ನಂಜನಗೂಡು ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಕದನ ಕುತೂಹಲ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 4: ನಂಜನಗೂಡು ಉಪಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಧ್ರುವನಾರಾಯಣರ ನಡೆಯಿಂದ ಟಿಕೆಟ್ ಯಾರಿಗೆ ಲಭಿಸಲಿದೆ ಎಂಬ ಕುತೂಹಲ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಮೂಡಿದೆ.

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ಮೀಸಲು ಕ್ಷೇತ್ರಕ್ಕೆ ಉಪಚುನಾವಣೆ ಸಮೀಪವಾಗುತ್ತಿದ್ದು, ಕಾಂಗ್ರೆಸ್ ವಲಯದಲ್ಲಿ ಇಂದಿಗೂ ಅಭ್ಯರ್ಥಿಯನ್ನು ಘೋಷಣೆ ಮಾಡದಿರುವುದು ಕಾರ್ಯಕರ್ತರಲ್ಲಿ ಗೊಂದಲದೊಂದಿಗೆ ಅನೇಕ ಪ್ರಶ್ನೆಗಳು ಉದ್ಭವವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಹಾಗೂ ಸಂಸದ ಧ್ರುವನಾರಾಯಣ ಅವರ ನಡೆಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ.[ನಂಜನಗೂಡು ಉಪಚುನಾವಣೆಗೆ 'ಕೈ'ಗೆ ಅಭ್ಯರ್ಥಿ ಸಿಕ್ಕಿ ಬಿಟ್ರಾ?]

2013ರಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಭಾರಿ ಅಂತರದಿಂದ ಜೆಡಿಎಸ್ ನ ಕೇಶವಮೂರ್ತಿ ಪರಭಾವಗೊಂಡಿದ್ದರು. ಅವರನ್ನೇ ಕಣಕ್ಕಿಳಿಸಬೇಕು ಎಂಬುವುದು ಸಂಸದ ಧ್ರುವನಾರಾಯಣ್ ಇಚ್ಛೆಯಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರು ಹಾಗೂ ಕೆಲ ಮುಖಂಡರು ಪಕ್ಷಕ್ಕಾಗಿ ದುಡಿದ ವ್ಯಕ್ತಿಯನ್ನು ಕಣಕ್ಕಿಳಿಸುವಂತೆ ಒತ್ತಡ ಹೇರುತ್ತಿದ್ದಾರೆ.

Congress flag

ಮಾಜಿ ಸಂಸದ ಎಚ್.ವಿಶ್ವನಾಥ್ ಕೆಲ ದಿನಗಳ ಹಿಂದಷ್ಟೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಗೆ ಮಾನ-ಮಾರ್ಯಾದೆ ಇದ್ಯಾ? ಅವರು ಯಾವ ಪಕ್ಷಕ್ಕೆ ಅಧ್ಯಕ್ಷರು. ಉಪಚುನಾವಣೆಗೆ ಕಾಂಗ್ರೆಸ್ ಗಾಗಿ ದುಡಿದಿರುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು. ಹೊರಗಿನ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದರು.[ಸಿದ್ದರಾಮಯ್ಯ ಗೆ ತಂದೊಡ್ಡಿರುವ ರಾಜಕೀಯ ಅಸ್ಥಿರತೆ ಭೀತಿ]

ಅಲ್ಲದೇ, ಕಾಂಗ್ರೆಸ್ ಕಾರ್ಯಕರ್ತರು ಸಚಿವ ಮಹದೇವಪ್ಪನವರ ಮನೆಗೆ ಭೇಟಿ ನೀಡಿ, ಕಳಲೆ ಕೇಶವಮೂರ್ತಿಯವರಿಗೆ ಟಿಕೆಟ್ ಘೋಷಣೆ ಮಾಡಬಾರದು ಎಂದು ಒತ್ತಾಯ ಮಾಡಿದರು. ಕಳಲೆ ಕೇಶವಮೂರ್ತಿ ತನ್ನ ಬೆಂಬಲಿಗರೊಂದಿಗೆ ಸಚಿವ ಮಹದೇವಪ್ಪನವರ ಮನೆಗೆ ಭೇಟಿ ನೀಡಿದಾಗ ಅವರ ಜತೆ ಹೆಚ್ಚು ಮಾತನಾಡದೆ ವಾಪಸ್ ಕಳುಹಿಸಲಾಗಿತ್ತು.

ಆದರೂ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡುವುದನ್ನು ಬಿಟ್ಟಿಲ್ಲ. ಅಲ್ಲದೇ ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶ್ರೀನಿವಾಸ್‍ಪ್ರಸಾದ್ ಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ವ್ಯಕ್ತಿಯನ್ನೇ ಕಣಕ್ಕಿಸಬೇಕು. ಯಾವುದೇ ಕಾರಣಕ್ಕೂ ಸೋಲಾಗಬಾರದು ಎಂಬ ಪಟ್ಟಿನಲ್ಲಿದ್ದಾರೆ.[ನಂಜನಗೂಡು ಕ್ಷೇತ್ರಕ್ಕೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳು ಸಿಗುತ್ತಿಲ್ಲ: ಪ್ರತಾಪ್ ಸಿಂಹ]

ಸಂಬಂಧಿಯಾಗಿರುವ ಕಳಲೆ ಕೇಶವಮೂರ್ತಿಯವರನ್ನು ಕಾಂಗ್ರೆಸ್ ನಿಂದಲೇ ಕಣಕ್ಕಿಸುವುದು ಧ್ರುವನಾರಾಯಣ್ ರ ಇಚ್ಛೆಯಾಗಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಹೈಕಮಾಂಡ್ ಜತೆಗೂ ಮಾತುಕತೆ ನಡೆಸಿದ್ದು, ಇದು ಫಲಪ್ರದವಾಗುವ ಲಕ್ಷಣಗಳು ಗೋಚರವಾಗಿವೆ. ಚುನಾವಣೆ ಆಯೋಗದಿಂದ ಉಪಚುನಾವಣೆ ಘೋಷಣೆಯಾಗುತ್ತಿದ್ದ ಹಾಗೆ ಹೈಕಮಾಂಡ್ ನಿಂದ ಸಿದ್ದರಾಮಯ್ಯ, ಪರಮೇಶ್ವರ್ ಗೆ ಅಭ್ಯರ್ಥಿ ಹೆಸರನ್ನು ಸೂಚಿಸುವ ಎಲ್ಲ ಲಕ್ಷಣಗಳಿವೆ.

ಕಳಲೆ ಕೇಶವಮೂರ್ತಿ ಫೆಬ್ರವರಿ 7ರಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದು, ಆ ನಂತರ ನಂಜನಗೂಡು ಉಪಚುನಾವಣೆ ಟಿಕೆಟ್ ಯಾರ ಪಾಲಿಗೆ ಎಂಬುವುದು ಖಚಿತಗೊಳ್ಳುವಂತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now there is a question, who will get Nanjangud by election ticket from Congress. Kalale Keshava murthy name running in front line. But, party workers are not happy with his contest.
Please Wait while comments are loading...