ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಸ್ಯಪ್ರಜ್ಞೆಯ ಅಪರೂಪದ ವೈದ್ಯರ ದುರಂತ ಸಾವು

By Prasad
|
Google Oneindia Kannada News

ಅರಸೀಕೆರೆ (ಹಾಸನ), ಏ. 22 : ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಕೈಯಲ್ಲಿ ಲೇಖನಿ ಹಿಡಿದು ಹಾಸ್ಯರಸ ಹೊಮ್ಮಿಸುತ್ತಿದ್ದ ಖ್ಯಾತ ಲೇಖಕ ಡಾ. ಬಂಗಾರಿ ರೇಣುಕಾ (70) ಅವರು ಮಂಗಳವಾರ ಬೆಳಿಗ್ಗೆ ದುರಂತ ಸಾವಿಗೀಡಾಗಿದ್ದಾರೆ.

ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ತಮ್ಮ ಪತ್ನಿ ಸುಮಿತ್ರಾ ಅವರನ್ನು ರೈಲು ಹತ್ತಿಸಿ ಇಳಿಯುತ್ತಿದ್ದಾಗ, ಆಯತಪ್ಪಿ ಬಿದ್ದು, ಚಲಿಸುತ್ತಿದ್ದ ರೈಲಿಗೆ ಸಿಲುಕಿ ಜೀವವನ್ನು ಕಳೆದುಕೊಂಡರು. ಬಂಗಾರಿ ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ನಗರದಲ್ಲಿ ಕ್ಲಿನಿಕ್ ತೆರೆದು ವೃತ್ತಿ ನಡೆಸಲು ಅವಕಾಶವಿದ್ದರೂ ಗ್ರಾಮೀಣ ಬದುಕನ್ನೇ ವೃತ್ತಿಗಾಗಿ ಆಯ್ದುಕೊಂಡವರು ಡಾ. ಬಂಗಾರಿ ರೇಣುಕಾ ಅವರು. ತಮ್ಮ ಲೇಖನಗಳಲ್ಲಿ ಕೂಡ ಗ್ರಾಮೀಣ ಬದುಕಿನ ಏರಿಳಿತ, ನೋವು ನಲಿವು, ನಂಬಿಕೆ, ಸೂಕ್ಷ್ಮ ಸ್ಪಂದನೆ, ಮೌಢ್ಯಗಳು, ಹಳ್ಳಿ ಜನರ ನಡೆನುಡಿಗಳನ್ನು ನವಿರು ಹಾಸ್ಯದಲ್ಲಿ ಹಿಡಿದಿಟ್ಟಿದ್ದಾರೆ.

Writer and doctor Bangari Renuka dies in train accident

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದ ಅವರು, ಮೈಸೂರು ಯುವರಾಜ ಕಾಲೇಜಿನಲ್ಲಿ ಪಿಯುಸಿ ಮತ್ತು ಮೈಸೂರಿನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪೂರೈಸಿದ್ದರು.

ಔಷಧಿ ಕಹಿಯಾಗಿರಬಹುದು, ಆದರೆ ನೆನಪುಗಳು ಎಂದೂ ಕಹಿಯಾಗಿರುವುದಿಲ್ಲ ಎಂದು ಹಸನ್ಮುಖಿಯಾಗಿ ಎಲ್ಲರೊಂದಿಗೆ ತಮ್ಮ ಜೀವನದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದರು. ಆಸ್ಪತ್ರೆಯ ಅನುಭವಗಳು, ಬದುಕಾಗಿ, ಕಥೆಯಾಗಿ 'ಕಾನೀನ' ಎಂಬ ಪುಸ್ತಕದ ಮುಖಾಂತರ ಹೊರಬಂದಿದ್ದವು.

Writer and doctor Bangari Renuka dies in train accident

ಅವರ ಅನುಭವದ ಮೂಸೆಯಿಂದ ಹೊರಬಂದಿದ್ದ ಮತ್ತೊಂದು ಹಾಸ್ಯ ಲೇಖನಗಳ ಸಂಕಲನ 'ವೈದ್ಯನ ನೆನಪಿನಂಗಳದಿಂದ'. 2014ರಲ್ಲಿ ಎರಡನೇ ಮುದ್ರಣವನ್ನು ಕಂಡಿದ್ದು, ಆ ಪುಸ್ತಕದ ಜನಪ್ರಿಯತೆಗೆ ಸಾಕ್ಷಿ. ಚುಟುಕಾಗಿ ಇರುವ ಅವರ ಲೇಖನಗಳಲ್ಲಿನ ಮತ್ತೊಂದು ವಿಶೇಷವೆಂದರೆ, ತಮ್ಮನ್ನೇ ಅವರು ಅಪಹಾಸ್ಯಕ್ಕೆ ಒಡ್ಡಿಕೊಳ್ಳುತ್ತಿದ್ದುದು.

ಅವರ ಸೃಜನಶೀಲ ಬರಹಗಳಲ್ಲಿ ಹಾಸ್ಯದ ಹೊನಲು ಮಾತ್ರವಲ್ಲ, ಜೀವನದ ಕಥೆಯಿದೆ, ವಿಷಾದಗೀತೆ ಇದೆ, ಸಮಾಜದ ಸ್ವಾಸ್ಥ್ಯಕ್ಕೆ ಬೇಕಾದ ಚಿಂತನೆಯೂ ಇದೆ. ಇಂಥ ಹಾಸ್ಯಪ್ರಜ್ಞೆಯಿದ್ದ ಅಪರೂಪದ ವೈದ್ಯರು ಇನ್ನಿಲ್ಲದಿರುವುದು ನಿಜಕ್ಕೂ ವಿಷಾದನೀಯ ಸಂಗತಿ.

English summary
Humor Writer and doctor Bangari Renuka died in train accident in Arasikere in Hassan district. He slipped under the moving train while getting down. He has written two humorous books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X