ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಹೊಳೆಯಲ್ಲಿ ಲಗಾಮು ಮುರಿದು ನಾಡಿಗೆ ಕಾಲಿಟ್ಟ ಕಾಡಾನೆಗಳು!

|
Google Oneindia Kannada News

ಮೈಸೂರು, ಸೆಪ್ಟೆಂಬರ್ 9: ನಾಗರಹೊಳೆಯಲ್ಲಿ ಅರಣ್ಯ ಇಲಾಖೆ ಹಾಕಿದ ಲಗಾಮನ್ನು ಮುರಿಯುತ್ತಿರುವ ಕಾಡಾನೆಗಳು ನೇರವಾಗಿ ನಾಡಿಗೆ ಬಂದು ರೈತರ ಜಮೀನಿಗೆ ಲಗ್ಗೆಯಿಡುತ್ತಿವೆ. ಪರಿಣಾಮ ಕಷ್ಟಪಟ್ಟು ಬೆಳೆ ಬೆಳೆದ ರೈತರು ಎಲ್ಲ ಬೆಳೆಯನ್ನು ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಹಲವು ವರ್ಷಗಳಿಂದ ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ, ಅದೆಲ್ಲವೂ ಕ್ರಮೇಣ ವಿಫಲವಾಗುತ್ತಿರುವುದರಿಂದ ಶಾಶ್ವತ ಪರಿಹಾರ ಸಿಗದೆ ಜನ ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ಜನ ಕಾಡಾನೆಗಳ ಕಾಟದಿಂದ ಮುಕ್ತಿ ಪಡೆಯುವುದು ಕನಸಿನ ಮಾತಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ಮೇಲಿಂದ ಮೇಲೆ ಕಾಡಾನೆಗಳು ನಾಡಿಗೆ ಲಗ್ಗೆಯಿಟ್ಟು ರೈತರು ಬೆಳೆದಿದ್ದ ಬೆಳೆಯನ್ನೆಲ್ಲ ತಿಂದು, ತುಳಿದು ನಾಶ ಮಾಡುತ್ತಿರುವುದು ಹೊಸತೇನಲ್ಲ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಹೀಗಾಗಿ ಕಾಡಾನೆಯ ಹಾವಳಿ ತಪ್ಪಿಸಲು ಸರ್ಕಾರ ಮೊದಲಿಗೆ ಆನೆ ಕಂದಕ ನಿರ್ಮಾಣ ಮಾಡಿತ್ತು. ಒಂದಷ್ಟು ದಿನಗಳ ಕಾಲ ಕಾಡಾನೆಗಳು ಕಂದಕ ದಾಟಲು ಹಿಂದೇಟು ಹಾಕಿದವು. ಬಳಿಕ ಬುದ್ದಿವಂತ ಆನೆಗಳು ಉಪಾಯ ಹೂಡಿದವು ಅದೇನೆಂದರೆ ಕಂದಕಕ್ಕೆ ಮಣ್ಣು ತಳ್ಳಿ ಸಮತಟ್ಟು ಮಾಡಿಕೊಂಡು ಹೊರಗಡೆ ದಾಟಲು ಆರಂಭಿಸಿದವು. ಜತೆಗೆ ಸಕಾಲದಲ್ಲಿ ಕಂದಕಗಳ ನಿರ್ವಹಣೆ ಮಾಡದ ಕಾರಣದಿಂದ ಅಲ್ಲಲ್ಲಿ ಕಂದಕಗಳು ಕುಸಿಯಲಾರಂಭಿಸಿದವು. ಅದನ್ನು ದುರಸ್ತಿ ಮಾಡದ ಕಾರಣ ಕಾಡಾನೆಗಳು ಹೊರಗೆ ಬರಲು ಈ ಕಂದಕಗಳೇ ರಾಜಮಾರ್ಗಗಳಾದವು.

