ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹೆಚ್ಚುತ್ತಿದೆ ಕೊರೊನಾ ಆರ್ಭಟ; ಮತ್ತೆ ಎದುರಾಗುತ್ತಾ ಲಾಕ್‌ಡೌನ್ ಸಂಕಟ!

By C Dinesh
|
Google Oneindia Kannada News

ಮೈಸೂರು, ಜನವರಿ 12: ದಿನದಿಂದ ದಿನಕ್ಕೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಮತ್ತೆ ಲಾಕ್‌ಡೌನ್ ಸಂಕಟ ಎದುರಾಗುತ್ತದಾ ಎಂದು ಸದ್ಯ ಸಾಂಸ್ಕೃತಿಕ ನಗರಿ ಮೈಸೂರಿಗರಲ್ಲಿ ಇಂತಹದ್ದೊಂದು ಆತಂಕ ಶುರುವಾಗಿದೆ. ನಿಧಾನಗತಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದ್ದ ಮೈಸೂರು ಜಿಲ್ಲೆಯಾದ್ಯಂತ ಮಹಾಮಾರಿ ಕೊರೊನಾ ಆರ್ಭಟ ಉಲ್ಬಣಿಸುತ್ತಿದ್ದು, ಮೈಸೂರಿಗರಲ್ಲಿ ಆತಂಕ ಹೆಚ್ಚುವಂತೆ ಮಾಡುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಪ್ರತಿಯೊಬ್ಬರಲ್ಲೂ ಮತ್ತೆ ಕೊರೊನಾ ಭೀತಿ ಶುರುವಾಗಿದೆ. ಕೆಲವು‌ ದಿನಗಳ ಹಿಂದೆ ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಎರಡಂಕಿ ಇದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಇದೀಗ 500ರ ಗಡಿದಾಟಿದ್ದು, ಸಾರ್ವಜನಿಕರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯನ್ನು ಗಮನಿಸುವುದಾದರೆ ಜನವರಿ 3ರಂದು 14 ಪ್ರಕರಣ, ಜ.4ರಂದು 48, ಜ.5ಕ್ಕೆ 59, ಜ.6ರಂದು 65, ಜ.7ಕ್ಕೆ 219, ಜ.8ರಂದು 203, ಜ.9ರಂದು 398, ಜ.10ರಂದು 309 ಹಾಗೂ ಜ.11ರಂದು 562 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಜನರ ಆತಂಕವನ್ನು ಹೆಚ್ಚುವಂತೆ ಮಾಡಿದೆ.

 ಕೊರೊನಾ ಎದುರಿಸಲು ಜಿಲ್ಲಾಡಳಿತ ಸಜ್ಜು

ಕೊರೊನಾ ಎದುರಿಸಲು ಜಿಲ್ಲಾಡಳಿತ ಸಜ್ಜು

ಈ ನಡುವೆ ಸದ್ದಿಲ್ಲದೆ ರಣಕೇಕೆ ಹಾಕುತ್ತಿರುವ ಕೊರೊನಾ ಮೂರನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆ ಕೈಗೊಂಡಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಸರ್ಕಾರಿ 14, ಖಾಸಗಿ 44 ಹಾಗೂ 21 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಒಟ್ಟು 6380 ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜೊತೆಗೆ ಜಿಲ್ಲೆಯಲ್ಲಿರುವ 17 ಆಕ್ಸಿಜನ್ ಪ್ಲಾಂಟ್‌ಗಳಲ್ಲಿ 12 ಈಗಾಗಲೇ ಕಾರ್ಯ ಕೈಗೊಂಡಿದ್ದು, ಇನ್ನು 5 ಪ್ಲಾಂಟ್‌ಗಳು ಈ ವಾರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ.

