ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ತಂಬಾಕು ಬೆಳೆಯುವ ರೈತರನ್ನು ಕಾಡಿದ ಅಸನಿ ಚಂಡಮಾರುತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 20: ಮಳೆಗಾಲದ ಆರಂಭದ ಹೊತ್ತಿಗೆ ತಂಬಾಕು ಗಿಡಗಳನ್ನು ನಾಟಿ ಮಾಡಿ ಮಳೆಗಾಲ ಕಳೆಯುತ್ತಿದ್ದಂತೆಯೇ ಸೊಪ್ಪನ್ನು ಹದಗೊಳಿಸಿ ಒಂದಷ್ಟು ಆದಾಯವನ್ನು ಕಂಡುಕೊಳ್ಳುತ್ತಿದ್ದ ಮೈಸೂರು ಜಿಲ್ಲೆಯ ಬೆಳೆಗಾರರನ್ನು ಆಸನಿ ಚಂಡಮಾರುತ ಇನ್ನಿಲ್ಲದಂತೆ ಕಾಡಿದೆ.

ಮೈಸೂರು ಜಿಲ್ಲೆಯ ಕೆ. ಆರ್. ನಗರ, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ಬೆಳೆಗಾರರಿಗೆ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಬೆಳೆಗಾರರಿಗೆ ಒಂದಷ್ಟು ಆದಾಯ ತಂದು ಕೊಡುವ ಬೆಳೆಯಾಗಿದೆ. ಹಿಂದಿನಿಂದಲೂ ನೀರಾವರಿಯಲ್ಲದ ಪ್ರದೇಶಗಳಲ್ಲಿ ಮಳೆಯ ಆಶ್ರಯದಲ್ಲಿ ಇದನ್ನು ಬೆಳೆಯುತ್ತಾ ಬರುತ್ತಿದ್ದಾರೆ.

ಮೇ ತಿಂಗಳ ವೇಳೆಗೆ ಬೀಳುವ ಮಳೆಯನ್ನು ನಂಬಿ ಇದನ್ನು ನಾಟಿ ಮಾಡಿ ಬಳಿಕ ಮಳೆಗಾಲದಲ್ಲಿ ಸುರಿಯುವ ಮಳೆಗೆ ಗೊಬ್ಬರ ಹಾಕಿ ಹುಲುಸಾಗಿ ಬೆಳೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವು ವರ್ಷಗಳ ಹಿಂದೆ ನಾಟಿ ಮಾಡಿದ ಬಳಿಕ ಮಳೆಯಿಲ್ಲದೆ ಒಣಗುತ್ತಿದ್ದ ದೃಶ್ಯ ಕಾಣಿಸುತ್ತಿತ್ತು. ಈ ಸಂದರ್ಭ ನೀರು ಹಾಯಿಸಿ ರಕ್ಷಿಸಿಕೊಳ್ಳುವುದು ಕಷ್ಟದ ಕೆಲಸವಾಗುತ್ತಿತ್ತು.

ಇವತ್ತಿನ ಪರಿಸ್ಥಿತಿಯಲ್ಲಿ ತಂಬಾಕು ಬೆಳೆಯುವುದು ಅಷ್ಟು ಸುಲಭದ ಕೃಷಿಯಾಗಿ ಉಳಿದಿಲ್ಲ. ಇದೊಂದು ರೀತಿಯಲ್ಲಿ ಬಂಡವಾಳ ಸುರಿದು ಆದಾಯ ತೆಗೆಯುವ ಬೆಳೆಯಾಗಿದ್ದು, ದುಬಾರಿ ದುನಿಯಾದಲ್ಲಿ ನಿರೀಕ್ಷಿತ ಆದಾಯ ಪಡೆಯುವುದು ಕೂಡ ಮೊದಲಿನಂತೆ ಸಾಧ್ಯವಾಗುತ್ತಿಲ್ಲ. ಪ್ರತಿವರ್ಷವೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಿದ್ದರೂ ಕೂಡ ಬೆಳೆಗಾರರು ತಮ್ಮ ಜಮೀನಿನಲ್ಲಿ ಬೇರೇನು ಬೆಳೆಯಲು ಸಾಧ್ಯಗವಾಗದ ಕಾರಣದಿಂದ ಅನಿವಾರ್ಯವಾಗಿ ತಂಬಾಕು ಬೆಳೆಯುವಂತಾಗಿದೆ.

