ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷ ಕಟ್ಟಿ ಬೆಳೆಸಿದ ನೂತನ ಸಚಿವರಿಗೆ ಶುಭಾಶಯ: ಎಸ್.ಎ. ರಾಮದಾಸ್ ವ್ಯಂಗ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್ 04: ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಕೊನೆಗೂ ಮುಗಿದಿದೆ. ಇಂದು (ಆ.4) ಮಧ್ಯಾಹ್ನ 2.30ಕ್ಕೆ ನೂತನ ಸಚಿವರುಗಳು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 29 ಶಾಸಕರುಗಳು ಮೊದಲ ಹಂತದಲ್ಲಿ ಬಿಜೆಪಿ ಹೈಕಮಾಂಡ್ ಅನುಮತಿಯೊಂದಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವು ಬಿಜೆಪಿ ಶಾಸಕರಿಗೆ ಇಂದು ನಿರಾಸೆಯಾಗಿದ್ದು, ಅದರಲ್ಲೂ ಮೂಲ ಬಿಜೆಪಿಗರು ಹಾಗೂ ಪಕ್ಷ ನಿಷ್ಠರು ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲಿ ಮೈಸೂರು ಜಿಲ್ಲೆಯ ಶಾಸಕರಾದ ಎಸ್.ಎ. ರಾಮದಾಸ್ ಕೂಡ ಒಬ್ಬರಾಗಿದ್ದಾರೆ.

"ಸವಾಲಿನ ದಿನವಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸುತ್ತೇನೆ, ನಾನು ನೋವಿನಲ್ಲಿಲ್ಲ. ಮಂತ್ರಿ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ,'' ಎಂದಿರುವ ಮೈಸೂರಿನ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಸೈನಿಕನ‌ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ

ಸೈನಿಕನ‌ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ

ಮೈಸೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮನುಷ್ಯ ಜೀವನದಲ್ಲಿ ನಿರೀಕ್ಷೆ ಇಟ್ಟುಕೊಂಡು ಬದುಕುವುದಿಲ್ಲ. ಬಂದಂತ ವಿಚಾರವನ್ನು ಸ್ವೀಕಾರ ಮಾಡುವುದು ಮನುಷ್ಯನ ಅರ್ಹತೆ ಮೇಲೆ‌ ಇರುತ್ತದೆ. ನನ್ನ ತಂದೆ ಸೈನಿಕ, ಸೈನಿಕನ‌ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ. ನಾನು ಯಾವುದಕ್ಕೂ ಬೇಸರ ಪಟ್ಟುಕೊಳ್ಳುವುದಿಲ್ಲ. ಈ ಬಾರಿ ಸಚಿವನಾಗುವ ಬಗ್ಗೆ ನಿರೀಕ್ಷೆ ಇದ್ದಿದ್ದು ಸಹಜ, ಆದರೆ ಬೇರೆ ಲೆಕ್ಕಚಾರದ ಮೂಲಕ ಸಂಪುಟ ಮಾಡಿದ್ದಾರೆ ಎಂದ ಅವರು, ನನಗೆ ಅರ್ಹತೆ ಎನ್ನುವುದಕ್ಕಿಂತ ಅನುಭವ ಇದೆ,'' ಎನ್ನುವ ಮೂಲಕ ಪರೋಕ್ಷ ಅಸಮಾಧಾನ ಹೊರ ಹಾಕಿದರು.

"ನಾನು ಮಿಲಿಟರಿ ಅಧಿಕಾರಿ ಮಗ, ಮಿಲಿಟರಿ ಅಧಿಕಾರಿಯ ರಕ್ತ ನನ್ನ ಮೈನಲ್ಲಿ ಹರಿಯುತ್ತಿದೆ. ಹೀಗಾಗಿ ನಾನು ಯಾವುದಕ್ಕೂ ಬೇಸರಪಟ್ಟು ಕೊಳ್ಳುವುದಿಲ್ಲ. ಆದರೆ ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತದೆ ಅಂತಾ ಅಂದುಕೊಂಡೆವು, ಸಿಗಲಿಲ್ಲ. ಪಕ್ಷವನ್ನು ನಿರಂತರವಾಗಿ ಸಂಘಟಿಸಿದ್ದೇನೆ,'' ಎಂದು ಹೇಳಿದರು.

 ದೆಹಲಿ ನಾಯಕರು ಅಭಿನಂದನೆ ಸಲ್ಲಿಸಿದ್ದರು

ದೆಹಲಿ ನಾಯಕರು ಅಭಿನಂದನೆ ಸಲ್ಲಿಸಿದ್ದರು

"ರಾಜ್ಯಕ್ಕೆ ಏನು ಕೆಲಸ ಮಾಡಬೇಕೆಂದು ಕನಸು ಇಟ್ಟುಕೊಂಡಿದ್ದೇನೋ ಅದನ್ನು ಈಗ ಕೃಷ್ಣರಾಜ ಕ್ಷೇತ್ರಕ್ಕೆ ಮಾಡುತ್ತೇನೆ. ಹೀಗಾಗಿ ಇದು ದುಃಖದ ದಿನವಲ್ಲ. ಸವಾಲಿನ ದಿನವಾಗಿ ಸ್ವೀಕರಿಸಿ ಪಕ್ಷವನ್ನು ಸಂಘಟಿಸುತ್ತೇನೆ, ನಾನು ನೋವಿನಲ್ಲಿಲ್ಲ. ಮಂತ್ರಿಯ ಸ್ಥಾನ ಇಲ್ಲದಿದ್ದರೂ ಕೆಲಸ ಮಾಡುತ್ತೇನೆ,'' ಎಂದು ಪಕ್ಷದ ಹಿರಿಯ ನಾಯಕರಿಗೆ ಪರೋಕ್ಷ ಟಾಂಗ್ ಕೊಟ್ಟರು.

