ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಎಂಟ್ರಿ, ಕಾದು ನೋಡುವ ತಂತ್ರದಲ್ಲಿ ಜಿಟಿಡಿ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 22: ಹಳೆ ಮೈಸೂರಿನತ್ತ ಮೂರು ರಾಜಕೀಯ ಪಕ್ಷಗಳು ದೃಷ್ಠಿ ನೆಟ್ಟಿವೆ. ಅದರಲ್ಲೂ ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದ್ದು, ತನ್ನ ಪ್ರಾಬಲ್ಯ ಸಾಧಿಸಲು ಬೇಕಾದ ತಂತ್ರಗಳನ್ನು ಈಗಿನಿಂದಲೇ ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಒಕ್ಕಲಿಗರ ಪ್ರಭಾವಿ ನಾಯಕ ಜಿ.ಟಿ.ದೇವೇಗೌಡರ ನಡೆಯತ್ತ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯಿದೆ. ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೊದಲ ಸ್ಥಾನಗಳಲ್ಲಿದ್ದು ಕೊಂಡು ಒಂದಕ್ಕೊಂದು ಪೈಪೋಟಿ ನೀಡುತ್ತಿದ್ದವು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಬಿಜೆಪಿಯೂ ಕೆಲವು ಕ್ಷೇತ್ರಗಳಲ್ಲಿ ಇದೆರಡು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಜತೆಗೆ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದೆ. ಹೀಗಾಗಿ ಚುನಾವಣೆಗೆ ದಿನಗಳು ಹತ್ತಿರವಿರುವಾಗಲೇ ಈ ಹಿಂದಿನ ಸರ್ಕಾರಗಳು ಏನೆಲ್ಲಾ ತಂತ್ರ ಮಾಡಿದ್ದವೋ ಅದನ್ನೇ ಮಾಡಲು ಶುರು ಮಾಡಿದೆ.

ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ತಂತ್ರಗಳನ್ನೇ ಬಿಜೆಪಿ ಮಾಡುತ್ತಿದೆ. ಈಗಾಗಲೇ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಖಾತೆ ತೆರೆದಿರುವ ಬಿಜೆಪಿ ಮುಂದೆ ಇನ್ನಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕೆಲವೊಂದು ಅಭಿವೃದ್ಧಿಯ ಕಾಮಗಾರಿಗೆ ಭೂಮಿಪೂಜೆ ನಡೆಸಿ ಅನುದಾನ ಘೋಷಣೆ ಮಾಡಿದೆ. ಆ ಮೂಲಕ ಮಂಡ್ಯದ ಜನರೊಂದಿಗೆ ನಾವಿದ್ದೇವೆ ಎನ್ನುವುದನ್ನು ತೋರಿಸುವ ಯತ್ನಕ್ಕೆ ಕೈ ಹಾಕಿದೆ.

ಬಿಜೆಪಿ ನಾಯಕರಿಗೆ ಹಳೆ ಮೈಸೂರಿನತ್ತ ಮೊದಲಿನಿಂದಲೂ ಕಣ್ಣಿದೆ. ಹೇಗಾದರೂ ಮಾಡಿ ಈ ಭಾಗದಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಬೇಕೆನ್ನುವ ಬಯಕೆಯನ್ನಿಟ್ಟುಕೊಂಡೇ ಇಲ್ಲಿ ತನಕ ಬಂದಿದ್ದಾರೆ. ಎಷ್ಟೇ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದರೂ ಪ್ರಭಾವಿ ಸಮುದಾಯದ ಅಥವಾ ಪ್ರಭಾವಿ ನಾಯಕರನ್ನು ಹುಟ್ಟು ಹಾಕವುದು ಬಿಜೆಪಿಗೆ ಕಷ್ಟವಾಗಿದೆ. ಈಗಾಗಲೇ ಕೆಲವೊಂದಿಷ್ಟು ನಾಯಕರಿದ್ದರೂ ತಮ್ಮೊಂದಿಗೆ ಇತರೆ ಕ್ಷೇತ್ರದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಷ್ಟರ ಮಟ್ಟಿಗೆ ಬೆಳೆದವರು ವಿರಳವೇ..

 ದೇವೇಗೌಡ ಬಿಜೆಪಿಗೆ ಅಸ್ತ್ರವಾಗಬಹುದಾ?

