ಪ್ರಧಾನಿ ಮೋದಿ ಭೇಟಿ ಬಳಿಕ ಮೈಸೂರು ಅರಮನೆಗೆ ಭಾರೀ ಡಿಮ್ಯಾಂಡ್!
ಮೈಸೂರು, ಜೂನ್,27: ಪ್ರಧಾನಿ ನರೇಂದ್ರ ಮೋದಿ ಅರಮನೆ ಆವರಣದಲ್ಲಿ ಯೋಗಾಭ್ಯಾಸ ಮಾಡಿದ ಮೇಲೆ ವಿದೇಶಿಗರ ದೃಷ್ಟಿಯಲ್ಲಿ ಪ್ಯಾಲೇಸ್ ಶೈನ್ ಆಗಿದೆ. ಅರಮನೆ ವೆಬ್ಸೈಟ್ಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅಲ್ಲದೆ, ಯೋಗ ತರಬೇತಿ ಕೇಂದ್ರಗಳಿಗೂ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಯೋಗ ತರಗತಿಗೆ ಸೇರಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಜೂನ್ 21ರಂದು ಮೈಸೂರಿನ ಅಂಬವಿಲಾಸ ಅರಮನೆಯ ಆವರಣದಲ್ಲಿ ಸುಮಾರು 15 ಸಾವಿರ ಮಂದಿಯ ಜೊತೆಗೆ ಪ್ರಧಾನ ಮಂತ್ರಿ ಯೋಗಾಸನ ಮಾಡಿದ್ದರು. ಮೋದಿ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್, ಸಂಸದ ಪ್ರತಾಪ್ ಸಿಂಹ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸೇರಿದಂತೆ ಹಲವಾರು ಮಂದಿ ಯೋಗ ಮಾಡಿದ್ದರು. ಇದು ವಿಶ್ವದಾದ್ಯಂತ ನೇರಪ್ರಸಾರವಾಗಿತ್ತು.
ಪ್ರಧಾನಿ ಬಂದು ಯೋಗ ಮಾಡಿದ್ದರಿಂದ ಮೈಸೂರಿಗೆ ಪ್ರಪಂಚದಾದ್ಯಂತ ಹೆಸರು: ಸೋಮಶೇಖರ್
ತಿಂಗಳಿಗೆ ಸುಮಾರು 6 ರಿಂದ 7 ಸಾವಿರ ಮಂದಿ ಅರಮನೆ ಜಾಲತಾಣಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಅರಮನೆಯಲ್ಲಿ ಯೋಗ ಕಾರ್ಯಕ್ರಮದ ಬಳಿಕ ಈ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಅದರಲ್ಲೂ ಪ್ರಧಾನಿಯವರು ಯೋಗ ಅಭ್ಯಾಸ ಮಾಡಿದ ಮಾರನೇ ದಿನ (ಜೂ.22)ದಂದು 3 ಸಾವಿರ, 23ರಂದು 3,400 ಮಂದಿ ವೀಕ್ಷಿಸಿರುವುದು ದಾಖಲೆಯಾಗಿದೆ. ದಸರಾ ಹೊರತುಪಡಿಸಿದ ದಿನಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವೆಬ್ಸೈಟ್ ನೋಡಿರುವುದು ವಿಶೇಷ ಎಂಬುದು ಅರಮನೆ ತಾಂತ್ರಿಕ ತಂಡದ ಅಭಿಪ್ರಾಯ.
