ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ಆಷಾಢದ ಮಳೆಯಲ್ಲಿ ಮಿಂದೆದ್ದ ಚಾಮುಂಡಿ ಬೆಟ್ಟ!

|
Google Oneindia Kannada News

ಮೈಸೂರು, ಆಗಸ್ಟ್ 03: ಆಷಾಢದ ಮಳೆಯಲ್ಲಿ ಮಿಂದೆದ್ದ ಚಾಮುಂಡಿ ಬೆಟ್ಟವು ಪಚ್ಚೆ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದು, ಆ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬವಾಗಿದೆ.

ಜಿಟಿಜಿಟಿ ಮಳೆಯಲ್ಲಿ ತೊಯ್ದು, ಮಂಜಿನಲ್ಲಿ ಮುಳುಗಿ, ರವಿಕಿರಣದಲ್ಲಿ ಮಿನುಗಿ ಹಸಿರ ರಂಗನ್ನು ಚೆಲ್ಲುತ್ತಿರುವ ಚಾಮುಂಡಿ ಬೆಟ್ಟದ ಸೊಬಗನ್ನು ಹತ್ತಿರದಿಂದ ಸವಿಯುವುದೇ ಮರೆಯಲಾರದ ಅನುಭವ. ಪ್ರತಿದಿನವೂ ನೋಡಲು ಅದೇ ಚಾಮುಂಡಿ ಬೆಟ್ಟವಾದರೂ ಅದು ನಮ್ಮ ಕಣ್ಣಿಗೆ ತೆರೆದುಕೊಳ್ಳುವ ನೋಟ ಮಾತ್ರ ಹತ್ತು ಹಲವು.

ನಸುಕಿನಲ್ಲಿ ಒಬ್ಬರಿಗೊಬ್ಬರು ಕಾಣದಷ್ಟು ದಟ್ಟವಾದ ಮಂಜಿನಲ್ಲಿ ಬೀಸುವ ತಂಗಾಳಿಯ ನಡುವೆ ಚಾಮುಂಡಿ ಬೆಟ್ಟದಲ್ಲಿ ಅಡ್ಡಾಡುವುದೆಂದರೆ ಎಲ್ಲಿಲ್ಲದ ಮಜಾ ನೀಡುತ್ತದೆ. ಈ ಬಾರಿಯಂತು ಉತ್ತಮವಾಗಿ ಮಳೆಯಾಗಿರುವುದರಿಂದ ಇಡೀ ಬೆಟ್ಟ ಹಸಿರು ಹಚ್ಚಡವನ್ನು ಹೊದ್ದು ಕುಳಿತಿದ್ದು, ದೂರದಿಂದ ನೋಡಿದರೆ ಈಗಷ್ಟೆ ಮಿಂದೆದ್ದಿರುವಂತೆ ಭಾಸವಾಗುತ್ತಿದೆ.

ಜು.25ರಿಂದ ಮೈಸೂರು ಅರಮನೆ ವಿದ್ಯುತ್ ದೀಪಾಲಂಕಾರ ಪುನರಾರಂಭಜು.25ರಿಂದ ಮೈಸೂರು ಅರಮನೆ ವಿದ್ಯುತ್ ದೀಪಾಲಂಕಾರ ಪುನರಾರಂಭ

ಹಾಗೆ ನೋಡಿದರೆ ಆಷಾಢ ಮಾಸ ಚಾಮುಂಡೇಶ್ವರಿಗೆ ಜನುಮ ತಿಂಗಳ ಸಂಭ್ರಮದ ಕಾಲವಾಗಿದ್ದು, ಈ ಕಾಲದಲ್ಲಿ ತಾಯಿ ಚಾಮುಂಡೇಶ್ವರಿ ತನ್ನನ್ನು ನೋಡಲು ಬರುವ ಭಕ್ತರಿಗಾಗಿಯೇ ನಿಂತಿದ್ದಾಳೆಯೇನೋ ಎಂಬಂತೆ ಗೋಚರವಾಗುತ್ತಿದೆ.

ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

ಈ ನಡುವೆ ಕೊರೊನಾ ಕಾರಣದಿಂದ ಆಷಾಢದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿರುವುದರಿಂದ ಸೋಮವಾರದಿಂದ ಗುರುವಾರದ ತನಕವೂ ಭಕ್ತ ಸಾಗರ ನೆರೆಯುತ್ತಿದೆ.

ಆಷಾಢದ ಕಡೇ ಮಂಗಳವಾರವಾದ ಇಂದು ಇತರೆ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಬೆಳಿಗ್ಗೆ 5.30ರಿಂದಲೇ ದೇವಸ್ಥಾನದ ಬಳಿ ಸರತಿ ಸಾಲಿನಲ್ಲಿ ಕಾದು ನಿಂತಿದ್ದ ದೃಶ್ಯ ಕಂಡು ಬಂದಿದೆ. ಮುಂಜಾನೆಯೇ ಸ್ನಾನಾದಿಗಳನ್ನು ಮಾಡಿ ಮಡಿಯನ್ನುಟ್ಟು ಬಂದ ಮಹಿಳೆಯರು, ಪುರುಷರು, ಮಕ್ಕಳು, ಪಾದದಲ್ಲಿ ಪೂಜೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಪ್ರತಿ ಮೆಟ್ಟಿಲಿಗೆ ಕುಂಕುಮ, ಅರಸಿನವನ್ನಿಟ್ಟರೆ, ಮತ್ತೆ ಕೆಲವರು, ಹೂವು, ಕರ್ಪೂರ ಹಚ್ಚುತ್ತಾ ಮೆಟ್ಟಿಲೇರಿದರು, ಇನ್ನು ಕೆಲವು ಭಕ್ತರು ಮಂಡಿಯಲ್ಲೇ ಮೆಟ್ಟಿಲೇರಿ ಹರಕೆ ತೀರಿಸುತ್ತಿದ್ದಾರೆ.

ಮೆಟ್ಟಿಲೇರಿ ಕೃತಾರ್ಥರಾಗುವ ಭಕ್ತರು

ಮೆಟ್ಟಿಲೇರಿ ಕೃತಾರ್ಥರಾಗುವ ಭಕ್ತರು

ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಇನ್ನಿಲ್ಲದಂತೆ ಕಾಡುತ್ತಿರುವುದರಿಂದ ಆಷಾಢ ಶುಕ್ರವಾರ ಸೇರಿದಂತೆ ವಾರಾಂತ್ಯದ ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸುತ್ತಾ ಬರಲಾಗುತ್ತಿದೆ. ಹೀಗಾಗಿ ಶುಕ್ರವಾರ ದೇಗುಲಕ್ಕೆ ತೆರಳಲು ಸಾಧ್ಯವಾಗದ ಭಕ್ತರು ಇತರೆ ದಿನಗಳಲ್ಲಿ ಅದರಲ್ಲೂ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬರುತ್ತಿದ್ದಾರೆ.

