• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ ನಿಧನ; ಗಣ್ಯರಿಂದ ಸಂತಾಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 21: ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ (80) ನಿಧನರಾಗಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಾಯಕ ಶುಕ್ರವಾರದಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಾಜಿ ಸ್ಪೀಕರ್ ಕೃಷ್ಣ ಲಿವರ್ ಕ್ಯಾನ್ಸರ್‌ಗೆ ತುತ್ತಾಗಿ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಾಜಿ ಸ್ಪೀಕರ್ ಮನೆಗೆ ವಾಪಸ್ ಆಗಿದ್ದರು. ಶುಕ್ರವಾರ ಮೈಸೂರಿನ ಕುವೆಂಪು ನಗರದ ನಿವಾಸದಲ್ಲಿ ನಿಧನರಾದರು.

ಮಂಡ್ಯದ ಗಾಂಧಿ ಕೆ.ಆರ್.ಪೇಟೆ ಕೃಷ್ಣ ರಾಜಕೀಯಕ್ಕೆ ವಿದಾಯ ಹೇಳಿದ್ದೇಕೆ?ಮಂಡ್ಯದ ಗಾಂಧಿ ಕೆ.ಆರ್.ಪೇಟೆ ಕೃಷ್ಣ ರಾಜಕೀಯಕ್ಕೆ ವಿದಾಯ ಹೇಳಿದ್ದೇಕೆ?

ಕೆ.ಆರ್ ಪೇಟೆ ಕೃಷ್ಣ ಅಂತಲೇ ಫೇಮಸ್ ಆಗಿದ್ದ ಅವರು, 1985, 1994 ಮತ್ತು 2004 ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1988ರಲ್ಲಿ ಎಸ್.ಆರ್ ಬೊಮ್ಮಾಯಿ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾಗಿದ್ದರು.

1996ರಲ್ಲಿ ಮಂಡ್ಯದ ಸಂಸದರಾಗಿದ್ದರು, ನಂತರ 2006 ರಿಂದ 2008ರವರೆಗೆ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

ಶನಿವಾರ ಸ್ವಗ್ರಾಮ ಕೆ.ಆರ್ ಪೇಟೆ ತಾಲ್ಲೂಕಿನ ಕೋತಮಾರನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

ಸುಮಲತಾ ಅಂಬರೀಶ್ ಸಂತಾಪ

ಮಾಜಿ ಸ್ಪೀಕರ್ ಕೃಷ್ಣ ನಿಧನಕ್ಕೆ ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ""ಸರಳ ಸಜ್ಜನ ರಾಜಕಾರಣಿ, ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಅವರು ನಮ್ಮನ್ನು ಅಗಲಿರುವುದು ಮಂಡ್ಯ ಜಿಲ್ಲೆಗೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಮನೆಯವರು ಮತ್ತು ಹಿತೈಷಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ವ್ಯಕ್ತಿತ್ವ ನಮಗೆ ಸದಾ ಪ್ರೇರಣೆಯಾಗಿ ಉಳಿಯಲಿದೆ'' ಎಂದು ಬರೆದುಕೊಂಡಿದ್ದಾರೆ.

ಮಾಜಿ ಸ್ಪೀಕರ್ ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜನಾನುರಾಗಿ ನಾಯಕನಾಗಿದ್ದ ಕೃಷ್ಣ, ತಾಲ್ಲೂಕು ಬೋರ್ಡು ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ವಿಧಾನಸಭೆಯ ಸ್ಪೀಕರ್ ಆಗಿ ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿದವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಚಿವ ಸಿ.ಪಿ ಯೋಗೇಶ್ವರ್ ಸಂತಾಪ
ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅವರ ನಿಧನಕ್ಕೆ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ.ಪಿ ಯೋಗೇಶ್ವರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ವಿಧಾನಸಭೆಯ ಸ್ಪೀಕರ್ ಆಗಿ ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿದವರು ಎಂದು ಸಚಿವರು ಸ್ಮರಿಸಿದ್ದಾರೆ.

ತುಂಬಾ ಸರಳಜೀವಿ ಆಗಿದ್ದ ಕೆ .ಆರ್ ಪೇಟೆ ಕೃಷ್ಣ ಅವರು ಪ್ರಾಮಾಣಿಕರಾಗಿದ್ದರು ಹಾಗೂ ಜನಾನುರಾಗಿಯಾಗಿದ್ದರು ಎಂದಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಜಿ ಸ್ಪೀಕರ್‌ ಕೃಷ್ಣ ಅವರ ನಿಧನಕ್ಕೆ ಡಿಸಿಎಂ ಕಂಬನಿ
ಕರ್ನಾಟಕ ಕಂಡ ಸಜ್ಜನ-ಸರಳ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್ ‌ಪೇಟೆ ಕೃಷ್ಣ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಕಂಬನಿ ಮಿಡಿದಿದ್ದಾರೆ.

ರಾಜಕೀಯ ತಳಮಟ್ಟದಿಂದ ಜನ ನಾಯಕರಾಗಿ ಬೆಳೆದ ಕೃಷ್ಣ ಅವರು, ಅಸಾಧಾರಣ ಸಂಸದೀಯ ಪಟುವಾಗಿದ್ದರು. ಜನಪರವಾದ ಯಾವುದೇ ವಿಷಯದ ಬಗ್ಗೆ ಸಮರ್ಥವಾಗಿ ಚರ್ಚೆ ನಡೆಸುವುದು ಮಾತ್ರವಲ್ಲದೆ, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು ಎಂದಿದ್ದಾರೆ.

English summary
Former Speaker of the Karnataka Assembly Krishna (80) has died at his residence in Mysuru On Friday (May 21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X