"ಹತಾಶರಾಗಿ ಶಿವಕುಮಾರ್ ಈ ರೀತಿ ಮಾತನಾಡುತ್ತಿದ್ದಾರೆ"
ಮೈಸೂರು, ನವೆಂಬರ್ 30: ಉಪ ಚುನಾವಣೆಯ ಸೋಲಿನಿಂದ ಹತಾಶರಾಗಿ ಡಿ.ಕೆ. ಶಿವಕುಮಾರ್ ಈ ರೀತಿ ಮಾತನಾಡುತ್ತಿದ್ದಾರೆ. ಹೀಗಾಗೇ ಸಂತೋಷ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, "ಸಂತೋಷ್ ಅವರನ್ನು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಸುದ್ದಿ ಎರಡು ತಿಂಗಳಿಂದ ಹರಿದಾಡಿತ್ತು. ಇದರಲ್ಲಿ ಸಾಕಷ್ಟು ಗೌಪ್ಯ ಅಡಗಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ಅಗತ್ಯವಿದೆ" ಎಂದು ಹೇಳಿದ್ದರು.
ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ; ಡಿಕೆಶಿ ಬಿಚ್ಚಿಟ್ಟ ಸಂಗತಿ ಏನು?
ಇದಕ್ಕೆ ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿಯ ವಿಚಾರಗಳಲ್ಲಿ ಅವರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ಇದೇ ಸಂದರ್ಭ, ವೀರಶೈವ ಲಿಂಗಾಯತ ಒಬಿಸಿ ಸೇರ್ಪಡೆ ವಿಚಾರವಾಗಿ ಮಾತನಾಡಿ, "ಯಡಿಯೂರಪ್ಪ ಅವರ ಅವಧಿಯಲ್ಲಿ ಯಾವುದೇ ಸಮುದಾಯಗಳಿಗೆ ಅನ್ಯಾಯವಾಗಲ್ಲ. ಅವರು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾ ಕೆಲಸ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ನೀವು ಸಿಎಂ ಆಗಲು ಕುರುಬ ಸಮುದಾಯದ ಕೊಡುಗೆ ಇದೆ ಎಂದು ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, "ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ. ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. ಆದಷ್ಟು ಬೇಗ ಇದಕ್ಕೆ ಉತ್ತರ ಸಿಗಲಿದೆ. ಯಾರಿಗೂ ಅನ್ಯಾಯ ಆಗುವ ಪ್ರಶ್ನೆಯೇ ಇಲ್ಲ" ಎಂದು ಭರವಸೆ ನೀಡಿದ್ದಾರೆ.