ಮೈಸೂರಿನಲ್ಲಿ ಬೆಳ್ ಬೆಳಗ್ಗೆ ಟೀ ಕುಡಿಯುತ್ತಿದ್ದ ಯುವಕನ ಅಪಹರಣ

Posted By:
Subscribe to Oneindia Kannada

ಮೈಸೂರು, ಫೆಬ್ರವರಿ 8 : ನಗರದಲ್ಲಿ ಹಾಡಹಗಲೇ ದುಷ್ಕರ್ಮಿಗಳು ಲಾಂಗು, ಚಾಕು ಹಿಡಿದು ಯುವಕನ ಮೇಲೆ ಹಲ್ಲೆ ನಡೆಸಿ, ಅಪಹರಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ರಾಜೀವ ನಗರ ಬಡಾವಣೆಯ ಗುಪ್ತ ಸ್ಟೋರ್ಸ್ ಸಮೀಪ ಬೆಳಗ್ಗೆ 10 ಗಂಟೆ ವೇಳೆ ಅಪಹರಣ ನಡೆದಿದೆ.

ಅದೇ ಪ್ರದೇಶದಲ್ಲಿದ್ದ ನೂರಾರು ಜನರು ಈ ಸಿನಿಮೀಯ ಘಟನೆ ಕಂಡು ದಿಗ್ಭ್ರಾಂತರಾಗಿದ್ದಾರೆ. ಹಾಡಹಗಲೇ ಜನರು ರಸ್ತೆಯಲ್ಲಿ ಓಡಾಡುತ್ತಿರುವಾಗಲೇ ಇನೋವಾ ಕಾರಿನಲ್ಲಿ (ಕೆಎ 02- ಡಿ 823) ಬಂದಿಳಿದ ಅಪಹರಣಕಾರರು ಲಾಂಗು, ಮಚ್ಚು, ಕತ್ತಿಯನ್ನು ಝಳಪಿಸಿ ಯುವಕನನ್ನು ಅಪಹರಿಸಿದ್ದಾರೆ. ತಕ್ಷಣವೇ ಪ್ರತ್ಯಕ್ಷದರ್ಶಿಗಳು ಪೊಲೀಸ್ ನಿಯಂತ್ರಣ ಕೊಠಡಿಗೆ, ಉದಯಗಿರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಅಪಹರಣಕ್ಕೆ ಒಳಗಾದ ಯುವಕ ಗುಪ್ತ ಸ್ಟೋರ್ಸ್ ಸಮೀಪದ ಸಣ್ಣ ಹೋಟೆಲ್ ಬಳಿ ಟೀ ಕುಡಿಯುತ್ತಾ ರಸ್ತೆಯ ಬದಿಯಲ್ಲಿ ನಿಂತಿದ್ದ. ಆಗ ಅಲ್ಲಿಗೆ ಇನೋವಾ ಕಾರು ಬಂದು ನಿಂತಿದೆ. ಕೈಯಲ್ಲಿ ಚಾಕು, ಲಾಂಗು ಹಿಡಿದ ಐದಾರು ಮಂದಿ ಕಾರಿನಿಂದ ಇಳಿದಿದ್ದಾರೆ. ಅವರಲ್ಲಿ ಇಬ್ಬರು ಟೀ ಕುಡಿಯುತ್ತಿದ್ದ ಯುವಕನನ್ನು ಹಿಡಿಯಲು ಓಡಿದ್ದಾರೆ.

Young man kidnapped in daylight at Mysuru Rajiv nagar

ಅಪಹರಣಕಾರರನ್ನು ನೋಡಿದ ಯುವಕ ಟೀ ಲೋಟ ಎಸೆದು ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾನೆ. ಅಷ್ಟರಲ್ಲಾಗಲೇ ಸಮೀಪಕ್ಕೆ ಬಂದಿದ್ದ ದುಷ್ಕರ್ಮಿಗಳು ಅವನನ್ನು ಹಿಡಿದು ಹೊಡೆಯುತ್ತಾ, ಉರ್ದುವಿನಲ್ಲಿ ಬೈಯುತ್ತಾ ಕಾರಿನತ್ತ ಎಳೆದೊಯ್ದಿದ್ದಾರೆ. ಬಲವಂತವಾಗಿ ಕಾರಿನೊಳಕ್ಕೆ ನೂಕಲು ಯತ್ನಿಸಿದಾಗ ಯುವಕ ಪ್ರತಿಭಟಿಸಿದ್ದಾನೆ.

ಅಷ್ಟರಲ್ಲಿ ಕುತೂಹಲದಿಂದ ಕಾರಿನ ಬಳಿ ತೆರಳಿದ ಕೆಲವು ಸ್ಥಳೀಯರು, 'ಯಾರು ನೀವು, ಅವನನ್ನು ಬಿಡಿ. ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀರಿ? ಏನು ವಿಷಯ ಹೇಳಿ?' ಎಂದೆಲ್ಲಾ ಪ್ರಶ್ನಿಸಿದ್ದಾರೆ. ಹೇಳ್ತೀವಿ, ಒಂದ್ನಿಮಿಷ ಇರಿ ಎಂದ ದುಷ್ಕರ್ಮಿಗಳು, ಯುವಕನನ್ನು ಅನಾಮತ್ತಾಗಿ ಎತ್ತಿ ಕಾರಿನೊಳಕ್ಕೆ ದೂಡಿ ಎಲ್ಲರೂ ಕಾರು ಹತ್ತಿದ್ದಾರೆ.

ಇನ್ನು ಇದೇ ವೇಳೆ ಸಹಾಯ ಮಾಡುವ ಉದ್ದೇಶದಿಂದ ಹತ್ತಿರ ಹೋದ ಸುವರ್ಣ ಎಂಬುವವರ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ, ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪಹರಣಕ್ಕೊಳಗಾದ ಯುವಕ ಈ ಬಡಾವಣೆಯವನಲ್ಲ. ಇದೇ ಮೊದಲ ಬಾರಿ ಅವನನ್ನು ನೋಡಿದ್ದು, ಅಪಹರಣಕಾರರ ಗುಂಪಿನಲ್ಲಿ ಉದಯಗಿರಿ ನಿವಾಸಿ ಇಮ್ರಾನ್ ಎಂಬಾತ ಇದ್ದುದನ್ನು ನೋಡಿದೆವು. ಅವನು ಇರುವ ಗುಂಪಿನ ಮಧ್ಯೆ ಹೋಗುವುದು ಸರಿ ಇಲ್ಲ ಎಂದು ದೂರ ನಿಂತೆವು ಎಂದು ಕೆಲವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Young man kidnapped in a day light at Mysuru Rajiv nagar on Thursday. He was standing near tea shop, miscreants came by Innova and kidnapped young man while people were watching the incident with panic.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