ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರುಣ್ ಸಿಂಗ್ ಹಣ ವಸೂಲಿಗೆ ರಾಜ್ಯಕ್ಕೆ ಬಂದಿದ್ದಾರೆ: ಎಚ್‌ಡಿಕೆ ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 1: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಹೇಳಿಕೆ ನೀಡಿದ್ದ ಅರುಣ್ ಸಿಂಗ್‌ಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, "ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಪಾಪ ಅವರಿಗೆ ಏನ್ ಗೊತ್ತು? ಆತ ಬಂದಿರುವುದು ದುಡ್ಡು ವಸೂಲಿ ಮಾಡುವುದಕ್ಕೆ. ಕಲೆಕ್ಷನ್ ಮಾಡಲು ಬಂದಿರುವ ವ್ಯಕ್ತಿ ಜೆಡಿಎಸ್ ಬಗ್ಗೆ ಮಾತನಾಡಿದ್ದಾರೆ. ನಾವೇನು ಅವರ ಮನೆ ಬಾಗಿಲಿಗೆ ಹೋಗಿದ್ವಾ?,'' ಎಂದು ಕೆಂಡಾಮಂಡಲರಾದರು.

"ಮೈಸೂರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಬೆಂಬಲ ಕೋರಿ ಶಾಸಕ ಸಾ.ರಾ. ಮಹೇಶ್ ಕಚೇರಿಗೆ ಬಿಜೆಪಿ ನಾಯಕರು ಏಕೆ‌ ಬಂದಿದ್ದರು? ನಾವೇನು ಬೆಂಬಲ ಕೋರಿ ಅವರ ಬಳಿಗೆ ಹೋಗಿಲ್ಲ. ಅರುಣ್ ಸಿಂಗ್ ರಾಜ್ಯದ ವಾಸ್ತವ ಪರಿಸ್ಥಿತಿ ಗೊತ್ತಿಲ್ಲ. ಇಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ವಸೂಲಿಗಾಗಿ ಆಗಾಗ್ಗೆ ಭೇಟಿ ನೀಡುತ್ತಾರೆ. ಜೆಡಿಎಸ್ ಬಗ್ಗೆ ಯಾರೂ ಕೂಡ ಹಗುರವಾಗಿ ಮಾತನಾಡಬಾರದು," ಎಂದರು.

 ಸರ್ಕಾರದ ಮಂತ್ರಿಗಳಿಗೆ ಮೂಳೆ ಇಲ್ಲ

ಸರ್ಕಾರದ ಮಂತ್ರಿಗಳಿಗೆ ಮೂಳೆ ಇಲ್ಲ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಆದೇಶ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ. ಕುಮಾರಸ್ವಾಮಿ, "ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆ ಆರಂಭಿಸಬೇಕು ಅನ್ನುತ್ತಿರುವುದು. ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಬಹುದು. ಇದನ್ನು ಕೇಂದ್ರ ಮತ್ತು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ಸೆಪ್ಟೆಂಬರ್‌ನಲ್ಲಿ ಮಳೆ ಆಗದಿದ್ದರೆ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಹಾಗೂ ಕಾವೇರಿ ನಿಗಮ ಮಂಡಳಿಯೂ ಅರ್ಥ ಮಾಡಿಕೊಳ್ಳಬೇಕು. ಕೇಂದ್ರಕ್ಕೆ ಅರ್ಥ ಮಾಡಿಸಲು ರಾಜ್ಯ ನಾಯಕರು ವಿಫಲರಾಗಿದ್ದಾರೆ. ಸರ್ಕಾರದ ಮಂತ್ರಿಗಳಿಗೆ ಮೂಳೆನೂ ಇಲ್ಲ, ಎಲುಬು ಇಲ್ಲ," ಎಂದು ಟೀಕಿಸಿದರು.

