ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುತ್ತೂರಲ್ಲಿ ಮನೆಮಾಡಿದ ಜಾತ್ರಾ ಸಂಭ್ರಮ!

By ಬಿ ಎಂ ಲವಕುಮಾರ್
|
Google Oneindia Kannada News

ಮೈಸೂರು, ಜನವರಿ 13: ಸುತ್ತೂರು ಜಾತ್ರೆ ಎಂದರೆ ಮೈಸೂರು ಮಾತ್ರವಲ್ಲದೆ ನಾಡಿನ ಹಲವು ಜನರ ಮೈಮನ ಪುಳಕಗೊಳ್ಳುತ್ತದೆ. ಇಲ್ಲಿನ ಜಾತ್ರೆಯ ಮಿಂದೆದ್ದ ಜನ ಇಲ್ಲಿನ ಸಂಭ್ರಮವನ್ನು ಮರೆಯುವ ಮಾತೇ ಇಲ್ಲ.

ಮೈಸೂರು ಜಿಲ್ಲೆಯಾದ್ಯಂತ ಹಲವು ಜಾತ್ರೆಗಳು ನಡೆಯುತ್ತವೆಯಾದರೂ ಸುತ್ತೂರಲ್ಲಿ ನಡೆಯುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆ ವಿಭಿನ್ನ ಹಾಗೂ ವಿಶಿಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆ ನೋಡಿದರೆ ಸುತ್ತೂರು ಕ್ಷೇತ್ರ ಮೈಸೂರಿಗೊಂದು ಮುಕುಟವಿದ್ದಂತೆ. ಆಧ್ಯಾತ್ಮ, ಶಿಕ್ಷಣ, ಸೇವೆ ಹೀಗೆ ಹತ್ತು ಹಲವು ವಿಚಾರಗಳಲ್ಲಿ ರಾಜ್ಯ, ದೇಶ ಮಾತ್ರವಲ್ಲದೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದೆ.

ಜ.13 ರಿಂದ ಸುತ್ತೂರಿನಲ್ಲಿ ಮೇಳೈಸಲಿದೆ ವೈಭವದ ಜಾತ್ರೆಜ.13 ರಿಂದ ಸುತ್ತೂರಿನಲ್ಲಿ ಮೇಳೈಸಲಿದೆ ವೈಭವದ ಜಾತ್ರೆ

ಇಲ್ಲಿ ವರ್ಷಕ್ಕೊಮ್ಮೆ ಆರು ದಿನಗಳ ಕಾಲ ನಡೆಯುವ ಜಾತ್ರೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಸಾರುತ್ತಿದೆ. ಇದು ಬರೀ ಜಾತ್ರೆಯಾಗಿರದೆ ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ ಮಹೋತ್ಸವಗಳ ಸಂಗಮವಾಗಿ, ಆಸ್ತಿಕ, ನಾಸ್ತಿಕರೆನ್ನದೆ, ಜಾತಿ, ಧರ್ಮ ಮೀರಿ ಎಲ್ಲರನ್ನೂ ಸೆಳೆಯುವ, ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರದರ್ಶನವಾಗಿ ಎಲ್ಲರ ಗಮನಸೆಳೆಯುತ್ತದೆ.

Five days Suttur mutt jatra begins today

ಜಾತ್ರೆ ನಡೆಯುವ ಸುತ್ತೂರು ಕ್ಷೇತ್ರವು ಕಪಿಲ ನದಿ ದಡದಲ್ಲಿ ನೆಲೆನಿಂತಿದ್ದು, ನಂಜನಗೂಡು ತಾಲೂಕಿಗೆ ಸೇರಿದೆ. ಇನ್ನು ಒಂದು ಸುತ್ತು ಹೊಡೆದು ಮುಗಿಸಿ ಬಿಡಬಹುದಾದ ಜಾತ್ರೆಯೂ ಇದಲ್ಲ. ಸುಮಾರು ಆರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕೃತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತ, ಯಕ್ಷಗಾನ, ಭಜನೆ ಹೀಗೆ ಒಂದೇ ಎರಡೇ ಹತ್ತಾರು ಕಾರ್ಯಕ್ರಮಗಳು ಜಾತ್ರೆಗೆ ಮೆರಗು ನೀಡುತ್ತವೆ.

ಈ ಬಾರಿ ಜ.13ರಿಂದ ಆರಂಭವಾಗಿರುವ ಜಾತ್ರೆ ಜ.18ರವರೆಗೆ ನಡೆಯಲಿದೆ. ಒಂದೊಂದು ದಿನವೂ ಒಂದೊಂದು ರೀತಿಯ ವಿಶೇಷತೆಯಿರುತ್ತದೆ. ಸುತ್ತೂರಿನ ಶ್ರೀಮಠದಿಂದ ಆದಿಜಗದ್ಗುರು ಶಿವಯೋಗಿಗಳ ಉತ್ಸವಮೂರ್ತಿಯನ್ನು ಕರ್ತೃಗದ್ದುಗೆಗೆ ತರುವುದರೊಂದಿಗೆ ಜಾತ್ರೆಗೆ ಚಾಲನೆ ದೊರೆತಿದೆ.

