ಮುಖ್ಯಮಂತ್ರಿಗಳ ತವರಲ್ಲಿ ಸಾಲಬಾಧೆಯಿಂದ ರೈತ ಆತ್ಮಹತ್ಯೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 26: ಬರದ ಕಾರಣ ಸಾಲ ಮಾಡಿ ಬೆಳೆ ಬೆಳೆದರೂ ಪಸಲು ಕೈಗೆ ಬಾರದ ಪರಿಣಾಮ ರೈತರು ಸಾಲಬಾಧೆಯಿಂದ ದುಸ್ಥಿತಿಯನ್ನು ತಲುಪಿದ್ದು, ಅನ್ನಭಾಗ್ಯವನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿಯೇ ರೈತರು ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೆ.ಆರ್. ನಗರದ ಮತ್ತೊಬ್ಬ ರೈತ ಇದಕ್ಕೆ ಸಾಕ್ಷಿಯಾಗಿದ್ದಾನೆ.

ಕೆ.ಆರ್.ನಗರ ತಾಲೂಕಿನಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಘಟನೆ ಹಸಿರಾಗಿರುವಾಗಲೇ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಮಾದಳ್ಳಿ ಗ್ರಾಮದ ಯುವ ರೈತ ಬಿರೇಶ (22) ಆತ್ಮಹತ್ಯೆ ಮಾಡಿಕೊಂಡವನು. ಕೃಷಿಗಾಗಿ ಮಾವತ್ತೂರು ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 2ಲಕ್ಷ ಮತ್ತು ಸುಮಾರು 1ಲಕ್ಷ ರೂ.ನಷ್ಟು ಕೈಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.[ನಂಜನಗೂಡು: ಕೆರೆ ತುಂಬಿಸುವ ಯೋಜನೆಗೆ ಸಿಎಂ ಶಿಲಾನ್ಯಾಸ]

biresha

ಬೆಳೆ ಬಾರದ ಕಾರಣ ಬೇರೆ ದಾರಿ ಕಾಣದೆ ದ್ವಿದಳಧಾನ್ಯಗಳು ಕೆಡದಂತೆ ಹಾಕುವ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದನು. ತಕ್ಷಣ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೆ.ಆರ್. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭತ್ತದ ಕಣಜ ಎಂದು ಕರೆಯಲ್ಪಡುವ ಕೆ.ಆರ್.ನಗರ ತಾಲೂಕಿನಲ್ಲಿ ಮೇಲಿಂದ ಮೇಲೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಂಡು ಬರುತ್ತಿದೆ. ಕಳೆದ ವರ್ಷವೂ ಮಳೆ ಸಮರ್ಪಕವಾಗಿಲ್ಲ. ಈ ಬಾರಿಯೂ ಮುಂಗಾರು ಕೈಕೊಟ್ಟಿದೆ. ಹೀಗಿರುವಾಗ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತನ ಬದುಕು ಮೂರಾಬಟ್ಟೆಯಾಗಿದ್ದು, ಕೃಷಿಗೆ ಮಾಡಿದ ಸಾಲದ ಬಡ್ಡಿಯೂ ಏರುತ್ತಿದೆ.

ಇನ್ನು ಹೊಟ್ಟೆಪಾಡಿಗಾಗಿ ಸಾಲ ಮಾಡಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಬೇಸಿಗೆ ಕಳೆದು ಮುಂಗಾರು ಬಂದ ಬಳಿಕ ಕೃಷಿ ಮಾಡಬೇಕಾಗಿದೆ ಅಲ್ಲಿ ತನಕ ಬದುಕು ಹೇಗೆ ಎಂಬ ಚಿಂತೆಯೂ ಬಹಳಷ್ಟು ರೈತರನ್ನು ಕಾಡುತ್ತಿದೆ. ಇದೆಲ್ಲದರಿಂದ ಧೈರ್ಯ ಕಳೆದುಕೊಂಡಿರುವ ರೈತರು ಸಾಲಗಾರರ ಕಿರಿಕಿರಿ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬರುತ್ತಿರುವುದು ಆಘಾತಕಾರಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The place of cm farmers are suicide this month two suicide are happened, this week Biresha young farmer committed suicide in the village madalli in mysuru
Please Wait while comments are loading...