ಜಿಟಿ ದೇವಗೌಡ ಬಿಜೆಪಿಗೆ ಬಂದರೆ ಕ್ಷೇತ್ರ ತ್ಯಾಗಕ್ಕೆ ಸಿದ್ಧ: ಶಾಸಕ ನಾಗೇಂದ್ರ
ಮೈಸೂರು, ಮೇ 14 : ಜೆಡಿಎಸ್ ಹಿರಿಯ ಶಾಸಕ ಜಿ.ಟಿ. ದೇವಗೌಡರು ಬಿಜೆಪಿ ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತ ಕೋರುತ್ತೇನೆ ಮತ್ತು ಅವರ ಪುತ್ರ ಹರೀಶ್ ಗೌಡನಿಗೆ ಚಾಮರಾಜ ಕ್ಷೇತ್ರಕ್ಕೆ ಟಿಕೆಟ್ ನೀಡುವುಕ್ಕೆ ಪಕ್ಷ ಬಯಸಿದರೆ ಅದಕ್ಕು ಸಿದ್ಧ ಎಂದು ಶಾಸಕ ಎಲ್ ನಾಗೇಂದ್ರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಜಿ.ಟಿ.ದೇವೇಗೌಡ ಅವರನ್ನು ಭೇಟಿ ಮಾಡಿ ಮಾತನಾಡಿದ ಬೆನ್ನಲ್ಲೇ ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
" ಶಾಸಕ ಜಿ.ಟಿ. ದೇವಗೌಡರು ಬಿಜೆಪಿ ಪಕ್ಷಕ್ಕೆ ಬಂದರೆ ಸ್ವಾಗತ. ಅವರ ಪುತ್ರ ಹರೀಶ್ ಗೌಡನಿಗೆ ಚಾಮರಾಜ ಟಿಕೆಟ್ ನೀಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡಿದರೇ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧನಿದ್ದೇನೆ. ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಇಂತಹ ಪಕ್ಷಕ್ಕಾಗಿ ಕ್ಷೇತ್ರ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ" ಎಂದರು.
ಬಿಜೆಪಿಗೆ ಘಟಾನುಘಟಿ ನಾಯಕರ ಸೇರ್ಪಡೆ ಖಚಿತ
ಬಿಜೆಪಿಗೆ ಘಟಾನುಘಟಿ ನಾಯಕರು ಸೇರುತ್ತಾರೆ ಎಂದಿರುವ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಎಲ್.ನಾಗೇಂದ್ರ ಅವರು, ನಿಜಕ್ಕೂ ಘಟಾನುಘಟಿ ನಾಯಕರು ಬಿಜೆಪಿಗೆ ಬರಲಿದ್ದಾರೆ. ಅವರು ಯಾರು ಅಂತಾ ನೀವು ಉಸ್ತುವಾರಿ ಸಚಿವರನ್ನೇ ಕೇಳಿ. ನಾನು ಬೇರೆ ಪಕ್ಷದ ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ. ಒಟ್ಟಿನಲ್ಲಿ ಬಿಜೆಪಿಗೆ ಹಲವಾರು ಮಂದಿ ಸೇರ್ಪಡೆಯಾಗುವುದಂತೂ ಖಚಿತ ಎಂದು ತಿಳಿಸಿದ್ದಾರೆ.

ಕೆಲವು ನಾಯಕರು ಯಾವುದೇ ಷರತ್ತುಗಳಿಲ್ಲದೆ ಬಿಜೆಪಿ ಸೇರಲಿದ್ದಾರೆ
ಮೈಸೂರಿನಲ್ಲಿ ಎರಡನೇ ಹಂತದಲ್ಲಿ ಆಪರೇಷನ್ ಕಮಲ ನಡೆಯಲಿದ್ದು, ಬಹುತೇಕ ಮೈಸೂರಿನ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ನಾಯಕರು ಬಿಜೆಪಿಗೆ ಬರುವವರಿದ್ದಾರೆ. ಆದರೆ, ನಾನು ಅವರು ಯಾರೆಂದು ಹೇಳುವುದಿಲ್ಲ, ಕೊನೆಯ ಹಂತದ ಮಾತುಗಳಿ ಮುಗಿದ ಮೇಲೆ ತಾನಾಗಿಯೇ ತಿಳಿಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ತಿಳಿಸಿದ್ದರು.