ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಯ ಈ ಬಾರಿಯ ವಿಶ್ವ ಯೋಗ ದಿನ ಮೈಸೂರಿನಲ್ಲಿ?

By Yashaswini
|
Google Oneindia Kannada News

ಮೈಸೂರು, ಮಾರ್ಚ್ 20 : ಈಗಾಗಲೇ ವಿಶ್ವ ಯೋಗ ದಿನದಂದು ಅತಿ ದೊಡ್ಡ ಯೋಗ ಸರಪಳಿ ರೂಪಿಸಿ ಗಿನ್ನಿಸ್ ದಾಖಲೆಗೆ ಅಣಿಯಿಟ್ಟ ಮೈಸೂರಿಗರಿಗೆ ಮತ್ತೊಂದು ಸಂತಸದ ಸುದ್ದಿ ಈ ಬಾರಿ ಇದೆ. ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜನೆಗೆ ಮೈಸೂರು ಸೇರಿದಂತೆ ದೇಶದ ನಾಲ್ಕು ನಗರಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಜೈಪುರ, ಅಹಮದಾಬಾದ್‌, ಹೈದರಾಬಾದ್‌ ಕೂಡ ರೇಸ್‌ ನಲ್ಲಿವೆ. ಆದರೆ ಈ ನಗರಗಳ ಪೈಕಿ ಮೈಸೂರಿಗೆ ಮೊದಲ ಪ್ರಾಶಸ್ತ್ಯ ದೊರೆಯುವ ಸಾಧ್ಯತೆ ಹೆಚ್ಚಾಗಿದೆ.

ಯೋಗ ಪ್ರದರ್ಶನ: ಮೈಸೂರು ಕೈತಪ್ಪಿದ ಗಿನ್ನಿಸ್ ದಾಖಲೆ ಗರಿಯೋಗ ಪ್ರದರ್ಶನ: ಮೈಸೂರು ಕೈತಪ್ಪಿದ ಗಿನ್ನಿಸ್ ದಾಖಲೆ ಗರಿ

ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರದ ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ.ಎನ್‌.ರಂಜಿತ್ ಕುಮಾರ್‌, ಉಪ ಕಾರ್ಯದರ್ಶಿ ರಮಾನಂದ ಮೀನಾ, ಸಚಿವಾಲಯದ ಸಲಹೆಗಾರ ಈಶ್ವರ್ ಎನ್‌. ಆಚಾರ್ಯ ಅವರನ್ನೊಳಗೊಂಡ ತಂಡ ಯಾವುದೇ ಮುನ್ಸೂಚನೆ ಇಲ್ಲದೆ ಮೈಸೂರಿಗೆ ಭೇಟಿ ನೀಡಿ, ಯೋಗ ಕಾರ್ಯಕ್ರಮ ಆಯೋಜನೆ ಮಾಡುವ ಸ್ಥಳ ಪರಿಶೀಲನೆ ನಡೆಸಿದೆ. ಜತೆಗೆ ಸ್ಥಳೀಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದಿದೆ.

 ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚು

ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚು

ಕೇಂದ್ರದ ಆಯುಷ್ ಸಚಿವಾಲಯದ ಅಧಿಕಾರಿಗಳು ರಕ್ಷಣೆ ದೃಷ್ಟಿಯಿಂದ ಪ್ರಧಾನಿ ಕಾರ್ಯಕ್ರಮದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಪ್ರಧಾನಿ ಕಾರ್ಯಕ್ರಮಕ್ಕಾಗಿ ನಿಗದಿಯಾದ ಇನ್ನಿತರ ಮೂರು ಸ್ಥಳಗಳಿಗೆ ಈ ತಂಡ ಭೇಟಿ ನೀಡುತ್ತಿಲ್ಲ. ಈ ವಿಷಯವನ್ನು ತಂಡದ ಸದಸ್ಯರೆ ಖಾತ್ರಿ ಪಡಿಸಿದ್ದಾರೆ. ಹಾಗಾಗಿ ನರೇಂದ್ರ ಮೋದಿ ಮೈಸೂರಿನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಪ್ರವೇಶ, ನಿರ್ಗಮನಕ್ಕೆ ಇರುವ ವ್ಯವಸ್ಥೆ ಪರಿಶೀಲನೆ

ಪ್ರವೇಶ, ನಿರ್ಗಮನಕ್ಕೆ ಇರುವ ವ್ಯವಸ್ಥೆ ಪರಿಶೀಲನೆ

ಇದೇ ವರ್ಷದ ಜೂನ್‌ 21ರಂದು 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕೈಗೊಳ್ಳಲು ಉದ್ದೇಶಿಸಿರುವ ಮೈಸೂರು ರೇಸ್‌ ಕ್ಲಬ್‌ ಆವರಣ, ಅರಮನೆ ಆವರಣ, ದಸರಾ ವಸ್ತುಪ್ರದರ್ಶನದ ಆವರಣಕ್ಕೆ ಭೇಟಿ ನೀಡಿದ ತಂಡ ಅಲ್ಲಿ ಎಷ್ಟು ಮಂದಿ ಯೋಗ ಪ್ರದರ್ಶನ ಕೈಗೊಳ್ಳಲು ಸಾಧ್ಯವಾಗುತ್ತದೆ? ಪ್ರವೇಶ, ನಿರ್ಗಮನಕ್ಕೆ ಇರುವ ವ್ಯವಸ್ಥೆಯನ್ನು ಪರಿಶೀಲಿಸಿತು.

