ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಕಲಾವಿದನ ಕೈಯಲ್ಲಿ ಅರಳುತ್ತಿವೆ ಸ್ವರ್ಣ ದೇವರ ಮೂರ್ತಿ

By ಬಿ.ಎಂ.ಲವಕುಮಾರ್
|
Google Oneindia Kannada News

ಕೈಗೆ ಸಿಕ್ಕ ಬಂಗಾರ ವಿವಿಧ ದೇವರ ರೂಪ ತಾಳಿ ಗರ್ಭಗುಡಿಯಲ್ಲಿ ನೆಲೆನಿಂತಿದ್ದರೆ, ಮತ್ತೆ ಕೆಲವು ದೇವರ ಮೂರ್ತಿಯ ಕಿರೀಟವಾಗಿ, ಆಭರಣಗಳಾಗಿ ರಾರಾಜಿಸುತ್ತಿವೆ. ಇಷ್ಟಕ್ಕೂ ಬಂಗಾರದಲ್ಲಿ ಕಲೆ ಅರಳಿಸಿದ ಶಿಲ್ಪಿ ಯಾರು ಎಂಬ ಕುತೂಹಲ ನಿಮ್ಮಲ್ಲಿರಬಹುದಲ್ಲವೇ?. ಅವರೇ ಮೈಸೂರು ಜಿಲ್ಲೆಯ ಸ್ವರ್ಣ ಶಿಲ್ಪಿ ಎನ್.ದಕ್ಷಿಣಾಮೂರ್ತಿ.

ಮೈಸೂರು ಜಿಲ್ಲೆಯ ಚಾಮರಾಜ ಮೊಹಲ್ಲಾದ ದಿವಾನ್ಸ್ ರಸ್ತೆ ನಿವಾಸಿ ದಿ. ಬಿ.ಎನ್.ನಾರಾಯಣಾಚಾರ್ ಹಾಗೂ ಶ್ರೀಮತಿ ಕಮಲಮ್ಮ ದಂಪತಿಗಳ ಪುತ್ರರಾಗಿರುವ ದಕ್ಷಿಣಾಮೂರ್ತಿಯವರ ಹೆಸರು ಇವತ್ತು ರಾಜ್ಯ, ದೇಶ, ಮಾತ್ರವಲ್ಲದೆ, ವಿದೇಶದಲ್ಲೂ ಪಸರಿಸುತ್ತಿದೆ.[ಪ್ರವಾಸಿಗರಿಗೆ ಮೈಸೂರೆಂದರೆ ಅದೇಕೆ ಅಷ್ಟು ಇಷ್ಟವಾಗುತ್ತೆ?]

Dhakshinamurthy is one of the famous sculptor at Mysuru

ದಕ್ಷಿಣಾಮೂರ್ತಿ ಅವರ ತಂದೆ ಸ್ವರ್ಣ ಶಿಲ್ಪಕಾರರು. ದಕ್ಷಿಣ ಮೂರ್ತಿಯವರು ಶಾಲೆಗೆ ಹೋಗುವಾಗಲೇ ತಂದೆ ಮಾಡುತ್ತಿದ್ದ ಸ್ವರ್ಣ ಶಿಲ್ಪಗಳ ಕೆಲಸವನ್ನು ತದೇಕಚಿತ್ತದಿಂದ ನೋಡುತ್ತಿದ್ದರು. ತಮ್ಮ 10ನೇ ವಯಸ್ಸಿನಲ್ಲೇ ಶಿಲ್ಪಕಲೆ ಅಭ್ಯಸಿಸತೊಡಗಿದರು. ಕಲೆ ವಂಶಪಾರಂಪರ್ಯವಾಗಿ ಬಂದಿದ್ದರಿಂದಲೋ ಅಥವಾ ದೈವದತ್ತ ವರವೋ ಅದು ದಕ್ಷಿಣಾಮೂರ್ತಿಯವರಿಗೆ ಬೇಗ ಒಲಿಯಿತು. ಮುಂದೆ ತಮ್ಮ ಓದಿನ ಜೊತೆಗೆ ಶಿಲ್ಪಕಲೆ ಕರಗತ ಮಾಡಿಕೊಂಡು ತಂದೆಗೆ ನೆರವಾದರು. ಇವರಿಗೆ ಸ್ವರ್ಣ ಶಿಲ್ಪಿಯಾಗಿದ್ದ ದೊಡ್ಡಪ್ಪ ಚನ್ನಪ್ಪಾಚಾರ್ಯ, ಚಿಕ್ಕಪ್ಪ ಚಲುವಾಚಾರ್ ಇನ್ನಷ್ಟು ಪ್ರೋತ್ಸಾಹ ನೀಡಿದರು.

