• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು; ರೈಲ್ವೆ ನೌಕರಿ ನೆಪದಲ್ಲಿ ವಂಚನೆ, ಬಂಧನ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 27; ಉದ್ಯೋಗಾಂಕ್ಷಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಹಣವನ್ನು ಪಡೆದು ವಂಚಿಸುತ್ತಿದ್ದ ಕಿರಾತಕರಿಬ್ಬರು ಕೊನೆಗೂ ಜೈಲಿ ಸೇರಿದ್ದಾರೆ.

ಮೈಸೂರಿನ ಚಂದ್ರಗೌಡ ಎಸ್. ಪಾಟೀಲ್ (44) ಮತ್ತು ಗದಗ ಮೂಲದ ನಿವೃತ್ತ ರೈಲ್ವೆ ನೌಕರ ಶಿವಸ್ವಾಮಿ (62) ಬಂಧಿತರು. ಇವರು ನಕಲಿ ನೇಮಕಾತಿ ದಂಧೆ ನಡೆಸುವ ಮೂಲಕ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿಕೊಂಡು ಅಮಾಯಕರಿಗೆ ವಂಚಿಸಿದ್ದರು.

ನ. 1ರಿಂದ ವಿಜಯಪುರ-ಮಂಗಳೂರು ರೈಲು; ವೇಳಾಪಟ್ಟಿ ನ. 1ರಿಂದ ವಿಜಯಪುರ-ಮಂಗಳೂರು ರೈಲು; ವೇಳಾಪಟ್ಟಿ

ಇವರನ್ನು ನಂಬಿ ತಮಗೆ ರೈಲ್ವೆಯಲ್ಲಿ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಸಾಲ ಮಾಡಿ, ಆಸ್ತಿ ಮಾರಿ ಹಣ ತಂದು ಕೊಟ್ಟವರಿಗೆ ಹಣ ಪಡೆದು ನಾಮ ಹಾಕುವುದು ಇವರ ದಂಧೆಯಾಗಿತ್ತು. ಕೊನೆಗೂ ವಂಚಕರು ಪೊಲೀಸರ ಅತಿಥಿಯಾಗಿದ್ದು, ಇವರಿಬ್ಬರು ನಡೆಸಿದ ದಂಧೆಯ ಹಿಂದಿನ ರಹಸ್ಯಗಳು ಈಗ ಬಿಚ್ಚಿಕೊಳ್ಳುತ್ತಾ ಹೋಗುತ್ತಿವೆ.

ಎರಡು ಮಾರ್ಗದಲ್ಲಿ ಮೆಮು ರೈಲು ಓಡಿಸಲಿದೆ ನೈಋತ್ಯ ರೈಲ್ವೆ ಎರಡು ಮಾರ್ಗದಲ್ಲಿ ಮೆಮು ರೈಲು ಓಡಿಸಲಿದೆ ನೈಋತ್ಯ ರೈಲ್ವೆ

ಗೌಪ್ಯವಾಗಿ ಉಳಿದಿದ್ದ ದಂಧೆ; ಮೈಸೂರಿನ ಸಂರಕ್ಷಣಾ ದಳವು ತ್ವರಿತ ಮತ್ತು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ರೈಲ್ವೆಯಲ್ಲಿ ಯಾರಿಗೂ ಗೊತ್ತೇ ಆಗದಂತೆ ನಡೆಯುತ್ತಿದ್ದ ನಕಲಿ ನೇಮಕಾತಿಯ ದೊಡ್ಡ ದಂಧೆಯನ್ನು ಭೇದಿಸಿದೆ. ಇದರಿಂದ ಇದುವರೆಗೆ ಗೌಪ್ಯವಾಗಿ ಉಳಿದಿದ್ದ ದಂಧೆಯೊಂದು ಬಯಲಾಗಿದೆ.

ಯಶವಂತಪುರ-ತುಮಕೂರು ನಡುವೆ ಓಡಲಿವೆ ಹೆಚ್ಚುವರಿ ರೈಲು ಯಶವಂತಪುರ-ತುಮಕೂರು ನಡುವೆ ಓಡಲಿವೆ ಹೆಚ್ಚುವರಿ ರೈಲು

ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಗಳಾದ ಚಂದ್ರಗೌಡ ಎಸ್. ಪಾಟೀಲ್ ಮತ್ತು ಶಿವಸ್ವಾಮಿ ತಮ್ಮ ದಂಧೆಗಾಗಿ ಮೈಸೂರಿನ ಹೈವೇ ಸರ್ಕಲ್ ಬಳಿಯ ಶಿವ ಶಕ್ತಿ ಕಲ್ಯಾಣ ಮಂಟಪದ ಎದುರಿನ ಮನೆಯೊಂದನ್ನು ಬಳಸಿಕೊಂಡಿದ್ದರು.