1 ಲಕ್ಷ ಆಸಕ್ತರಿಂದ ಯೋಗ ಪ್ರದರ್ಶನಕ್ಕೆ ತೀರ್ಮಾನ

1 ಲಕ್ಷ ಆಸಕ್ತರಿಂದ ಯೋಗ ಪ್ರದರ್ಶನಕ್ಕೆ ತೀರ್ಮಾನ

ಈ ಬಾರಿ 1 ಲಕ್ಷ ಯೋಗಾಸಕ್ತರಿಂದ ಯೋಗ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಮೂರು ಸ್ಥಳಗಳಲ್ಲಿ ಅತಿ ಹೆಚ್ಚು ಮಂದಿ ಕುಳಿತುಕೊಳ್ಳಲು ಸಾಧ್ಯವಾಗುವ ಮೈಸೂರು ರೇಸ್‌ ಕ್ಲಬ್‌ ನ ಆವರಣದಲ್ಲಿ ಸೌಲಭ್ಯಗಳನ್ನು ಹೆಚ್ಚಾಗಿ ಪರಿಶೀಲಿಸಲಾಯಿತು. ರಕ್ಷಣೆಯ ಹಿನ್ನೆಲೆಯಲ್ಲಿ ಈ ಸ್ಥಳ ಎಷ್ಟು ಸೂಕ್ತ, ಕಾರ್ಯಕ್ರಮದ ದಿನದಂದು ಮಳೆ ಬರುವ ಸಾಧ್ಯತೆ ಇದೆಯೆ ಎಂಬುದರ ಮಾಹಿತಿ ಪಡೆಯಲಾಯಿತು.

ಮೈಸೂರು ರೇಸ್‌ ಕ್ಲಬ್‌ ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೆಚ್ಚುಗೆ

ಮೈಸೂರು ರೇಸ್‌ ಕ್ಲಬ್‌ ನಲ್ಲಿ ಕಾರ್ಯಕ್ರಮ ಆಯೋಜನೆಗೆ ಮೆಚ್ಚುಗೆ

ಅದಕ್ಕಾಗಿಯೇ ರೇಸ್‌ ಕ್ಲಬ್‌ನಲ್ಲಿರುವ ಮಳೆ ಮಾಪನ ಕೇಂದ್ರದಿಂದ ಕಳೆದ ಐದು ವರ್ಷದ ಮಳೆ ಮಾಹಿತಿ ಪಡೆದರು. ಅಲ್ಲದೆ ಮೈಸೂರು ರೇಸ್‌ ಕ್ಲಬ್‌ ನಲ್ಲಿ ಕಾರ್ಯಕ್ರಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದ್ದು, ಸದ್ಯದಲ್ಲಿಯೆ ಈ ಪರಿಶೀಲನೆ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿ, ಸರಕಾರದಿಂದ ಸೂಕ್ತ ನಿರ್ದೇಶನ ಪಡೆದು ಪ್ರಧಾನ ಮಂತ್ರಿಗಳ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸುವ ಬಗ್ಗೆ ಖಚಿತಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಧಾನಿಯನ್ನು ಸೆಳೆಯುತ್ತಿರುವ ಯೋಗ ದಿನಾಚರಣೆಯ ದಾಖಲೆ

ಪ್ರಧಾನಿಯನ್ನು ಸೆಳೆಯುತ್ತಿರುವ ಯೋಗ ದಿನಾಚರಣೆಯ ದಾಖಲೆ

ಕಳೆದ ಬಾರಿ ಯೋಗ ದಿನಾಚರಣೆಯಂದು ಮೈಸೂರಿನಲ್ಲಿ 35,985ಕ್ಕಿಂತ ಹೆಚ್ಚು ಯೋಗಾಸಕ್ತರನ್ನು ಒಂದೆಡೆ ಸೇರಿಸಿ, ಒಂದೇ ವೇದಿಕೆಯಲ್ಲಿ ಬೃಹತ್‌ ಯೋಗ ಪ್ರದರ್ಶಿಸಲು ತೀರ್ಮಾನಿಸಲಾಗಿತ್ತು. ಜಿಲ್ಲಾಡಳಿತ ನೇತೃತ್ವದಲ್ಲಿ ಆರಂಭವಾದ ಈ ಪ್ರಯತ್ನಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ದೊರೆಯಿತು. ನಿರೀಕ್ಷೆಗೂ ಮೀರಿ 55 ಸಾವಿರ ಮಂದಿ ಯೋಗ ಪ್ರದರ್ಶನ ಮಾಡಿದರು. ಈ ಚಟುವಟಿಕೆಯು ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲಾಯಿತು. ಈ ಬಾರಿ ಒಂದು ಲಕ್ಷ ಯೋಗಾಸಕ್ತರನ್ನು ಸೇರಿಸಿ, ಹೊಸ ದಾಖಲೆ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಮೂರು ತಿಂಗಳಿಗೂ ಮುಂಚಿತವಾಗಿಯೇ ಸಿದ್ಧತೆ ಆರಂಭಿಸಲಾಗಿದೆ. ಅದಕ್ಕಾಗಿ ವಿಶೇಷ ಸಮಿತಿಯೊಂದನ್ನು ನೇಮಿಸಲಾಗಿದೆ. ಈ ಅಂಶಗಳಿಂದ ಆಕರ್ಷಿತವಾಗಿರುವ ಕೇಂದ್ರದ ಆಯುಷ್ ಸಚಿವಾಲಯ ಈ ಬಾರಿ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ಒಲವು ತೋರಿದೆ.

English summary
Will PM Narendra Modi come to Mysuru for world Yoga day? Team from central Ayush department visited Mysuru and inspected the preparation. There will be possibility that, Narendra Modi participate in Yoga day Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X