ಆದರೆ ದಕ್ಷಿಣಾಮೂರ್ತಿ ಅವರಿಗೆ ತಾನು ಬರೀ ಶಿಲ್ಪಿಯಾದರೆ ಸಾಲದು ಏನಾದರೊಂದು ಮಾಡಬೇಕೆಂಬ ಬಯಕೆ ಹುಟ್ಟಿತು. ಆಗ ಅವರು ಒಮ್ಮೆ ಜಗನ್ಮೋಹನ ಅರಮನೆಗೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ರವಿವರ್ಮನ ಚಿತ್ರಗಳು ಅವರನ್ನು ಸೆಳೆದವು. ಅದನ್ನು ತದೇಕ ಚಿತ್ತದಿಂದ ನೋಡಿದ ಅವರು ಅದೇ ರೀತಿ ಚಿನ್ನ ಹಾಗೂ ಬೆಳ್ಳಿಯಲ್ಲಿ ಶಶಿಲ್ಪಗಳನ್ನು ಮಾಡಲು ಪಣ ತೊಟ್ಟರು. ಅವರ ಅವಿರತ ಶ್ರಮ ಕೊನೆಗೂ ಫಲ ನೀಡಿತು.

ಆಗ ಅವರ ಕಲ್ಪನೆಯಲ್ಲಿ ಮೊದಲು ಮೂಡಿದ ಗೌರಿಯ ಶಿಲ್ಪ ಎಲ್ಲರ ಗಮನಸೆಳೆಯಿತು. ಇದು ಮುಂದಿನ ವಿಭಿನ್ನ, ವಿಶಿಷ್ಟ ಶಿಲ್ಪಗಳ ನಿರ್ಮಾಣಕ್ಕೆ ಹಾದಿ ತೋರಿಸಿತು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ದಕ್ಷಿಣಾಮೂರ್ತಿ ತಮ್ಮಲ್ಲಿರುವ ಪ್ರತಿಭೆಯನ್ನು ಪಂಚಲೋಹ, ರಜತ, ಸ್ವರ್ಣ ಲೋಹಗಳ ಮೇಲೆ ಪ್ರಯೋಗಿಸತೊಡಗಿದರು. ಅವರ ಕಲ್ಪನೆಯಲ್ಲಿ ಒಂದೊಂದೇ ದೇವರು ಶಿಲ್ಪಗಳು ಸೃಷ್ಠಿಯಾದವು. ಅವು ಯಾವುದೂ ಕೇವಲ ದೇವರ ಶಿಲ್ಪವಾಗಿಯಷ್ಟೆ ಉಳಿಯದೆ ಅದಕ್ಕೊಂದು ಜೀವ ತುಂಬಿದ್ದು ಅವರ ಕಲಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿ.[ಚಿತ್ತಾರ ಕಲಾವಿದರ ಚಾವಡಿಯಲ್ಲಿ...!]

ದಕ್ಷಿಣಾಮೂರ್ತಿ ಅವರು ದೇವರ ವಿಗ್ರಹಗಳನ್ನು ಲೋಹದಲ್ಲಿ ಸುಂದರವಾಗಿ ನಿರ್ಮಿಸುತ್ತಾರೆ ಎಂಬುದು ತಿಳಿಯುತ್ತಿದ್ದಂತೆಯೇ ಹಲವೆಡೆಗಳಿಂದ ದೇವಾಲಯಕ್ಕೆ ದೇವರ ಮೂರ್ತಿ ನಿರ್ಮಿಸಿಕೊಡುವಂತೆ ಕೋರಿ ಜನ ಬರತೊಡಗಿದರು. ಅವರವರ ಕಲ್ಪನೆಗೆ ತಕ್ಕಂತೆ ದೇವರ ವಿಗ್ರಹಗಳನ್ನು ನಿರ್ಮಿಸಿಕೊಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಅದನ್ನು ಸವಾಲಾಗಿ ಸ್ವೀಕರಿಸಿದ ದಕ್ಷಿಣಾಮೂರ್ತಿ ಕಠಿಣ ಪರಿಶ್ರಮ ಮತ್ತು ಕಲಾ ಜಾಣ್ಮೆಯಿಂದ ಸೂಕ್ಷ್ಮ ಕಲೆಯ ಎಲ್ಲಾ ಮಗ್ಗಲುಗಳನ್ನು ಕರಗತ ಮಾಡಿಕೊಂಡು ಜೀವ ತುಂಬಿದರು. ಆ ನಂತರ ಒಂದರ ಮೇಲೊಂದರಂತೆ ಕಲಾ ಕೃತಿಗಳು ಮೂಡಿಬಂದವು.

