ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಚಾಮುಂಡೇಶ್ವರಿ ವರ್ಧಂತಿ ಉತ್ಸವ

By Yashaswini
|
Google Oneindia Kannada News

ಮೈಸೂರು, ಆಗಸ್ಟ್.3 : ಶ್ರೀ ಚಾಮುಂಡೇಶ್ವರಿ ವರ್ಧಂತಿ ಉತ್ಸವದ ಅಂಗವಾಗಿ ಚಾಮುಂಡಿಬೆಟ್ಟ ಸೇರಿದಂತೆ ನಗರದ ವಿವಿಧೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ಹಾಗೆಯೇ ರಾಜವಂಶಸ್ಥರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಕೆಯಾಯಿತು.

ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಜನರು ತೆರಳಿ ಅಮ್ಮನವರ ದರ್ಶನ ಪಡೆದು ಪುಳಕಗೊಂಡರು. ಬೆಟ್ಟದಲ್ಲಿ ಜನಜಂಗುಳಿ ಸೇರಿದ್ದರಿಂದ ಜಾತ್ರೆಯ ಕಳೆ ಮೂಡಿತ್ತು. ಬಸ್ ಗಳಲ್ಲಿ ಬಹಳ ಜನ ದಟ್ಟಣೆ ಇತ್ತು. ವ್ಯಾಪಾರದ ಭರಾಟೆಯೂ ಜೋರಾಗಿತ್ತು.

ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ದೇವಿಗೆ ವಿಶೇಷ ವರ್ಧಂತಿ ಉತ್ಸವಚಾಮುಂಡಿಬೆಟ್ಟದಲ್ಲಿ ಶುಕ್ರವಾರ ದೇವಿಗೆ ವಿಶೇಷ ವರ್ಧಂತಿ ಉತ್ಸವ

ದೇವತೆಯ ಚಿನ್ನದ ಪಲ್ಲಕ್ಕಿ ಉತ್ಸವ, ಸಾಂಪ್ರದಾಯಿಕ ರಥೋತ್ಸವ, ಮಂಟಪೋತ್ಸವದ ಜೊತೆಗೆ ಪ್ರಸಾದ ವಿನಿಯೋಗ ನಡೆಯಿತು.

ಬೆಳಗ್ಗೆಯಿಂದಲೇ ದಾನಿಗಳು ಬೆಟ್ಟಕ್ಕೆ ಆಗಮಿಸುವವರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದರು. ಅಲ್ಲದೆ, ವಿವಿಧ ಆಟೋ ಚಾಲಕರ ಸಂಘಗಳು, ಸೇವಾ ಸಂಸ್ಥೆಗಳು, ವೃತ್ತಗಳಲ್ಲಿ ದೇವರ ಪೂಜೆಯನ್ನು ನೆರವೇರಿಸಿ ಬಾತ್, ಮೊಸರನ್ನ, ಕೇಸರಿಬಾತ್ ಮತ್ತಿತರ ತಿಂಡಿಯನ್ನು ವಿತರಿಸುವ ಮೂಲಕ ವರ್ಧಂತಿಯನ್ನು ಆಚರಿಸಿದರು.

 ಚಾಮುಂಡೇಶ್ವರಿ ದರ್ಶನ ಪಡೆದ ಭಕ್ತರು

ಚಾಮುಂಡೇಶ್ವರಿ ದರ್ಶನ ಪಡೆದ ಭಕ್ತರು

ಚಾಮುಂಡೇಶ್ವರಿ ದೇವಿಯ ವರ್ಧಂತಿ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಅಮ್ಮನವರ ಜನ್ಮದಿನವೇ ಆಕೆಯ ದರ್ಶನ ಪಡೆಯಲು, ಭಕ್ತರು ಹೊತ್ತು ಮೂಡುವ ಮುನ್ನವೇ ಸರತಿ ಸಾಲಿನಲ್ಲಿ ನಿಂತಿದ್ದರು.

ವರ್ಧಂತಿ ಪ್ರಯುಕ್ತ ಮುಂಜಾನೆ 4 ಗಂಟೆಯಿಂದಲೇ ಪೂಜೆ, ಅಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಎಣ್ಣೆ ಸ್ನಾನ, ನಾನಾ ಅಭಿಷೇಕಗಳು ದೇವಿಗೆ ನಡೆದವು. ನೂಕು ನುಗ್ಗಲ ನಡುವೆಯೇ ಭಕ್ತರು ದೇವಿಯ ದರ್ಶನ ಪಡೆದರು.

 ಚಾಲನೆ ನೀಡಿದ ಯದುವೀರ್ ಒಡೆಯರ್

ಚಾಲನೆ ನೀಡಿದ ಯದುವೀರ್ ಒಡೆಯರ್

ಶುಕ್ರವಾರ ಬೆಳಗ್ಗೆ 10.35 ಗಂಟೆಗೆ ಮಹಾ ಮಂಗಳಾರತಿ ನಡೆಯಿತು. ಬಳಿಕ ಚಾಮುಂಡೇಶ್ವರಿ ದೇವಿಯ ಚಿನ್ನದ ಪಲ್ಲಕ್ಕಿಯ ಉತ್ಸವ ನಡೆಯಿತು. ಉತ್ಸವಕ್ಕೆ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.

ಈ ಸಂದರ್ಭ ಮೂೂರ್ತಿಯ ಪ್ರದಕ್ಷಿಣೆ ನಡೆಯಿತು. ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಪ್ರಮೋದಾ ದೇವಿ ಒಡೆಯರ್, ತ್ರಿಷಿಕಾ ಕುಮಾರಿ ಸಿಂಗ್ ಇದ್ದರು.

 ವಿಶೇಷ ಜಲದ ಅಭಿ‍ಷೇಕ

ವಿಶೇಷ ಜಲದ ಅಭಿ‍ಷೇಕ

ಚಾಮುಂಡೇಶ್ವರಿ ದೇವಿಯ ವರ್ಧಂತಿ ಪ್ರಯುಕ್ತ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನ ಜಾವ 3 ಗಂಟೆಗೆ ದೇವಿಕೆರೆಯಿಂದ ವಿಶೇಷವಾಗಿ ಜಲವನ್ನು ತಂದು ಅಭಿಷೇಕ ಮಾಡಲಾಯಿತು.

ತೈಲ ಮಜ್ಜನ, ಅರಿಶಿನ ಪೂಜೆ ನಂತರ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ ಮಂಗಳಾರತಿಗಳು ಸಾಂಗೋಪಾಂಗವಾಗಿ ನೆರವೇರಿದವು.

 ಸಿಹಿ ತಿಂಡಿ ಅರ್ಪಣೆ

ಸಿಹಿ ತಿಂಡಿ ಅರ್ಪಣೆ

ಐದು ಬಗೆಯ ಸಿಹಿ ತಿಂಡಿಗಳನ್ನು ದೇವಿಗೆ ಅರ್ಪಿಸಲಾಯಿತು. ಅರಮನೆಯಿಂದ ತಂದಿದ್ದ ವಿಶೇಷ ಅಲಂಕೃತ ಚಿನ್ನದ ಪಲ್ಲಕ್ಕಿಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನಿರಿಸಲಾಯಿತು. ಪೊಲೀಸ್ ಬ್ಯಾಂಡ್‌ನ ನಿನಾದದೊಂದಿಗೆ ದೇವಿಯನ್ನು ಹೊತ್ತ ರಥ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿತು.

English summary
Chamundeshwari Vardhanti Festival held lavishly at Mysore. Special poojas and anna santarpana program took place on Friday in various parts of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X