ಬೆಳೆಗಾರರು ಸಾಲಗಾರರಾಗುತ್ತಿದ್ದಾರೆ

ಬೆಳೆಗಾರರು ಸಾಲಗಾರರಾಗುತ್ತಿದ್ದಾರೆ

ಆರಂಭದಿಂದಲೇ ಬ್ಯಾಂಕ್‌ನಿಂದ ಅಥವಾ ಕೈಸಾಲ ಮಾಡಿ ಬಂಡವಾಳ ಸುರಿದು ಕೃಷಿ ಮಾಡುವ ಬೆಳೆಗಾರರು ಬೆಳೆ ಹುಲುಸಾಗಿ ಬೆಳೆದು, ಉತ್ತಮ ಬೆಲೆ ಸಿಕ್ಕರೆ ಮಾತ್ರ ಅವರ ಬದುಕು ಹಸನಾಗುತ್ತದೆ. ಇಲ್ಲದೆ ಹೋದರೆ ಸಾಲಗಾರರಾಗುವುದು ಖಚಿತ. ಇದೊಂದು ರೀತಿಯಲ್ಲಿ ಬೆಳೆಗಾರರ ಪಾಲಿಗೆ ಜೂಜಾಟದಂತಾಗಿದ್ದು, ಈಗಾಗಲೇ ಹಲವು ಬೆಳೆಗಾರರು ತಂಬಾಕು ಬೆಳೆ ಕೈಕೊಟ್ಟಿದ್ದರಿಂದ ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈಗಿನ ಪರಿಸ್ಥಿತಿಯಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ, ದುಬಾರಿ ಕೂಲಿ, ಗಗನಕ್ಕೇರಿದ ಗೊಬ್ಬರದ ಬೆಲೆ, ಬಾಧಿಸುವ ರೋಗ, ಮಾರಾಟದ ವೇಳೆ ಬೆಲೆ ಕುಸಿತ ಹೀಗೆ ಹತ್ತಾರು ಸಮಸ್ಯೆಗಳು ಬೆಳೆಗಾರರನ್ನು ಕಾಡುತ್ತಿದೆ. ಆದರೂ ಅದೆಲ್ಲವನ್ನು ಎದುರಿಸಿ ಒಂದು ರೀತಿಯಲ್ಲಿ ಹೋರಾಟ ಮಾಡುತ್ತಲೇ ಬೆಳೆಗಾರರು ತಂಬಾಕು ಬೆಳೆಯುತ್ತಿದ್ದಾರೆ. ಈ ವರ್ಷ ಎಲ್ಲವೂ ಸರಿಯಿತ್ತು. ಒಂದಷ್ಟು ಮಳೆಯೂ ಆಗಿತ್ತು. ಹೀಗಾಗಿ ಮೇ ತಿಂಗಳ ಆರಂಭದಲ್ಲಿಯೇ ತಂಬಾಕು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದರು.

ಬೆಳೆಗಾರರಿಗೆ ಆರಂಭದಲ್ಲಿಯೇ ಸಂಕಷ್ಟ

ಬೆಳೆಗಾರರಿಗೆ ಆರಂಭದಲ್ಲಿಯೇ ಸಂಕಷ್ಟ

ಬಹಳಷ್ಟು ಕಡೆಗಳಲ್ಲಿ ನಾಟಿ ಮಾಡಿ ಬೆಳವಣಿಗೆಯ ಹಂತವೂ ತಲುಪಿತ್ತು. ಆಗೊಮ್ಮೆ ಈಗೊಮ್ಮೆ ಮಳೆ ಸುರಿದರೆ ಬೆಳೆಗೆ ಅನುಕೂಲವಾಗುತ್ತದೆ. ಗೊಬ್ಬರ ಹಾಕಿ ನಿರ್ವಹಣೆ ಮಾಡಿಕೊಂಡರೆ ಹುಲುಸಾಗಿ ಬೆಳೆದು ನಮ್ಮ ಕೈಹಿಡಿಯಬಹುದೆಂದು ಖುಷಿಯಾಗಿದ್ದರು. ಆದರೆ ಆಗಿದ್ದೇ ಬೇರೆ ಕಳೆದ ಒಂದು ವಾರದಿಂದ ಆಸಾನಿ ಚಂಡ ಮಾರುತದ ಪರಿಣಾಮ ಸುರಿಯುತ್ತಿರುವ ಭಾರೀ ಮಳೆ ತಂಬಾಕು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ್ದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ.