ಅರಮನೆ ಮುಂದೆ ಯೋಗ ಮಾಡಿದ್ದಕ್ಕೆ ಕಾಂಗ್ರೆಸ್ ಕಿಡಿ

ಯೋಗ ಕೇಂದ್ರಗತ್ತಗಳ ಜನರ ದಾಂಗುಡಿ
ಕಳೆದ ಎರಡು ವರ್ಷದಲ್ಲಿ ಕೊರೊನಾ ಕಾರಣದಿಂದ ಮನೆಯಲ್ಲೇ ಯೋಗ ಕಲಿಯುತ್ತಿದ್ದಪಟುಗಳು ಹಾಗೂ ಆಸಕ್ತರು ಇದೀಗ ತರಬೇತಿ ಕೇಂದ್ರಗಳ ಮೊರೆ ಹೋಗಿದ್ದಾರೆ. ಅದರಲ್ಲೂ ಮೋದಿ ಬಂದು ಹೋದ ಮೇಲೆ ನಿತ್ಯ ಯೋಗಕೇಂದ್ರಗಳಿಗೆ ಬರುವವರ ಸಂಖ್ಯೆ ಮೊದಲಿಗಿಂತಲೂ ಶೇ.30ರಷ್ಟು ಹೆಚ್ಚಾಗಿದೆ.
ಅಷ್ಟೇ ಅಲ್ಲದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಕಲಿತು ಹೋದ ವಿದೇಶಿಗರೂ ಆನ್ಲೈನ್ ಮೂಲಕ ಇಂದಿಗೂ ಯೋಗಾಭ್ಯಾಸ ಮಾಡುತ್ತಿದ್ದಾರೆ. ನಿತ್ಯ ಯೋಗವನ್ನು ಎಷ್ಟು ಗಂಟೆ ಮಾಡಬೇಕು?, ಏನೆಲ್ಲಾ ಪ್ರಯೋಜನಗಳಿವೆ?, ನಮ್ಮ ಬಡಾವಣೆಯಲ್ಲಿ ಕೇಂದ್ರ ಇದೆಯಾ? ಮುಂತಾದ ವಿಚಾರಗಳನ್ನು ಆಸಕ್ತರು ವಿಚಾರಿಸುತ್ತಿದ್ದಾರೆ. ಅಲ್ಲದೆ, ಕೊರೊನಾ ನಂತರ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದ್ದು, ಯೋಗದಿಂದ ದೈಹಿಕ ಮಾನಸಿಕ ಸದೃಢತೆ ಸಿಗುತ್ತದೆ ಎಂಬ ಅಭಿಲಾಷೆಯೊಂದಿಗೆ ಹಲವರು ಯೋಗ ಶಿಕ್ಷಕರನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಅರಮನೆ ವೆಬ್ಸೈಟ್ ವೀಕ್ಷಣೆಯಲ್ಲಿ ವಿದೇಶಿಗರೇ ಹೆಚ್ಚು
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿದ ನಂತರ ವೆಬ್ಸೈಟ್ ವೀಕ್ಷಿಸಿರುವವರ ಪೈಕಿ ಶೇ 90ರಷ್ಟು ಮಂದಿ ಅರಮನೆಗೆ ಗರಿಷ್ಠ 5 ಸ್ಟಾರ್ ನೀಡಿ ಮೆಚ್ಚುಗೆ ವ್ಯಕ್ತಪಪಡಿಸಿದ್ದಾರೆ. ಈ ಸಾಲಿನಲ್ಲಿ ವಿದೇಶಿಗರೇ ಹೆಚ್ಚಿರುವುದು ಮತ್ತೊಂದು ವಿಶೇಷ. ಇನ್ನು ಕೆಲವರು ಅರಮನೆಯ ವಿನ್ಯಾಸ, ಕಂಬಗಳ ಕೆತ್ತನೆ, ವಿಶಿಷ್ಟ ಪೇಂಟಿಂಗ್ ಹಾಗೂ ಸೌಂದರ್ಯದ ಬಗ್ಗೆಯೂ ಮೆಚ್ಚುಗೆಯ ಸಾಲುಗಳನ್ನು ಬರೆದಿದ್ದಾರೆ.

