• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಸಂಕನಹಳ್ಳಿಯಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ..!

|

ಮೈಸೂರು, ಮಾರ್ಚ್ 5: ಪ್ರತಿ ಊರುಗಳಲ್ಲಿಯೂ ಒಂದೊಂದು ರೀತಿಯ ವಿಶೇಷತೆಗಳಿರುತ್ತವೆ. ಕೆಲವೊಂದು ಆ ಊರಿಗಷ್ಟೆ ಸೀಮಿತವಾಗಿರುತ್ತವೆಯಲ್ಲದೆ, ಅಲ್ಲಿನ ಆಚರಣೆಗಳನ್ನು ಜನ ತಪ್ಪದೆ ಪಾಲನೆ ಮಾಡುತ್ತಾ ಬರುತ್ತಿರುತ್ತಾರೆ. ಅದರಂತೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಂಕನಹಳ್ಳಿಯಲ್ಲಿ ಮಾಂಸಾಹಾರ ಸೇವನೆಯೇ ನಿಷಿದ್ಧವಾಗಿದೆ.

ಸಂಕನಹಳ್ಳಿಯು ಕೆ.ಆರ್.ನಗರ ತಾಲೂಕಿನ ಭೇರ್ಯ-ಸಾಲಿಗ್ರಾಮ ಮುಖ್ಯ ರಸ್ತೆಯ ಬಾಚಹಳ್ಳಿ ಗ್ರಾಮದಿಂದ 2 ಕಿಮೀ ಅಂತರದಲ್ಲಿದೆ. ಇತರೆ ಹಳ್ಳಿಗಳಲ್ಲಿ ಕೋಳಿಗಳ ಕೂಗೇ ಬೆಳಗ್ಗಿನ ಅಲರಾಂ ಎಂಬ ಮಾತಿದೆ. ಆದರೆ ಈ ಊರಿನಲ್ಲಿ ಬೆಳಗ್ಗಿನ ಅಲರಾಂ ಆಗಿ ಕೋಳಿಗಳು ಕೂಗುವುದಿಲ್ಲ ಎಂಬುದೇ ವಿಶೇಷ. ಇಲ್ಲಿ ಮಾಂಸಹಾರವೇ ನಿಷಿದ್ಧವಾಗಿರುವುದರಿಂದ ಕೋಳಿಗಳನ್ನು ಸಾಕುವ ಗೋಜಿಗೆ ಜನ ಹೋಗುವುದಿಲ್ಲ. ಹೀಗಾಗಿ ಕೋಳಿ ಕೂಗು ಕೇಳಿಸುವುದಿಲ್ಲ.

ಆರೋಗ್ಯಕರ ಬದುಕಿಗೆ ನಿದ್ದೆ ಅತಿಮುಖ್ಯ..!

ಮದ್ಯಕ್ಕೂ ಜನರಿಂದ ಬಹಿಷ್ಕಾರ

ಮದ್ಯಕ್ಕೂ ಜನರಿಂದ ಬಹಿಷ್ಕಾರ

ಇದಕ್ಕಿಂತ ಮುಖ್ಯವಾಗಿ ಸಂಕನಹಳ್ಳಿಯಲ್ಲಿ ಮದ್ಯಕ್ಕೂ ಬಹಿಷ್ಕಾರ ಹಾಕಿದ್ದಾರೆ. ಹಿಂದಿನ ಕಾಲದಲ್ಲಿ ಗ್ರಾಮಕ್ಕೆ ಒಂದೋ ಎರಡೋ ಸಾರಾಯಿ ಅಂಗಡಿಗಳು ಇರುತ್ತಿದ್ದವು. ಆದರೆ ಅವತ್ತಿನ ಕಾಲದಿಂದಲೇ ತಮ್ಮ ಊರಿಗೆ ಸಾರಾಯಿ ಅಂಗಡಿ ಬೇಡವೆಂದು ಪ್ರತಿಪಾದಿಸುತ್ತಾ ಬಂದವರು ಇಲ್ಲಿನವರು. ಹೀಗಾಗಿ ಇಲ್ಲಿ ಮದ್ಯಪಾನಕ್ಕೂ ಅವಕಾಶ ಮಾಡಿಕೊಡಲಾಗಿಲ್ಲ. ಗ್ರಾಮದ ಜನರ ಕಸುಬು ವ್ಯವಸಾಯವಾಗಿದ್ದು, ವಾಸಿಸುವ ಜನರೆಲ್ಲರೂ ಸಸ್ಯಹಾರಿಯಾಗಿರುವುದರಿಂದ ಮಾಂಸಹಾರ ಸೇವನೆ ನಿಷಿದ್ಧವಾಗಿದೆ ಎಂದು ಹೇಳಬಹುದು. ಆದರೆ ಹಿಂದಿನ ತಲೆಮಾರಿನಿಂದಲೂ ಇಲ್ಲಿ ಮಾಂಸಹಾರ ಸೇವಿಸುವುದಿಲ್ಲ. ಅದನ್ನು ಧಿಕ್ಕರಿಸಿ ಗ್ರಾಮದಲ್ಲಿ ಅಡುಗೆ ಮಾಡಿ ಸೇವಿಸಿದರೆ ಕೆಡುಕಾಗಿರುವ ನಿದರ್ಶನವನ್ನು ಜನ ನೀಡುತ್ತಾರೆ.