 ಸೋಲಾರ್ ಬೇಲಿಗೂ ಜಗ್ಗದ ಕಾಡಾನೆಗಳು

ಸೋಲಾರ್ ಬೇಲಿಗೂ ಜಗ್ಗದ ಕಾಡಾನೆಗಳು

ಈ ನಡುವೆ ಆನೆ ಕಂದಕದ ಯೋಜನೆ ವಿಫಲವಾದಾಗ ಪಕ್ಕದಲ್ಲಿ ಸೋಲಾರ್ ಬೇಲಿಯನ್ನು ಅರಣ್ಯ ಇಲಾಖೆ ಅಳವಡಿಸಿತು. ಇದು ಕೂಡ ಹೆಚ್ಚು ದಿನ ನಡೆಯಲಿಲ್ಲ. ಕ್ರಮೇಣ ಕಾಡಾನೆಗಳು ಸೋಲಾರ್ ಬೇಲಿಗೆ ಒಣ ಮರಗಳನ್ನು ತಂದು ಅದರ ಮೇಲೆ ಹಾಕಿ ಬೇಲಿಯನ್ನು ಮುರಿದು ದಾಟಲು ಮುಂದಾದವು. ಪರಿಣಾಮ ಅರಣ್ಯ ಇಲಾಖೆಗೆ ಮತ್ತಷ್ಟು ಒತ್ತಡ ಹೆಚ್ಚಾಯಿತು. ಹೊಸ ಯೋಜನೆಗಳನ್ನು ಹುಡುಕಲು ಇಲಾಖೆ ಪ್ರಾರಂಭಿಸಿತು. ಆಗ ಸರ್ಕಾರ ಆಫ್ರಿಕಾ ಮಾದರಿಯಲ್ಲಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸುವ ಸಲಹೆ ನೀಡಿತು. ಈ ಯೋಜನೆ ಅರಣ್ಯ ಇಲಾಖೆಗೂ ಸರಿ ಎನಿಸಿತು. ಹಾಗಾಗಿ ಆಫ್ರಿಕಾಕ್ಕೆ ನುರಿತ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಲಾಯಿತು.

ಗಣೇಶ ಹಬ್ಬದ ವಿಶೇಷ: ಕಡಲೆ ಹಿಟ್ಟಿನ ಗೌರಮ್ಮ ಸ್ವರ್ಣ ಗೌರಿಯಾದ ಕಥೆ!ಗಣೇಶ ಹಬ್ಬದ ವಿಶೇಷ: ಕಡಲೆ ಹಿಟ್ಟಿನ ಗೌರಮ್ಮ ಸ್ವರ್ಣ ಗೌರಿಯಾದ ಕಥೆ!

 ಕಾಡಾನೆಗಳು ನಾಡಿಗೆ ಬರುವುದು ತಪ್ಪಲಿಲ್ಲ

ಕಾಡಾನೆಗಳು ನಾಡಿಗೆ ಬರುವುದು ತಪ್ಪಲಿಲ್ಲ

ಈ ಬಗ್ಗೆ ಅಧ್ಯಯನ ಮಾಡಿ ಬಂದ ತಂಡ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳ ಸುತ್ತ ರೈಲ್ವೆ ಬೇಲಿ ನಿರ್ಮಿಸಲು ಸಲಹೆ ನೀಡಿತು. ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಬಜೆಟ್‌ನಲ್ಲಿ ಘೋಷಿಸಲಾಯಿತಲ್ಲದೆ, ಕಾಮಗಾರಿ ಪ್ರಾರಂಭಿಸಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸಲಾಯಿತು. ಇದರ ಬಗ್ಗೆ ತಿಳಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ರೈತರು ಮತ್ತು ಗ್ರಾಮಸ್ಥರು ನೆಮ್ಮದಿಯುಸಿರು ಬಿಟ್ಟರು.

