ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಮೇಲೆ ಬಿಜೆಪಿ ಕಣ್ಣು; ಆಪರೇಷನ್ ಕಮಲಕ್ಕೆ ಮುಹೂರ್ತ ಫಿಕ್ಸ್?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 22; ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಕಣ್ಣು ಮಂಡ್ಯದ ಮೇಲೆ ಬಿದ್ದಿದೆ. ಇಲ್ಲಿ ಪಕ್ಷವನ್ನು ಗಟ್ಟಿಗೊಳಿಸಿಕೊಳ್ಳಲು ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿರುವುದರಿಂದಾಗಿ ತಳಮಟ್ಟದಿಂದ ಪಕ್ಷವನ್ನು ಜಿಲ್ಲೆಯಲ್ಲಿ ಗಟ್ಟಿಗೊಳಿಸಲು ಅಗತ್ಯವಿರುವ ಕಾರ್ಯಕರ್ತರ ಪಡೆಯ ತಯಾರಿ ನಡೆಸಲಾಗುತ್ತಿದ್ದು ಇದೀಗ ನಾಗಮಂಗಲದಲ್ಲಿ ಮುಹೂರ್ತ ಫಿಕ್ಸ್ ಮಾಡಲಾಗಿದೆ.

ಮೇ 23ರ ಸೋಮವಾರ ಬಿಜೆಪಿ ಪಕ್ಷದ ತಾಲೂಕು ಸಮಾವೇಶ ಮತ್ತು ನೂತನ ಸದಸ್ಯರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ನಾಗಮಂಗಲದ ಬಿ. ಎಂ. ರಸ್ತೆಯ ಎಂ. ಆರ್. ಪಿ. ಸಮುದಾಯ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಪಾಲ್ಗೊಳ್ಳಲಿದ್ದಾರೆ.

ಉಳಿದಂತೆ ಸಚಿವ ನಾರಾಯಣ ಗೌಡ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಸಿ. ಪಿ. ಯೋಗೇಶ್ವರ್, ಕೊಳ್ಳೇಗಾಲದ ಶಾಸಕ ಎನ್. ಮಹೇಶ್, ಹಾಸನ ನಗರ ಶಾಸಕ ಪ್ರೀತಂ ಗೌಡ, ಡಾ. ಲಕ್ಷ್ಮಿಅಶ್ವಿನ್ ಗೌಡ ಸೇರಿದಂತೆ ಹಲವು ನಾಯಕರು, ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೆ. ಆರ್. ಪೇಟೆ ಶಾಸಕ ನಾರಾಯಣ ಗೌಡರು ಪಕ್ಷ ತೊರೆದು ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಿದ್ದರು. ಮುಂದಿನ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳಿಸಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ.

ಮಂಡ್ಯದಲ್ಲಿ ರಾಜಕೀಯ ಸಂಚಲನ ಸೃಷ್ಟಿ

ಮಂಡ್ಯದಲ್ಲಿ ರಾಜಕೀಯ ಸಂಚಲನ ಸೃಷ್ಟಿ

ನಾಗಮಂಗಲದ ಕಾರ್ಯಕ್ರಮಕ್ಕೆ ಇಷ್ಟೊಂದು ನಾಯಕರು ಆಗಮಿಸುತ್ತಿದ್ದಾರೆ ಎಂದ ಮೇಲೆ ಬರೀ ಕಾರ್ಯಕರ್ತರಲ್ಲದೆ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುವುದು ಖಚಿತವಾದಂತೆಯೇ. ಆದರೆ ಯಾರೆಲ್ಲ ಪಕ್ಷಕ್ಕೆ ಸೇರುತ್ತಾರೆ? ಎಂಬುದು ಮಾತ್ರ ಗುಟ್ಟಾಗಿ ಉಳಿದಿದೆ. ಆದರೆ ಈ ನಡುವೆ ಮೈಸೂರಿನಲ್ಲಿ ಮಾತನಾಡಿರುವ ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, "ಮಂಡ್ಯದಲ್ಲಿ ಸಂಚಲನ ಸೃಷ್ಟಿಯಾಗಲಿದೆ, ಕಾದು ನೋಡಿ" ಎಂಬ ಮಾತು ಹೇಳಿರುವುದು ಕುತೂಹಲ ಕೆರಳಿಸಿದೆ.

