• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ಮೈಸೂರು ದಸರಾ ಸಂಭ್ರಮ ಬರೀ ನೆನಪಷ್ಟೆ

|

ಮೈಸೂರು, ಸೆಪ್ಟೆಂಬರ್ 21: ಕೊರೊನಾ ಸೋಂಕಿನ ಆತಂಕದ ನಡುವೆಯೇ ನಾಡಹಬ್ಬ ದಸರಾಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿಂದೆ ಇಷ್ಟೊತ್ತಿಗೆಲ್ಲ ಮೈಸೂರಿನಲ್ಲಿ ದಸರಾ ಹಬ್ಬದ ಕಳೆ ಎದ್ದು ಕಾಣುತ್ತಿತ್ತು. ಇಡೀ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡುತ್ತಿತ್ತು.

ದೂರದ ಪ್ರವಾಸಿಗರು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಹಬ್ಬದ ಸಿದ್ಧತೆಯಲ್ಲಿ ತೊಡಗಿರುತ್ತಿದ್ದ ಜನ ಕಂಡು ಬರುತ್ತಿದ್ದರು. ಸುತ್ತಮುತ್ತಲಿನ ಹಳ್ಳಿಗಳ ಜನ ಮೈಸೂರು ನಗರದಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರ ಮನೆಗೆ ಬಂದು ಒಂದೆರಡು ದಿನ ವಾಸ್ತವ್ಯ ಹೂಡಿ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾ ಖುಷಿಪಡುತ್ತಿದ್ದರು. ಆದರೆ ಈ ಬಾರಿ ಅದೆಲ್ಲ ಸಂಭ್ರಮದ ಮೇಲೆ ಕೊರೊನಾದ ಕರಿನೆರಳು ಬಿದ್ದಿದೆ. ಬಹುಶಃ ಹೊಸ ವರ್ಷದ ಆರಂಭದಲ್ಲಿ ಯಾರು ಕೂಡ ಇಂಥ ಕಂಡರಿಯದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತೇವೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ವರ್ಷದ ಎರಡು ತಿಂಗಳಷ್ಟೆ ಜನ ನೆಮ್ಮದಿಯಾಗಿದ್ದದ್ದು, ಮಾರ್ಚ್ ಬರುತ್ತಿದ್ದಂತೆಯೇ ಕೊರೋನಾ ಸೋಂಕು ದಾಳಿ ಆರಂಭಿಸಿತ್ತು. ಅಲ್ಲಿಂದ ಇಲ್ಲಿ ತನಕ ಏನೇನು ಆಯಿತು? ಎಲ್ಲವೂ ನಮ್ಮ ಕಣ್ಣಮುಂದೆ ಇದೆ.

 ಇದುವರೆಗೆ ಕಂಡರಿಯದ ಕಠಿಣ ಪರಿಸ್ಥಿತಿ

ಇದುವರೆಗೆ ಕಂಡರಿಯದ ಕಠಿಣ ಪರಿಸ್ಥಿತಿ

ಸದ್ಯದ ಪರಿಸ್ಥಿತಿಯಲ್ಲಿ ಆರೋಗ್ಯವಾಗಿದ್ದರೆ ಸಾಕು, ಏನಾದರೊಂದು ಕೆಲಸ ಮಾಡಿ ಜೀವನ ಸಾಗಿಸಬಹುದು ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಈಗ ಶೀಘ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತಪ್ಪಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು, ಅದಕ್ಕೂ ಮೀರಿ ಜೀವ ಉಳಿಸಿಕೊಳ್ಳುವುದೇ ಪ್ರತಿಯೊಬ್ಬರ ಮುಂದಿರುವ ಸವಾಲಾಗಿದೆ.

ಮೈಸೂರು ದಸರಾ 2020: ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯಕ್ಕೆ ಚಾಲನೆ

ಬಹಳಷ್ಟು ಉದ್ಯಮಗಳು ಬಾಗಿಲು ಮುಚ್ಚಿವೆ. ಅದನ್ನು ನಂಬಿದವರು ಬೀದಿಗೆ ಬಂದಿದ್ದಾರೆ. ಸಂಸ್ಥೆಗಳು ಉದ್ಯೋಗ ಕಡಿತ ಮಾಡಿದ್ದರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಮ್ಮ ಮುಂದೆ ಕಷ್ಟಗಳ ಸರಮಾಲೆ ಬೆಳೆಯುತ್ತಾ ಹೋಗುತ್ತದೆ. ಇವತ್ತು ಇದ್ದಂತೆ ನಾಳೆಯೂ ಇರುತ್ತದೆ ಎಂಬ ನಿರೀಕ್ಷೆಯಲ್ಲಿ ಇವತ್ತಿನ ಸ್ಥಿತಿಗತಿಯನ್ನು ನಂಬಿ ಸಾಲ ಮಾಡಿದವರ ಬದುಕು ಮೂರಾಬಟ್ಟೆಯಾಗಿದೆ.

