ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ; ಸುತ್ತಮುತ್ತ ಏನೇನಾಗಿದೆ?

|
Google Oneindia Kannada News

ಮೈಸೂರು, ಅಕ್ಟೋಬರ್ 9: ಐತಿಹಾಸಿಕ ಮೈಸೂರು ದಸರಾಗೆ ರಂಗು ಬಂದಿದೆ. ಅರಮನೆ ಮತ್ತು ಅರಮನೆ ಆವರಣಕ್ಕಷ್ಟೇ ಸೀಮಿತವಾಗಿರುವ ದಸರಾ ಸಂಭ್ರಮದಲ್ಲಿ ತೇಲಲು ಎಲ್ಲರಿಗೂ ಅವಕಾಶವಿಲ್ಲದ ಕಾರಣದಿಂದ ಸದ್ಯ ಜನ ರಾತ್ರಿಯಾಗುತ್ತಿದ್ದಂತೆಯೇ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡುತ್ತಾ ಜಗಮಗಿಸುವ ವಿದ್ಯುದ್ದೀಪಗಳ ಅಲಂಕಾರ ನೋಡಿ ಖುಷಿಪಡುತ್ತಿದ್ದಾರೆ.

ಅರಮನೆ ಆವರಣದಲ್ಲಿ ಸೀಮಿತ ಪ್ರೇಕ್ಷಕರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳ ನೇರಪ್ರಸಾರವನ್ನು ಸಾಮಾಜಿಕ ಜಾಲತಾಣ, ಯೂಟ್ಯೂಬ್, ವೆಬ್‌ಸೈಟ್‌ಗಳ ಮೂಲಕ ನೋಡಲು ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದೆಡೆ ಸಂಜೆ ವೇಳೆಗೆ ನಗರದಲ್ಲಿ ಮಳೆ ಸುರಿಯುವುದು ಜನರಲ್ಲಿ ಬೇಸರ ಮೂಡಿಸಿದೆ. ಅರಮನೆ ಆವರಣದಲ್ಲಿ ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಯುತ್ತಿದೆ. ನವರಾತ್ರಿಯಲ್ಲಿ ಪ್ರತಿದಿನವೂ ಅರಮನೆಯಲ್ಲಿ ಹಲವು ವಿಧಿವಿಧಾನಗಳು ನಡೆಯಲಿದ್ದು, ಆನೆ, ಕುದುರೆ, ಒಂಟೆ, ಹಸುಗಳಿಗೆ ವಿಶೇಷ ಪೂಜೆಗಳು ನಡೆಯುತ್ತಿವೆ.

 ಸಂಭ್ರಮ ಅರಮನೆ ಆವರಣಕ್ಕಷ್ಟೇ ಸೀಮಿತ

ಸಂಭ್ರಮ ಅರಮನೆ ಆವರಣಕ್ಕಷ್ಟೇ ಸೀಮಿತ

ಅರಮನೆ ಆವರಣಕ್ಕಷ್ಟೇ ಈ ಬಾರಿ ಜಂಬೂಸವಾರಿ ಸೀಮಿತವಾಗಿರುವುದರಿಂದ ಮತ್ತು ಅರಮನೆ ಆವರಣಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಕಾರಣದಿಂದ ಅಲ್ಲಿ ನಾಡಹಬ್ಬದ ರಂಗು ಯಾವ ರೀತಿಯಲ್ಲಿ ಕಳೆಕಟ್ಟಿದೆ. ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದೇ ಗೊತ್ತಾಗದಂತಾಗಿದೆ. ಈ ಹಿಂದೆ ಕೊರೊನಾ ಬರುವುದಕ್ಕಿಂತ ಮೊದಲು ಸುಮಾರು ಹದಿನೈದಕ್ಕೂ ಹೆಚ್ಚು ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದವು. ಅವುಗಳನ್ನು ಪ್ರತಿದಿನ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸುಮಾರು ಐದು ಕಿ.ಮೀ.ನಷ್ಟು ದೂರ ನಡೆಸಿಕೊಂಡು ಬರುವ ಮೂಲಕ ತಾಲೀಮು ನಡೆಸಲಾಗುತ್ತಿತ್ತು. ಈ ದೃಶ್ಯಗಳನ್ನು ನೋಡಲು ಜನ ರಸ್ತೆಗಳಲ್ಲಿ ನೆರೆಯುತ್ತಿದ್ದರು. ಆದರೆ ಕಳೆದ ವರ್ಷದಿಂದ ಗಜಪಡೆಯನ್ನು ನೋಡುವ ಭಾಗ್ಯ ಸಾರ್ವಜನಿಕರಿಗೆ ಇಲ್ಲದಾಗಿದೆ.

