ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?

By ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

ಅರಮನೆನಗರಿ, ಪಾರಂಪರಿಕ ನಗರಿ, ಸಾಂಸ್ಕೃತಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ಹಲವು ಖ್ಯಾತನಾಮಗಳಿಂದ ಪ್ರಸಿದ್ಧವಾದ ಮೈಸೂರನ್ನು ಇನ್ನು ಮುಂದೆ 'ಸ್ವಚ್ಛ ನಗರಿ' ಎಂದು ಕರೆಯಲು ಯಾವುದೇ ಅಡ್ಡಿಯಿಲ್ಲ. ಕಾರಣ ಈ ಹಿಂದೆ ಕೇಂದ್ರ ಘೋಷಿಸಿದ ಸ್ವಚ್ಛನಗರಿಯ ಪಟ್ಟವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಮೈಸೂರು ಯಶಸ್ವಿಯಾಗಿದೆ.

ಬೇರೆ ನಗರಗಳಿಗೊಂದು ಸುತ್ತು ಹೊಡೆದು ಬಂದವರು ಮೈಸೂರನ್ನು ಇಷ್ಟಪಡುತ್ತಾರೆ. ಕಾರಣ ಟ್ರಾಫಿಕ್ ಕಿರಿಕಿರಿಯಾಗಲೀ, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಾಗಲೀ ಇಲ್ಲಿ ಇಲ್ಲವೇ ಇಲ್ಲ. ಬಡಾವಣೆಗಳಲ್ಲಿ, ಮಾರ್ಕೆಟ್ ಬಳಿಯೋ ಕಸದ ರಾಶಿ ಕಣ್ಣಿಗೆ ರಾಚಬಹುದು. ಆದರೆ ಅದು ಅಲ್ಲಿಯೇ ಕೊಳೆತು ನಾರುವುದಕ್ಕೆ ಅವಕಾಶ ನೀಡದೆ ವಿಲೇವಾರಿ ಕಾರ್ಯವೂ ನಡೆಯುತ್ತದೆ.

ಇಷ್ಟಕ್ಕೂ ಮೈಸೂರಿಗೆ ಯಾವ ಮಾನದಂಡದ ಮೇಲೆ 'ಸ್ವಚ್ಛ ನಗರಿ' ಎಂಬ ಪ್ರಶಸ್ತಿಯನ್ನು ನೀಡಿರಬಹುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅಷ್ಟೇ ಅಲ್ಲ ಬಹಳಷ್ಟು ಮಂದಿಗೆ ಕುತೂಹಲವೂ ಇದೆ.

ಮೈಸೂರಿನ ಸ್ವಚ್ಛತೆ ಕಾಪಾಡುವಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿಗಳು, ಮೇಯರ್, ನಗರಸಭಾ ಸದಸ್ಯರು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು, ಇವರೊಂದಿಗೆ ಆಗಾಗ್ಗೆ ಸ್ವಚ್ಛತಾ ಆಂದೋಲನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾದ ಹಲವು ಸಂಘಟನೆಗಳ ಪಾತ್ರವಿರುವುದನ್ನು ತಳ್ಳಿಹಾಕುವಂತಿಲ್ಲ. [ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]