ಈ ನೆಮ್ಮದಿ ಹೆಚ್ಚು ದಿನ ಉಳಿಯಲೇ ಇಲ್ಲ. ಒಂದೆರಡು ವರ್ಷದ ಬಳಿಕ ಆನೆಗಳು ರೈಲ್ವೆ ಕಂಬಿಗಳ ಬೇಲಿಯನ್ನು ದಾಟಲು ಪ್ರಾರಂಭಿಸಿದೆವು. ತದ ನಂತರದಲ್ಲಿ ಅರಣ್ಯ ಇಲಾಖೆ ಟೆಂಟ್ ಕಲ್ ಅಂದರೆ (ರೈಲ್ವೆ ಕಂಬಿಗಳ ಬೇಲಿಯ ಮೇಲೆ ಆನೆಗಳು ನೆಗೆಯದಂತೆ ಸೋಲಾರ್ ತಂತಿ)ಯನ್ನು ಸಹ ಹಾಕಿಸಿದರು. ಅದು ಕೂಡ ಪ್ರಯೋಜನಕ್ಕೆ ಬರಲಿಲ್ಲ. ಇದೀಗ ಕಾಡಾನೆಗಳು ರೈಲ್ವೆ ಕಂಬಿಯನ್ನು ಮುರಿದು ಆಗಾಗ್ಗೆ ನಾಡಿಗೆ ಬರಲಾರಂಭಿಸಿವೆ.

 ಬೆಳೆಯು ಹುಲುಸಾಗಿ ಬಂದಿದೆ

ಬೆಳೆಯು ಹುಲುಸಾಗಿ ಬಂದಿದೆ

ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದು, ಬೆಳೆಯು ಹುಲುಸಾಗಿ ಬಂದಿದೆ. ಪೆಂಜಳ್ಳಿ, ಗುರುಪುರ, ಭರತವಾಡಿ, ವೀರನಹೊಸಹಳ್ಳಿ, ಬಿಲ್ಲನ ಹೊಸಹಳ್ಳಿ, ಅಗಸನಹುಂಡಿ, ರಾಜೇಗೌಡನಹುಂಡಿ, ಅಣ್ಣೂರು, ಮೇಟಿಕುಪ್ಪೆ ಈ ಗ್ರಾಮಗಳಿಗೊಂದು ಸುತ್ತು ಹೊಡೆದರೆ ರೈತರು ಬೆಳೆದ ಬೆಳೆ ಆಶಾಭಾವನೆ ಹುಟ್ಟಿಸುತ್ತಿದೆ. ಆದರೆ ಇದೇ ಸಮಯದಲ್ಲಿ ಆನೆಗಳ ಉಪಟಳವೂ ಹೆಚ್ಚಾಗುತ್ತಿದೆ. ನೇರವಾಗಿ ಜಮೀನಿಗೆ ನುಗ್ಗಿ ಜೋಳ, ಬಾಳೆ, ಹತ್ತಿ, ರಾಗಿ ಬೆಳೆಗಳನ್ನು ತಿಂದು, ತುಳಿದು ಹಾಕುತ್ತಿವೆ.

 ಜಮೀನಲ್ಲಿ ಕೆಲಸ ಮಾಡಲು ಭಯ

ಜಮೀನಲ್ಲಿ ಕೆಲಸ ಮಾಡಲು ಭಯ

ಅರಣ್ಯ ಇಲಾಖೆಗೆ ಬೆಳೆ ಪರಿಹಾರದ ಅರ್ಜಿಗಳು ತುಂಬಾ ಕಡಿಮೆಯಾಗಿದ್ದವು. ಆದರೆ 2019ರಿಂದ 20-21ನೇ ಸಾಲಿನವರೆಗೆ ಸುಮಾರು 400 ಅರ್ಜಿಗಳು ಬಂದಿದ್ದು, 30 ಲಕ್ಷದಷ್ಟು ಪರಿಹಾರ ಕೊಡಲಾಗಿದೆ. ಕಳೆದೊಂದು ವಾರದಿಂದ ಆನೆಗಳು ಗುರುಪುರ ಟಿಬೆಟ್ ಕ್ಯಾಂಪ್ ಪೆಂಜಹಳ್ಳಿ ಹತ್ತಿರ ಹಗಲು ಸಮಯದಲ್ಲಿಯೇ ಬರುತ್ತಿವೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಕಾರ್ಯ ನಡೆಸಲು ಭಯಪಡುತ್ತಿದ್ದಾರೆ.
ಇನ್ನು ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಮಾತ್ರವಲ್ಲದೆ ಚಿರತೆ, ಹುಲಿಗಳ ಭಯವೂ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಕಾಡುತ್ತಿದೆ. ಅರಣ್ಯ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Forest bordering villages of the Nagarahole National Park, wild forest elephants destroyed crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X