 ಜೆಡಿಎಸ್‌ನದು ಎಲುಬಿಲ್ಲದ ನಾಲಿಗೆ

ಜೆಡಿಎಸ್‌ನದು ಎಲುಬಿಲ್ಲದ ನಾಲಿಗೆ

"ಜೆಡಿಎಸ್‌ನವರ ಎಲುಬಿಲ್ಲದ ನಾಲಿಗೆ ಸರಿಯಾಗಿದ್ದಿದ್ದರೆ ಜೆಡಿಎಸ್ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್‌ನವರು ಹಣದ ಮೇಲೆಯೇ ರಾಜಕಾರಣ ಮಾಡುವಂತವರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಅನುಭವನ್ನು ಹೇಳಿಕೊಂಡಿದ್ದಾರೆ. ಈ ಸಂಸ್ಕೃತಿ ಜೆಡಿಎಸ್ ಸಂಸ್ಕೃತಿಯಾಗಿದ್ದು, ಹಳದಿ ರೋಗದವರಿಗೆ ನೋಡಿದ್ದೆಲ್ಲಾ ಹಳದಿಯಾಗಿ ಕಾಣಿಸುತ್ತದೆ. ಜೆಡಿಎಸ್ ರಾಜ್ಯವನ್ನು, ದೇಶವನ್ನು ಆಳಿದವರು. ಅವರ ಎಲುಬಿಲ್ಲದ ನಾಲಿಗೆ ಸರಿಯಾಗಿದ್ದಿದ್ದರೆ ಜೆಡಿಎಸ್ ನಾಯಕರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ," ಎಂದು ಹರಿಹಾಯ್ದರು.

 ಅನಿಲ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನ

ಅನಿಲ ಬೆಲೆ ಏರಿಕೆ ನಿಯಂತ್ರಣಕ್ಕೆ ಪ್ರಯತ್ನ

"ಜೆಡಿಎಸ್‌ನ ಪರಿಸ್ಥಿತಿ ಏನೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಜೆಡಿಎಸ್ ಆಡುವಂತಹ ಮಾತುಗಳನ್ನು ಬಿಜೆಪಿ ಆಡುವುದಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದುಡ್ಡು ವಸೂಲಿಗಾಗಿ ಕರ್ನಾಟಕಕ್ಕೆ ಬರುತ್ತಾರೆ ಎಂಬ ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆಗೆ ಟಾಂಗ್ ನೀಡಿದರು.
ಇನ್ನು ತೈಲ ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂತರರಾಷ್ಟ್ರೀಯ ಮಟ್ಟಕ್ಕೆ ಅನುಗುಣವಾಗಿ ಇಂಧನ ಬೆಲೆ ಪರಿಷ್ಕರಣೆ ಆಗುತ್ತದೆ. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ಅವಧಿ ಹಾಗೂ ಈಗಿನ ಪರಿಸ್ಥಿತಿಯನ್ನು ತುಲನಾತ್ಮಕವಾಗಿ ಅವಲೋಕನ ಮಾಡಲಿ. ಅಡುಗೆ ಅನಿಲ ಬೆಲೆ ಏರಿಕೆ ನಿಯಂತ್ರಣ ಮಾಡಲು ಏನೆಲ್ಲಾ ಪ್ರಯತ್ನ ಮಾಡಬೇಕೋ ಅದನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಮಾಡುತ್ತಿದ್ದೇವೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

 ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡರೆ ಏನು ಪ್ರಯೋಜನ

ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡರೆ ಏನು ಪ್ರಯೋಜನ

"ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರದಂತಹ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡರೆ ಏನು ಪ್ರಯೋಜನ?," ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪೊಲೀಸ್ ಅಧಿಕಾರಿಗಳ ಬಳಿ ವಿಪಕ್ಷ ನಾಯಕ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಸಿದ್ಧರಾಮಯ್ಯ, "ನಿರ್ಜನ ಪ್ರದೇಶಕ್ಕೆ ಜನರು ಬರುತ್ತಿದ್ದರೆ ಪೊಲೀಸರು ನಿಗಾ ವಹಿಸಬೇಕು. ಪೊಲೀಸ್ ಗಸ್ತು ಹೆಚ್ಚಿಸಿ ಎಂದು ಸೂಚನೆ ನೀಡಿದರು. ಅಹಿತಕರ ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡರೆ ಏನು ಪ್ರಯೋಜನ, ಅನಾಹುತ ನಡೆಯುವ ಮುಂಚೆ ಎಚ್ಚೆತ್ತುಕೊಳ್ಳಬೇಕು. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ,"ಎಂದು ಸಲಹೆ ನೀಡಿದರು.

 ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ಇನ್ನು ಇದಕ್ಕೂ ಮುನ್ನ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಲಲಿತಾದ್ರಿಪುರ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌ ನಡೆದಿತ್ತು. ಎಂಬಿಎ ವಿದ್ಯಾರ್ಥಿನಿ ಮೇಲೆ ತಮಿಳುನಾಡು ಮೂಲದ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪ್ರಕರಣ ಸಂಬಂಧ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು. ಡಿಸಿಪಿ ಪ್ರದೀಪ್ ಗುಂಟಿ ಹಾಗೂ ಗೀತಾ ಪ್ರಸನ್ನ ಪ್ರಕರಣ ಕುರಿತು ಮಾಹಿತಿ ನೀಡಿದರು. ಈ ವೇಳೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.

English summary
Former CM HD Kumaraswamy expressed outraged against state BJP incharge Arun Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X