ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಲ್ಯಾಕ್ ಫಂಗಸ್ ಪೀಡಿತರಿಗೆ ರಹಸ್ಯ ಚಿಕಿತ್ಸೆ ನೀಡುವುದು ಅಪರಾಧ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 21: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ತುತ್ತಾಗುವವರಿಗೆ ಆಸ್ಪತ್ರೆಗಳು ಗುಪ್ತವಾಗಿ ಚಿಕಿತ್ಸೆ ನೀಡುವಂತಿಲ್ಲ ಹಾಗೂ ಈ ಕಾಯಿಲೆಗೆ ತುತ್ತಾದವರು ಕೂಡಲೇ ಸರಕಾರಕ್ಕೆ ಮಾಹಿತಿ ನೀಡಲೇಬೇಕು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ, ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.

ಮೈಸೂರು ನಗರದ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಡಿಸಿಎಂ ಮಾಧ್ಯಮಗಳ ಜತೆ ಮಾತನಾಡಿದರು.

ಗಮನಕ್ಕೆ ತರಬೇಕಾದ ಕಾಯಿಲೆ

ಗಮನಕ್ಕೆ ತರಬೇಕಾದ ಕಾಯಿಲೆ

ಕೋವಿಡ್ ಚಿಕಿತ್ಸೆ ಪಡೆದ ನಂತರ ಬರುತ್ತಿರುವ ಈ ಕಾಯಿಲೆ ಬಗ್ಗೆ ಸರಕಾರ ಹೆಚ್ಚು ನಿಗಾ ಇಟ್ಟಿದೆ. ಇದನ್ನು ʼಗಮನಕ್ಕೆ ತರಬೇಕಾದ ಕಾಯಿಲೆʼ ಎಂದು ಈಗಾಗಲೇ ಸರಕಾರ ಸ್ಪಷ್ಟ ಸೂಚನೆ ನೀಡಿದೆ. ಯಾವುದೇ ಖಾಸಗಿ ಆಸ್ಪತ್ರೆ ಯಾರಿಗೂ ತಿಳಿಯದಂತೆ ಚಿಕಿತ್ಸೆ ನೀಡುವುದು ಅಪರಾಧ. ಅದೇ ರೀತಿ ಈ ಕಾಯಿಲೆಗೆ ತುತ್ತಾದವರು ಸಹ ರಹಸ್ಯವಾಗಿ ಚಿಕಿತ್ಸೆ ಪಡೆಯುವುದು ಕೂಡ ತಪ್ಪಾಗುತ್ತದೆ. ಮಾಹಿತಿ ಮುಚ್ಚಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬ್ಲ್ಯಾಕ್ ಫಂಗಸ್‌ನಿಂದ ರಾಜ್ಯದಲ್ಲಿ ಸಾವುಗಳು ಆಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಸುಮಾರು ನೂರಕ್ಕೂ ಹೆಚ್ಚು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.

ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ

ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ

ಮೈಸೂರು, ಬೆಂಗಳೂರು. ಹುಬ್ಬಳ್ಳಿ, ಕಲಬುರಗಿ, ಮಂಗಳೂರು ಮತ್ತು ಶಿವಮೊಗ್ಗ ವಿಭಾಗಗಳಲ್ಲಿ ಈ ಕಾಯಿಲೆಗೆ ಉಚಿತವಾಗಿ ಚಿಕಿತ್ಸೆ ಕೊಡಲಾಗುತ್ತಿದೆ. ಜತೆಗೆ, ಇದಕ್ಕೆ ಅಗತ್ಯವಾದ ʼಲೈಸೋಸೋಮಲ್ ಅಮಪೋಟೆರಿಸನ್ʼ (liposomal amphotericin) ಔಷಧಿ ನಮ್ಮ ದೇಶದಲ್ಲಿ ತಯಾರಾಗುತ್ತಿರಲಿಲ್ಲ. ಈಗ ನಮ್ಮಲ್ಲೇ ತಯಾರಿಕೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಕೆಲ ದಿನಗಳಲ್ಲಿಯೇ ಹೆಚ್ಚಿನ ಪ್ರಮಾಣದ ಔಷಧಿ ರಾಜ್ಯಕ್ಕೆ ಲಭ್ಯವಾಗಲಿದೆ. ಸದ್ಯಕ್ಕೆ ಕೇಂದ್ರ ಸರಕಾರ ವಿವಿಧ ದೇಶಗಳಿಂದ ಆಮದು ಮಾಡಿಕೊಂಡು ಅಗತ್ಯಕ್ಕೆ ಅನುಸಾರವಾಗಿ ಆಯಾ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಕೆಲ ವಾರಗಳಲ್ಲಿಯೇ ಈ ಔಷಧಿಯ ಕೊರತೆಯನ್ನು ನೀಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