How Mysuru won Swachh Bharat Clean City abhiyan

ಸ್ವಚ್ಚತೆಯ ಮಾನದಂಡಗಳು

ಕಳೆದ ಒಂದು ತಿಂಗಳ ಹಿಂದೇ ಮೈಸೂರಿಗೆ ಆಗಮಿಸಿದ್ದ ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ನಿಯೋಜಿತವಾಗಿದ್ದ ಮೂವರು ಸದಸ್ಯರನ್ನೊಳಗೊಂಡ ತಜ್ಞರ ತಂಡ ನಗರದಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ನಗರದಲ್ಲಿರುವ ಸ್ವಚ್ಛತೆ ಮತ್ತು ಸ್ವಚ್ಛತೆ ಕಾಪಾಡಲು ಕೈಗೊಂಡಿರುವ ಕಾರ್ಯಗಳು, ನಗರದ ರಸ್ತೆಗಳು ಮತ್ತು ಅವುಗಳ ಸ್ವಚ್ಛತೆಯನ್ನು ಉಳಿಸಿಕೊಳ್ಳಲು ಮಾಡಿದ ಕ್ರಮ, ಕುಡಿಯುವ ನೀರಿನ ಸರಬರಾಜು ಮತ್ತು ಅದರಲ್ಲಿ ಕಾಪಾಡಿಕೊಂಡ ಶುದ್ಧತೆ, ಸಮರ್ಪಕ ಒಳಚರಂಡಿಯ ವ್ಯವಸ್ಥೆ ಮತ್ತು ಅದರ ನಿರ್ವಹಣೆ, ಮನೆಮನೆಗಳಿಂದ ಮತ್ತು ಬೀದಿಯಲ್ಲಿ ಕಸಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿ, ಘನ ತ್ಯಾಜ್ಯ ಸಂಗ್ರಹಣೆ ಮತ್ತು ಅದರ ಸಂಸ್ಕರಣೆ ಹೀಗೆ ಹಲವು ರೀತಿಯಲ್ಲಿ ಸಮಗ್ರ ಅಧ್ಯಯನ ನಡೆಸಿತ್ತು.

ಹಾಗೆ ನೋಡಿದರೆ ಮೈಸೂರು ನಗರವನ್ನು ಅಭಿವೃದ್ಧಿಗೊಳಿಸಿದ ಮಹಾರಾಜರು ಮುಂದಿನ ತಲೆಮಾರಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿ ಪಡಿಸಿದ್ದರು. ವಿದೇಶಗಳ ನಿಕಟ ಸಂಪರ್ಕ ಹೊಂದಿದ್ದ ಮಹಾರಾಜರು ಅಲ್ಲಿ ಅಳವಡಿಸಲಾದ ಕೆಲವು ಕಾರ್ಯ ತಂತ್ರಗಳನ್ನು ಇಲ್ಲಿಯೂ ಮಾಡಿದ್ದರು. ಇದರ ಪರಿಣಾಮ ಇವತ್ತು ಮೈಸೂರು ಸ್ವಚ್ಛ ಸುಂದರ ನಗರವಾಗಿ ಮಾರ್ಪಾಡಾಗಲು ಸಾಧ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. [2015: ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]

How Mysuru won Swachh Bharat Clean City abhiyan

ಸ್ವಚ್ಛ ನಗರಿಗೆ ಕಾರಣಗಳು..

ಇನ್ನು ಸ್ವಚ್ಛ ನಗರಿಯ ಗರಿ ದೊರೆತಿದೆ ಎಂದ ತಕ್ಷಣ ಏಕೆ ಮತ್ತು ಹೇಗೆ ಬಂತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ಮೈಸೂರನ್ನು ಆಳಿದ ಮಹಾರಾಜರು. ಅವರು ಹಾಕಿಕೊಟ್ಟ ಭದ್ರಬುನಾದಿ ಇವತ್ತಿನ ಸ್ವಚ್ಛನಗರಿ ಖ್ಯಾತಿಯನ್ನು ತರಲು ಸಹಕಾರಿಯಾಯಿತು ಎಂದರೆ ತಪ್ಪಾಗಲಾರದು. ಅವತ್ತು ನಗರ ನಿರ್ಮಿಸಲು ಅವರು ಆಲೋಚಿಸಿದ ರೀತಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್. ಎಂ. ವಿಶ್ವೇಶ್ವರಯ್ಯನವರ ಮುಂದಾಲೋಚನೆಯಲ್ಲಿ ನಿರ್ಮಾಣವಾದ ಒಳಚರಂಡಿ ವ್ಯವಸ್ಥೆ ಮತ್ತು ಅದನ್ನು ಪಾಲಿಕೆ ಮುಂದುವರೆಸಿದ ರೀತಿ ಎಲ್ಲವೂ ಕಾರಣವಾಗಿದೆ.

