan Outrage Against MP Pratap Simha

"ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ರಾಜ್ಯಕ್ಕೆ ಮಾರಕವಾಗಿದೆ. ಇದು ಶಿಕ್ಷಣ ಕ್ಷೇತ್ರವನ್ನು ಹಿಮ್ಮುಖ ಚಲನೆ ಆಗುವಂತೆ ಮಾಡಿದೆ. ಈ ಹಿಂದೆ ಇಂದಿರಾ ಗಾಂಧಿ 1968ರಲ್ಲಿ, ರಾಜೀವ್ ಗಾಂಧಿಯವರು 1986 ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರು. ಆಗ ಬಹಳಷ್ಟು ಚರ್ಚೆಗಳಾಗಿತ್ತು. ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿತ್ತು."

"ಆದರೆ ಈಗ ಯಾವುದೇ ಚರ್ಚೆಯಾಗಿಲ್ಲ. ಬದಲಾಗಿ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದ ನಮಗೆ ಬಹಳಷ್ಟು ಹಿನ್ನಡೆಯಾಗಲಿದೆ. ಶಿಕ್ಷಣ ನೀತಿಯ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಚರ್ಚೆ ಮಾಡಬೇಕು. ಸದನ ನಡೆಯುತ್ತಿದೆ, ಈ ವೇಳೆ ಯಾವುದೇ ಅಭಿಪ್ರಾಯ ಸಂಗ್ರಹಿಸದೆ ಶಿಕ್ಷಣ ನೀತಿ ಜಾರಿಗೊಳಿಸುವ ಪ್ರಯತ್ನವಾಗಿದೆ. ಕೇಂದ್ರ ಬಜೆಟ್‌ನಲ್ಲಿ ಶೇ.6ರಷ್ಟು ಹಣವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೀಸಲಿಡಬೇಕು. ಶಾಲೆಗಳ ಅಭಿವೃದ್ಧಿಯೂ ಆಗಿಲ್ಲ. ಶಿಕ್ಷಕರ ನೇಮಕ, ಈಗಿರುವ ಶಿಕ್ಷಕರ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಆಗಿಲ್ಲ. ಇದಾವುದನ್ನು ಮಾಡದೇ ಆತುರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು ಸರಿಯಲ್ಲ," ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

"ಅಲ್ಲದೇ ಧರ್ಮದ ಆಧಾರಿತವಾಗಿ ಶಿಕ್ಷಣ ನೀತಿ ಜಾರಿ ಮಾಡುತ್ತಿದ್ದಾರೆ. ಕಲ್ಪನೆ ಆಧಾರಿತ ವಿದ್ಯೆ ಕಲಿಸಲು ಮುಂದಾಗುತ್ತಿದ್ದಾರೆ. ಕಸ್ತೂರಿ ರಂಗನ್ ಸಮತಿ ಬುಹುತೇಕರು ಆರ್‌ಎಸ್‌ಎಸ್‌ನವರು. ಭಾರತದ ವಿವಿಧತೆಗೆ ಧ್ವನಿಯಾಗಬಲ್ಲ ಸದಸ್ಯರ ನೇಮಕ ಆಗಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಬಹುತ್ವದ ಚಿಂತನೆಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಕೈಬಿಡಲಾಗಿದೆ. ಬದಲಿಗೆ 12ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿಗಳನ್ನು ಕುಲಕಸುಬುಗಳಿಗೆ ಮರಳಿಸುವ ಷಡ್ಯಂತ್ರ. ಪ್ರಾಚೀನ ಸಂಸ್ಕೃತಿಗೆ, ಸಂಸ್ಕೃತ ಭಾಷೆ ಕಲಿಕೆಗೆ ಅನಗತ್ಯವಾಗಿ ಒತ್ತು ನೀಡಲಾಗುತ್ತಿದೆ," ಎಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದರು.

English summary
KPCC Working President R Dhruvanarayan expressed Outrage Against MP Pratap Simha in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X