ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿನ ಮನೆಯಾಗುತ್ತಿದೆಯಾ ಮೈಸೂರಿನ ಕೆ.ಆರ್ ಆಸ್ಪತ್ರೆ?

By ಬಿ.ಎಂ ಲವಕುಮಾರ್
|
Google Oneindia Kannada News

ಮೈಸೂರು, ಡಿಸೆಂಬರ್, 03: ಆಸ್ಪತ್ರೆ ಎಂದರೆ ಅದೊಂದು ಆರೋಗ್ಯಧಾಮ. ಬಳಲುವ ರೋಗಿಗಳಿಗೆ ಪುನಶ್ಚೇತನ ನೀಡುವ ತಾಣ. ಆದರೆ ದೊಡ್ಡ ಆಸ್ಪತ್ರೆ ಎಂದೇ ಖ್ಯಾತಿ ಪಡೆದ ಮೈಸೂರು ಜಿಲ್ಲೆಯ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆಯೇ ಇಲ್ಲ, ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಒಂದೇ ದಿನ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ.

ಮೃತಪಟ್ಟ ರೋಗಿಗಳ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರುತ್ತಿರುವುದರಿಂದಾಗಿ ಇದೀಗ ಈ ಆಸ್ಪತ್ರೆಯತ್ತ ತೆರಳಲು ರೋಗಿಗಳು ಭಯಪಡುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾವನ್ನಪ್ಪಿದ ಬಗ್ಗೆ ವರದಿಯಾಗಿತ್ತು. ಇದೀಗ ಕೆ.ಆರ್.ಆಸ್ಪತ್ರೆಯಲ್ಲಿ ಸಾವು ಸಂಭವಿಸುತ್ತಿರುವುದು ಆಸ್ಪತ್ರೆಯ ಬಗ್ಗೆ ಜನರಲ್ಲಿ ತಾತ್ಸಾರ ಮೂಡಿದೆ.

ಕೆ.ಆರ್ ಆಸ್ಪತ್ರೆಯಲ್ಲಿ ರೋಗಿಗಳು ಸಾಯುವುದು ಹೊಸತೇನಲ್ಲ. ಇಲ್ಲಿ ರೋಗಿಗಳು ದಾಖಲಾಗಿ ಚಿಕಿತ್ಸೆ ಫಲಕಾರಿಯಾಗಿ ಸಾವನ್ನಪ್ಪುತ್ತಿರುತ್ತಾರೆ. ಆದರೆ ವಾರದ ಹಿಂದೆಯಷ್ಟೆ ಚಿಕಿತ್ಸೆಗೆ ದಾಖಲಾಗಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಂಜೇಗೌಡರದೊಡ್ಡಿ ಗ್ರಾಮದ ಚಂದ್ರಕಲಾ(28) ಮತ್ತು ತಿ.ನರಸೀಪುರ ತಾಲೂಕಿನ ಕುಕ್ಕೂರು ಗ್ರಾಮದ ಶ್ರೀನಿವಾಸಪ್ರಸಾದ್ (38) ಎಂಬ ಇಬ್ಬರು ರೋಗಿಗಳು ಒಂದೇ ದಿನ ಸಾವನ್ನಪ್ಪಿದ್ದು, ಇವರ ಸಾವಿನ ಬಳಿಕ ಮತ್ತೊಮ್ಮೆ ಕೆ.ಆರ್.ಆಸ್ಪತ್ರೆ ಸುದ್ದಿಗೆ ಗ್ರಾಸವಾಗಿದೆ.[ಮೈಸೂರು ಚೆಲುವಾಂಬ ಆಸ್ಪತ್ರೆಯಲಿಲ್ಲ ಬಾಣಂತಿಯರಿಗೆ ಸುರಕ್ಷೆ!]

is Kr hospital Mysore becoming death knell for poor patients

ಶ್ರೀನಿವಾಸ್ ಪ್ರಸಾದ್ ಸಾವನ್ನಪ್ಪಿದ್ದು ಹೇಗೆ?

ಟಿ. ನರಸೀಪುರ ತಾಲೂಕಿನ ಕುಕ್ಕೂರು ಗ್ರಾಮದ ಶ್ರೀನಿವಾಸ ಪ್ರಸಾದ್ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಬಳಿಕ ಅವರನ್ನು ತೀವ್ರನಿಗಾ ಘಟಕದಲ್ಲಿ ಇಡಲಾಗಿತ್ತು. ಇನ್ನೇನು ಚೇತರಿಸಿಕೊಳ್ಳುತ್ತಾರೆ ಎಂದು ಸಂಬಂಧಿಕರು ನಂಬಿದ್ದರು. ಆದರೆ ಸಂಜೆ ವೇಳೆಗೆ ಅವರಿಗೆ ನೀಡಲಾಗಿದ್ದ ಆಕ್ಸಿಜನ್ ಮುಗಿದಿತ್ತು. ಈ ಬಗ್ಗೆ ಸಂಬಂಧಿಸಿದ ಸಿಬ್ಬಂದಿಗಳಿಗೆ ತಿಳಿಸಿದರೂ ಅವರು ತಜ್ಞವೈದ್ಯರಿಗೆ ತಿಳಿಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಚಂದ್ರಕಲಾ ರೋಗಿ ಸಾವನ್ನಪ್ಪಿದ್ದು ಹೇಗೆ?