 ವಿಕ್ರಮನಿಗೆ ಮದ, ಧನಂಜಯನಿಗೆ ಪಟ್ಟ

ವಿಕ್ರಮನಿಗೆ ಮದ, ಧನಂಜಯನಿಗೆ ಪಟ್ಟ

ಈ ಬಾರಿ ಜಂಬೂಸವಾರಿಗೆ ಎಂಟು ಆನೆಗಳನ್ನು ವಿವಿಧ ಆನೆ ಶಿಬಿರಗಳಿಂದ ಕರೆತರಲಾಗಿತ್ತು. ಆದರೆ ಈ ಪೈಕಿ ಪ್ರತಿವರ್ಷ ಪಟ್ಟದ ಆನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ವಿಕ್ರಮನಿಗೆ ಮದ ಬಂದಿರುವ ಕಾರಣ ದಸರಾ ಕಾರ್ಯಗಳಿಂದ ದೂರ ಇಡಲಾಗಿದೆ. ಶಬ್ದದ ತಾಲೀಮು ಸೇರಿದಂತೆ ಇತರೆ ಯಾವುದೇ ಚಟುವಟಿಕೆಗೂ ಅದಕ್ಕೆ ಅವಕಾಶ ನೀಡಿಲ್ಲ. ಇದುವರೆಗೆ ಅದಕ್ಕೆ ಮದ ಇಳಿಯದ ಕಾರಣ ಸದ್ಯ ಅದರ ದೇಹದ ಉಷ್ಣಾಂಶ ಕಡಿಮೆ ಮಾಡುವ ಸಲುವಾಗಿ ಬಾಳೆ ದಿಂಡು, ಮಜ್ಜಿಗೆ ಸೇರಿದಂತೆ ಕೆಲವು ನೈಸರ್ಗಿಕ ಪದಾರ್ಥಗಳನ್ನೇ ನೀಡುತ್ತಾ ಜತನದಿಂದ ನೋಡಿಕೊಳ್ಳಲಾಗುತ್ತಿದೆ.

 ಡಿಸಿಎಫ್ ಡಾ.ವಿ. ಕರಿಕಾಳನ್ ಹೇಳಿದ್ದೇನು?

ಡಿಸಿಎಫ್ ಡಾ.ವಿ. ಕರಿಕಾಳನ್ ಹೇಳಿದ್ದೇನು?

