ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯರ ಜನ್ಮ ರಹಸ್ಯ ಬಯಲಾಗಿದ್ದು ಯಾವಾಗ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು: ಆಗಸ್ಟ್‌ 3: ಈ ಹಿಂದೆ ಆಗಸ್ಟ್‌ 12ರಂದು ವಿಪಕ್ಷ ನಾಯಕ ಸಿದ್ದರಾಮಯ್ಯರ ಹುಟ್ಟು ಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಆಚರಿಸುತ್ತಾ ಬಂದಿದ್ದರು. ಆದರೆ 2021ರಲ್ಲಿ ಸ್ವತಃ ಸಿದ್ದರಾಮಯ್ಯ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದರು. ಆಗಲೇ ಜನರಿಗೆ ಅವರ ಜನ್ಮದಿನ ಆಗಸ್ಟ್‌ 3 ಎಂಬುದು ಗೊತ್ತಾಗಿದ್ದು, ಅದರಂತೆ ಈ ಬಾರಿ ಆಗಸ್ಟ್‌ 3ರಂದು ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

ಕಳೆದ ವರ್ಷ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಆಗಸ್ಟ್ 12 ರಂದು ಆಚರಣೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಆಗ ಸ್ವತಃ ಸಿದ್ದರಾಮಯ್ಯರೇ ತಮ್ಮ ಜನ್ಮರಹಸ್ಯವನ್ನು ಬಿಚ್ಚಿಟ್ಟು ಬೆಂಬಲಿಗರು, ಅಭಿಮಾನಿಗಳು ಅಚ್ಚರಿ ಮೂಡಿಸಿದ್ದರು. ಹಾಗೆ ನೋಡಿದರೆ ಅವರ ಜನ್ಮದಿನಾಂಕದ ಬಗ್ಗೆ ಗೊಂದಲ ಹಿಂದಿನಿಂದಲೂ ಇತ್ತು. ಈ ಬಗ್ಗೆ ಅವರೇ ಹಲವು ವೇದಿಕೆಗಳಲ್ಲಿ ಹೇಳಿದ್ದರು. ಆದರೂ ಶಾಲೆಯಲ್ಲಿ ನಮೂದಾಗಿರುವ ಆಗಸ್ಟ್‌ 12ರಂದೇ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಾ ಬಂದಿದ್ದರು.

ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬಂದ ಬಳಿಕ ಊರುಗಳಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸುತ್ತಾ ಬಂದಿದ್ದರು. ಆದರೆ ಕಳೆದ ವರ್ಷ ಸ್ವತಃ ಅವರೇ ನನ್ನ ಜನ್ಮ ದಿನಾಂಕ ಆಗಸ್ಟ್‌12,1947 ಅಲ್ಲ ಆಗಸ್ಟ್‌ 3, 1947 ಎಂದು ಹೇಳುವ ಮೂಲಕ ಜನ್ಮ ರಹಸ್ಯ ಬಯಲುಗೊಳಿಸಿದ್ದರು. ಇವತ್ತು ಸಿದ್ದರಾಮಯ್ಯ ಅವರು ತಮ್ಮ 75ನೇ ವರ್ಷವನ್ನು ಆಚರಿಸುತ್ತಿದ್ದು, ವಕೀಲರಾಗಿ, ರಾಜಕೀಯವಾಗಿ ತಳಮಟ್ಟದಿಂದ ಬೆಳೆದು ಬಂದ ಅವರು ಉಪಮುಖ್ಯ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ವಿಪಕ್ಷನಾಯಕನಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಅವರು ಇದೀಗ ಮತ್ತೊಮ್ಮೆ ಮುಖ್ಯ ಮಂತ್ರಿಯಾಗಿ ರಾಜಕೀಯಕ್ಕೆ ಗುಡ್ ಬೈ ಹೇಳುವ ತಯಾರಿಯಲ್ಲಿದ್ದಾರೆ. ಅದು ಸಾಧ್ಯವಾಗುತ್ತಾ ಗೊತ್ತಿಲ್ಲ.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಚುನಾವಣೆಗೆ ಮುನ್ನುಡಿ ಬರೆದ ಮಹೋತ್ಸವ...!ದಾವಣಗೆರೆಯಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ: ಚುನಾವಣೆಗೆ ಮುನ್ನುಡಿ ಬರೆದ ಮಹೋತ್ಸವ...!

