ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲಿ ಮೈಸೂರು ಅರಮನೆಗೂ ಒಂದು ತಿಂಗಳ ಕಾಲ ಬೀಳಲಿದೆ ಬೀಗಮುದ್ರೆ…!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಜನವರಿ 27: ಹಕ್ಕಿ ಜ್ವರದ ಭೀತಿಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯ ಬಂದ್‌ ಆಗಿರುವ ಬೆನ್ನಲ್ಲೇ ಮೈಸೂರಿನ ಮತ್ತೊಂದು ಪ್ರವಾಸಿ ತಾಣವಾದ ಜಗನ್ಮೋಹನ ಅರಮನೆಯನ್ನು ದುರಸ್ತಿ ಕಾರಣಕ್ಕಾಗಿ ಸದ್ಯವೇ ಒಂದು ತಿಂಗಳು ಕಾಲ ಮುಚ್ಚಲು ಸಿದ್ಧತೆ ನಡೆದಿದೆ.

ಸುಮಾರು 156 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಜಗನ್ ಮೋಹನ ಅರಮನೆಯ ಕಲಾ ಗ್ಯಾಲರಿ, ಸಭಾಂಗಣ ಸೇರಿದಂತೆ ಇಡೀ ಕಟ್ಟಡದ ಗೋಡೆ, ಛಾವಣಿ ಶಿಥಿಲಗೊಂಡಿರುವುದರಿಂದ ದುರಸ್ತಿ ಮಾಡಿಸಲು, ಅದರ ಮಾಲೀಕತ್ವ ಹೊಂದಿರುವ ರಾಜವಂಶಸ್ಥರು ನಿರ್ಧರಿಸಿದ್ದಾರೆ.

Jagan Mohan palace will be closed for a month

ಹೀಗಾಗಿ, ಸದ್ಯದಲ್ಲಿಯೇ ಅರಮನೆ ಪ್ರವಾಸಿಗರಿಗೆ ಅಲಭ್ಯವಾಗಲಿದೆ ಎಂದು ಅರಮನೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಮೈಸೂರಿಗೆ ನಿತ್ಯ ಬರುವ ಎಲ್ಲ ಪ್ರವಾಸಿಗರು ಅಂಬಾವಿಲಾಸ ಅರಮನೆ ನೋಡಿದ ಬಳಿಕ, ಅದರ ಹಿಂದೆಯೇ ಇರುವ ಜಗನ್ಮೋಹನ ಅರಮನೆಗೆ ಭೇಟಿ ನೀಡುವುದು ವಾಡಿಕೆ. ಈ ಗ್ಯಾಲರಿಯಲ್ಲಿ ಅಪರೂಪದ ಎರಡು ಸಾವಿರಕ್ಕೂ ಹೆಚ್ಚು ಚಿತ್ರಣಗಳನ್ನು ಪ್ರದರ್ಶಿಸಲಾಗಿದೆ. ಪ್ರದರ್ಶನದಲ್ಲಿ ರಾಜ ರವಿವರ್ಮ, ರಾಜ ರಾಮವರ್ಮಾ (ಸಹೋದರರು) ಹಾಗೂ ಇನ್ನಿತರ ಪ್ರಖ್ಯಾತ ಕಲಾವಿದರ ಕೈ ಚಳಕದಿಂದ ಮೂಡಿಬಂದಿರುವ ಚಿತ್ರಗಳಿವೆ. ಅಲ್ಲದೆ ಹಲ್ದೆಂಕರ್‌ ಅವರ ತೈಲಚಿತ್ರ 'ಲೈಟ್‌ ಆಫ್‌ ಹೋಪ್‌'(ಭರವಸೆಯ ಬೆಳಕು) ಚಿತ್ರಣ ಕೂಡ ಇಲ್ಲಿದೆ.

ನಗರದ ಹೃದಯಭಾಗದಲ್ಲಿರುವ ಈ ಅರಮನೆ ಪ್ರವಾಸಿ ತಾಣವೂ ಆಗಿರುವುದರಿಂದ ಪ್ರತಿದಿನ ವಿವಿಧೆಡೆಗಳಿಂದ ನೂರಾರು ಮಂದಿ ಪ್ರವಾಸಿಗರು, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಆರ್ಟ್‌ ಗ್ಯಾಲರಿಗೆ ಭೇಟಿ ನೀಡಿ ಇಲ್ಲಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದರು.