ಮಾಂಸ ಸೇವಿಸಿದ್ದಕ್ಕೆ ಕುದುರೆಗಳು ಸತ್ತವಂತೆ

ಮಾಂಸ ಸೇವಿಸಿದ್ದಕ್ಕೆ ಕುದುರೆಗಳು ಸತ್ತವಂತೆ

ಬಹಳಷ್ಟು ವರ್ಷಗಳ ಹಿಂದೆ ಗೊಂಬೆ ನಾಟಕವಾಡಿಸಲು ಬಂದಂತಹ ಕಲಾವಿದರು ಮಾಂಸಹಾರಿಗಳಾಗಿದ್ದು, ಊರಿನಿಂದ ಹೊರಗೆ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಗ್ರಾಮಕ್ಕೆ ಪ್ರವೇಶ ಮಾಡಿ ಗೊಂಬೆ ಆಡಿಸುತ್ತಿದ್ದರಂತೆ. ಒಮ್ಮೆ ಗ್ರಾಮದ ಜನಕ್ಕೆ ತಿಳಿಯದ ರೀತಿಯಲ್ಲಿ ಅವರು ಕದ್ದುಮುಚ್ಚಿ ಗ್ರಾಮದೊಳಗೆ ಮಾಂಸದ ಅಡುಗೆ ಮಾಡಿ ಊಟ ಮಾಡಿದ್ದರಂತೆ. ಆದರೆ ಆ ರಾತ್ರಿ ಕಳೆದು ಬೆಳಗಿನ ಹೊತ್ತಿಗೆ ಗೊಂಬೆ ಆಟ ಆಡಿಸುವವರ ಬಳಿಯಿದ್ದ ಮೂರು ಕುದುರೆಗಳು ಸಾವನ್ನಪ್ಪಿದ್ದವಂತೆ. ಇದೊಂದು ಕತೆಯಾಗಿ ಗ್ರಾಮದಲ್ಲಿ ಪ್ರಚಲಿತದಲ್ಲಿರುವುದರಿಂದ ಗ್ರಾಮದ ಒಳಿತಿಗಾಗಿ ಜನ ಹಿಂದಿನ ಸಂಪ್ರದಾಯವನ್ನೇ ಮುಂದುವರೆಸುತ್ತಿದ್ದಾರೆ.

ಗ್ರಾಮದ ಆರಾಧ್ಯದೈವ ಬಸವೇಶ್ವರ

ಗ್ರಾಮದ ಆರಾಧ್ಯದೈವ ಬಸವೇಶ್ವರ

ಗ್ರಾಮದ ಜನ ವ್ಯವಸಾಯ ಮಾಡುತ್ತಿದ್ದು, ತರಕಾರಿ, ಭತ್ತ, ರಾಗಿ, ಹೊಗೆಸೊಪ್ಪು ಬೆಳೆಯುತ್ತಾರೆ. ಜತೆಗೆ ಹಸು, ಎಮ್ಮೆ, ಕುರಿ, ಮೇಕೆಗಳನ್ನು ಸಾಕುತ್ತಾರೆ. ಸಂಕನಹಳ್ಳಿ ಗ್ರಾಮದ ಬಗ್ಗೆ ಹೇಳುವುದಾದರೆ ಇಲ್ಲಿನ ಬಸವೇಶ್ವರ ದೇಗುಲದಲ್ಲಿರುವ ನಂದಿಯು ಪರಶಿವನಿಂದ ಅನುಗ್ರಹ ಪಡೆದು ನೆಲೆಸಿದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಈ ದೇಗುಲದಲ್ಲಿರುವ ಬಸವೇಶ್ವರನಿಗೆ ಪ್ರತಿದಿನವೂ ತಪ್ಪದೆ ಪೂಜೆ ನಡೆಯುತ್ತಿದೆಯಲ್ಲದೆ, ಗ್ರಾಮದ ಜನರಿಗೆ ಬಸವೇಶ್ವರ ಆರಾಧ್ಯ ದೈವನಾಗಿದ್ದಾನೆ.

  ಉಚಿತವಾಗಿ ಕೊರೊನಾ ಲಸಿಕೆ ನೀಡಲು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಮನವಿ | Oneindia Kannada
  ದೇವರನ್ನು ತಂದು ಗ್ರಾಮದಲ್ಲಿ ಪೂಜೆ

  ದೇವರನ್ನು ತಂದು ಗ್ರಾಮದಲ್ಲಿ ಪೂಜೆ

  ಇಷ್ಟೇ ಅಲ್ಲದೆ, ಗ್ರಾಮದ ಒಳಿತಿಗಾಗಿ ಗ್ರಾಮಸ್ಥರು ಒಟ್ಟಾಗಿ ಸೇರಿ ಪ್ರತಿ ವರ್ಷವೂ ಬಂಡಿ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದ್ದು, ಈ ವೇಳೆ ಪಕ್ಕದ ಗ್ರಾಮವಾದ ಮೇಲೂರಿನಿಂದ ಶ್ರೀಶಂಭುಲಿಂಗೇಶ್ವರ ದೇವರನ್ನು ತಂದು ತಮ್ಮ ಊರಿನ ಮಧ್ಯಭಾಗದಲ್ಲಿರುವ ಕುರ್ಜಿನಲ್ಲಿ ಪ್ರತಿಷ್ಠಾಪಿಸಿ ಭಕ್ತಿಭಾವಗಳಿಂದ ಪೂಜಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

  ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮದ್ಯಪಾನವು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇತರೆ ಗ್ರಾಮಗಳಿಗೆ ಹೋಲಿಸಿದರೆ ಒಂದಷ್ಟು ವಿಶೇಷತೆಗಳು ಸಂಕನಹಳ್ಳಿಯಲ್ಲಿ ಕಂಡು ಬರುತ್ತಿರುವುದಂತು ಸತ್ಯ.

  English summary
  Flesh-feeding consumption is prohibited in Sankanahalli, KR Nagar Taluk in Mysore District.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X