ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್.ಡಿ. ಕೋಟೆಯ ಅಂತರಸಂತೆಯಲ್ಲಿ ಹುಲಿಗಾಗಿ ಹುಡುಕಾಟ!

|
Google Oneindia Kannada News

ಮೈಸೂರು, ಜನವರಿ 6: ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹುಲಿಗಳ ಉಪಟಳವನ್ನು ಜನ ಅನುಭವಿಸುತ್ತಲೇ ಬರುತ್ತಿದ್ದು, ಇದೀಗ ತಾಲೂಕಿನ ಅಂತರಸಂತೆ ಸುತ್ತಮುತ್ತ ಹುಲಿಯೊಂದು ಕಾಣಿಸಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ಎಚ್.ಡಿ. ಕೋಟೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳು ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಗಳಿಗೆ ಹತ್ತಿರವಾಗಿರುವುದರಿಂದ ಅರಣ್ಯದಿಂದ ಆಗಾಗ್ಗೆ ಬರುವ ಹುಲಿಗಳು ಜನ- ಜಾನುವಾರುಗಳ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಇವುಗಳನ್ನು ಸೆರೆಹಿಡಿದು ಮತ್ತೆ ಅರಣ್ಯಕ್ಕೆ ಬಿಡುವುದೇ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ರೈತರ ಜಾನುವಾರುಗಳನ್ನು ತಿಂದು ಹಾಕುತ್ತಿರುವ ಹುಲಿ
ಪ್ರಾಕೃತಿಕವಾಗಿ ಸಂಪದ್ಭರಿತವಾಗಿದ್ದರೂ ಎಚ್.ಡಿ. ಕೋಟೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜತೆಗೆ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಲವರು ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಅದರಲ್ಲೂ ಅರಣ್ಯದಂಚಿನಲ್ಲಿ ಜಮೀನು ಹೊಂದಿ ತಲತಲಾಂತರದಿಂದ ಕೃಷಿ ಮಾಡುತ್ತಾ ಬಂದಿರುವ ಕೃಷಿಕರು ಭಯದಲ್ಲಿಯೇ ಬದುಕುವಂತಾಗಿದೆ.

Forest Department Search for Tiger at Antarasante in HD Taluk

ಕಾಡಾನೆ, ಚಿರತೆ, ಕಾಡುಹಂದಿ, ಕೋತಿಗಳು ಹೀಗೆ ಹಲವು ವನ್ಯಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಬೆಳೆಯನ್ನು ಹಾಗೂ ಜಾನುವಾರುಗಳನ್ನು ಕೊಂದು ಹಾಕುತ್ತಿವೆ. ಎಲ್ಲವನ್ನು ನಿಭಾಯಿಸಿ ಬೆಳೆ ಬೆಳೆಯುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಆದರೆ ಕೃಷಿಯನ್ನೇ ನಂಬಿ ಬದುಕುತ್ತಿರುವ ಹಲವು ಕುಟುಂಬಗಳು ಕಷ್ಟನಷ್ಟಗಳನ್ನು ಅನುಭವಿಸಿಕೊಂಡು ಜೀವನ ಮಾಡುತ್ತಾ ಬರುತ್ತಿದ್ದಾರೆ. ಈ ನಡುವೆ ಯಾವುದೇ ಕಾಡುಪ್ರಾಣಿಗಳ ತೊಂದರೆಯಿಲ್ಲದೆ ನೆಮ್ಮದಿಯಾಗಿದ್ದೇವೆ ಎಂದು ಯೋಚಿಸುತ್ತಿರುವಾಗಲೇ ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಹುಲಿಯೊಂದು ಅಡ್ಡಾಡುತ್ತಿದ್ದು, ರೈತರ ಜಾನುವಾರುಗಳನ್ನು ತಿಂದು ಹಾಕುತ್ತಿದೆ. ಇದು ಯಾವಾಗ ಯಾವ ಗ್ರಾಮದತ್ತ ಮುಖ ಮಾಡುತ್ತದೆ ಎಂಬುದು ಗೊತ್ತಾಗದ ಕಾರಣ ಈ ವ್ಯಾಪ್ತಿಯ ಜನ ಜೀವ ಕೈಯ್ಯಲ್ಲಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Forest Department Search for Tiger at Antarasante in HD Taluk

ಜಾನುವಾರುಗಳನ್ನು ಕಾಯುತ್ತಿರುವ ರೈತರು
ಈಗಾಗಲೇ ಅಂತರಸಂತೆ ಗ್ರಾಮದ ಗೋವಿಂದರಾಜು ಎಂಬುವವರ ಜಾನುವಾರನ್ನು ತಿಂದು ಹಾಕಿದೆ. ಈ ಹುಲಿಯನ್ನು ಕುರಿ ಕಾಯುತ್ತಿದ್ದ ಮಹಿಳೆಯೊಬ್ಬರು ಸೇರಿದಂತೆ ಗ್ರಾಮದ ಕೆಲವರು ನೋಡಿರುವುದಾಗಿ ಹೇಳುತ್ತಿದ್ದು, ಸದ್ಯ ಗ್ರಾಮಸ್ಥರು ಭಯದಲ್ಲಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಹುಲಿ ಇರುವುದು ಖಚಿತವಾಗಿರುವ ಹಿನ್ನಲೆಯಲ್ಲಿ ಬೋನ್ ಇರಿಸಿ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಹುಲಿ ಮಾತ್ರ ಬೋನಿನತ್ತ ಬಾರದೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ.