ಈ ಕುರಿತಂತೆ ಮಾಹಿತಿ ನೀಡಿರುವ ಡಿಸಿಎಫ್ ಡಾ.ವಿ. ಕರಿಕಾಳನ್, "ಪಟ್ಟದ ಆನೆಯ ಕಾರ್ಯನಿರ್ವಹಿಸಬೇಕಾಗಿದ್ದ ವಿಕ್ರಮನಿಗೆ ಇನ್ನೂ ಮದ ಇಳಿದಿಲ್ಲ. ಸಾಮಾನ್ಯವಾಗಿ ಆನೆಗೆ ಮದ ಬಂದರೆ ಮೂರ್ನಾಲ್ಕು ತಿಂಗಳು ಮದದ ಅಂಶ ದೇಹದಲ್ಲಿ ಇರುತ್ತದೆ. ಕೆಲವು ಆನೆಗಳಿಗೆ ಮದ ಬಂದ ಸಮಯದಲ್ಲಿ ಕೋಪ ಇದ್ದರೆ, ಇನ್ನು ಕೆಲವು ಆನೆಗಳಿಗೆ ಮದ ಇಳಿಯುವಾಗ ಕೋಪ ಹೆಚ್ಚಾಗಿರುತ್ತದೆ. ಇಲ್ಲಿ ವಿಕ್ರಮನಿಗೆ ಮದ ಇಳಿಯುವಾಗ ಕೋಪ ಹೆಚ್ಚಾಗಿದೆ. ಆದರೂ ಮಾವುತ ಹಾಗೂ ಕಾವಾಡಿಯ ಮಾತು ಕೇಳುತ್ತಿದೆ. ಪ್ರತಿದಿನ ಕಾಲ್ನಡಿಗೆಯಲ್ಲಿ ಪಾಲ್ಗೊಳ್ಳುತ್ತಿದೆ. ನೀರು ಕುಡಿಯಲು ಮಾವುತರೊಂದಿಗೆ ಹೋಗುತ್ತಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಸಿಡಿಮದ್ದು ಹಾಗೂ ಭಾರ ಹೊರಿಸುವ ತಾಲೀಮಿನಿಂದ ದೂರ ಇಟ್ಟಿರುವುದಾಗಿ," ಹೇಳಿದ್ದಾರೆ.

 ದಸರಾ ಸಡಗರ, ಸಂಭ್ರಮವನ್ನೇ ಮರೆತ ಜನ

ದಸರಾ ಸಡಗರ, ಸಂಭ್ರಮವನ್ನೇ ಮರೆತ ಜನ

ಪಟ್ಟದ ಆನೆ ವಿಕ್ರಮನಿಗೆ ಮದ ಬಂದ ಕಾರಣ ಸದ್ಯ ಅದರ ಜವಾಬ್ದಾರಿಯನ್ನು ಧನಂಜಯ ಆನೆಗೆ ವಹಿಸಲಾಗಿದೆ. ಅದಕ್ಕೆ ಗೋಪಾಲಸ್ವಾಮಿ ಆನೆಯು ಸಾಥ್ ನೀಡಲಿದೆ. ಇನ್ನು ಜಂಬೂಸವಾರಿಯಲ್ಲಿ ಅಭಿಮನ್ಯು ಅಂಬಾರಿ ಹೊತ್ತು ನಡೆದರೆ ಅದಕ್ಕೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರ ಕಾರ್ಯನಿರ್ವಹಿಸಿದರೆ, ಅಶ್ವತ್ಥಾಮ ಹಾಗೂ ಲಕ್ಷ್ಮಿ ಸಾಲಾನೆಗಳಾಗಿ ಪಾಲ್ಗೊಳ್ಳಲಿವೆ. ಒಟ್ಟಾರೆಯಾಗಿ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ನಡೆಯುತ್ತಿರುವುದರಿಂದ ದಸರಾ ಕುರಿತಂತೆ ಜನರಲ್ಲಿ ಯಾವುದೇ ರೀತಿಯ ಸಂಭ್ರಮ ಕಂಡು ಬರುತ್ತಿಲ್ಲ. ಪ್ರತಿ ವರ್ಷ ದಸರಾ ಎಂದರೆ ಸಾಕು ಜನರಲ್ಲಿ ಅದೇನೋ ಒಂದು ರೀತಿಯ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ಕೊರೊನಾ ಬಂದ ಬಳಿಕ ದಸರಾದ ಆ ಸಡಗರ, ಸಂಭ್ರಮವನ್ನೇ ಜನ ಮರೆತಂತೆ ಗೋಚರಿಸುತ್ತಿದೆ.

English summary
Cultural events are held in the Mysuru Palace premises in the presence of a limited audience, allowing them to watch live events through social networking site, YouTube and website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X