ಇವತ್ತಿನ ದಾವಣಗೆರೆ ಸಮಾವೇಶವನ್ನು ನೋಡಿದ ಅವರ ಅಭಿಮಾನಿಗಳು ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇವತ್ತು ರಾಜಕೀಯವಾಗಿ ಈ ಹುದ್ದೆಗೆ ಏರಿದ ಬಗೆಗೆ ಹಿಂತಿರುಗಿ ನೋಡಿದರೆ ಅವರ ಬದುಕು ರೋಚಕವಾಗಿರುವುದು ಕಂಡು ಬರುತ್ತದೆ.

 ಮೇಷ್ಟ್ರು ಕೊಟ್ಟದ್ದ ದಿನಾಂಕ 12

ಮೇಷ್ಟ್ರು ಕೊಟ್ಟದ್ದ ದಿನಾಂಕ 12

ಮೈಸೂರು ಬಳಿಯ ಸಿದ್ದರಾಮನಹುಂಡಿಯ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಗಳು ಪುತ್ರರಾಗಿ ಜನಿಸಿದ ಸಿದ್ದರಾಮಯ್ಯನವರು ಶಾಲೆಗೆ ಸೇರಬೇಕಾದ ವಯಸ್ಸಿನಲ್ಲಿ ಆಟವಾಡುತ್ತಾ ಕುರಿಮೇಯಿಸುತ್ತಾ ಕಳೆದಿದ್ದರು. ಶಾಲೆಯ ಮುಖ ನೋಡದ ಬಾಲಕ ಸಿದ್ದರಾಮಯ್ಯನವರು ಓದುವ ಛಲ ಹೊಂದಿದ್ದರು. ಹಾಗಾಗಿ ಶಾಲೆಗೆ ಹೋಗದಿದ್ದರೂ ಮರಳಿನ ಮೇಲೆ ಅ ಆ ಇ ಈ ಬರೆಯುವುದನ್ನು ಕಲಿತರು. ಬಾಲಕನ ಈ ಆಸಕ್ತಿಯನ್ನು ನೋಡಿದ ನಂಜೇಗೌಡ ಎಂಬುವರು ವಯಸ್ಸಿಗೆ ಅನುಗುಣವಾಗಿ 1957 ರಲ್ಲಿ ಐದನೇ ಕ್ಲಾಸಿಗೆ ಸೇರಿಸಿದರು. ಈ ವೇಳೆ ರಾಜಪ್ಪ ಮೇಷ್ಟ್ರು ಅವರ ಅಪ್ಪನನ್ನು ಹುಟ್ಟಿದ ದಿನಾಂಕ ಕೇಳಿದ್ದರು. ಈ ವೇಳೆ ಅವರು ನನಗೆ ಗೊತ್ತಿಲ್ಲ ಎಂದಿದ್ದರು ಹೀಗಾಗಿ ಮೇಷ್ಟ್ರು 12-08-1947 ಎಂದು ಬರೆದುಕೊಂಡಿದ್ದರಂತೆ.

ಇನ್ನು ವಿದ್ಯಾಭ್ಯಾಸದ ಬಗ್ಗೆ ಹೇಳಬೇಕೆಂದರೆ, 5ನೇ ತರಗತಿ ಮೂಲಕ ಶಾಲೆಗೆ ಸೇರಿದ ಅವರು ಓದಿನಲ್ಲಿ ಮುಂದಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿ ಹೈಸ್ಕೂಲ್‌ಗೆ ಮೈಸೂರಿಗೆ ಬಂದ ಅವರು ವಿದ್ಯಾವರ್ಧಕಕ್ಕೆ ಸೇರಿದರು. 1964ರಲ್ಲಿ ಎಸ್‌ ಎಸ್‌ ಎಲ್‌ ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಅವರು ಪಿಯುಸಿ ಮತ್ತು ಬಿಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಮುಗಿಸಿ ಕಾನೂನು ಪದವಿಯನ್ನು ವಿದ್ಯಾವರ್ಧಕ ಕಾಲೇಜಿನಲ್ಲಿ ಪಡೆದರು. ಅಲ್ಲದೆ ಇದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದರು.