ಜೆಡಿಎಸ್ ಹೋರಾಟ ನಡೆಸುತ್ತಿದೆ

ಜೆಡಿಎಸ್ ಹೋರಾಟ ನಡೆಸುತ್ತಿದೆ

ಹಾಗೆ ನೋಡಿದರೆ ಮಂಡ್ಯದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಸಾಧಿಸಲು ಹಿಂದಿನಿಂದಲೂ ಹೋರಾಡುತ್ತಲೇ ಬಂದಿವೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮಂಡ್ಯದತ್ತ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡಿದ್ದರಿಂದ ಮತ್ತು ಬರದಿಂದ ತತ್ತರಿಸಿ ಆತ್ಮಹತ್ಯೆಗೆ ಶರಣಾದ ರೈತರ ಕಣ್ಣೊರೆಸುವ ಕೆಲಸವನ್ನು ವೈಯಕ್ತಿಕವಾಗಿ ಎಚ್. ಡಿ. ಕುಮಾರಸ್ವಾಮಿ ಮಾಡಿದ್ದರು. ಅವತ್ತು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದರು. ಅದರ ಪರಿಣಾಮ ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಮಂಡ್ಯವನ್ನು ಜೆಡಿಎಸ್‌ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿತು.

ಕುಮಾರಸ್ವಾಮಿ ಉದ್ದೇಶ ಈಡೇರಲಿಲ್ಲ

ಕುಮಾರಸ್ವಾಮಿ ಉದ್ದೇಶ ಈಡೇರಲಿಲ್ಲ

ಆದಾದ ನಂತರದ ಬೆಳವಣಿಗೆಗಳಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಇದರಿಂದ ಜಿಲ್ಲೆಯ ಮತದಾರರು ಖುಷಿಪಟ್ಟಿದ್ದರು. ತಮಗೆ ಮತನೀಡಿ ಗೆಲುವಿಗೆ ಕಾರಣರಾದ ಮಂಡ್ಯ ಜನಕ್ಕೆ ವಿಶೇಷ ಪ್ಯಾಕೇಜ್ ಗಳನ್ನು ಕುಮಾರಸ್ವಾಮಿ ಘೋಷಣೆ ಮಾಡಿದರು. ಆದರೆ ನಂತರದ ದಿನಗಳಲ್ಲಿ ಮಂಡ್ಯದ ಬಗ್ಗೆ ಕುಮಾರಸ್ವಾಮಿ ಅವರ ಒಲವು ರಾಜಕೀಯ ಲಾಭದ ಹಾದಿ ಹಿಡಿಯಲಾರಂಭಿಸಿತ್ತು. ಸ್ವಾರ್ಥ ರಾಜಕೀಯ ಕುಮಾರಸ್ವಾಮಿ ಅವರಲ್ಲಿ ಕಾಣಲು ಆರಂಭಿಸಿತು.

ಕುಮಾರಸ್ವಾಮಿ ಮಂಡ್ಯಕ್ಕೆ ಘೋಷಣೆ ಮಾಡುತ್ತಿರುವ ವಿಶೇಷ ಪ್ಯಾಕೇಜ್ ಹಿಂದೆ ರಾಜಕೀಯ ಸ್ವಾರ್ಥವಿದೆ ಎಂಬ ಅಪಸ್ವರಗಳು ಎದ್ದವು. ಅದಕ್ಕೆ ಪುಷ್ಠಿ ನೀಡುವಂತೆ 2019ರ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಿಂದ ಕಣಕ್ಕಿಳಿಸಿದರು. ಅದು ಕುಮಾರಸ್ವಾಮಿ ಮಾಡಿದ ದೊಡ್ಡ ತಪ್ಪಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. ಹೀಗಾಗಿ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬೆಂಬಲ ನೀಡಿದರೆ ನಿಖಿಲ್ ಕುಮಾರಸ್ವಾಮಿ ಬಹುಮತದಿಂದಲೇ ಗೆಲ್ಲುತ್ತಾರೆ ಎಂಬ ನಂಬಿಕೆ ಅವರದ್ದಾಗಿತ್ತು.