ಶುದ್ಧ ಕುಡಿಯುವ ನೀರು

ಇನ್ನು ನೀರಿನ ವ್ಯವಸ್ಥೆ ಬಗ್ಗೆ ಹೇಳುವುದಾದರೆ ನಗರದ ನೀರಿನ ಸರಬರಾಜು ವ್ಯವಸ್ಥೆ ಇಂದು ನಿನ್ನೆಯದಲ್ಲ ಅದಕ್ಕೆ ಶತಮಾನಗಳ ಇತಿಹಾಸವಿದೆ. ವಾಣಿವಿಲಾಸ ನೀರು ಸರಬರಾಜು ಮಂಡಳಿ ಸಮರ್ಪಕ ಮತ್ತು ಶುದ್ಧ ನೀರನ್ನು ಸರಬರಾಜು ಮಾಡುತ್ತಿದೆ. ಜತೆಗೆ ನಗರದ ನಾಲ್ಕು ಸ್ಥಳಗಳಲ್ಲಿ ಕೊಳಚೆ ನೀರಿನ ಸಂಸ್ಕರಣಾ ಘಟಕವನ್ನು ಹೊಂದಿದೆ.

How Mysuru won Swachh Bharat Clean City abhiyan

ಸಮರ್ಪಕ ಕಸ ವಿಲೇವಾರಿ

ಸ್ವಚ್ಛತೆಗೆ ಅಡ್ಡಿ ತರುವುದು ಕಸವಿಲೇವಾರಿ. ಈ ಸಮಸ್ಯೆಯನ್ನು ಮೈಸೂರಿನಲ್ಲಿ ಸಮರ್ಪಕವಾಗಿ ಬಗೆಹರಿಸಲಾಗಿದೆ. ಈಗಾಗಲೇ ನಗರದಲ್ಲಿ ಮನೆಮನೆಗೆ ಪ್ರತ್ಯೇಕ ತೊಟ್ಟಿಗಳನ್ನು ನೀಡಲಾಗಿದೆ. ಅಷ್ಟೇ ಅಲ್ಲ ಪ್ರತಿ ಮನೆಯಿಂದಲೂ ಕಸ ಸಂಗ್ರಹಣೆ ಯಶಸ್ವಿಯಾಗಿ ನಡೆಯುತ್ತಿದೆ.

ಮೊದಲಿಗೆ ಹೋಲಿಸಿದರೆ ಇತ್ತೀಚೆಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಜತೆಗೆ ಫಾಸ್ಟ್‌ಫುಡ್ ಸಂಸ್ಕೃತಿ ಹೆಚ್ಚಾಗಿರುವುದರಿಂದ ತ್ಯಾಜ್ಯ ಹೆಚ್ಚಿನ ರೀತಿಯಲ್ಲಿ ಸಂಗ್ರಹವಾಗುತ್ತಿದೆ. ಆದರೆ ಅದನ್ನು ಬೆಳ್ಳಂಬೆಳಗ್ಗೆ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ.

How Mysuru won Swachh Bharat Clean City abhiyan

ಶೂನ್ಯ ಕಸವಿಲೇವಾರಿ ಘಟಕ

ನಗರದ 9 ವಲಯಗಳಲ್ಲಿಯೂ ಶೂನ್ಯ ಕಸ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲಾಗಿದೆ. ಕುಂಬಾರಕೊಪ್ಪಲಿನ ಘಟಕದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ನಡೆಯುತ್ತಿದೆ. ಇಲ್ಲಿ ಪ್ರತಿದಿನ ಮನೆಗಳಿಂದ ಕಸ ಸಂಗ್ರಹ ಮಾಡಿ ಅದನ್ನು ವಿಲೇವಾರಿ ಮಾಡಲಾಗುತ್ತಿದೆ. ಜತೆಗೆ ಹಸಿ ಹಾಗೂ ಘನ ಕಸವನ್ನಾಗಿ ಬೇರ್ಪಡಿಸಲಾಗುತ್ತಿದೆ. ಕೊಳೆಯದ ಕಸವನ್ನು ಮತ್ತೆ ಸುಮಾರು 25 ರೀತಿ ವಿಂಗಡಿಸಿ ಪುನರ್ ಬಳಕೆ ಘಟಕಕ್ಕೆ ಕಳುಹಿಸಿಕೊಡಲಾಗುತ್ತಿದೆ. ಕೊಳೆಯುವ ಕಸವನ್ನು ಸಾವಯವ ಗೊಬ್ಬರ ಮಾಡಿ ನೇರವಾಗಿ ರೈತರಿಗೆ ನೀಡಲಾಗುತ್ತಿದೆ.