 ವಿದ್ಯಾರ್ಥಿ ದೆಸೆಯಲ್ಲೇ ಹೋರಾಟಗಾರ

ವಿದ್ಯಾರ್ಥಿ ದೆಸೆಯಲ್ಲೇ ಹೋರಾಟಗಾರ

ಇದೇ ಸಂದರ್ಭದಲ್ಲಿ ಅವರಿಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಸಂಪರ್ಕ ದೊರೆಯಿತು. ಅಲ್ಲದೆ ಜೆ.ಪಿ.ನಾರಾಯಣ್, ಲೋಹಿಯಾ, ರಾಮಸ್ವಾಮಿ ಪೆರಿಯಾರ್ ಅವರ ಪ್ರಭಾವಕ್ಕೊಳಗಾದ ಸಿದ್ದರಾಮಯ್ಯ ವಿದ್ಯಾರ್ಥಿ ಚಳುವಳಿ, ಜನಪರ ಹೋರಾಟಗಳಲ್ಲಿ ಭಾಗವಹಿಸತೊಡಗಿದರು. 1974ರಲ್ಲಿ ಜೆಪಿ ಚಳವಳಿ, 1975ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದರು. ಮುಂದೆ ರಾಜಕೀಯದತ್ತ ವಾಲಿದ ಇವರು ಮೊದಲಿಗೆ 1978ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾದರು. 1980ರಲ್ಲಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಎಂ.ರಾಜಶೇಖರಮೂರ್ತಿ ಹಾಗೂ ಗುರುಪಾದಸ್ವಾಮಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು. 1983ರ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇವರನ್ನು ಚಾಮುಂಡೇಶ್ವರಿ ಕ್ಷೇತ್ರದ ಜನ ತಮ್ಮ ಹಣವನ್ನು ಖರ್ಚು ಮಾಡಿ ಓಟು ಹಾಕಿಸಿ ಗೆಲ್ಲಿಸಿ ಮೊದಲ ಬಾರಿಗೆ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದು ವಿಶೇಷ.

ಇವರ ಹೋರಾಟದ ಮನೋಭಾವ, ನೇರ ನಡೆ ನುಡಿಯನ್ನು ಮೆಚ್ಚಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು. ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಈ ಸಂದರ್ಭ ಹಲವಾರು ಉಪಯುಕ್ತ ಕೆಲಸ ನಡೆದಿದ್ದು ಇತಿಹಾಸ. ಹೆಗಡೆಯವರ ಸಚಿವ ಸಂಪುಟದಲ್ಲಿ ರೇಷ್ಮೆಖಾತೆ ಸಚಿವರಾಗಿಯೂ ಸಿದ್ದರಾಮಯ್ಯ ಕಾರ್ಯನಿರ್ವಹಿಸಿದರು. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯ ಹೆಗಡೆಯವರ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ಆದರೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ರಾಜಶೇಖರಮೂರ್ತಿಯವರು ಸೋಲಿಸಿದರು. ಆದರೆ ಧೃತಿಗೆಡದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನವನ್ನು ಎಂದಿನಂತೆ ಮುಂದುವರೆಸಿದರು.

 ಸಿಎಂ ಆಗುವ ಕನಸು ನನಸಾಗಿರಲಿಲ್ಲ

ಸಿಎಂ ಆಗುವ ಕನಸು ನನಸಾಗಿರಲಿಲ್ಲ

ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಪಡೆದ ಸಿದ್ದರಾಮಯ್ಯ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆ ಮಾಡಿದರಲ್ಲದೆ, 1994ರಲ್ಲಿ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗ ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು. ಆ ನಂತರ 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾದಾಗ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿತ್ತಾದರೂ ಉಪಮುಖ್ಯ ಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾದರು. 1999ರಲ್ಲಿ ಕಾಂಗ್ರೆಸ್ ಅಲೆ ಬೀಸಿದಾಗ ಮತ್ತೆ ಚುನಾವಣೆಯಲ್ಲಿ ಎ.ಎಸ್.ಗುರುಸ್ವಾಮಿ ಮುಂದೆ ಸೋಲು ಕಂಡರು. 2004ರಲ್ಲಿ ಮತ್ತೆ ಗೆಲುವು ಸಾಧಿಸಿದ ಅವರು ಜೆಡಿಎಸ್ ಕಾಂಗ್ರೆಸ್-ಸಮ್ಮಿಶ್ರ ಸರ್ಕಾರದಲ್ಲಿ ಧರಂಸಿಂಗ್ ಮುಖ್ಯ ಮಂತ್ರಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು.

