• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಲಿ ಟೂರಿಸಂಗೆ ಆಕ್ಷೇಪ: ಮರಗಳನ್ನು ಉಳಿಸಲು ಅಭಿಯಾನ

By C. Dinesh
|

ಮೈಸೂರು, ಏಪ್ರಿಲ್ 07; ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಿಸಬೇಕೆಂಬ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಉದ್ದೇಶದಿಂದ ಹೆಲಿ ಟೂರಿಸಂ ಆರಂಭಿಸುವ ನಿರ್ಧಾರ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಸೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ನಾಡಹಬ್ಬ ದಸರಾ ಮಹೋತ್ಸವ, ವಿಶ್ವವಿಖ್ಯಾತ ಮೈಸೂರು ಅರಮನೆ ಸೇರಿ ಹತ್ತಾರು ಆಕರ್ಷಣೆಯಿಂದ ಕೂಡಿರುವ ಮಲ್ಲಿಗೆ ನಗರಿ ವರ್ಷವಿಡಿ ಪ್ರವಾಸಿಗರನ್ನು ಸೆಳೆಯುತ್ತಿರುತ್ತದೆ.

ಮೈಸೂರಿಗೆ ಶೀಘ್ರವೇ ಬರಲಿದೆ ಹೆಲಿ ಟೂರಿಸಂ

ಈ ಆಕರ್ಷಣೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದ ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ ಮೈಸೂರಿನಲ್ಲಿ ಹೆಲಿ ಟೂರಿಸಂ ಆರಂಭಿಸಲು ಮುಂದಾಗಿದ್ದರು. ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಾಲೋಚನೆ ನಡೆಸಿದ್ದರು.

ಮೈಸೂರು, ಮಡಿಕೇರಿಗೂ ಹಾರಲಿದೆ ಹೆಲಿ ಟ್ಯಾಕ್ಸಿ!

ನಗರದ ಚಾಮುಂಡಿಬೆಟ್ಟದ ತಪ್ಪಲಿನ ಲಲಿತ ಮಹಲ್‌ ಹೆಲಿಪ್ಯಾಡ್‌ ಸುತ್ತಮುತ್ತಲಿನ ಸ್ಥಳದಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ಸ್ಥಳ ನಿಗದಿ ಮಾಡಿದ್ದರು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು ಸದರಿ ಜಾಗದಲ್ಲಿರುವ ಕೆಲವು ಮರಗಳನ್ನು ಕಡಿಯಲು ಗುರುತು ಹಾಕಿದ್ದಾರೆ.

ಕೇಂದ್ರೀಕೃತ ಪ್ರವಾಸೋದ್ಯಮ ತಾಣವಾಗಿ ಮೈಸೂರು ಜಿಲ್ಲೆ!

ಮರಗಳನ್ನು ಕಡಿಯಲು ವಿರೋಧ

ಮರಗಳನ್ನು ಕಡಿಯಲು ವಿರೋಧ

ಸಚಿವ ಸಿ. ಪಿ. ಯೋಗೇಶ್ವರ ನಿರ್ಧಾರಕ್ಕೆ ಇದೀಗ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಲಿತ ಮಹಲ್‌ ಹೆಲಿಪ್ಯಾಡ್‌ ಸುತ್ತಮುತ್ತಲಿನ ಸ್ಥಳದಲ್ಲಿ ಹೆಲಿ ಟೂರಿಸಂ ಆರಂಭಿಸಲು ಮರಗಳನ್ನು ಕಡಿಯಬೇಕಾಗುತ್ತದೆ. ಕಡಿಯಲು ಹಲವಾರು ಮರಗಳನ್ನು ಗುರುತು ಮಾಡಲಾಗಿದೆ. ಪರಿಸರ ಪ್ರೇಮಿಗಳು ಗುರುತು ಮಾಡಿದ್ದ ಭಾಗಕ್ಕೆ ಮಸಿ ಬಳಿಯುವ ಮೂಲಕ ಮರಗಳನ್ನು ಕಡಿಯಲು ವಿರೋಧ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವುದಕ್ಕೆ ನಮ್ಮ ವಿರೋಧವಿದೆ. ಸಾವಿರಾರು ಮರಗಳನ್ನು ಹನನ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಪರಿಸರ ಪ್ರೇಮಿಗಳು, ಕೆಡವಲು ಗುರುತು ಮಾಡಿದ್ದ ಮರಗಳಿಗೆ ಮಸಿ ಬಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಆನ್‌ಲೈನ್‌ ಸಹಿ ಸಂಗ್ರಹ