Five days Suttur mutt jatra begins today

ಜಾತ್ರೆಯ ಎರಡನೇ ದಿನ ಸಹಸ್ರಕುಂಭೋತ್ಸವ ನಡೆದರೆ, ಮೂರನೇ ದಿನದಂದು ಬೆಳಿಗ್ಗೆ ರಥೋತ್ಸವ ನಡೆಯುತ್ತದೆ. ನಾಲ್ಕನೇ ದಿನದಂದು ಸಂಜೆ ನಡೆಯುವ ಶ್ರೀ ಮಹದೇಶ್ವರ ಕೊಂಡೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಐದನೇ ದಿನ ರಾತ್ರಿ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವ, ಆರನೇ ದಿನ ಅನ್ನ ಬ್ರಹ್ಮೋತ್ಸವ, ಶ್ರೀ ವೀರಭದ್ರೇಶ್ವರ ಕೊಂಡೋತ್ಸವಗಳು ನಡೆಯುತ್ತವೆ. ಜಾತ್ರೆಯ ಸಂದರ್ಭ ನಡೆಯುವ ಕಲಾತಂಡಗಳ ಮೆರವಣಿಗೆ ಛತ್ರಿ, ಚಾಮರ, ಸೂರಾಪಾನಿ, ಗಾರುಡಿಗೊಂಬೆ, ಮರಗಾಲು ಕುಣಿತ, ನೃತ್ಯ, ವೀರಗಾಸೆ, ಡೊಳ್ಳು ಹಾಗೂ ಪೂಜಾ ಕುಣಿತ, ಕರಡಿ ಮೇಳ, ನಾದಸ್ವರ ಸೇರಿ ವಿವಿಧ ಜನಪದ ಕಲಾತಂಡಗಳೊಂದಿಗೆ ಸಾಗುತ್ತಿದ್ದರೆ ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತದೆ.

Five days Suttur mutt jatra begins today

ಇನ್ನು ಜಾತ್ರೆಯ ಸಂದರ್ಭ ಶ್ರೀ ಕ್ಷೇತ್ರದಲ್ಲಿರುವ ಕರ್ತೃಗದ್ದುಗೆ ಮತ್ತು ಪುರಾಣ ಪ್ರಸಿದ್ಧ ದೇವಾಲಯಗಳಾದ ಶ್ರೀ ಸೋಮೇಶ್ವರ, ಶ್ರೀ ಮಹದೇಶ್ವರ, ಶ್ರೀ ಶಂಕರನಾರಾಯಣ, ಶ್ರೀ ವೀರಭದ್ರೇಶ್ವರ, ಶ್ರೀ ನಾರಾಯಣಸ್ವಾಮಿ ದೇವಾಲಯಗಳಲ್ಲಿ ತ್ರಿಕಾಲ ಪೂಜೆ, ಮಹಾರುದ್ರಾಭಿಷೇಕ, ನವನೀತಾಲಂಕಾರ, ಹಸಿರುವಾಣಿ ಅಲಂಕಾರ ಹಾಗೂ ಗುರುಪರಂಪರೆಯ ಸಂಸ್ಮರಣೋತ್ಸವಗಳು ಕೂಡ ನಡೆಯುತ್ತವೆ.

ಜಾತ್ರೆಗೆ ಸುತ್ತಮುತ್ತಲಿನ ಜನ ಮಾತ್ರವಲ್ಲದೆ, ದೂರದೂರುಗಳಿಂದಲೂ ಬರುತ್ತಾರೆ. ಅಷ್ಟೇ ಅಲ್ಲದೆ ರಾಜ್ಯದ ಹಲವು ಮಠಗಳ ಮಠಾಧೀಶರು, ರಾಜಕೀಯ ನಾಯಕರು, ಸಾಹಿತಿಗಳು ಆಗಮಿಸಲಿದ್ದಾರೆ. ಜಾತ್ರೆಯ ಅಷ್ಟು ದಿನವೂ ದಾಸೋಹ ನಡೆಯಲಿದ್ದು ಜಾತ್ರೆಯ ಸಂಭ್ರಮದ ಹೊನಲು ಹರಿಯಲಿದೆ.

English summary
Five days Shivaratrishwara shivayogi jatra mahotsava begin Saturday in Suttur of Mysuru with various riligious and cultural program and thousands of devotees witnessed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X