ಆದರೆ ಜೆಡಿಎಸ್‌ನ ರಾಜಕೀಯ ರಗಳೆಗಳಿಂದ ಬೇಸತ್ತ ಅವರು ಆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದು 2005ರಲ್ಲಿ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಅಲ್ಲದೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅವರು ಕಾಂಗ್ರೆಸ್ ಸೇರಿದರು. 2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಾಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಅವತ್ತು ಅಸ್ತಿತ್ವದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಒಗ್ಗಟ್ಟಾಗಿ ಸಿದ್ದರಾಮಯ್ಯನವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿದ್ದು ಶಿವಬಸಪ್ಪ ಎಂಬುವರನ್ನು ಅವರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಲು ಇನ್ನಿಲ್ಲದಂತೆ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿದ್ದರಾಮಯ್ಯ ಅಲ್ಪ ಮತದಿಂದ ಗೆಲುವು ಸಾಧಿಸಿದ್ದರು. 2008ರ ಚುನಾವಣೆ ವೇಳೆಗೆ ಕ್ಷೇತ್ರ ಪುನರ್ವಿಂಗಡಣೆ ಆಗಿದ್ದರಿಂದ ವರುಣಾ ಕ್ಷೇತ್ರ ಉದಯವಾಗಿತ್ತು. ಇಲ್ಲಿಂದ ಸ್ಪರ್ಧೆ ಮಾಡಿದ ಅವರು ಗೆಲುವು ಸಾಧಿಸಿ ವಿಪಕ್ಷನಾಯಕರೂ ಆದರು.

 ಮುಖ್ಯಮಂತ್ರಿಯಾಗಿ ರಾಜಕೀಯ ಕೊನೆಗೊಳಿಸುವ ಆಸೆ

ಮುಖ್ಯಮಂತ್ರಿಯಾಗಿ ರಾಜಕೀಯ ಕೊನೆಗೊಳಿಸುವ ಆಸೆ

ಮೇ 5, 2013ರ ಚುನಾವಣೆಯಲ್ಲಿ ಮತ್ತೆ ವರುಣಾದಿಂದ ಆಯ್ಕೆಯಾಗಿ ಮುಖ್ಯ ಮಂತ್ರಿ ಗದ್ದುಗೆಯನ್ನು ಅಲಂಕರಿಸಿ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದರು. ಹಲವು ಭಾಗ್ಯಗಳನ್ನು ನೀಡಿದ್ದರೂ 2018ರ ವಿಧಾನ ಸಭಾ ಚುನಾವಣೆ ಅವರ ಪಾಲಿಗೊಂದು ಅಗ್ನಿಪರೀಕ್ಷೆಯಾಯಿತು. ವರುಣಾ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಹಾಗೆಯೇ ಬಾದಾಮಿ ಕ್ಷೇತ್ರದಿಂದ ಶ್ರೀರಾಮುಲು ಅವರ ವಿರುದ್ಧ ಹೀಗೆ ಎರಡು ಕಡೆಯಿಂದ ಸ್ಪರ್ಧಿಸಿದ್ದರು. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರ ಕೈಹಿಡಿಯಲಿಲ್ಲ. ಬಾದಾಮಿ ಕ್ಷೇತ್ರದ ಜನ ಕೈಹಿಡಿದರಾದರೂ ಕಾಂಗ್ರೆಸ್ ಬಹುಮತ ಪಡೆಯದ ಕಾರಣ ಮತ್ತೆ ಮುಖ್ಯ ಮಂತ್ರಿಯಾಗುವ ಕನಸು ನನಸಾಗಲಿಲ್ಲ.

ಮುಂದಿನ 2023ರ ಚುನಾವಣೆಗೆ ತಯಾರಿ ಆರಂಭಿಸಿರುವ ಸಿದ್ದರಾಮಯ್ಯ ಅವರು ಅದು ತನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಜತೆಗೆ ಸಿಎಂ ಆಗಲೇ ಬೇಕೆಂಬ ಹಠಕ್ಕೂ ಬಿದ್ದಿದ್ದಾರೆ. ಮುಂದೆನಾಗುತ್ತೋ ಗೊತ್ತಿಲ್ಲ. ಆದರೆ ಎಲ್ಲದಕ್ಕೂ ಕಾದುನೋಡುವುದು ಅನಿವಾರ್ಯವಾಗಿದೆ.

English summary
Former Chief Minister Siddaramaiah apparently has no correct date of birth and he did not even study from classes 1 to 4. But As per School details his date of birth was august 12, But once siddaramaiah revealed himself his real birth date is August 3,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X