ಕೆಲ ದಿನದ ಹಿಂದೆ ಜಾನುವಾರುವೊಂದನ್ನು ಬೇಟೆಯಾಡಿದ ಸ್ಥಳದಲ್ಲಿ ಬೋನಿರಿಸಿ ಕಾರ್ಯಾಚರಣೆ ನಡೆಸಿದರೂ ಹುಲಿ ಮಾತ್ರ ಬೋನಿನತ್ತ ಸುಳಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಸಾಕಾನೆಗಳಾದ ಮಹೇಂದ್ರ ಮತ್ತು ಅರ್ಜುನ ಸಾಕಾನೆಗಳನ್ನು ಕರೆಯಿಸಿ ಹುಲಿಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ಹುಲಿ ಮಾತ್ರ ತನ್ನ ಜಾಡನ್ನು ಬಿಟ್ಟುಕೊಡದಿರುವ ಕಾರಣದಿಂದ ಅರಣ್ಯ ಇಲಾಖೆ ಸರ್ವ ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇದೆ. ಹುಲಿಯ ಸುಳಿವು ಸಿಗದ ಕಾರಣದಿಂದ ಗ್ರಾಮಸ್ಥರು ಯಾವಾಗ ಕೊಟ್ಟಿಗೆಗೆ ನುಗ್ಗಿ ಬಿಡುತ್ತದೆಯೋ ಎಂಬ ಭಯದಲ್ಲಿಯೇ ಜಾನುವಾರುಗಳನ್ನು ಮತ್ತು ಮೇಕೆ, ಕುರಿಗಳನ್ನು ಕಾಯುವಂತಾಗಿದೆ.

Forest Department Search for Tiger at Antarasante in HD Taluk

ಹುಲಿ ಪತ್ತೆಗಾಗಿ ಸಿಸಿಟಿವಿ ಅಳವಡಿಕೆ
ಇನ್ನು ಹುಲಿಗಳು ಗ್ರಾಮಗಳಿಗೆ ಏಕೆ ಬರುತ್ತವೆ ಎಂಬುದನ್ನು ನೋಡುವುದಾದರೆ ಅರಣ್ಯದಂಚಿನಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಇವರು ಜೀವನೋಪಾಯಕ್ಕಾಗಿ ಕುರಿ- ಮೇಕೆ, ಜಾನುವಾರುಗಳನ್ನು ಸಾಕುತ್ತಿದ್ದು, ಇವುಗಳನ್ನು ಕಾಡಿನಂಚಿನಲ್ಲಿ ಮೇಯಿಸಲು ಹೊಡೆದುಕೊಂಡು ಹೋಗುತ್ತಿದ್ದು, ಅವುಗಳನ್ನು ಹುಡುಕಿಕೊಂಡು ಹುಲಿ, ಚಿರತೆಗಳು ಗ್ರಾಮದತ್ತ ಸುಳಿಯುತ್ತವೆ ಎನ್ನಲಾಗಿದೆ.

ಸದ್ಯ ಹುಲಿ ಕಾಣಿಸಿಕೊಂಡಿರುವ ಅಂತರಸಂತೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಸುಮಾರು 20 ಸಿಸಿಟಿವಿ ಕ್ಯಾಮೆರಾಗಳನ್ನು ಅರಣ್ಯ ಇಲಾಖೆ ಇರಿಸಿದ್ದು, ಆ ಮೂಲಕ ಹುಲಿಯ ಚಲನವಲನವನ್ನು ಗಮನಿಸಲಾಗುತ್ತಿದೆ. ಜತೆಗೆ ಅರಣ್ಯ ಇಲಾಖೆ ಧ್ವನಿವರ್ಧಕದ ಮೂಲಕ ಅಂತರಸಂತೆ, ನೂರಲಕುಪ್ಪೆ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲಿ ರೈತರು ಜಮೀನುಗಳಿಗೆ ಹೋಗದಂತೆ, ದನಕರುಗಳನ್ನು ಹೊರಗೆ ಬಿಡದಂತೆ ಪ್ರಚಾರ ಮಾಡಿದೆ.

ಹುಲಿ ಸೆರೆ ಯಾವಾಗ ಕಾದು ನೋಡಬೇಕು
ಬೋನಿಟ್ಟು ಹುಲಿ ಹಿಡಿಯುವ ಪ್ರಯತ್ನ ಸಫಲವಾಗದ ಕಾರಣದಿಂದ ಮಹೇಂದ್ರ ಮತ್ತು ಅರ್ಜುನ ಸಾಕಾನೆಗಳ ಸಹಾಯದಿಂದ ಹುಡುಕಾಟ ನಡೆಸಲಾಗುತ್ತಿದೆ. ತಕ್ಷಣಕ್ಕೆ ಹುಲಿಯ ಸುಳಿವು ಸಿಕ್ಕಿಲ್ಲವಾದರೂ ಅರಣ್ಯ ಅಧಿಕಾರಿಗಳು ಮಾತ್ರ ಕಾರ್ಯಾಚರಣೆ ಮುಂದುವರೆಸಿದ್ದು, ಹುಲಿಯ ಪತ್ತೆಕಾರ್ಯದಲ್ಲಿ ನಿರತರಾಗಿದ್ದಾರೆ.

ಈಗ ಈ ವ್ಯಾಪ್ತಿಯ ಗ್ರಾಮಸ್ಥರು ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಯಾವಾಗ ಹುಲಿಯನ್ನು ಸೆರೆ ಹಿಡಿಯುತ್ತಾರೆ ಎಂದು ಪ್ರತಿ ದಿನವೂ ಕಾಯುತ್ತಿದ್ದಾರೆ. ಆದರೆ ಹುಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿರುವ ತಂಡದ ಕಣ್ಣಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದೆ. ಮುಂದೆ ಏನಾಗುತ್ತದೆ ಕಾದು ನೋಡಬೇಕಾಗಿದೆ.

English summary
The Tiger appearance at Antarasante village of HD Kote taluk in Mysuru district, that is worried people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X