ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಕಾಡಿನ ಮಕ್ಕಳಿಗಿಲ್ಲ ಮೈಸೂರು ದಸರಾ ಸಂಭ್ರಮ

|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 19: ಮೈಸೂರು ದಸರಾಕ್ಕೆ ಸಾಕಾನೆಗಳೊಂದಿಗೆ ಕುಟುಂಬ ಸಹಿತ ಮೈಸೂರಿಗೆ ತೆರಳುತ್ತಿದ್ದ ಮಾವುತರು ಮತ್ತು ಕಾವಾಡಿಗಳು ಇದೀಗ ತಮ್ಮ ಶಿಬಿರದಲ್ಲೇ ಉಳಿದಿದ್ದು, ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕೊರೊನಾ ಮಹಾಮಾರಿ ಅಡ್ಡ ಬಂದಿದ್ದಕ್ಕೆ ಅವರೆಲ್ಲರೂ ಹಿಡಿ ಶಾಪ ಹಾಕುತ್ತಿದ್ದಾರೆ.

ಇದುವರೆಗೆ ಕೊಡಗು, ಮೈಸೂರು ಮತ್ತು ಚಾಮರಾಜನಗರದಲ್ಲಿರುವ ಆನೆ ಶಿಬಿರಗಳಿಂದ ಸಾಕಾನೆಗಳನ್ನು ಮೈಸೂರು ದಸರಾಕ್ಕೆ ಕಳುಹಿಸಿಕೊಡಲಾಗುತ್ತಿತ್ತು. ದಸರಾ ಜಂಬೂಸವಾರಿಯಲ್ಲಿ ಸುಮಾರು ಹನ್ನೆರಡು ಆನೆಗಳು ಪಾಲ್ಗೊಳ್ಳುತ್ತಿದ್ದವು. ಆಗ ಎಲ್ಲ ಆನೆ ಶಿಬಿರಗಳಿಂದಲೂ ಸಾಕಾನೆಗಳನ್ನು ಮೈಸೂರಿಗೆ ಕಳುಹಿಸಲಾಗುತ್ತಿತ್ತು. ಜತೆಯಲ್ಲಿ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರು ಮೈಸೂರಿಗೆ ತೆರಳಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ದಸರಾ ಸಂಭ್ರಮದಲ್ಲಿ ಅವರು ಕೂಡ ಭಾಗಿಯಾಗುತ್ತಿದ್ದರು. ಈ ಬಾರಿ ಅದ್ಯಾವುದೂ ಆಗಲೇ ಇಲ್ಲ. ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ನಡೆಸಲು ತೀರ್ಮಾನಿಸಿ ಕೇವಲ ಐದು ಆನೆಗಳಿಗೆ ಸೀಮಿತಗೊಳಿಸಿದ್ದರಿಂದ ಪ್ರತಿ ವರ್ಷವೂ ಸಾಕಾನೆಗಳೊಂದಿಗೆ ಮೈಸೂರಿಗೆ ತೆರಳುತ್ತಿದ್ದವರು ತಮ್ಮ ಶಿಬಿರಗಳಲ್ಲಿಯೇ ಉಳಿದುಕೊಳ್ಳುವಂತಾಗಿದೆ.

ದಸರಾ ನೆನಪನ್ನು ಮೆಲುಕು ಹಾಕಬೇಕಾಗಿದೆ

ದಸರಾ ನೆನಪನ್ನು ಮೆಲುಕು ಹಾಕಬೇಕಾಗಿದೆ

ಮೊದಲಿನಿಂದಲೂ ಅಪ್ಪ ಅಮ್ಮಂದಿರೊಂದಿಗೆ ಮೈಸೂರಿಗೆ ತೆರಳಿ ಅರಮನೆ ಮೈದಾನದಲ್ಲಿ ನಿರ್ಮಿಸಲಾಗುತ್ತಿದ್ದ ತಾತ್ಕಾಲಿಕ ಶೆಡ್ ನಲ್ಲಿ ವಾಸ್ತವ್ಯ ಹೂಡಿ ಆನೆಗಳೊಂದಿಗೆ ಬೆರೆತು, ಟೆಂಟ್ ಶಾಲೆಯಲ್ಲಿ ಕಲಿತು, ದಸರಾ ಸಡಗರವನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಿದ್ದ ಮಾವುತರು ಮತ್ತು ಕಾವಾಡಿಗಳ ಮಕ್ಕಳು ಹಿಂದಿನ ದಸರಾ ನೆನಪನ್ನು ಮೆಲುಕು ಹಾಕುತ್ತಾ ತಮ್ಮ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯ ವ್ಯಾಪ್ತಿ ಪ್ರದೇಶದ ಐನೂರು ಮಾರಿಗುಡಿ ವಲಯದ ರಾಂಪುರ ಆನೆ ಶಿಬಿರದಲ್ಲಿರುವ ಜಯಪ್ರಕಾಶ್, ಚೈತ್ರಾ, ಲಕ್ಷ್ಮೀ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳು ದಸರಾಕ್ಕೆ ತೆರಳಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ಅವಕಾಶ ತಪ್ಪಿದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆ ಆರಂಭಿಸಲಾಗುತ್ತಿತ್ತು

ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆ ಆರಂಭಿಸಲಾಗುತ್ತಿತ್ತು

ಇದುವರೆಗೆ ಆನೆಗಳ ಜೊತೆ ಮಾವುತರು ಮತ್ತು ಕಾವಾಡಿಗರ ಕುಟುಂಬ ಕೂಡ ಸರಿಸುಮಾರು ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ಬೀಡು ಬಿಡುತ್ತಿದ್ದರು. ಇವರಿಗೆ ಮೂಲ ಸೌಲಭ್ಯವನ್ನು ನೀಡುತ್ತಿದ್ದ ಸರ್ಕಾರ ಅವರಿಗೆ ವಾಸ್ತವ್ಯಕ್ಕೆ ಟೆಂಟ್ ನಿರ್ಮಿಸುತ್ತಿತ್ತು. ಅಲ್ಲದೇ ಮಕ್ಕಳಿಗೆ ತಾತ್ಕಾಲಿಕವಾಗಿ ಶಾಲೆ ಆರಂಭಿಸಲಾಗುತ್ತಿತ್ತು. ಇನ್ನು ಮಾವುತರ ಕುಟುಂಬಕ್ಕೆ ವಿಶೇಷ ಭೋಜನ ಕೂಟವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಸದ್ಯ ಇದಕ್ಕೆಲ್ಲಾ ಕೊರೊನಾ ಬ್ರೇಕ್ ನೀಡಿದ್ದು, ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದ ಮಾವುತರ, ಕಾವಾಡಿಗರ ಕುಟುಂಬ ಈ ಬಾರಿ ಕಾಡಿನಲ್ಲಿಯೇ ಉಳಿದುಕೊಂಡಿದೆ.

ದಸರಾದಲ್ಲಿ ಬಂಡೀಪುರದ ಆನೆಗಳು ಭಾಗವಹಿಸುತ್ತಿಲ್ಲ

ದಸರಾದಲ್ಲಿ ಬಂಡೀಪುರದ ಆನೆಗಳು ಭಾಗವಹಿಸುತ್ತಿಲ್ಲ

ಈ ಕುರಿತಂತೆ ಮಾತನಾಡಿರುವ ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಅವರು, ಕಳೆದ ವರ್ಷ ಮೈಸೂರು ದಸರಾಗೆ ಬಂಡೀಪುರದಿಂದ ಜಯಪ್ರಕಾಶ್, ಲಕ್ಷ್ಮಿ ಆನೆಗಳು ಭಾಗವಹಿಸಿದ್ದವು. ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ದಸರಾದಲ್ಲಿ ಬಂಡೀಪುರದ ಆನೆಗಳು ಭಾಗವಹಿಸುತ್ತಿಲ್ಲ. ಮುಂದಿನ ವರ್ಷದ ದಸರಾಕ್ಕೆ ಬಂಡೀಪುರದಿಂದ ಹೆಚ್ಚು ಆನೆಗಳು ಭಾಗವಹಿಸಲು ಎಲ್ಲ ರೀತಿಯ ತರಬೇತಿ ನೀಡಲಾಗುವುದು ಮುಂದಿನ ವರ್ಷದ ದಸರಾಕ್ಕಾಗಿ ಪಾರ್ಥಸಾರಥಿ, ಕೃಷ್ಣ, ರೋಹಿತ ಆನೆಗಳಿಗೆ ಹೆಚ್ಚಿನ ತರಬೇತಿ ನೀಡಿ ಸಿದ್ಧಗೊಳಿಸುವುದಾಗಿ ಹೇಳಿದ್ದಾರೆ.

ನಮಗೆ ನಿರಾಸೆ ಉಂಟಾಗಿದೆ

ನಮಗೆ ನಿರಾಸೆ ಉಂಟಾಗಿದೆ

ಇನ್ನು ವರ್ಷಂಪ್ರತಿ ಮೈಸೂರು ದಸರಾದಲ್ಲಿ ಭಾಗವಹಿಸುತ್ತಿದ್ದ ರಾಂಪುರ ಆನೆ ಶಿಬಿರದ ಚೈತ್ರ ಆನೆಯ ಮಾವುತ ಭೋಜ ಮಾತನಾಡಿ, ಕಳೆದ ವರ್ಷ ಮೈಸೂರು ದಸರಾಗೆ ಹೋಗಿದ್ದೀವಿ, ತುಂಬಾ ಚೆನ್ನಾಗಿ ಇತ್ತು. ಈ ಸಲ ಹೋಗಲ್ಲ. ಕೊರೊನಾ ವೈರಸ್ ಕಾರಣದಿಂದಾಗಿ ಕೆಲವೇ ಕೆಲವು ಆನೆಗಳು ಭಾಗವಹಿಸಬೇಕಿದೆ ಅಂತ ಸರ್ಕಾರ ಹೇಳಿರುವುದರಿಂದ ನಮಗೆ ನಿರಾಸೆ ಉಂಟಾಗಿರುವುದಾಗಿ ಎಂದು ತಿಳಿಸಿದ್ದಾರೆ.

English summary
The family of Kavadigas are not participating in the Mysuru Dasara this time due to the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X