ಚಂದ್ರಕಲಾ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಮಂಡ್ಯದಿಂದ ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿಗೆ ದಾಖಲಾಗಿದ್ದರು. ಪರೀಕ್ಷೆ ಮಾಡಿದ ವೈದ್ಯರು ಹೊಟ್ಟೆಯಲ್ಲಿ ಕೀವು ತುಂಬಿದೆ. ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸುವ ಭರವಸೆ ನೀಡಿದ್ದರು. ಆದರೆ ಶಸ್ತ್ರ ಚಿಕಿತ್ಸೆ ಮಾಡುವುದಿರಲಿ ಯಾವ ವೈದ್ಯರೂ ಇವರ ಬಳಿ ಸುಳಿದು ಆರೋಗ್ಯ ವಿಚಾರಿಸಿರಲಿಲ್ಲ.[ಮಂಡ್ಯ : ಪ್ರಿಯಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣಾನಾ?]

ಚಂದ್ರಕಲಾ ಸ್ಥಿತಿ ಗಂಭೀರವಾಗುತ್ತಿದ್ದಂತೆ ಬಂದ ಕಿರಿಯ ವೈದ್ಯರು ಪರೀಕ್ಷಿಸಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕು. ಇಲ್ಲವಾದರೆ ಜೀವಕ್ಕೆ ತೊಂದರೆಯಾಗುತ್ತದೆ ಎಂದಿದ್ದಾರೆ. ಆದರೆ ಶಸ್ತ್ರಚಿಕಿತ್ಸೆ ಮಾಡುವೆವು ಎಂದು ಹೇಳಿದ ವೈದ್ಯರು ಮತ್ತೆ ರೋಗಿ ಚಂದ್ರಕಲಾ ಕಡೆ ಸುಳಿಯಲೇ ಇಲ್ಲ. ಪರಿಣಾಮ ಆಕೆ ಸಾವನ್ನಪ್ಪಿದ್ದಾರೆ.

ಮೈಸೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ರೋಗಿಗಳಿಗೆ ಕೆ. ಆರ್ ಆಸ್ಪತ್ರೆಯೇ ಆಸರೆ. ಆದರೆ ರೋಗಿಗಳ ಸಂಖ್ಯೆಗೆ ತಕ್ಕಂತೆ ಇಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ ಸಿಬ್ಬಂದಿಗಳಿಲ್ಲ. ಅಷ್ಟೇ ಅಲ್ಲ ಚಿಕಿತ್ಸೆ ನೀಡಲು ತಕ್ಕ ಸೌಲಭ್ಯವೂ ಇಲ್ಲ. ಇರುವ ಸಿಬ್ಬಂದಿ ಮತ್ತು ಸೌಲಭ್ಯದಲ್ಲೇ ಎಲ್ಲವನ್ನೂ ನಿರ್ವಹಿಸಬೇಕಾಗಿದೆ. ಇದು ಕೂಡ ರೋಗಿಗಳ ಸಾವಿಗೆ ಕಾರಣವಾಗುತ್ತಿದೆ.[ಹೋಗಿದ್ದು ಚಿಕಿತ್ಸೆಗೆ, ಆದರೆ ಮಲಗಿದ್ದು ಮರಣ ಶಯ್ಯೆ ಮೇಲೆ]

ಪ್ರತಿ ಸರ್ಕಾರ ಬಂದಾಗಲೂ ಇಲ್ಲಿಗೆ ಭೇಟಿ ನೀಡುವ ಆರೋಗ್ಯ ಸಚಿವರು ಸೌಲಭ್ಯ ಮತ್ತು ಆಸ್ಪತ್ರೆ ಅಭಿವೃದ್ದಿ ಬಗ್ಗೆ ಭರವಸೆಯನ್ನು ನೀಡುತ್ತಲೇ ಬರುತ್ತಿದ್ದಾರೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಆಸ್ಪತ್ರೆ ಅಭಿವೃದ್ಧಿ ಕಾಣದೆ ಹೋದರೆ ಇನ್ಮುಂದೆ ಅಭಿವೃದ್ಧಿ ಕನಸಿನ ಮಾತೇ ಸರಿ. ಇನ್ನಾದರೂ ಕೆ.ಆರ್.ಆಸ್ಪತ್ರೆಯತ್ತ ಸಂಬಂಧಿಸಿದ ಅಧಿಕಾರಿಗಳು, ರಾಜಕಾರಣಿಗಳು ಗಮನಹರಿಸಲಿ. ಇಲ್ಲದಿದ್ದರೆ ಬಡರೋಗಿಗಳ ಪಾಲಿಗೆ ಆಸ್ಪತ್ರೆ ಸಾವಿನ ಮನೆಯಾಗುವ ದಿನಗಳು ದೂರವಿಲ್ಲ.

ಕೆ.ಆರ್ ಆಸ್ಪತ್ರೆ

English summary
Attn Health Minister, U T Khader : Another two patients die in renowned KR Hospital, Mysuru. All is not well in the hospital. Krishna Rajendra Hospital founded by Sri Krishnarajendra Wodeyar in 1927, is a tertiary referral center and teaching hospital attached to the Mysore Medical College in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X