 ನಗರ ಮತ್ತು ತಾಲೂಕಿನಲ್ಲಿ ಶಾಲೆಗಳು ಬಂದ್

ನಗರ ಮತ್ತು ತಾಲೂಕಿನಲ್ಲಿ ಶಾಲೆಗಳು ಬಂದ್

ಇನ್ನು ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಮೈಸೂರು ನಗರ ಹಾಗೂ ಮೈಸೂರು ತಾಲೂಕು ವ್ಯಾಪ್ತಿಯ ಶಾಲೆ ಬಂದ್ ಮಾಡಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಇಂದಿನಿಂದ(ಜ.12) ಅನ್ವಯವಾಗುವಂತೆ ಮುಂದಿನ ಆದೇಶದ ವರೆಗೆ ಶಾಲೆ ಬಂದ್ ಮಾಡಲಾಗಿದ್ದು, 1ರಿಂದ 10ನೇ ತರಗತಿ ವರೆಗಿನ ಭೌತಿಕ ತರಗತಿಗಳು ಸ್ಥಗಿತಗೊಳಿಸಲಾಗಿದೆ. ಸರ್ಕಾರಿ ಹಾಗೂ ಅನುದಾನ ರಹಿತ ಹಾಗೂ ವಸತಿ ಶಾಲೆಗಳನ್ನು ಸಹ ಬಂದ್ ಮಾಡುವಂತೆ ಆದೇಶಿಸಲಾಗಿದ್ದು, ಈ ವೇಳೆಯಲ್ಲಿ ಆನ್‌ಲೈನ್ ತರಗತಿ ಆರಂಭಕ್ಕೆ ಸೂಚನೆ ನೀಡಲಾಗಿದೆ. ಮೈಸೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಹೆಚ್ಚಾಗಿರುವ ಸೋಂಕು ಹೆಚ್ಚುವ ಜೊತೆಗೆ ಶಾಲಾ ಮಕ್ಕಳಲ್ಲೂ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ತನ್ನ ರಣಾರ್ಭಟ ಶುರು ಮಾಡಿರುವ ಕೊರೊನಾ ಸೋಂಕು, ಶಾಲಾ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಸದ್ಯ ಮೈಸೂರಿನ ನಜರಾಬಾದ್ ಹಾಗೂ ಕೆ.ಆರ್. ನಗರ ಎರಡು ಕಡೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂದು ಮೈಸೂರು ಡಿಡಿಪಿಐ ರಾಮಚಂದ್ರರಾಜೇ ಅರಸ್ ಮಾಹಿತಿ ನೀಡಿದ್ದಾರೆ.

 ಮಾಸ್ಕ್ ಇಲ್ಲದೆ ರಸ್ತೆಗಿಳಿದರೆ ಹುಷಾರ್

ಮಾಸ್ಕ್ ಇಲ್ಲದೆ ರಸ್ತೆಗಿಳಿದರೆ ಹುಷಾರ್

ಕೊರೊನಾ ನಿಯಂತ್ರಣಕ್ಕೆ ತಯಾರಿ ಆರಂಭಿಸಿರುವ ಮೈಸೂರು ಜಿಲ್ಲಾಡಳಿತ, ಪ್ರತಿಯೊಬ್ಬರೂ ತಪ್ಪದೇ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದೆ. ಹೀಗಿದ್ದರೂ ಕೊರೊನಾ ನಿಯಂತ್ರಣ ನಿಯಮ ಪಾಲಿಸದಿದ್ದರೆ ದಂಡ ಹಾಕಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ನಗರದಲ್ಲಿ ಪಾಲಿಕೆ ಅಧಿಕಾರಿಗಳು ಮಾಸ್ಕ್ ತಪಾಸಣೆ ಆರಂಭಿಸಿದ್ದಾರೆ. ಆ ಮೂಲಕ ಜಿಲ್ಲಾಡಳಿತದ ಆದೇಶವನ್ನು ಲೆಕ್ಕಿಸದೆ ಹಾಗೂ ಕೊರೊನಾ ವಿಷಯದಲ್ಲಿ ಉಡಾಫೆ ತೋರುತ್ತಾ, ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಮರೆತು ಬೇಕಾಬಿಟ್ಟಿ ರಸ್ತೆಗಳಿದವರಿಗೆ ದಂಡ ಹಾಕಲಾಗುತ್ತಿದೆ. ಈಗಾಗಲೇ ಮಾನಸಗಂಗೋತ್ರಿ, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಸುತ್ತಾಡಿ ಮಾಸ್ಕ್ ಹಾಕದೇ ಇರುವವರ ಜೇಬಿಗೆ ಕತ್ತರಿ ಹಾಕಲಾಗಿದ್ದು, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಪಾಲಿಕೆ ವೈದ್ಯಾಧಿಕಾರಿ ನಾಗರಾಜ್ ನೇತೃತ್ವದಲ್ಲಿ ಮಾಸ್ಕ್ ತಪಾಸಣೆ ನಡೆಸಲಾಗುತ್ತಿದೆ.