ಇದರ ಜೊತೆಗೆ ಸಭಾಂಗಣದಲ್ಲಿ ಪ್ರತಿದಿನ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ವಾರ್ಷಿಕೋತ್ಸವ, ಗೀತಗಾಯನ ಕಾರ್ಯಕ್ರಮಗಳು, ಸರಕಾರಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ದುರಸ್ತಿಗಾಗಿ ಜಗನ್ ಮೋಹನ ಅರಮನೆಯನ್ನು ಬಂದ್‌ ಮಾಡುವ ಅನಿವಾರ್ಯತೆ ಎದುರಾಗಿರುವುದರಿಂದ ಈ ಎಲ್ಲಾ ಚಟುವಟಿಕೆಗಳಿಗೂ ತಿಂಗಳ ಕಾಲ ಸಭಾಂಗಣ ಲಭ್ಯವಾಗದು.

Jagan Mohan palace will be closed for a month

ಅರಮನೆಯ ಐತಿಹ್ಯ: ಮೈಸೂರು ಸಂಸ್ಥಾನವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್‌, ಇದನ್ನು 1861ರಲ್ಲಿ ನಿರ್ಮಿಸಿದ್ದರು. ಈ ನಡುವೆ ಮೈಸೂರಿನ ಹಳೆಯ ಅರಮನೆ ಬೆಂಕಿಗೆ ಆಹುತಿಯಾದ ವೇಳೆ 1897ರಲ್ಲಿ ರಾಜವಂಶಸ್ಥರು ಜಗನ್ಮೋಹನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಹಾಲಿ ಇರುವ ಅರಮನೆ ನಿರ್ಮಾಣವಾದ ನಂತರ 1915ರಲ್ಲಿ ಹೊಸ ಅರಮನೆಗೆ ಸ್ಥಳಾಂತರಗೊಂಡರು.

ಆ ಬಳಿಕ, ರಾಜವಂಶಸ್ಥರು ವಾಸಿಸುತ್ತಿದ್ದ ಅರಮನೆಯನ್ನು 1955ರಲ್ಲಿ ಶ್ರೀ ಜಯಚಾಮರಾಜೇಂದ್ರ ಕಲಾ ಗ್ಯಾಲರಿ ಎಂದು ನಾಮಕರಣ ಮಾಡಿ ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವವೂ ನಡೆದಿತ್ತು. ಇದರ ಜೊತೆಗೆ 1907ರಲ್ಲಿ ವಿಧಾನ ಪರಿಷತ್‌ನ ಮೊದಲ ಅಧಿವೇಶನವೂ ಇದೇ ಸಭಾಂಗಣದಲ್ಲಿ ನೆರವೇರಿದ್ದನ್ನು ಸ್ಮರಿಸಬಹುದು.

ಪ್ಯಾಲೇಸ್ ಬಂದ್ ಬೇಡ; ರಿಪೇರಿ ಮಾಡಿಸಿ
ಈ ಕುರಿತು ಪ್ರತಿಕ್ರಿಯಿಸಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು, ಪ್ರಾಣಿ ಸಂಗ್ರಹಾಲಯ, ಅರಮನೆ, ಚಾಮುಂಡಿಬೆಟ್ಟದ ಬಳಿಕ ಜಗನ್ಮೋಹನ ಅರಮನೆಯೇ ಪ್ರವಾಸಿಗರ ಪ್ರಮುಖ ಆಕರ್ಷಣೆ. ಮೃಗಾಲಯ ಬಳಿಕ ಇದು ಕೂಡ ವೀಕ್ಷಣೆಗೆ ಅಲಭ್ಯವಾಗುವುದರಿಂದ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗುವುದು ನಿಶ್ಚಿತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರವಾಸೋದ್ಯಮ ಶೇ.60 ರಷ್ಟು ಕುಸಿದಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಹಿನ್ನೆಲೆ ಬಂದ್ ಮಾಡಬಾರದು. ಹಂತ ಹಂತವಾಗಿ ರಿಪೇರಿ ಮಾಡಿಸಬೇಕು ಎಂದು ನಾರಾಯಣ ಗೌಡರು ಆಗ್ರಹಿಸಿದ್ದಾರೆ.

English summary
After the news of Mysore Zoo close due to bird flu, now another disppointment for the travellers who come explore the city. The iconic Jagan Mohan Palace is going to shut its doors soon for a period of one month, because of repairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X