"ಮಾಜಿ ಸಿಎಂ ಬಿಎಸ್‌ವೈ ಮೊನ್ನೆ ನನ್ನ ಹೆಸರು ಪಟ್ಟಿಯಲಿದೆ ಅಂತಾ ನನಗೆ ಹೇಳಿದ್ದರು. ನಿನ್ನಂಥವನು ಮಂತ್ರಿ ಆಗಬೇಕು, ಅದಕ್ಕೆ ಪಟ್ಟಿಯಲ್ಲಿ ಹೆಸರು ಸೇರಿಸಿದ್ದೇನೆ ಎಂದು ಹೇಳಿದರು. ಅಲ್ಲದೇ ನನಗೆ ನಿನ್ನೆ ದೆಹಲಿ ನಾಯಕರು, ಸ್ವಾಮೀಜಿಗಳು ಅಭಿನಂದನೆ ಸಲ್ಲಿಸಿದ್ದರು. ನಿನ್ನೆ ರಾತ್ರಿ ನನಗೆ ಬಹಳ ಜನ ಅಭಿನಂದಿಸಿದ್ದರು. ಆದರೆ ಬೆಳಗ್ಗೆ ಆಗುವವರೆಗೆ ಎಲ್ಲವೂ ಬದಲಾಗಿದೆ, ಕೊನೆ ಕ್ಷಣದಲ್ಲಿ ನನ್ನ ಹೆಸರು ಡಿಲೀಟ್ ಆಗಿದೆ,'' ಎಂದರು.

 ನೂತನ ಸಚಿವರಿಗೆ ಅಭಿನಂದನೆ

ನೂತನ ಸಚಿವರಿಗೆ ಅಭಿನಂದನೆ

"ನಾನು ಮೆರಿಟ್ ವಿದ್ಯಾರ್ಥಿ ಆಗಿದ್ದು, ಲಾಬಿಯಲ್ಲಿ ನಂಬಿಕೆ ಇಟ್ಟಿಲ್ಲ. ಆದ್ದರಿಂದ ನನಗೆ ಯಾಕೆ ಸಚಿವ ಸ್ಥಾನ ಕೈತಪ್ಪಿತು ಎಂದು ಪೋಸ್ಟ್ ಮಾರ್ಟಂ ಮಾಡುವುದಿಲ್ಲ, ನನಗೆ ಹೆಣ ಕೊಯ್ಯುವುದರಲ್ಲಿ ಆಸಕ್ತಿ ಇಲ್ಲ. ನನ್ನದ್ದು ಮಿಲಿಟರಿ ಜಾತಿ‌. ನಾನು ಜನಿವಾರ ಮತ್ತೊಂದು ಚಿಂತೆ ಮಾಡುವವನಲ್ಲ,'' ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಶಾಸಕರಿಗೆ ಶಾಸಕ ಎಸ್.ಎ. ರಾಮದಾಸ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪಕ್ಷ ಕಟ್ಟಿ ಬೆಳೆಸಿ, ಅರ್ಹತೆ ಹೊಂದಿ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ನೂತನ ಸಚಿವರಿಗೆ ಅಭಿನಂದನೆಗಳು. ಕರ್ನಾಟಕವನ್ನು ದೇಶದಲ್ಲಿ ನಂ.1 ಮಾಡಲು ತಾವೆಲ್ಲ ಶ್ರಮಿಸುತ್ತಿರೆಂದು ನಂಬಿರುತ್ತೇನೆ. ತಮ್ಮೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಶುಭವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ,'' ಎಂದು ವ್ಯಂಗ್ಯದ ಮೂಲಕ ಬೇಸರ ಹೊರಹಾಕಿದ್ದಾರೆ.

ರಾಮದಾಸ್ ಪರ ಬ್ಯಾಟಿಂಗ್

ಶಾಸಕ ರಾಮದಾಸ್‌ಗೆ ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರಾಮದಾಸ್ ಪರ ಭರ್ಜರಿ ಬ್ಯಾಟಿಂಗ್ ಶುರುವಾಗಿದೆ. ಹೀಗಾಗಿ ರಾಮದಾಸ್ ಶುಭಾಶಯ ಟ್ವೀಟ್‌ಗೆ ರೀ ಕಮೆಂಟ್ ಮಾಡಿರುವ ಅನೇಕರು, ಮೈಸೂರು ಕರ್ನಾಟಕದಲ್ಲಿ ಇರುವುದು ಮರೆತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ ಮರೆತರೆ ಚೆನ್ನಾಗಿರುತ್ತದೆ ಎಂದು ಬರೆಯುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆ, ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆ ಗೊಂದಲಕ್ಕೆ ಬಹುತೇಕ ತೆರೆಬಿದ್ದಿದ್ದು, 29 ಮಂದಿ ಶಾಸಕರು ಸಚಿವರಾಗಿ ಸಂಪುಟ ಸೇರ್ಪಡೆಯಾಗುತ್ತಿದ್ದಾರೆ. ಆದರೆ ನೂತನ ಸಚಿವ ಸಂಪುಟದಲ್ಲಿ ಮೈಸೂರಿನ ಹಿರಿಯ ಶಾಸಕ ರಾಮದಾಸ್ ಸೇರಿದಂತೆ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮೈಸೂರಿನ ಚಾಮರಾಜಕ್ಷೇತ್ರದ ಶಾಸಕ ಎಲ್.‌ನಾಗೇಂದ್ರ ಹಾಗೂ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್‌ರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

English summary
Mysuru district MLA S.A. Ramadas have indirectly expressed his displeasure on Karnataka Cabinet Expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X