ಜೆಡಿಎಸ್‍ ಗೆ ಆಪರೇಷನ್ ಕಮಲದ ಶಾಕ್

ಜೆಡಿಎಸ್‍ ಗೆ ಆಪರೇಷನ್ ಕಮಲದ ಶಾಕ್

ಲೋಕಸಭೆ ಚುನಾವಣೆ ಮಂಡ್ಯದಲ್ಲಿ ಏನೆಲ್ಲ ಬೆಳವಣಿಗೆಗೆ ಸಾಕ್ಷಿಯಾಯಿತು ಎಂಬುದು ನಮ್ಮೆಲ್ಲರ ಕಣ್ಣಮುಂದೆಯೇ ಇದೆ. ಸುಮಲತಾ ಅಂಬರೀಶ್ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಇಡೀ ಸರ್ಕಾರ ನಿಖಿಲ್ ಕುಮಾರಸ್ವಾಮಿ ಪರವಾಗಿತ್ತಾದರೂ ನಡೆದಿದ್ದೇ ಬೇರೆಯಾಗಿತ್ತು. ಸುಮಲತಾಗೆ ಪಕ್ಷಬೇಧ ಮರೆತು ಕಾರ್ಯಕರ್ತರು ಬೆಂಬಲ ನೀಡಿದರು. ಸಮಾವೇಶಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್, ರೈತಸಂಘದ ಬಾವುಟಗಳು ಹಾರಾಡಿದವು. ಬಹುಶಃ ಇಂತಹದೊಂದು ಸನ್ನಿವೇಶವನ್ನು ಬೇರೆಲ್ಲೂ ನಡೆದೇ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಕೊನೆಗೂ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲ್ಲುವ ಮೂಲಕ ಮೊದಲ ಬಾರಿಗೆ ಜೆಡಿಎಸ್‌ನ ಭದ್ರಕೋಟೆಯಲ್ಲಿ ಕಂಪನವಾಯಿತು. ಅದಾದ ನಂತರದ ಬೆಳವಣಿಗೆಯಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಅಂದಿನ ಜೆಡಿಎಸ್ ಶಾಸಕರಾಗಿದ್ದ ಡಾ. ನಾರಾಯಣ ಗೌಡರು ಒಲವು ತೋರಿ ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿಯಿಂದ ಮತ್ತೆ ಸ್ಪರ್ಧಿಸಿ ಗೆಲುವು ಸಾಧಿಸುವುದರೊಂದಿಗೆ ಜೆಡಿಎಸ್‌ಗೆ ಶಾಕ್ ನೀಡಲಾಗಿತ್ತು.

ನಾಲ್ಕು ವರ್ಷಗಳಲ್ಲಿ ಮೂರು ಶಾಕ್

ನಾಲ್ಕು ವರ್ಷಗಳಲ್ಲಿ ಮೂರು ಶಾಕ್

ಇಷ್ಟಕ್ಕೆ ನಿಲ್ಲದೆ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಸರ್ವ ರೀತಿಯಲ್ಲಿ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಕಾರಣ ಕಾಂಗ್ರೆಸ್ ನ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ್ದರು. ಇದನ್ನು ಗಮನಿಸಿದರೆ ಕಳೆದ 4 ವರ್ಷಗಳಲ್ಲಿ ಜೆಡಿಎಸ್‌ಗೆ ಮೂರು ರೀತಿಯ ಶಾಕ್ ಆಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆಯಿಡಲು ಹಾತೊರೆಯುತ್ತಿರುವುದು ಕಾಣಿಸುತ್ತಿದೆ.

ಇದೀಗ ಬಿಜೆಪಿ ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿದೆ. ಚುನಾವಣೆಗೆ ಒಂದು ವರ್ಷವಿರುವಾಗಲೇ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಏನು ಮಾಡಬೇಕು ಎಂಬ ಚಿಂತನೆ ನಡೆಸಿದ್ದು, ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಹೊಸ ನಾಯಕರು ಮತ್ತು ಕಾರ್ಯಕರ್ತರನ್ನು ಹುಟ್ಟು ಹಾಕಿ ಸಂಘಟನೆ ಮಾಡುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಆದ್ದರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಕಾರ್ಯಕರ್ತರು ಮತ್ತು ನಾಯಕರನ್ನು ಪಕ್ಷಕ್ಕೆ ಸೆಳೆದು ಕೊಳ್ಳುವ ಕಾರ್ಯಕ್ಕೆ ಮುಂದಾಗಿದೆ.

ಬಿಜೆಪಿ ಗಾಳಕ್ಕೆ ಬೀಳುವ ಮೀನುಗಳೆಷ್ಟು?

ಬಿಜೆಪಿ ಗಾಳಕ್ಕೆ ಬೀಳುವ ಮೀನುಗಳೆಷ್ಟು?

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ನಾಯಕರಿಗೆ ಬಿಜೆಪಿ ಗಾಳ ಹಾಕಿದ್ದು, ಅದರಲ್ಲಿ ಸಣ್ಣಪುಟ್ಟ ಮೀನುಗಳಲ್ಲದೆ ತಿಮಿಂಗಿಲಗಳಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಸದ್ಯದ ಮಟ್ಟಿಗೆ ಬಿಜೆಪಿಯ ನಡೆ ಕುತೂಹಲ ಕೆರಳಿಸಿದ್ದು, ಜೆಡಿಎಸ್‌ನ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಮಂಡ್ಯದಲ್ಲಿ ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ಆಗುತ್ತವೆ? ಎಂಬುದನ್ನು ಮಾತ್ರ ಕಾದುನೋಡಬೇಕಾಗಿದೆ.

English summary
Ahead of the 2023 assembly elections Karnataka BJP eye on Mandya district which is popular as JD(S) strong fort. All set for operation kamala at district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X