 ದಸರಾ ಸಡಗರಕ್ಕೆ ತಣ್ಣೀರು ಎರಚಿದೆ ಕೊರೊನಾ ಭಯ

ದಸರಾ ಸಡಗರಕ್ಕೆ ತಣ್ಣೀರು ಎರಚಿದೆ ಕೊರೊನಾ ಭಯ

ಸಂಕಷ್ಟದ ಈ ದಿನಗಳಲ್ಲಿ ಹಾಸಿಗೆಯಿದ್ದಷ್ಟೆ ಕಾಲು ಚಾಚು ಎಂಬ ಗಾದೆಗೆ ತಕ್ಕಂತೆ ತನ್ನ ಬದುಕನ್ನು ಕಟ್ಟಿಕೊಳ್ಳುವ ಕಡೆಗೆ ಜನ ನಿಧಾನವಾಗಿ ವಾಲಿದ್ದಾರೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿದ್ದಾರೆ. ಇವತ್ತು ಮಾತ್ರವಲ್ಲದೆ, ನಾಳೆಗೆ ಒಂದಿಷ್ಟು ಇರಲಿ ಎಂಬ ಜಾಗ್ರತೆ ಮಾಡಲು ಆರಂಭಿಸಿದ್ದಾರೆ. ಈಗಿರುವ ಸಂಕಷ್ಟದಲ್ಲಿ ಹೆಚ್ಚಿನ ಜನಕ್ಕೆ ಹಬ್ಬ, ಜಾತ್ರೆ ಯಾವುದೂ ಬೇಡ ಎನ್ನುವಂತಾಗಿದೆ. ಇದ್ದವರು ಹಬ್ಬವನ್ನು ಖುಷಿಯಾಗಿ ಆಚರಿಸಿದರೆ, ಇಲ್ಲದವರು ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದೆ ಮಾಡಿದರಾಯಿತು ಎಂದು ತಾವೇ ತಮಗೆ ಸಮಾಧಾನ ಮಾಡಿಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ. ಇದೆಲ್ಲದರ ನಡುವೆ ಬದುಕುವುದಕ್ಕಾಗಿ ಮತ್ತು ಹಣ ಸಂಪಾದನೆಗಾಗಿ ಮೋಸ, ವಂಚನೆ, ಕಳ್ಳತನಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ದಸರಾ ಹತ್ತಿರವಾಗುತ್ತಿದ್ದರೂ ಸಂಭ್ರಮಿಸಲು ಯಾರಿಗೂ ಧೈರ್ಯವಿಲ್ಲದಾಗಿದೆ. ಕಾರಣ ಪ್ರತಿದಿನವೂ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗೆ ಯಾವಾಗ ಸೋಂಕು ತಗುಲಿ ಬಿಡುತ್ತದೆಯೋ ಎಂಬ ಭಯ ದಸರಾದ ಸಡಗರಕ್ಕೆ ತಣ್ಣೀರು ಎರಚಿದೆ.

 ಅರಮನೆನಗರಿಯಲ್ಲಿ ಕಾಣದ ದಸರಾ ರಂಗು

ಅರಮನೆನಗರಿಯಲ್ಲಿ ಕಾಣದ ದಸರಾ ರಂಗು

ಹಾಗೆನೋಡಿದರೆ ಇಷ್ಟರಲ್ಲೇ ಅರಮನೆ ನಗರಿಯಲ್ಲಿ ದಸರಾ ರಂಗು ಆರಂಭವಾಗಿ ಹಲವು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕಿತ್ತು. ಜತೆಗೆ ರಸ್ತೆಗಳನ್ನು ದುರಸ್ತಿ ಪಡಿಸುವ, ಕಟ್ಟಡಗಳಿಗೆ ಸುಣ್ಣ, ಬಣ್ಣ ಬಳಿಯುವ ಕಾರ್ಯಗಳು ನಡೆಯಬೇಕಿತ್ತು. ದಸರಾ ಜಂಬೂ ಸವಾರಿಯ ರೂವಾರಿಗಳಾದ ಸಾಕಾನೆಗಳು ನಗರಕ್ಕೆ ಆಗಮಿಸಿ ತಾಲೀಮು ನಡೆಸಬೇಕಿತ್ತು. ಸದ್ಯ ಅರಮನೆಯಲ್ಲಿನ ಸಿಂಹಾಸನವನ್ನು ಜೋಡಿಸಲಾಗಿದ್ದು, ಬಿಗಿ ಭದ್ರತೆಯಲ್ಲಿ ಇಟ್ಟಿರುವುದಷ್ಟೆ ದಸರಾವನ್ನು ಬರಮಾಡಿಕೊಂಡಂತೆ ಕಾಣುತ್ತಿದೆ.

ಅ.17 ರಂದು ಮೈಸೂರು ದಸರಾ ಉದ್ಘಾಟನೆ: ಅಭಿಮನ್ಯು ಹೆಗಲಿಗೆ ಅಂಬಾರಿ

 ದಸರಾ ಸಂಭ್ರಮ ಬರೀ ನೆನಪಷ್ಟೆ

ದಸರಾ ಸಂಭ್ರಮ ಬರೀ ನೆನಪಷ್ಟೆ

ಉಳಿದಂತೆ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಹೊರಗಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅನುಮಾನವಾಗಿದೆ. ಇನ್ನು ಅತಿವೃಷ್ಟಿ, ಪ್ರವಾಹ, ಎಡೆಬಿಡದೆ ಸುರಿಯುವ ಮಳೆಯಿಂದ ರೈತರು ಸಂಕಷ್ಟದಲ್ಲಿದ್ದರೆ, ಇತ್ತ ಪಟ್ಟಣದ ಮಂದಿಯೂ ನೆಮ್ಮದಿಯಾಗಿಲ್ಲ. ದಸರಾ ವರ್ಷಕ್ಕೊಮ್ಮೆ ಬರುವ ನಾಡ ಹಬ್ಬವಾಗಿರುವುದರಿಂದ ಅದನ್ನು ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ಹಾಗೂ ದೂರದ ಪ್ರವಾಸಿಗರು ಬಂದು ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅದೆಲ್ಲವೂ ಬರೀ ನೆನಪಷ್ಟೆ.

English summary
Preparations started in mysuru for dasara in between coronavirus fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X