ಮೈಸೂರಿನಲ್ಲಿ ಎಲ್ಲಿಲ್ಲಿವೆ ಯೋಗ ಕೇಂದ್ರ
ಮೈಸೂರಿನಲ್ಲಿ ನಿತ್ಯ ಸುಮಾರು 30 ಸಾವಿರ ಮಂದಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಮೈಸೂರಿನ ಕೆಲವು ಬಡಾವಣೆಗಳು ಯೋಗ ಟೌನ್ಶಿಪ್ಗಳಾಗಿ ಪರಿವರ್ತನೆಯಾಗಿವೆ. ಯೋಗ ಸ್ಪೋರ್ಟ್ಸ್ ಫೌಂಡೇಶನ್ (127 ಕೇಂದ್ರಗಳು), ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (75 ಕೇಂದ್ರಗಳು), ಬಾಬಾ ರಾಮ್ದೇವ್ ಪತಂಜಲಿ ಯೋಗ ಸಮಿತಿ (20 ಸೆಂಟರ್), ಜಿಎಸ್ಎಸ್ (5 ಕೇಂದ್ರಗಳು), ಯೋಗ ಒಕ್ಕೂಟ 65 ಕೇಂದ್ರಗಳಲ್ಲಿ ಯೋಗ ತರಬೇತಿ ನೀಡುತ್ತಿವೆ. ಇವುಗಳ ಜೊತೆಗೆ ಸಿದ್ಧ ಸಮಾಧಿ ಯೋಗ, ಆರ್ಟ್ ಲಿವಿಂಗ್, ಯೋಗ ಭಾರತ್, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಜೆಎಸ್ಎಸ್ ಯೋಗ ಸಂಸ್ಥೆ, ಇಶಾ ಪೌಂಡೇಷನ್ ಸೇರಿ ಸಾಕಷ್ಟು ಕೇಂದ್ರಗಳಿವೆ. ಗೋಕುಲಂನಲ್ಲಿ ಹದಿನೈದಕ್ಕೂ ಹೆಚ್ಚು ಯೋಗಶಾಲೆಗಳಿವೆ. ಇಲ್ಲಿ ಸಾಕಷ್ಟು ವಿದೇಶಿಯರು ಕಲಿಯುತ್ತಿದ್ದಾರೆ. ಲಕ್ಷ್ಮಿಪುರಂ, ವಿಜಯನಗರ, ಚಾಮರಾಜಪುರಂ, ಸರಸ್ವತಿಪುರಂ, ಕಾಳಿದಾಸ ರಸ್ತೆ, ಬೋಗಾದಿ, ಕುವೆಂಪುನಗರಗಳಲ್ಲೂ ಕೂಡ ಯೋಗ ಕೇಂದ್ರಗಳಿವೆ.

ವೀಸಾ ಸಮಸ್ಯೆಯಿಂದ ಆನ್ಲೈನ್ ಯೋಗಕ್ಕೆ ಮೊರೆ
ಮೈಸೂರು ಯೋಗ ನಗರಿ. ಇಲ್ಲಿಗೆ ವಿದೇಶಿಗರು ಸಾಕಷ್ಟು ಮಂದಿ ಯೋಗ ಕಲಿಯಲು ಬರುತ್ತಾರೆ. ಯುಎಸ್, ಕತಾರ್, ದುಬೈ, ಚೀನಾ, ಬ್ರಿಟನ್ ನಿಂದಲೂ ಸಾಕಷ್ಟು ಮಂದಿ ಯೋಗ ಕಲಿತು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಇದೀಗ ಕೆಲವು ದೇಶದ ನಾಗರಿಕರಿಗೆ ವೀಸಾ ಸಿಗುತ್ತಿಲ್ಲ. ಹಾಗಾಗಿ ಹಲವು ಮಂದಿ ಆನ್ಲೈನ್ ಮೂಲಕ ನಿತ್ಯ ತರಗತಿ ನಡೆಸಲಾಗುತ್ತಿದೆ. ನಾವು ಕಳುಹಿಸಿದ ಲಿಂಕ್ ಮೂಲಕ ಅವರು ತಾವು ಕುಳಿತ ಜಾಗದಿಂದಲೇ ಯೋಗ ಕಲಿಯುತ್ತಿದ್ದಾರೆ ಎನ್ನುತ್ತಾರೆ ಯೋಗ ಒಕ್ಕೂಟ ಅಧ್ಯಕ್ಷ ಡಾ. ಬಿ. ಟಿ. ಮೂರ್ತಿ.