Dhakshinamurthy is one of the famous sculptor at Mysuru

ದಕ್ಷಿಣಾಮೂರ್ತಿ ಮಾಡಿರುವ ಮೂರ್ತಿಗಳು ಯಾವುವು?

ದಕ್ಷಿಣಾಮೂರ್ತಿಗಳು ಇದುವರೆಗೆ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಚಿನ್ನದ ಕಿರೀಟ, ಬೃಂದಾವನ, ಒಂಟಿಕೊಪ್ಪಲಿನ ಶ್ರೀನಿವಾಸ ದೇವರಿಗೆ ಬಾಗಿಲುವಾಡೆ, ಮಂಗಳೂರಿನ ಮಂಗಳಾದೇವಿಗೆ ಬಂಗಾರದ ಮುಖವಾಡ, ಉತ್ಸವ ಮೂರ್ತಿಗೆ ಪೀಠ ಪ್ರಭಾವಳಿಗಳು, ಕದರಿ ಮಂಜುನಾಥಸ್ವಾಮಿ ದೇವಾಲಯಕ್ಕೆ ಕಾಷ್ಠರಥಕ್ಕೆ ರಜತ ರಥಕ್ಕೆ ವಿಗ್ರಹಗಳು, ಅಷ್ಟದಿಕಾಲಕರು, ಶಿವಲೀಲೆ, ದೆಹಲಿಯ ರಾಜೇಂದ್ರನಗರದ ಕೃಷ್ಣದೇವ ಸ್ಥಾನಕ್ಕೆ ಮಾಡಿರುವ ಪಂಚಲೋಹದ ನವಗ್ರಹ ವಿಗ್ರಹಗಳು, ಗಣಪತಿ, ಲಕ್ಷ್ಮಿನರಸಿಂಹ, ಮೂಗೂರಿನ ತ್ರಿಪುರ ಸುಂದರಮ್ಮಣಿ ದೇವರಿಗೆ ಕವಚಗಳು, ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ದೇವಾಲಯಕ್ಕೆ ರಜತ ಯೋಗನರಸಿಂಹ ಮೂರ್ತಿಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಹೊಯ್ಸಳ ಶೈಲಿಯ ಹದಿನೆಂಟು ಕೈಗಳ ಚಾಮುಂಡೇಶ್ವರಿ, ಶ್ರೀರಾಮಪಟ್ಟಾಭಿಷೇಕದ ಶಿಲ್ಪ ಹಾಗೂ ಭೀಮಾ ಜ್ಯೂವೆಲ್ಲರಿಗೆ ಉಬ್ಬು ತಗ್ಗಿನ ಕೇಶವನಾರಾಯಣ ಉಮಾಮಹೇಶ್ವರಿ, ಶಂಕರಶೆಟ್ಟಿ ಜ್ಯೂಯೆಲ್ಲರಿಗೆ ಉಬ್ಬು ಶಿಲ್ಪ ಕೃಷ್ಣ, ಪೀಠ ಪ್ರಭಾವಳಿ, ರಾಮ್ ಸೇನೆಗೆ ರಜತದ ಅಷ್ಟಾದಶಭುಜ ಮಹಿಷಮರ್ಧಿನಿ ಮತ್ತು ಕೋದಂಡರಾಮ ಶಿಲ್ಪಗಳು ಶಿಲ್ಪಿ ದಕ್ಷಿಣಾಮೂರ್ತಿ ಅವರು ನಿರ್ಮಿಸಿದ ಶಿಲ್ಪಗಳ ಪೈಕಿ ವಿಶಿಷ್ಟವಾದುದಾಗಿದೆ.[ಪರಿಸರಸ್ನೇಹಿ ಕಾಗದ ಗಣಪ : ಕಲಾವಿದ ಹುಸೇನಿ ಕೈಚಳಕ]

