ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅಮ್ಮ'ನಿಲ್ಲದ ಶಕ್ತಿಧಾಮದಲ್ಲೀಗ ಉಳಿದಿರುವುದು ಬರೀ ಮೌನ..

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 31: ಪಾರ್ವತಮ್ಮ ರಾಜ್ ಕುಮಾರ್ ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ ಮಾತ್ರ ಅಮ್ಮ ಆಗಿರಲಿಲ್ಲ. ನಿರಾಶ್ರಿತರಿಗೆ, ಅಬಲೆಯರಿಗೆ, ಪರಿತ್ಯಕ್ತೆಯರಿಗೆ, ವೇಶ್ಯಾವಾಟಿಕೆ ಜಾಲಕ್ಕೆ ಸಿಕ್ಕಿಬಿದ್ದು ತಪ್ಪಿಸಿಕೊಂಡು ಬಂದವರಿಗೆ, ಗಂಡನ ಕಿರುಕುಳದಿಂದ ಮನೆ ಬಿಟ್ಟು ಬಂದವರಿಗೆ... ಹೀಗೆ ಅದೆಷ್ಟೋ ಅಸಹಾಯಕ ಜೀವಗಳಿಗೆ ಅಮ್ಮ ಆಗಿದ್ದರು ಎಂಬುದಕ್ಕೆ ಮೈಸೂರಿನಲ್ಲಿರುವ ಶಕ್ತಿಧಾಮವೇ ಸಾಕ್ಷಿಯಾಗಿದೆ.

ಈ ಶಕ್ತಿಧಾಮದಲ್ಲಿರುವ ಅದೆಷ್ಟೋ ಅಬಲೆಯರು ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಅಮ್ಮ ಎಂದೇ ಭಾವಿಸಿದ್ದಾರೆ. ಕಾರಣ, ಶಕ್ತಿಧಾಮ ಸ್ಥಾಪನೆ ಹಿಂದೆ ಪಾರ್ವತಮ್ಮ ಅವರ ಶ್ರಮ ಇದೆ. ನೂರಾರು ಮಂದಿ ಅಬಲೆಯರು ಒಂದು ಸೂರಿನಡಿ ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದರೆ ಅದಕ್ಕೆ ಪಾರ್ವತಮ್ಮ ಅವರೇ ಕಾರಣ.[ಹಲವು ಸಂಕಷ್ಟಗಳನ್ನು ಎದುರಿಸಿದ್ದ ಅಗಾಧ ಶಕ್ತಿ ಪಾರ್ವತಮ್ಮ]

After Parvathamma Rajkumar demise silence remains in Mysuru Shaktidhama

ಹೀಗಾಗಿಯೇ ಇಲ್ಲಿನ ಮಹಿಳೆಯರು ಪಾರ್ವತಮ್ಮ ರಾಜ್ ಕುಮಾರ್ ಅವರು ಆಸ್ಪತ್ರೆಗೆ ಸೇರಿದಲ್ಲಿಂದಲೇ ಬೇಗ ಚೇತರಿಸಿ, ಗುಣಮುಖರಾಗಿ ಮನೆಗೆ ಬರಲಿ ಎಂದು ದೇವರಲ್ಲಿ ಪೂಜೆ, ಪ್ರಾರ್ಥನೆಯನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಅವರು ಈ ಭೂಮಿ ಮೇಲಿನ ಋಣ ತೀರಿಸಿಕೊಂಡು ಬರಲಾರದ ಲೋಕದತ್ತ ಎದ್ದು ಹೋಗಿರುವುದು ಇಲ್ಲಿನ ನೂರಾರು ಅಬಲೆ ಮಹಿಳೆಯರಿಗೆ ಅರಗಿಸಿಕೊಳ್ಳಲಾಗದಂತಾಗಿದೆ.

ಹೀಗಾಗಿ ಬುಧವಾರ ಶಕ್ತಿಧಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಎಲ್ಲರ ಮೊಗದಲ್ಲಿ ದುಃಖ ಮಡುಗಟ್ಟಿದೆ. ನಮ್ಮ ಬಗ್ಗೆ ಅತೀವ ಪ್ರೀತಿ ತೋರುತ್ತಿದ್ದ ಅಮ್ಮ ಇನ್ನಿಲ್ಲ ಎಂಬ ನೋವು ಅವರನ್ನು ಕಾಡತೊಡಗಿದೆ.