ಮಳೆಯಿಂದ ಕೊಚ್ಚಿ ಹೋದ ಬೆಳೆ

ಮಳೆಯಿಂದ ಕೊಚ್ಚಿ ಹೋದ ಬೆಳೆ

ಹಾಗೆ ನೋಡಿದರೆ ಪ್ರತಿ ವರ್ಷ ತಂಬಾಕು ನಾಟಿ ಮಾಡಿದ ಬಳಿಕ ರೋಗ, ಬೆಲೆ ಕುಸಿತದ ಕಾರಣದಿಂದ ರೈತರು ಸಂಕಷ್ಟಕೊಳಗಾಗುತ್ತಿದ್ದರು. ಆದರೆ ಈ ಬಾರಿ ಆರಂಭದಲ್ಲಿಯೇ ಸಂಕಷ್ಟ ಅನುಭವಿಸುವಂತಾಗಿದೆ. ಕೆಲವೆಡೆ ನಾಟಿ ಮಾಡಿ ಗಿಡಗಳು ಚಿಗುರಿ ಬೆಳವಣಿಗೆ ಕಾಣುವ ಹಂತದಲ್ಲಿದ್ದರೆ, ಇನ್ನು ಕೆಲವೆಡೆ ಬೆಳೆಗಾರರು ಗಿಡಗಳನ್ನು ನೆಡುತ್ತಿದ್ದಾರೆ. ಹೀಗಿರುವಾಗಲೇ ಕುಂಭದ್ರೋಣ ಮಳೆ ಸುರಿದು ಕೆಲವೆಡೆ ತಂಬಾಕು ಬೆಳೆ ಕೊಚ್ಚಿಹೋಗುವಂತೆ ಮಾಡಿದ್ದರೆ, ಹಳ್ಳಕೊಳ್ಳದ ಪ್ರದೇಶದ ಜಮೀನಿನಲ್ಲಿ ನಾಟಿ ಮಾಡಿದ ತಂಬಾಕು ಸಂಪೂರ್ಣ ಜಲಾವೃತವಾಗಿ ನಾಟಿ ಮಾಡಿ ಗೊಬ್ಬರ ಹಾಕಿದ ಸಸಿಗಳು ಕೊಳೆತು ಹೋಗಿವೆ.

ಮಳೆ ನಿಲ್ಲಲೆಂದು ಬೆಳೆಗಾರರ ಪ್ರಾರ್ಥನೆ

ಮಳೆ ನಿಲ್ಲಲೆಂದು ಬೆಳೆಗಾರರ ಪ್ರಾರ್ಥನೆ

ಮಳೆ ಕಡಿಮೆಯಾದರೆ ಸಾಕಪ್ಪಾ ಎಂದು ಬೆಳೆಗಾರರು ಪ್ರಾರ್ಥಿಸುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಮಳೆ ಕಡಿಮೆಯಾದರೂ ಬಹಳಷ್ಟು ಕಡೆಗಳಲ್ಲಿ ಗಿಡಗಳು ಕೊಳೆತು ನಾಶವಾಗಿದೆ, ಸಾಲ ಮಾಡಿ ಲಕ್ಷಾಂತರ ರೂಪಾಯಿ ಸುರಿದು ಮಾಡಿದ ಕೃಷಿ ಆರಂಭದಲ್ಲಿಯೇ ನೆಲಕಚ್ಚಿರುವುದು ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡಿದೆ. ಮುಂದೇನು ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತೆ ಮಾಡಿದೆ.

English summary
Due to Asani cyclone Tobacco crop farmers in Mysuru in trouble. Crop damaged due to heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X