ಆನ್‌ಲೈನ್‌ ಸಹಿ ಸಂಗ್ರಹ

ಲಲಿತ ಮಹಲ್‌ ಹೆಲಿಪ್ಯಾಡ್‌ ವ್ಯಾಪ್ತಿಯಲ್ಲಿ ಮರಗಳನ್ನು ಕಡಿದು ಹೆಲಿ ಟೂರಿಸಂ ಆರಂಭಿಸುವ ನಿರ್ಧಾರವನ್ನು ವಿರೋಧಿಸಿ ಪರಿಸರ ಪ್ರೇಮಿಗಳು, ಆನ್ ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಅಭಿಯಾನಕ್ಕೆ ಹಲವರು ಕೈಜೋಡಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರ ನಾಶಗೊಳಿಸಿ ಹೆಲಿ ಟೂರಿಸಂ ಮಾಡುವುದನ್ನು ತೀವ್ರ ವಿರೋಧ ವ್ಯಕ್ತಪಡಿಸಿರುವ ಪರಿಸರ ಪ್ರೇಮಿ ಭಾನುಮೋಹನ್, ಈ ಸಂಬಂಧ ರಾಷ್ಟ್ರಪತಿಗಳಿಗೂ ಪತ್ರ ಬರೆದಿದ್ದಾರೆ. ಪರಿಸರ ನಾಶ ಮಾಡಿ ಪ್ರವಾಸೋದ್ಯಮ ಮಾಡುವುದು ಬೇಡ. ಮೊದಲು ಪರಿಸರ ಉಳಿಸಿ. ಪರಿಸರ ಇದ್ದರೆ ಜನ ಬದುಕಲು ಸಾಧ್ಯ. ಹೀಗಾಗಿ ವಸ್ತು ಪ್ರದರ್ಶನದ ಆವರಣ, ಮಂಡಕಳ್ಳಿ ವಿಮಾನ ನಿಲ್ದಾಣ ಸೇರಿದಂತೆ ಪರ್ಯಾಯ ಸ್ಥಳದಲ್ಲಿ ಹೆಲಿಟೂರಿಸಂ ಮಾಡುವಂತೆ ಒತ್ತಾಯಿಸಿದ್ದಾರೆ.

ಹೆಲಿ ಟೂರಿಸಂ ಅವಶ್ಯಕ

ಹೆಲಿ ಟೂರಿಸಂ ಅವಶ್ಯಕ

ಒಂದೆಡೆ ಮರಗಳ ಕಡಿದು ಮಾಡಿ ಹೆಲಿ ಟೂರಿಸಂ ಪ್ರಾರಂಭಿಸಲು ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಾಜಿ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ, "ಮೈಸೂರಿಗೆ ಹೆಲಿಟೂರಿಸಂ ಅವಶ್ಯಕತೆ ಇದ್ದು, ಅದನ್ನು ವಿರೋಧಿಸಿ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಮಾಡುತ್ತಿರುವುದು ದುರಾದೃಷ್ಟಕರ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಹೆಲಿ ಟೂರಿಸಂ ಆರಂಭವಾದರೆ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಉತ್ತಮ ಪರಿಸರವೂ ಜೀವನಾಡಿಗೆ ಮುಖ್ಯ, ಆದರೆ ಇದೇ ಉದ್ದೇಶದೊಂದಿಗೆ ಆಧುನಿಕತೆಯನ್ನು ಮರೆಯುವುದು ಸರಿಯಲ್ಲ. ನಗರದ ಲಲಿತಮಹಲ್‌ ಪಕ್ಕದ ಹೆಲಿಪ್ಯಾಡ್‌ ನೂರು ವರ್ಷಗಳ ಇತಿಹಾಸ ಹೊಂದಿದ್ದು, ಇಲ್ಲಿ ಹೆಲಿ ಟೂರಿಸಂ ಆರಂಭಕ್ಕೆ ವಿರೋಧಿಸುವುದು ಅಭಿವೃದ್ಧಿಯನ್ನು ವಿರೋಧಿಸಿದಂತೆ. ಹೀಗಾಗಿ ಪ್ರಜ್ಞಾವಂತ ನಾಗರಿಕರು ಹೆಲಿಟೂರಿಸಂಗೆ ಬೆಂಬಲ ನೀಡುವಂತೆ" ಮನವಿ ಮಾಡಿದ್ದಾರೆ.

ಮಾತನ್ನು ವಾಪಸ್‌ ಪಡೆಯಲಿ

ಮಾತನ್ನು ವಾಪಸ್‌ ಪಡೆಯಲಿ

ಸುಧಾಕರ್‌ ಶೆಟ್ಟಿ ಅವರ ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಪರಿಸರ ಪ್ರೇಮಿ ಭಾನುಮೋಹನ್‌, "ಲಲಿತ ಮಹಲ್ ಸಮೀಪದಲ್ಲೇ ಚಾಮುಂಡಿಬೆಟ್ಟ ಇದ್ದು, ಇಲ್ಲಿ ಹೆಲಿ ಟೂರಿಸಂ ಆರಂಭಿಸಿದರೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಪ್ರಾಣಿ ಪಕ್ಷಿಗಳಿಗೆ ತೊ೦ದರೆ ಆಗಲಿದೆ. ಹೀಗಾಗಿ ಈ ಸ್ಥಳವನ್ನು ಬಿಟ್ಟು ಬೇರೆ ಸ್ಥಳದಲ್ಲಿ ಹೆಲಿ ಟೂರಿಸಂ ಮಾಡಲಿ. ಅಲ್ಲದೇ ಲಲಿತ ಮಹಲ್ ಪಕ್ಕ ಖಾಲಿ ಜಾಗವಿದ್ದು, ಅಲ್ಲಿ ಮಾಡಬಹುದು ಎಂದಿರುವ ಸುಧಾಕರ ಶೆಟ್ಟಿ, ತಮ್ಮ ಮಾತು ವಾಪಸ್ಸು ಪಡೆಯಲಿ, ಅವರು ಹೇಳಿದರೆ ಖಾಲಿ ಜಾಗವಿದ್ದಲ್ಲಿ ಅಲ್ಲಿ ನಾವೇ ಸಸಿಗಳನ್ನು ನೆಟ್ಟು ಪರಿಸರ ಉಳಿಸುತ್ತೇವೆ" ಎಂದು ಹೇಳಿದ್ದಾರೆ.

English summary
People opposed for cutting of trees for heli tourism project at Mysuru Lalitha Mahal helipad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X