ಇನ್ನು ಶಕ್ತಿಧಾಮ ನಿರ್ಮಾಣದ ಕುರಿತಂತೆ ಮೆಲುಕು ಹಾಕುವುದಾದರೆ, ಅದು 1996ರ ದಿನಗಳು. ಡಾ.ರಾಜ್ ಕುಮಾರ್ ಮಂಡಿನೋವಿನ ಚಿಕಿತ್ಸೆಗೆ ಮೈಸೂರಿನಲ್ಲಿ ಉಳಿದುಕೊಂಡಿದ್ದಾಗ ಪೊಲೀಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಅವರ ನಿವಾಸದಲ್ಲಿ ಹೆಚ್ಚು ಸಮಯ ಇದ್ದರಂತೆ. ಅವರ ಕಾರಿನಲ್ಲಿ ತೆರಳುತ್ತಿದ್ದಾಗ ಬೀದಿಯಲ್ಲಿ ನಿಂತಿದ್ದ ನಿರ್ಗತಿಕ ಹೆಣ್ಣುಮಕ್ಕಳನ್ನು ಕಂಡು ಮನ ಕರಗಿದೆ.[ಸಾಲಿಗ್ರಾಮದ ಪಾರ್ವತಿ ಕನ್ನಡ ಚಿತ್ರರಂಗದ ಅಮ್ಮನಾಗಿ...]

ಆಗ ಅಂತಹ ಹೆಣ್ಣುಮಕ್ಕಳಿಗೆ ಏನಾದರೊಂದು ಸಹಾಯ ಮಾಡಬೇಕು ಎಂಬ ಆಲೋಚನೆ ಹುಟ್ಟಿದಾಗ ಸ್ಥಾಪನೆಯಾದ ಸಂಸ್ಥೆಯೇ ಶಕ್ತಿಧಾಮ. ಅವತ್ತು ತನ್ನ ಮನದ ಬಯಕೆಯನ್ನು ಪತ್ನಿ ಪಾರ್ವತಮ್ಮ ಬಳಿ ಡಾ.ರಾಜ್ ಕುಮಾರ್ ಹೇಳಿದಾಗ ಅದನ್ನು ಚಾಚೂ ತಪ್ಪದೆ ನೆರವೇರಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

ಸಂಸ್ಥೆ ಸ್ಥಾಪನೆಗಾಗಿ ಸುಮಾರು 24 ಲಕ್ಷ ರುಪಾಯಿಗಳನ್ನು ಅಧಿಕಾರಿ ಕೆಂಪಯ್ಯ ಅವರಿಗೆ ನೀಡಿದ್ದರಂತೆ. ಅವತ್ತು ತಾವೇ ಮುಂದೆ ನಿಂತು ಕೆಂಪಯ್ಯ ಶಕ್ತಿಧಾಮವನ್ನು ನಿರ್ಮಾಣ ಮಾಡಿದ್ದರು. ಪಾರ್ವತಮ್ಮ ಅವರ ಹೆಸರಿನಲ್ಲಿಯೇ ಶಕ್ತಿಧಾಮ ಆರಂಭವಾಗಿತ್ತಲ್ಲದೆ, ಸಂಸ್ಥೆಯ ಅಧ್ಯಕ್ಷರಾಗಿ ಅಲ್ಲಿನ ಅಬಲೆ ಮಹಿಳೆಯರಿಗೆ ಶಕ್ತಿಯಾಗಿ ನಿಂತಿದ್ದರು.[ಡಾ.ರಾಜ್ -ಪಾರ್ವತಮ್ಮ ಸಾವಿನಲ್ಲೂ ಸಾರ್ಥಕತೆ, ಬುಧವಾರವೇ ಕಣ್ಮರೆ]

ಆಗಾಗ ಶಕ್ತಿಧಾಮಕ್ಕೆ ಭೇಟಿ ನೀಡುತ್ತಾ, ಸಿಹಿ ಹಂಚುತ್ತಾ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ನೋವುಂಡ ಮಹಿಳೆಯರಿಗೆ ಅಮ್ಮನಾಗಿ ಸಾಂತ್ವನ ಹೇಳುತ್ತಿದ್ದರು. ಇನ್ನು ಮುಂದೆ ಇವರಿಗೆಲ್ಲ ಅಮ್ಮ ಬರೀ ನೆನಪಷ್ಟೆ.

English summary
After Parvathamma Rajkumar demise silence remains in Mysuru Shaktidhama. She contributed a lot to Shaktidhama. Now who are residing here remembering her contribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X