ಭಕ್ತಿ ಭಾವದಲ್ಲಿ ತೊಯ್ದು ತೊಪ್ಪೆಯಾದ ಚಾಮುಂಡಿ ಭಕ್ತರು
ಮೈಸೂರು, ಜುಲೈ 08 : ಆಷಾಢದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಭಕ್ತ ಸಮೂಹ ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಿ ಕೃತಾರ್ಥರಾದರು.
ಬೆಳಿಗ್ಗೆಯಿಂದಲೇ ಚಾಮುಂಡಿಬೆಟ್ಟದ ಪಾದದಿಂದ ಮೆಟ್ಟಿಲನ್ನೇರಿ ದೇವಾಲಯಕ್ಕೆ ಕೆಲವು ಭಕ್ತರು ತೆರಳಿದರೆ, ಮತ್ತೆ ಕೆಲವು ಭಕ್ತರು ಬಸ್ ಮೂಲಕ ತೆರಳಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು, ಭಕ್ತಿಪೂರ್ವಕವಾಗಿ ನಮಿಸಿದರು. [ಮೈಸೂರು ಚಾಮುಂಡಿ ಬೆಟ್ಟದಲ್ಲಿ 'ಆಪರೇಷನ್ ಚಾಮುಂಡಿ' ಯಾಕೆ?]
ಬೆಳಿಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದರಾದರೂ 10 ಗಂಟೆ ನಂತರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರಿಂದ ನೂಕು ನುಗ್ಗಲು ಕಂಡು ಬಂದಿತ್ತು. ಆದರೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಮಳೆಯನ್ನು ಲೆಕ್ಕಿಸದೆ ನಿಂತಿದ್ದ ಭಕ್ತರು, ಚಾಮುಂಡೇಶ್ವರಿಯ ದರ್ಶನ ಪಡೆದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ದೇವಾಲಯದ ಗರ್ಭಗುಡಿಯನ್ನು ದ್ರಾಕ್ಷಿ ಹಣ್ಣುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಅಲ್ಲದೆ ದೇವಾಲಯದ ಕಂಬಗಳಿಗೆ ತೆಂಗಿನಕಾಯಿಗಳನ್ನು ಕಟ್ಟಿ, ಹೂಗಳಿಂದ ಸಿಂಗರಿಸಲಾಗಿತ್ತು. ಈ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಆನಂದ. [ಚಾಮುಂಡಿ ಬೆಟ್ಟದಲ್ಲಿ ಸಂತೆ ಮಾಡಬೇಕಾ? ಭೈರಪ್ಪ ಪ್ರಶ್ನೆ]
ದೇವಿಯನ್ನು ಹೂವು ಹಣ್ಣು, ಚಿನ್ನಾಭರಣಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆ ಮೂರು ಗಂಟೆ ಬಳಿಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ ನಡೆಯಿತು. ಮುಂಜಾನೆ 5.30ರಿಂದ ರಾತ್ರಿವರೆಗೂ ಭಕ್ತರು ದೇವಿಯ ದರ್ಶನ ಪಡೆದರು. ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಮಿತಿ ವತಿಯಿಂದ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಚಾಮುಂಡಿಬೆಟ್ಟಕ್ಕೆ ತೆರಳುವವರಿಗೆ ಲಲಿತ್ಮಹಲ್ ಹೆಲಿಪ್ಯಾಡ್ನಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.