ಅಲ್ಲಿಗೆ ಉದ್ಯೋಗಾಂಕ್ಷಿಗಳನ್ನು ಕರೆಯಿಸಿಕೊಂಡು ಅವರಿಗೆ ರೀಲ್ ಸುತ್ತಿ ಕೆಲಸ ನಿಮಗೆ ಎಂಬಂತೆ ನಂಬಿಕೆ ಹುಟ್ಟಿಸುತ್ತಿದ್ದರು. ಶಿವಸ್ವಾಮಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದರಿಂದ ಚೆನ್ನಾಗಿಯೇ ಸುಳ್ಳಿನ ಕಥೆ ಕಟ್ಟುತ್ತಿದ್ದನು. ಆತನ ಮಾತನ್ನು ನಂಬಿದವರು ಹಣ ನೀಡುತ್ತಿದ್ದರು.

22 ಕೋಟಿ ಹಣ ಸಂಗ್ರಹ; ತಮ್ಮ ಬಳಿಗೆ ಉದ್ಯೋಗ ಕೊಡಿಸುವಂತೆ ಬರುತ್ತಿದ್ದ ಅಭ್ಯರ್ಥಿಗಳಿಂದ ಮೂಲ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ನಕಲಿ ಕರೆ ಪತ್ರಗಳು, ನಕಲಿ ವೈದ್ಯಕೀಯ ಜ್ಞಾಪನ ಪತ್ರಗಳು ಮತ್ತು ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರಲ್ಲದೆ, ಅವರಿಂದ ಹಣ ಪಡೆದು ಉದ್ಯೋಗಕ್ಕೆ ಸ್ವಲ್ಪದಿನದಲ್ಲಿಯೇ ಆರ್ಡರ್ ಬರುತ್ತದೆ ಕಾಯಿರಿ ಎಂದು ಹೇಳಿ ಕಳುಹಿಸುತ್ತಿದ್ದರು.

ಹಣ ನೀಡಿ ಕೆಲಸಕ್ಕಾಗಿ ಅಮಾಯಕರು ಕಾಯುತ್ತಾ ಮೋಸ ಹೋಗುತ್ತಿದ್ದರು. ಇದುವರೆಗೆ ಇವರು ಸುಮಾರು 400 ಅಭ್ಯರ್ಥಿಗಳಿಗೆ ವಂಚಿಸಿ ಸುಮಾರು ರೂ. 22 ಕೋಟಿಗಳಷ್ಟು ಹಣ ವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ. ಇವರಿಗೆ ಹಲವರು ತಮ್ಮ ಜಮೀನು ಮಾರಿ ಮತ್ತು ಹೆಚ್ಚಿನ ಬಡ್ಡಿಗೆ ಕೈಸಾಲ ಪಡೆದು ಹಣ ನೀಡಿರುವುದು ಇದೀಗ ಬಯಲಾಗಿದೆ.

ಇದುವರೆಗೆ ಮೋಸ ಹೋದವರು ದೂರು ನೀಡದ ಕಾರಣ ಆರೋಪಿಗಳು ಸಿಕ್ಕಿ ಬಿದ್ದಿರಲಿಲ್ಲ. ಆದರೆ ಇವರ ಪಾಪದ ಕೊಡ ತುಂಬಿತ್ತು ಹೀಗಾಗಿ ಇವರು ಸಿಕ್ಕಿ ಬೀಳುವ ಸಮಯ ಹತ್ತಿರವಾಗಿತ್ತು. ಆರೋಪಿಗಳಿಬ್ಬರು ಕೆಲಸ ಕೊಡಿಸುವುದಾಗಿ ಹಣ ಪಡೆದ ಅಭ್ಯರ್ಥಿಗಳಲ್ಲಿ ನಂಬಿಕೆ ಹುಟ್ಟಿಸುವ ಸಲುವಾಗಿ ಅವರನ್ನು ಕರೆದುಕೊಂಡು ಮೈಸೂರಿನ ರೈಲ್ವೆ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುವುದಲ್ಲದೆ, ಛಾಯಾಚಿತ್ರ ತೆಗೆಯುತ್ತಾ ತಮಗೆ ಎಲ್ಲವೂ ಮತ್ತು ಎಲ್ಲರೂ ಪರಿಚಯ ಇದ್ದಾರೆ ಎಂಬಂತೆ ವರ್ತಿಸುತ್ತಿದ್ದರು. ಇವರ ಚಲನವಲನದ ಬಗ್ಗೆ ಮುಖ್ಯ ವೈದ್ಯಕೀಯ ಅಧೀಕ್ಷಕರಿಗೆ ದೂರು ಹೋಗಿತ್ತಲ್ಲದೆ ಅವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಕೊನೆಗೂ ಸಿಕ್ಕಿ ಬಿದ್ದ ವಂಚಕರು; ಹೀಗಾಗಿ ಮೈಸೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ವಿಭಾಗೀಯ ಭದ್ರತಾ ಆಯುಕ್ತ ಥಾಮಸ್ ಜಾನ್ ಮತ್ತು ಸಹಾಯಕ ಭದ್ರತಾ ಆಯುಕ್ತರಾದ ಎ. ಶ್ರೀಧರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಸತೀಶನ್, ಎಂ. ನಿಶಾದ್, ವೆಂಕಟೇಶ್, ರಾಧಾಕೃಷ್ಣ ಮತ್ತು ಇತರೆ ಸಿಬ್ಬಂದಿಗಳು ಆರೋಪಿಗಳಾದ ಚಂದ್ರಗೌಡ ಎಸ್. ಪಾಟೀಲ್ ಮತ್ತು ಶಿವಸ್ವಾಮಿಯ ಚಲನವಲದ ಬಗ್ಗೆ ನಿಗಾವಹಿಸಿದ್ದರು.

ಅವರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದ ತಂಡಕ್ಕೆ ಯುವ ಉದ್ಯೋಗಾಕಾಂಕ್ಷಿಗಳಿಗೆ ಲಾಭದಾಯಕ ರೈಲ್ವೆ ಉದ್ಯೋಗಗಳ ಸುಳ್ಳು ಭರವಸೆ ನೀಡುವ ನಕಲಿ ರೈಲ್ವೆ ನೇಮಕಾತಿ ದಂಧೆಯನ್ನು ನಡೆಸುತ್ತಿರುವ ಖಚಿತ ಮಾಹಿತಿ ದೊರೆತಿತ್ತು. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.

4,15,000ರೂ. ನಕಲಿ ದಾಖಲೆಗಳು ವಶ; ಈ ವೇಳೆ ಬಂಧಿತ ವಂಚಕರ ಬಳಿ ಒಟ್ಟು 221 ಸಹಿ ಮಾಡಿರುವ ಖಾಲಿ ಚೆಕ್ ಗಳು, ರೂಪಾಯಿ 4,15,000 ಮೊತ್ತದ ನಗದು, ಆಕಾಂಕ್ಷಿ ಅಭ್ಯರ್ಥಿಗಳ ಮೂಲ ದಾಖಲೆಗಳು, ಚೆಕ್ ಪುಸ್ತಕಗಳು, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಇಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್ ಸೇರಿದಂತೆ ಹಲವಾರು ವಸ್ತುಗಳು ದೊರೆತಿದ್ದು ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ದಂಧೆ ಹಿಂದೆ ಇವರಿಬ್ಬರೇ ಮಾತ್ರನಾ? ಅಥವಾ ದೊಡ್ಡ ಜಾಲವೇ ಇದೆಯಾ ಎಂಬುದು ಪೊಲೀಸರ ಸಮಗ್ರ ತನಿಖೆಯಿಂದ ಗೊತ್ತಾಗಬೇಕಾಗಿದೆ. ಆದ್ದರಿಂದ ಆರೋಪಿಗಳಿಂದ ವಶಪಡಿಸಿಕೊಂಡ ಸಾಮಗ್ರಿಗಳೊಂದಿಗೆ ಆರೋಪಿಗಳನ್ನು ಅಗತ್ಯ ಕಾನೂನು ಪ್ರಕ್ರಿಯೆಗಾಗಿ ಮಂಡಿ ಮೊಹಲ್ಲಾದ ಸರ್ಕಲ್ ಇನ್ಸ್‌ಪೆಕ್ಟರ್ ಗೆ ಹಸ್ತಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಮೈಸೂರು ಮಂಡಿ ಪೊಲೀಸ್ ಠಾಣೆಯಲ್ಲಿ IPC. ಸಂ. 97/2021, U/s 464, 419, 420, 465, 468, 471 R/w 34 ಅಡಿಯಲ್ಲಿ ದಾಖಲು ಮಾಡಲಾಗಿದೆ.

ರೈಲ್ವೆ ಸಂರಕ್ಷಣಾ ಪಡೆಯ ಕಾರ್ಯ ಶ್ಲಾಘನೆ; ನೈಋತ್ಯ ರೈಲ್ವೆ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಮೈಸೂರಿನ ರೈಲ್ವೆ ಸಂರಕ್ಷಣಾ ಪಡೆಯ ತ್ವರಿತ ಕ್ರಮವನ್ನು ಶ್ಲಾಘಿಸಿದರು ಮತ್ತು ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಸೂಚನೆ, ಮಾಹಿತಿಗಾಗಿ ಆಕಾಂಕ್ಷಿ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಗಳ (RRBs) ಅಧಿಕೃತ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ರೈಲ್ವೆ ನೇಮಕಾತಿ ಮಂಡಳಿಗಳ ಬಗ್ಗೆ ಅಥವಾ ಹಣದ ಪರಿಗಣನೆಗಾಗಿ ಕೆಲವು ವ್ಯಕ್ತಿಗಳು ನೀಡುತ್ತಿರುವ ಜಾಹೀರಾತಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಯಾವುದೇ ಮಾಹಿತಿ, ಸೂಚನೆಗಳನ್ನು ತಕ್ಷಣವೇ ನಿರ್ಲಕ್ಷಿಸಬೇಕು ಎಂದು ಹೇಳಿದ್ದಾರೆ. ಸದ್ಯ ಮಂಡಿ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ಆರಂಭಿಸಿದ್ದು, ಇವರ ಮೋಸದ ಜಾಲಕ್ಕೆ ಅದೆಷ್ಟು ಮಂದಿ ಅಮಾಯಕರು ಬಲಿಯಾಗಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ.

English summary
Fake railway recruitment racket busted in Mysuru, Karnataka and 2 arrested in connection with the case. One accused retired railway employee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X