ದೆಹಲಿಯ ಕೃಷ್ಣಮಂದಿರಕ್ಕೆ ಪಂಚಲೋಹದಲ್ಲಿ ಗಣಪತಿ, ಲಕ್ಷ್ಮಿನರಸಿಂಹ ಮತ್ತು ನವಗ್ರಹ ಪ್ರತಿಷ್ಠಾಪನಾ ವಿಗ್ರಹಗಳನ್ನು ನಿರ್ಮಿಸಿಕೊಟ್ಟಿದ್ದರೆ, ಉಡುಪಿಯ ಕೃಷ್ಣಮಠಕ್ಕೆ, ಸೋದೆ ಮಠದ ಪುರಾತನ ವಿಗ್ರಹಗಳಿಗೆ ಬಂಗಾರದ ಪೀಠ ಪ್ರಭಾವಳಿಗಳು, ಛತ್ರಿಗಳು, ಚಾಮುಂಡಿಬೆಟ್ಟಕ್ಕೆ ಬಂಗಾರದ ಕಿರೀಟ, ಗಾಜನೂರು ಸಿದ್ದಪ್ಪಾಜಿ ಮತ್ತು ಮಂಟೆಲಿಂಗೇಶ್ವರ ಸ್ವಾಮಿ, ಮುಡುಕುತೊರೆ ಮಲ್ಲಿಕಾರ್ಜುನ ದೇವಾಲಯದ ಭ್ರಮರಾಂಭ ದೇವಿಗೆ ಚಿನ್ನದ ಪಾದಗಳು, ಊಟಿಯಲ್ಲಿರುವ ಶಾಂತಿನಾಥ ಮಂದಿರಕ್ಕೆ ಶಾಂತಿನಾಥ ಸ್ವಾಮೀಜಿಯವರ ಬೆಳ್ಳಿ ಬಂಗಾರ ಮತ್ತು ತಾಮ್ರದ ಮೂರ್ತಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರ ನಿರ್ಮಿಸಿದ ಶಿಲ್ಪಗಳು ಕೇವಲ ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಿಗಳಲ್ಲೂ ಸ್ಥಾನ ಪಡೆದುಕೊಂಡಿವೆ.

Dhakshinamurthy is one of the famous sculptor at Mysuru

ದಕ್ಷಿಣಾಮೂರ್ತಿಯವರು ನಿರ್ಮಿಸಿದ ಹೊಯ್ಸಳ ಶೈಲಿಯ ವೇಣುಗೋಪಾಲ ರಜತ ಶಿಲ್ಪಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ವಿಶ್ವಕರ್ಮ ಪ್ರಶಸ್ತಿ ದೊರೆತಿದೆ. ಈ ಶಿಲ್ಪವು 14ಇಂಚು ಎತ್ತರವಿದ್ದು, 5ಕೆಜಿ ಬೆಳ್ಳಿ, 100ಗ್ರಾಂ ಚಿನ್ನ ನವರತ್ನಗಳನ್ನು ಹೊಂದಿದ್ದು ಸುಮಾರು 10ಲಕ್ಷ ರೂ. ಬೆಳೆಬಾಳುತ್ತಿದೆ.[ಹಿಂದೂ ಮನೆ ಮನಗಳ ಚುಕ್ಕಿಚಿತ್ರ ಮತ್ತು ಸೌಭಾಗ್ಯ]

ಈ ಶಿಲ್ಪದ ವಿಶೇಷತೆ

ಈ ಶಿಲ್ಪದ ವಿಶೇಷತೆ ಏನೆಂದರೆ, ಕಣ್ಣು ತೇಲಿಸಿ ನೋಡಿದರೆ ಬೆಳ್ಳಿಯ ಹೊಳೆಯುವ ವಿಗ್ರಹವಾಗಿ ಕಾಣುತ್ತದೆ. ಇನ್ನು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಶಿಲ್ಪದ ಕಮಾನಿನಲ್ಲಿ ಮೂಡಿರುವ ದಶಾವತಾರ, ಮರ ಗಂಧರ್ವರು, ಭಕ್ತಗುಣ, ಗೋಪಿಕಾಸ್ತ್ರೀಯರು, ಗೋವುಗಳು, ಮಕರಂದ, ರಾಧಾ, ರುಕ್ಮಿಣಿ, ಏಳು ಹೆಡೆಯ ಸರ್ಪ ಮರಕ್ಕೆ ಸುತ್ತಿಕೊಂಡಂತೆ ಭಾಸವಾಗುತ್ತದೆ. ಇನ್ನು ಹಲವು ವಿಶೇಷತೆಗಳು ಈ ಶಿಲ್ಪದಲ್ಲಿ ಕಾಣಸಿಗುತ್ತದೆ. ಈಗ ತಾವು ಮಾಡುತ್ತಿರುವ ಕಲಾ ಪ್ರಕಾರದೊಂದಿಗೆ ಹೊಸತನವನ್ನು ರೂಢಿಸಿಕೊಂಡು ವಿಶಿಷ್ಟ ಮತ್ತು ವಿಭಿನ್ನವಾದ ಶಿಲ್ಪಗಳನ್ನು ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

English summary
Dhakshinamurthy is one of the famous sculptor of Mysuru. He has gave very beautiful form of gods. He is living at Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X