ದೇವೇಗೌಡ ಬಿಜೆಪಿಗೆ ಅಸ್ತ್ರವಾಗಬಹುದಾ?

ಎಲ್ಲರಿಗೂ ಗೊತ್ತಿರುವಂತೆ ಹಳೆ ಮೈಸೂರಿನಲ್ಲಿ ಒಕ್ಕಲಿಗರ ಪ್ರಭಾವವಿದ್ದು, ಇಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡಬಹುದಾದ ನಾಯಕನನ್ನು ಹುಟ್ಟು ಹಾಕುವಲ್ಲಿ ಬಿಜೆಪಿ ಸಫಲವಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಹೀಗಾಗಿ ಆಪರೇಷನ್ ಕಮಲದ ಮೂಲಕವೇ ಒಂದಷ್ಟು ನಾಯಕರನ್ನು ಪಕ್ಷಕ್ಕೆ ಎಳೆದುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಇದೇ ಸಂದರ್ಭದಲ್ಲಿ ಜೆಡಿಎಸ್ ನಲ್ಲಿ ತಟಸ್ಥವಾಗಿರುವ ಮಾಜಿ ಸಚಿವ ಹಾಲಿ ಶಾಸಕ ಜಿ.ಟಿ.ದೇವೇಗೌಡರು ಬಿಜೆಪಿಯವರಿಗೆ ಆಶಾಭಾವ ಹುಟ್ಟಿಸುತ್ತಿದ್ದಾರೆ.

 ಪುತ್ರನ ರಾಜಕೀಯ ಭವಿಷ್ಯದ ಮೇಲೆ ಜಿಟಿಡಿ ಗಮನ?

ಪುತ್ರನ ರಾಜಕೀಯ ಭವಿಷ್ಯದ ಮೇಲೆ ಜಿಟಿಡಿ ಗಮನ?

ಸದ್ಯಕ್ಕೆ ದೇವೇಗೌಡರು ಕಾದು ನೋಡುವ ತಂತ್ರ ಮಾಡುತ್ತಿದ್ದಾರೆ ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗಿ ಬಿಡುತ್ತದೆ. ಇಲ್ಲಿವರೆಗೆ ಜೆಡಿಎಸ್ ನಲ್ಲಿದ್ದರೂ ಪಕ್ಷದಲ್ಲಿ ಇಲ್ಲದಂತಿರುವ ಅವರು ತಕ್ಷಣದ ನಿರ್ಧಾರ ತೆಗೆದುಕೊಳ್ಳದೆ ನಿಧಾನವಾಗಿ ಮುಂದಿನ ರಾಜಕೀಯ ನಿರ್ಧಾರವನ್ನು ಕೈಗೊಳ್ಳುವ ತೀರ್ಮಾನ ಮಾಡುತ್ತಿದ್ದಾರೆ. ಅದರಲ್ಲಿ ತಮ್ಮ ಮತ್ತು ಪುತ್ರ ಜಿ.ಡಿ.ಹರೀಶ್ ಗೌಡರ ರಾಜಕೀಯ ಭವಿಷ್ಯವೂ ಅವರ ನಿರ್ಧಾರದಲ್ಲಿ ಅಡಕವಾಗಿರುವುದರಿಂದ ತಕ್ಷಣಕ್ಕೊಂದು ತೀರ್ಮಾನ ಕೈಗೊಳ್ಳುವ ಬದಲಿಗೆ ಮುಂದೂಡುತ್ತಲೇ ಬರುತ್ತಿದ್ದಾರೆ.

 ಗೆಲ್ಲುವ ಕುದುರೆಯನ್ನೇರುವ ಆಲೋಚನೆಯೇ?

ಗೆಲ್ಲುವ ಕುದುರೆಯನ್ನೇರುವ ಆಲೋಚನೆಯೇ?

ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಪಕ್ಕ ಮಾಹಿತಿ ದೊರೆಯಲಿದ್ದು, ರಾಜ್ಯದಲ್ಲಿ ಯಾವ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದು? ಯಾವ ಪಕ್ಷಕ್ಕೆ ಸೇರ್ಪಡೆಗೊಂಡರೆ ರಾಜಕೀಯವಾಗಿ ಲಾಭವಾಗಬಹುದು? ಹೀಗೆ ಹಲವಾರು ವಿಚಾರಗಳು ಸ್ಪಷ್ಟವಾಗಲಿದೆ. ಆ ನಂತರ ತಮಗೆ ಅನುಕೂಲವಾಗುವ ಪಕ್ಷದತ್ತ ಮುಖ ಮಾಡುವುದು ಅಥವಾ ಜೆಡಿಎಸ್ ನಲ್ಲಿಯೇ ಉಳಿದು ಬಿಡುವುದಾ? ಎಂಬುದರ ಬಗ್ಗೆ ನಿರ್ಧಾರಕ್ಕೆ ಬರಬಹುದೇನೋ?

ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಹಳೇ ಮೈಸೂರು ವ್ಯಾಪ್ತಿಯಲ್ಲಿ ಚಟುವಟಿಕೆಯಿಂದ ಇದ್ದರು. ಪ್ರವಾಸ, ರಾಜಕೀಯ ಸಭೆ, ಪಕ್ಷದ ಕಾರ್ಯಕರ್ತರ ಭೇಟಿ ಹೀಗೆ ಎಲ್ಲರ ಜತೆಗೆ ಸೇರಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುತ್ತಿದ್ದದ್ದು ಕಂಡು ಬರುತ್ತಿತ್ತು. ಆದರೆ ಈ ಬಾರಿ ಅಂತಹ ಸನ್ನಿವೇಶ ಕಂಡು ಬರುತ್ತಿಲ್ಲ. ಅಥವಾ ಚುನಾವಣೆಗೆ ಇನ್ನೂ ಸಮಯವಿದೆ ಎಂಬ ಆಲೋಚನೆಯೋ ಗೊತ್ತಿಲ್ಲ.

 ಮೈಸೂರಿನತ್ತ ಡಿಕೆಶಿ ಚಿತ್ತ, ಒಕ್ಕಲಿಗರ ಓಲೈಕೆಯೇ?

ಮೈಸೂರಿನತ್ತ ಡಿಕೆಶಿ ಚಿತ್ತ, ಒಕ್ಕಲಿಗರ ಓಲೈಕೆಯೇ?

ಇದೆಲ್ಲದರ ನಡುವೆ ಕಾಂಗ್ರೆಸ್ ಕೂಡ ಇತ್ತ ಗಮನಹರಿಸಿದಂತೆ ಕಂಡು ಬರುತ್ತಿಲ್ಲ. ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯವರೇ ಆದರೂ ಅವರು ಈ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡುತ್ತಿರುವುದು ಗೋಚರಿಸುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಡಿ.ಕೆ.ಶಿವಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಅವರೇ ಹೇಳಿದಂತೆ ಒಕ್ಕಲಿಗ ಮತದ ಓಲೈಕೆನಾ? ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಮೈಸೂರಿನತ್ತ ನಿರಾಸಕ್ತಿ ಹೊಂದಿದ್ದಾರೆ. ಜತೆಗೆ ಅವರಿಗೆ ಗೆಲ್ಲಲು ಅನುಕೂಲವಾಗುವಂತಹ ಕ್ಷೇತ್ರಗಳು ಕಾಣಿಸುತ್ತಿಲ್ಲ.

ಸದ್ಯಕ್ಕೆ ಕಾಂಗ್ರೆಸ್ ಒಳಗಿನ ಕಿತ್ತಾಟ ಮತ್ತು ಜೆಡಿಎಸ್ ನಾಯಕರಲ್ಲಿನ ನಿರಾಸಕ್ತಿಯ ನಡುವೆ ಬಿಜೆಪಿ ಹಳೇ ಮೈಸೂರಿಗೆ ಎಂಟ್ರಿ ಕೊಟ್ಟಿದೆ. ಮುಂದಿನ ರಾಜಕೀಯ ಹಣಾಹಣಿಗಳು ಪಕ್ಷಗಳ ನಡುವೆ ಹೇಗಿರುತ್ತದೆ? ಹಳೆ ಮೈಸೂರಿನಲ್ಲಿ ಯಾರು ಪ್ರಾಬಲ್ಯ ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Some BJP leaders try to build party strength in the Old Mysuru region for the long-term, at the Same time JDS senior leader GT Devegowda is still not decided to join any party. check year some information about Mysuru politics,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X