ಆಷಾಢ ಮಾಸ ಆ.8 ಭಾನುವಾರಕ್ಕೆ ಕೊನೆ

ಆಷಾಢ ಮಾಸ ಆ.8 ಭಾನುವಾರಕ್ಕೆ ಕೊನೆ

ಆಷಾಢ ಮಾಸ ಆ.8 ಭಾನುವಾರಕ್ಕೆ ಕೊನೆಯಾಗುತ್ತಿರುವುರಿಂದ ಜತೆಗೆ ಶುಕ್ರವಾರದಿಂದ ಭಾನುವಾರದ ತನಕ ಪ್ರವೇಶ ನಿಷೇಧಿಸಿರುವುದರಿಂದ ಆಷಾಢದಲ್ಲಿ ಚಾಮುಂಡೇಶ್ವರಿಯನ್ನು ದರ್ಶನ ಮಾಡಲು ಭಕ್ತರಿಗೆ ಇನ್ನು ಎರಡು ದಿನ ಮಾತ್ರ ಬಾಕಿಯಿದೆ. ಆದುದರಿಂದ ಆಷಾಢದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ದರ್ಶನ ಮಾಡಿ ಕೃತಾರ್ಥರಾಗಲೇ ಬೇಕೆಂದು ಹರಸಿಕೊಂಡವರು ಆ ಸಲುವಾಗಿಯೇ ಆಗಮಿಸುತ್ತಿರುವುದರಿಂದ ಇದೀಗ ಸಹಜವಾಗಿಯೇ ಚಾಮುಂಡಿ ಬೆಟ್ಟದಲ್ಲಿ ಭಕ್ತರು ಸಂಖ್ಯೆ ಹೆಚ್ಚಾಗಿದೆ.

ಆಯಾಸ ತಣಿಸುವ ಬೆಟ್ಟದ ಚೆಲುವು

ಆಯಾಸ ತಣಿಸುವ ಬೆಟ್ಟದ ಚೆಲುವು

ಇದೆಲ್ಲದರ ನಡುವೆ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲೇರಿ ತೆರಳುವ ಭಕ್ತರಿಗೆ ಸುಂದರ ನಿಸರ್ಗ ಮೈಪುಳಕಗೊಳಿಸುತ್ತಿದ್ದು, ಮೆಟ್ಟಿಲೇರುವಾಗಿನ ಆಯಾಸವನ್ನೆಲ್ಲ ಸುತ್ತಲಿನ ಹಸಿರ ಚೆಲುವು ತಣಿಸುತ್ತಿದೆ. ಕಣ್ಣು ಹಾಯಿಸಿದುದ್ದಕ್ಕೂ ನಿಸರ್ಗದ ಥಳಕು ದೈಹಿಕ ಆಯಾಸವನ್ನು ಹೊಡೆದೊಡಿಸಿ ಉಲ್ಲಾಸ ತುಂಬುತ್ತಿದೆ.

ಮಂಜಿನ ತೆರೆಯಲ್ಲಿ ರವಿಯ ನರ್ತನ

ಮಂಜಿನ ತೆರೆಯಲ್ಲಿ ರವಿಯ ನರ್ತನ

ಚಾಮುಂಡಿ ಬೆಟ್ಟವೇರುತ್ತಾ ಹೋದಂತೆ ಅಲ್ಲಿಂದ ಕಾಣಸಿಗುವ ಮೈಸೂರು ನಗರದ ನೋಟ ಕಣ್ಣಿಗೆ ಸೋಜಿಗವನ್ನುಂಟು ಮಾಡುತ್ತಿದೆ. ಇಡೀ ಮೈಸೂರು ನಗರ ಬೆಳಗಿಟ್ಟ ಬೆಳ್ಳಿಯ ಪಾತ್ರೆಗಳಂತೆ ಕಂಗೊಳಿಸುತ್ತದೆ. ಮುಂಜಾನೆಯ ಮಂಜಿನ ತೆರೆಯ ನಡುವಿನ ರವಿಯ ಕಿರಣಗಳ ನರ್ತನ ವರ್ಣಿಸಲಾಗದ ಅನುಭವ ನೀಡುತ್ತದೆ. ಸದಾ ಜಂಜಾಟದಲ್ಲಿದ್ದವರು, ಒಂದಷ್ಟು ಹೊತ್ತನ್ನು ದೇವರ ಸನ್ನಿಧಿಯಲ್ಲಿ, ಪ್ರಕೃತಿಯ ನಡುವಿನಲ್ಲಿ ಕಳೆಯಬೇಕೆಂದಿದ್ದರೆ ಚಾಮುಂಡಿ ಬೆಟ್ಟದ ಸುಂದರ ನಿಸರ್ಗ ನಿಮ್ಮೆಡೆಗೆ ಕೈಬೀಸುತ್ತದೆ.

English summary
Due to the coronavirus, devotees are not allowed to enter the Chamundeshwari Temple from Friday to Sunday in Ashada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X