 ಪ್ರವಾಸಿ ತಾಣಗಳೇ ಕೊರೊನಾ ಹಾಟ್ ಸ್ಪಾಟ್?

ಪ್ರವಾಸಿ ತಾಣಗಳೇ ಕೊರೊನಾ ಹಾಟ್ ಸ್ಪಾಟ್?

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ನಂತರ ಮೈಸೂರು ಕೊರೊನಾ ಹಾಟ್‌ಸ್ಪಾಟ್ ಆಗುತ್ತಾ? ಎಂಬ ಆತಂಕ ಶುರುವಾಗಿದೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ ಕೊರೊನಾ ಭೀತಿಯ ನಡುವೆಯೂ ಪ್ರತಿನಿತ್ಯ ನೂರಾರು ಪ್ರವಾಸಿಗರು ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದರಿಂದ ಪ್ರವಾಸಿ ತಾಣಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುವ ಬಗ್ಗೆ ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಮೈಸೂರಿನ ಚಾಮುಂಡಿಬೆಟ್ಟ, ಮೃಗಾಲಯ, ಅರಮನೆಗೆ ನಿತ್ಯವೂ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದು, ಈ ಎಲ್ಲಾ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸುತ್ತಿರುವುದ್ದು, ಜಿಲ್ಲಾಡಳಿತ ಎಡವಿದರೆ ಕೊರೊನಾ ಗಂಡಾಂತರ ಎದುರಾಗುವುದು ಗ್ಯಾರಂಟಿ.

Recommended Video

IPL ನಿಂದ‌ ಚೀನಾ ಕಂಪನಿ ವಿವೋ ಗೆ ಗೇಟ್ ಪಾಸ್:ಇನ್ಮುಂದೆ Tata IPL | Oneindia Kannada
 ಕೊರೊನಾ ಭೀತಿಗೆ ರೈತರು ತಲ್ಲಣ

ಕೊರೊನಾ ಭೀತಿಗೆ ರೈತರು ತಲ್ಲಣ

ಮಹಾಮಾರಿ ಕೊರೊನಾ ಮೂರನೇ ಅಲೆಯ ಆತಂಕ ಈಗಷ್ಟೇ ಶುರುವಾಗುತ್ತಿರುವ ನಡುವೆಯೇ ಜಿಲ್ಲೆಯ ರೈತರು ಕೊರೊನಾ‌ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ವೀಕೆಂಡ್ ಕರ್ಫ್ಯೂನಿಂದಾಗಿ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದ್ದು, ಪರಿಣಾಮ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ರೈತರು ಮಾರಾಟಕ್ಕೆಂದು ತಂದಿದ್ದ ತರಕಾರಿಗಳು ಬಿಕರಿಯಾಗದೆ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲೇ ಉಳಿದಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಹೀಗಾಗಿ ಸರ್ಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ರೈತರ ಮೇಲೆ ಕಾಳಜಿ ಇಲ್ಲದ ಸರ್ಕಾರ ಇದಾಗಿದೆ. ನಮ್ಮ ಸಮಸ್ಯೆ ಕೇಳುವವರು ಯಾರು ಇಲ್ಲ, ರೈತರಿಗೆ ಆತ್ಮಹತ್ಯೆ ಒಂದೇ ದಾರಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಒಟ್ಟಾರೆ ಕೊರೊನಾ ಮೂರನೇ ಅಲೆ ಆರಂಭದಲ್ಲೇ ತನ್ನ ಕರಾಳ ಮುಖವನ್ನು ತೋರುತ್ತಿದ್ದು, ಜಿಲ್ಲಾಡಳಿತ ಮಹಾಮಾರಿಯ ಹೊಡೆತವನ್ನು ಎದುರಿಸಲು ಸಕಲ ರೀತಿಯಲ್ಲೂ ಸಜ್ಜಾಗೊಂಡಿದ್ದು, ಮುಂದೆ ಏನಾಗಲಿದೆ ಎಂಬ ಭಯದೊಂದಿಗೆ ಜನರು ಜೀವನ ಸಾಗಿಸುತ್ತಿದ್ದಾರೆ.

English summary
Mysuru district has seen a significant increase in the number of Covid-19 cases from last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X