75,000 ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡುವ ವ್ಯವಸ್ಥೆ

75,000 ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡುವ ವ್ಯವಸ್ಥೆ

ಯಾವುದೇ ಕಾರಣಕ್ಕೂ ಕೋವಿಡ್ ಪರೀಕ್ಷೆಗಳ ಪ್ರಮಾಣವನ್ನು ಕಡಿಮೆ ಮಾಡಿಲ್ಲ. ನಿಗದಿತ ಗುರಿಗಿಂತ ಹೆಚ್ಚು ಮಾಡಲಾಗುತ್ತಿದೆ. ಅದಕ್ಕಾಗಿ ಕೆಲ ಸುಧಾರಣೆಗಳನ್ನು ತರಲಾಗಿದೆ. ಸರಕಾರಿ ಲ್ಯಾಬ್‌ಗಳಲ್ಲಿ ಒಂದು ಲಕ್ಷ ಸಿಂಗಲ್ ಟೆಸ್ಟ್ ಮಾಡುವ ವ್ಯವಸ್ಥೆ ಇದ್ದು, ಖಾಸಗಿ ಲ್ಯಾಬ್‌ಗಳಲ್ಲಿ 75,000 ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 50,000 RAT ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೇ 30 ಲಕ್ಷ RAT ಕಿಟ್‌ಗಳನ್ನು ಖರೀದಿ ಮಾಡಲಾಗಿದ್ದು, ಇನ್ನು ತಲಾ ಒಂದು ಕೋಟಿ RAT & ಆರ್‌ಟಿ-ಪಿಸಿಆರ್ ಕಿಟ್‌ಗಳನ್ನು ಕೊಂಡುಕೊಳ್ಳಲು ಸರಕಾರ ನಿರ್ಧರಿಸಿದೆ ಎಂದು ಡಾ.ಅಶ್ವಥ್ ನಾರಾಯಣ ತಿಳಿಸಿದರು.

ಔಷಧಿ ಖರೀದಿಗೆ ನಿರ್ಬಂಧವೇ ಇಲ್ಲ

ಔಷಧಿ ಖರೀದಿಗೆ ನಿರ್ಬಂಧವೇ ಇಲ್ಲ

ವೈದ್ಯಕೀಯ ಬಳಕೆ ಸಾಮಗ್ರಿ ಹಾಗೂ ಔಷಧಿ ಖರೀದಿಗೆ ನಿರ್ಬಂಧವೇ ಇಲ್ಲ. ಎಷ್ಟು ಬೇಕಾದರೂ ಖರೀದಿ ಮಾಡಲು ಇಲಾಖೆಗೆ ಸರಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಕಳೆದ ಒಂದು ವರ್ಷದಲ್ಲಿ 30,000 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ, 3,000ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ಹಾಕಲಾಗಿದೆ. ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿದ್ದೇವೆ. 7ನೇ ವೇತನ ಆಯೋಗದ ಶಿಫಾರಸುಗಳನ್ನೂ ಜಾರಿ ಮಾಡಿದ್ದೇವೆ ಎಂದರು.

35ರಿಂದ 40 ಲಕ್ಷ ಜನರಿಗೆ ಔಷಧಿ

35ರಿಂದ 40 ಲಕ್ಷ ಜನರಿಗೆ ಔಷಧಿ

ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ರೆಮ್‌ಡೆಸಿವಿರ್ ಪಡೆದಿರುವ ರಾಜ್ಯ ಕರ್ನಾಟಕ. ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಸರಕಾರಿ ಕೋಟಾದಡಿ ಚಿಕಿತ್ಸೆ ಪಡೆದಿರುವ ಎಲ್ಲರಿಗೂ ಉಚಿತವಾಗಿ ಈ ಔಷಧಿಯನ್ನು ಕೊಡಲಾಗಿದೆ. 35ರಿಂದ 40 ಲಕ್ಷ ಜನರಿಗೆ ಔಷಧಿ ಒದಗಿಸುವ ಕೆಲಸವನ್ನು ಸರಕಾರ ಮಾಡಿದೆ. ಮೊದಲು ಜಿಲ್ಲಾ ಮಟ್ಟದಲ್ಲಿ ಪ್ರಮುಖ ಔಷಧಿಗಳನ್ನು ಸಂಗ್ರಹ ಮಾಡುವ ವ್ಯವಸ್ಥೆ ಇತ್ತು. ಇದ್ದಕ್ಕಿದ್ದ ಹಾಗೆ ದೇಶದಲ್ಲಿ ಔಷಧಿಗಳ ಬೇಡಿಕೆ ಹೆಚ್ಚಿದಾಗ ಜಿಲ್ಲಾ ಮಟ್ಟದಲ್ಲಿ ಅದನ್ನು ಸಂಗ್ರಹ ಮಾಡುವುದು ಕಷ್ಟವಾಯಿತು. ಈ ಹಿನ್ನೆಲೆಯಲ್ಲಿ ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು. ಈಗ ಎಲ್ಲವೂ ಸರಿ ಹೋಗಿದೆ ಎಂದು ತಿಳಿಸಿದರು.

English summary
DCM CN Ashwath Narayana said hospitals should not treat the black fungus patients in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X