How Mysuru won Swachh Bharat Clean City abhiyan

ಸ್ವಚ್ಛತೆಯಲ್ಲಿ 1249 ಅಂಕಗಳು

ಕಸವಿಲೇವಾರಿ ಸಮಸ್ಯೆ ಪೂರ್ಣವಾಗಿ ಬಗೆಹರಿದಿಲ್ಲ. ಇಲ್ಲಿಯೂ ಸಮಸ್ಯೆಗಳಿವೆ. ಆದರೆ ಮುಂದೆ ಹಂತ ಹಂತವಾಗಿ ಪೂರ್ಣ ಯಶಸ್ಸು ಸಾಧ್ಯವಾಗಬಹುದೇನೋ? ಏಕೆಂದರೆ ಸ್ವಚ್ಛತೆಯಲ್ಲಿ ವಿಚಾರದಲ್ಲಿ ನೀಡಲಾಗುವ 2000 ಅಂಕಗಳಲ್ಲಿ ಮೈಸೂರು 1249 ಅಂಕಗಳನ್ನಷ್ಟೆ ಪಡೆದಿರುವುದು. ಇದರಿಂದ ಸಾಧಿಸಲು ಇನ್ನೂ ಬಾಕಿ ಇದೆ ಎಂಬುದು ಅರಿವಾಗುತ್ತದೆ.

ನವದೆಹಲಿಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರಿಂದ ಪ್ರಶಸ್ತಿ ಸ್ವೀಕರಿಸಿರುವ ಮೈಸೂರು ನಗರಪಾಲಿಕೆಯ ಮೇಯರ್ ಭೈರಪ್ಪ ಹಾಗೂ ಆಯುಕ್ತ ಡಾ.ಸಿ.ಜಿ.ಬೆಟಸೂರ್‌ಮಠ್ ಅವರ ಮುಖದಲ್ಲಿ ತೃಪ್ತಿಯ ಮಂದಹಾಸವಿದೆ. ಅಷ್ಟೇ ಅಲ್ಲ ಈ ಪಟ್ಟವನ್ನು ಖಾಯಂ ಆಗಿ ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ.

ಸ್ವಚ್ಛ ಭಾರತ್ ಅಭಿಯಾನಕ್ಕೆ ಟೊಂಕಕಟ್ಟಿ ನಿಂತ ಮೈಸೂರಿನ ಸಂಘ-ಸಂಸ್ಥೆಗಳ ಸ್ವಯಂಸೇವಕರು, ಪೌರಕಾರ್ಮಿಕರು ಹಾಗೂ ಚುನಾಯಿತ ಪ್ರತಿನಿಧಿಗಳ ಕಾಳಜಿಯಿಂದ ಪ್ರಶಸ್ತಿ ದಕ್ಕಿದೆ ಎಂದು ಪಾಲಿಕೆ ಆಯುಕ್ತ ಡಾ. ಸಿ.ಜಿ. ಬೆಟಸೂರ್‌ಮಠ್ ಹೇಳಿದ್ದಾರೆ.

Yaduveer Urs

ಯುವರಾಜ ಯದುವೀರರ ಮೆಚ್ಚುಗೆ

ಮೈಸೂರಿನ ಸ್ವಚ್ಛತಾ ಅಭಿಯಾನದ ರಾಯಭಾರಿ ಮೈಸೂರು ರಾಜವಂಶಸ್ಥ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಾನು ಈ ಅಭಿಯಾನದಲ್ಲಿ ಭಾಗಿಯಾಗಿದ್ದಕ್ಕೆ ಖುಷಿಯಾಗಿದೆ. ಮುಂದಿನ ವರ್ಷವೂ ಇದರಲ್ಲಿ ಭಾಗಿಯಾಗುತ್ತೇನೆ. ಸ್ವಚ್ಛತಾ ಅಭಿಯಾನದಲ್ಲಿ ಯುವಕರು ವಹಿಸುತ್ತಿರುವ ಪಾತ್ರ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ನಗರಪಾಲಿಕೆ ಎದುರು ಜಮಾಯಿಸಿ ಸಿಹಿ ವಿತರಣೆ ಮಾಡಿ ಸಂಭ್ರಮ ಆಚರಿಸಿದ್ದಾರೆ.

English summary
How Mysuru, the cultural capital of Karnataka, has been selected as cleanest city of India, under Swachh Bharat Clean City abhiyan? Mysore city corporation, municipality workers, mayor, NGOs have put in lot of effort to keep Mysuru clean. Congratulations to Mysureans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X